ರೈಲು ಚಾಲಕನಿಗೆ ಕೆಂಪು ಅಂಗಿ ತೋರಿಸಿ ದುರಂತ ತಪ್ಪಿಸಿದ ಪ್ರವಾಸಿ ಯುವಕರು

By Kannadaprabha NewsFirst Published Sep 10, 2021, 10:38 AM IST
Highlights

*   ದೂದ್‌ಸಾಗರ ಜಲಪಾತದ ಬಳಿ ನಡೆದ ಘಟನೆ
*   ರೈಲು ಹಳಿಯ ಮೇಲೆ ಬಿದ್ದಿದ್ದ ಬೃಹತ್‌ ಮರ 
*   ಯುವಕರ ಸಮಯಪ್ರಜ್ಞೆಗೆ ಶ್ಲಾಘನೆ 
 

ಬೆಳಗಾವಿ(ಸೆ.10): ಯುವಕರ ತಂಡವೊಂದು ರೈಲು ಅನಾಹುತವನ್ನು ತಪ್ಪಿಸಿದ ಘಟನೆ ದೂದ್‌ಸಾಗರ ಜಲಪಾತದ ಬಳಿ ಗುರುವಾರ ನಡೆದಿದೆ. ರೈಲು ಹಳಿಯ ಮೇಲೆ ಬೃಹತ್‌ ಮರ ಬಿದ್ದಿರುವುದನ್ನು ಕಂಡು ಪ್ರವಾಸಿಗರು ಗೂಡ್ಸ್‌ ರೈಲನ್ನು ತಡೆದು ತಪ್ಪಿಸಿದ್ದಾರೆ. 

ಬೆಂಗಳೂರಿನ ಪ್ರಜ್ವಲ್‌, ಮನಿಷಾ, ವಿನೋದ್‌, ಗೌರವ್‌ ಸೇರಿದಂತೆ ಒಟ್ಟು ಆರು ಜನ ಯುವಕರ ತಂಡವು ಬೆಳಗಾವಿ ಮತ್ತು ಮಹಾರಾಷ್ಟ್ರ ಗಡಿಯಲ್ಲಿರುವ ದೂದ್‌ಸಾಗರ್‌ ಜಲಪಾತ ನೋಡಲು ತೆರಳಿತ್ತು. ಹಳಿಗಳ ಮೇಲೆ ನಡೆದುಕೊಂಡು ವಾಪಸ್‌ ಬೆಳಗಾವಿಗೆ ಬರುವಾಗ ಹಳಿಗಳ ಮೇಲೆ ಬೃಹತ್‌ ಮರವೊಂದು ಬಿದ್ದಿರುವುದು ತಂಡಕ್ಕೆ ಗೋಚರವಾಯಿತು. ಅದೇ ವೇಳೆಗೆ ಅದೇ ಮಾರ್ಗದಲ್ಲಿ ರೈಲೊಂದು ಬರುತ್ತಿತ್ತು. ಸಮಯಪ್ರಜ್ಞೆ ಮೆರೆದ ಈ ತಂಡ, ರೈಲ್ವೆ ಟ್ರ್ಯಾಕ್‌ಮೆನ್‌ಗಳ ಕೆಂಪು ಅಂಗಿಯನ್ನು ಕಳಚಿ ರೈಲು ಚಾಲಕನಿಗೆ ತೋರಿ ರೈಲು ನಿಲ್ಲಿಸಿತು. ಚಾಲಕ ರೈಲು ನಿಲ್ಲಿಸಿದಾಗ ಮರದಿಂದ ರೈಲು ಕೇವಲ 10 ಮೀ. ಅಂತರದಲ್ಲಿತ್ತು.

ಹಂಪಿ, ಇತರೆಡೆಗೆ ರಾಮಯಾತ್ರೆ ರೈಲು: ರಾಮಾ​ಯ​ಣದ ಸ್ಥಳ​ಗ​ಳಿಗೆ ಭೇಟಿ!

ಈ ಪ್ರವಾಸಿ ತಾಣವನ್ನು ನೋಡಿಕೊಂಡು ಗುರುವಾರ ಮಧ್ಯಾಹ್ನದ ವೇಳೆಗೆ ಬೆಳಗಾವಿಗೆ ವಾಪಸ್‌ ಬರಲು ರೈಲು ಹಳಿ ಮೇಲೆ ನಡೆದುಕೊಂಡೇ ರೈಲು ನಿಲ್ದಾಣಕ್ಕೆ ಹೊರಟಿತ್ತು.ಆಗ ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಬೃಹತ್‌ ಮರವೊಂದು ರೈಲು ಹಳಿಯ ಮೇಲೆ ಬಿದ್ದಿದೆ. ಇದೇ ವೇಳೆಗೆ ರೈಲು ಬರುವ ಶಬ್ದ ಕೂಡ ಕೇಳಿಸಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಯುವಕರು ಅಲ್ಲಿಯೇ ಕಾರ್ಯನಿರ್ವಹಿಸುತ್ತಿದ್ದ ರೈಲ್ವೆ ಟ್ರ್ಯಾಕ್‌ಮೆನ್‌ಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಟ್ರ್ಯಾಕ್‌ಮೆನ್‌ಗಳು ಧರಿಸಿದ್ದ ಕೆಂಪು ಅಂಗಿಯನ್ನು ಕಳಚಿ ಯುವಕರು ರೈಲ್ವೆ ಚಾಲಕನಿಗೆ ತೋರಿಸಿದ್ದಾರೆ.ಇದರಿಂದ ಎಚ್ಚೆತ್ತುಕೊಂಡ ಗೂಡ್ಸ್‌ ರೈಲು ಚಾಲಕ, ರೈಲಿಗೆ ಬ್ರೇಕ್‌ ಹಾಕಿದ್ದಾನೆ. ಮರ ಬಿದ್ದಿರುವ ಕೇವಲ 10 ಮೀ. ಅಂತರದಲ್ಲಿ ರೈಲು ಬಂದು ನಿಂತಿದೆ. ಯುವಕರ ಸಮಯಪ್ರಜ್ಞೆಗೆ ಶ್ಲಾಘನೆ ವ್ಯಕ್ತವಾಗಿದೆ.
 

click me!