ಲಾಕ್‌ಡೌನ್‌ ಕಲಿಸಿದ ಪಾಠ: ಅಮ್ಮನ ಪ್ರೀತಿಯೇ ಬದುಕಿಗೆ ಹೊಸ ದಾರಿ

By Kannadaprabha News  |  First Published May 29, 2020, 10:51 AM IST

ಸಂಕಷ್ಟ, ಸವಾಲನ್ನು ಅವಕಾಶವಾಗಿ ಪರಿವರ್ತಿಸಿಕೊಂಡ ಯಲ್ಲಪ್ಪ ಬಡಿಗೇರ| ಅಮ್ಮ​ನಿ​ಗಾಗಿ ಕೇರಂ ಬೋರ್ಡ್‌ ಸಿದ್ಧ, ಅದೇ ಬದುಕಿಗೂ ದಾರಿ ತೋರಿತು| ಲಾಕ್‌ಡೌನ್‌ ಸಂದರ್ಭದಲ್ಲೂ 50 ಸಾವಿರ ಆದಾಯ ಗಳಿಸಿದ ಯುವಕ|


ಸೋಮರಡ್ಡಿ ಅಳವಂಡಿ

ಕೊಪ್ಪಳ(ಮೇ.29): ಲಾಕ್‌ಡೌನ್‌ ಏನೆಲ್ಲಾ ಪಾಠ ಕಲಿಸಿದೆ. ಹಲವಾರು ಸವಾಲು, ಸಂಕಷ್ಟಗಳ ಗಳ ನಡುವೆ ಹೊಸ ಹೊಸ ಅವಕಾಶವನ್ನೂ ಕೊರೋನಾ ಸೃಷ್ಟಿಸಿದೆ. ಇದಕ್ಕೆ ತಾಜಾ ಉದಾಹರಣೆ ಭಾಗ್ಯನಗರದ ಯಲ್ಲಪ್ಪ ಬಡಿಗೇರ ಅವರ ಬದಲಾದ ಬದುಕು.

Tap to resize

Latest Videos

ತಾಯಿಯ ಮೇಲಿನ ಪ್ರೀತಿ ಅವರಿಗೆ ಹೊಸ ಉದ್ಯೋಗದ ದಾರಿ ತೋರಿಸಿತು. ಲಾಕ್‌ಡೌನ್‌ ಸಂದರ್ಭದಲ್ಲೂ ಅದು ಕೈತುಂಬಾ ಉದ್ಯೋಗ, ಆದಾಯ ಗಳಿಸಲು ದಾರಿಯಾಯಿತು. ತಮ್ಮ ಮೂಲ ಕಸುಬಿನ ಜೊತೆಗೆ ಕೇರಂ ಬೋರ್ಡ್‌ ಸಿದ್ಧಪಡಿಸುವುದನ್ನು ಯಲ್ಲಪ್ಪ ಬಡಿಗೇರ ಇದೀಗ ಹೊಸ ಉದ್ಯೋಗವನ್ನಾಗಿಸಿಕೊಂಡಿದ್ದು, ಅದುವೇ ಹೆಚ್ಚಿನ ಆದಾಯ, ಜನಮನ್ನಣೆ ಗಳಿಸಿ ಕೊಡುತ್ತಿದೆ.

ಲಾಕ್‌ಡೌನ್‌ ಎಫೆಕ್ಟ್‌: ಹೆತ್ತವರ ಕಷ್ಟ ನೋಡಲಾರದೆ ಸುಡು ಬಿಸಿಲಿನಲ್ಲೇ ವ್ಯಾಪಾರಕ್ಕೆ ನಿಂತ ಮಕ್ಕಳು..!

ಬಡಿಗತನ ವೃತ್ತಿಯ ಕೊಪ್ಪಳ ತಾಲೂಕಿನ ಭಾಗ್ಯನಗರದ ಯಲ್ಲಪ್ಪ ಬಡಿಗೇರಗೆ ಲಾಕ್‌ಡೌನ್‌ ಸಂದರ್ಭದಲ್ಲಿ ಎಲ್ಲರಂತೆ ಉದ್ಯೋಗ ಇಲ್ಲವಾಯಿತು. ಮನೆಯಲ್ಲೇ ಇರಬೇಕಾದ ಅನಿವಾರ್ತೆ. ತಾಯಿ ಜೊತೆ ಮನೆಯಲ್ಲಿದ್ದ ಯಲ್ಲಪ್ಪ ತಾಯಿಯ ಬೇಸರ ಕಳೆಯಲು ಸ್ನೇಹಿತನ ಮನೆಯಿಂದ ಕೇರಂ ಬೋರ್ಡ್‌ ತಂದು ಕೊಂಡು ಆಟವಾಡುತ್ತಿದ್ದರು. ತಾಯಿ ಮಗನಿಗೆ ಲಾಕ್‌ಡೌನ್‌ನ ಆರಂಭಿಕ ದಿನದಲ್ಲಿ ಇದುವೇ ಸಮಯ ಕಳೆಯುವ ಕಾಯಕವಾಯಿತು. ಆದರೆ ಕೆಲ ದಿನಗಳ ಬಳಿಕ ಸ್ನೇಹಿತ ಕೇರಂ ಬೋರ್ಡ್‌ ವಾಪಸ್‌ ತೆಗೆದುಕೊಂಡು ಹೋದ. ಕೇರಂ ಆಟಕ್ಕೆ ಒಗ್ಗಿಕೊಂಡಿದ್ದ ತಾಯಿಗೆ ಬೇಸರವಾಯಿತು. ಸಮಯ ಕಳೆಯುವುದು ಕಷ್ಟವಾಯಿತು.

ಊರೆಲ್ಲ ಸುತ್ತಾಡಿದರೂ ಎಲ್ಲಿಯೂ ಕೇರಂ ಬೋರ್ಡ್‌ ಸಿಗಲಿಲ್ಲ. ಕೊನೆಗೆ ಹೇಗೂ ಬಡಿಗತನ ಮಾಡುವ ತಾನೇ ಸಿದ್ಧಪಡಿಸಿದರೆ ಹೇಗೆ ಎಂಬ ವಿಚಾರ ತಲೆಗೆ ಬಂದಿದ್ದೇ ತಡ. ಆ ಕಾರ್ಯಕ್ಕೂ ಕೈ ಹಾಕಿದ. ಜೀವಮಾನದಲ್ಲಿ ಒಂದೂ ಕೇರಂ ಬೋರ್ಡ್‌ ಸಿದ್ಧಪಡಿಸದ ಬಡಿಗೇರ ಅಮ್ಮನ ಮೇಲಿನ ಪ್ರೀತಿಯಿಂದ ಅದನ್ನೂ ತಯಾರಿಸಿ ಸೈ ಎನಿಸಿಕೊಂಡು ಬಿಟ್ಟರು. ತಾಯಿಗೆ ನೀಡಿದಾಗ ಅವರಿಗೆ ಕೊಪ್ಪರಿಗೆ ಚಿನ್ನ ಸಿಕ್ಕಷ್ಟೇ ಸಂತೋಷ. ಮಗನ ಪ್ರೀತಿಯ ಕಾಣಿಕೆಯಿಂದ ತಾಯಿಯ ಖುಷಿಗೆ ಪಾರವೇ ಇರಲಿಲ್ಲ.

ತಾಯಿಯ ಮೇಲಿನ ಪ್ರೀತಿಯಿಂದ ಕೇರಂ ಬೋರ್ಡ್‌ ಮಾಡುವುದನ್ನು ಕಲಿತ ಯಲ್ಲಪ್ಪನಿಗೆ ಲಾಕ್‌ಡೌನ್‌ ಸಮಯದಲ್ಲಿ ಇದು ಉದ್ಯೋಗ ಹಾಗೂ ಆದಾಯವನ್ನೂ ನೀಡಿತು. ಯಲ್ಲಪ್ಪನ ಈ ಸಾಧನೆ ನೋಡಿ ಅಕ್ಕಪಕ್ಕದವರು ಪರಿಚಯದವರು ತಮಗೂ ಕೇರಂ ಬೋರ್ಡ್‌ ಮಾಡಿ ಕೊಡುವಂತೆ ಕೋರಿದರು. 2000 ದಿಂದ 2500 ರ ಹಾಗೆ ಪ್ರತಿಯೊಂದು ಕೇರಂ ಬೋರ್ಡ್‌ ಮಾರಾಟ ಮಾಡಿರುವ ಅವರು 25ಕ್ಕೂ ಹೆಚ್ಚು ಬೋರ್ಡ್‌ ತಯಾರಿಸಿ ಸುಮಾರು 50 ಸಾವಿರ ರು. ದುಡಿದಿದ್ದಾರೆ. ತಾಯಿಯ ಪ್ರೀತಿ ಅವರ ಬದುಕಿಗೆ ಹೊಸ ದಾರಿಯನ್ನೇ ತೋರಿಸಿತು.

ಹೆತ್ತವಳಿಗೆ ತುತ್ತಿಕ್ಕಿದರೆ ಜಗವೆಲ್ಲವೂ ನಿನಗೆ ತುತ್ತಿಕ್ಕುತ್ತದೆ ಎನ್ನುವ ಗಾದೆ ಮಾತಿಗೆ ಹೇಳಿ ಮಾಡಿಸಿದಂತಿದೆ ಈ ಕತೆ. ಈಗ ಯಲ್ಲಪ್ಪ ಅವರು ಬಡಿಗತನಕ್ಕಿಂತ ಕೇರಂ ಬೋರ್ಡ್‌ ಮಾಡುವುದನ್ನೇ ಮುಖ್ಯ ಉದ್ಯೋಗ ಮಾಡಿಕೊಂಡಿದ್ದಾರೆ. ದಿನಾಲೂ ಮಾರಾಟವಾಗುತ್ತಿರುವುದರಿಂದ ಲಾಕ್‌ಡೌನ್‌ ವೇಳೆಯಲ್ಲಿಯೂ ಉತ್ತಮ ಆದಾಯ ಬರಲು ಶುರುವಾಗಿದೆ.

ಕೇರಂ ಬೋರ್ಡ್‌ ಅನ್ನು ಮಗನೇ ತಯಾರು ಮಾಡಿದ್ದು ನೋಡಿ ಖುಷಿ ಆಯಿತು. ಇದುವೇ ಆತನಿಗೆ ಈಗ ಉದ್ಯೋಗವೂ ಆಗಿರುವುದು ಇನ್ನೂ ಖುಷಿಯಾಗಿದೆ ಎಂದು ತಾಯಮ್ಮ ಬಡಿಗೇರ ಅವರು ಹೇಳಿದ್ದಾರೆ.

ನನ್ನ ಅಮ್ಮನಿಗಾಗಿ ಕೇರಂ ಬೋರ್ಡ್‌ ಮಾಡುವುದನ್ನು ಕಲಿತೆ, ಅದುವೇ ಈಗ ನನಗೆ ಉದ್ಯೋಗವಾಗಿದೆ. ನಮ್ಮ ತಾಯಿಯ ಮೇಲಿನ ಪ್ರೀತಿ ಮತ್ತು ಲಾಕ್‌ಡೌನ್‌ ನನಗೆ ದೊಡ್ಡ ಪಾಠವನ್ನೇ ಕಲಿಸಿತು ಎಂದು ಯಲ್ಲಪ್ಪ ಬಡಿಗೇರ ಅವರು ತಿಳಿಸಿದ್ದಾರೆ. 
 

click me!