ಲಾಕ್‌ಡೌನ್‌ನಿಂದ ಜೀವನ ನಿರ್ವಹಣೆಗೆ ಪಾಲಕರಿಗೆ ನೆರವು| ಬಿಸಿಲು, ಗಾಳಿ, ಮಳೆ ಎನ್ನದೆ ರಸ್ತೆಗಳಲ್ಲಿ ಸಂಚಾರ| ಕೆಜಿ ತರಕಾರಿಗೆ 2 ರಿಂದ 3, ಹಾಲಿನ ಪ್ಯಾಕೇಟ್ 1 ಹಾಗೂ ಬ್ರೇಡ್‌ಗೆ 2 ಲಾಭ| ಬೆಳಗ್ಗೆಯಿಂದ ಸಂಜೆ ವರೆಗೂ ವ್ಯಾಪಾರ ಮಾಡಿದರೆ ದಿನಕ್ಕೆ 100 ರಿಂದ 200 ಲಾಭ|
ಕುಕನೂರು(ಮೇ.29): ಓದು, ಬರಹದೊಂದಿಗೆ ಆಟವಾಡಿ ನಲಿಯಬೇಕಿದ್ದ ಮಕ್ಕಳು ತಕ್ಕಡಿ ಹಿಡಿದು ನಿಂತಿದ್ದಾರೆ. ಬಿಸಿಲು, ಮಳೆ, ಗಾಳಿ ಲೆಕ್ಕಿಸದೆ ಬೀದಿ ಬೀದಿ ಸುತ್ತುತ್ತಿದ್ದಾರೆ. ಕಾಲುಗಳು ಸೋತಿವೆ. ಪಾದಗಳಿಗೆ ಹುಣ್ಣಾಗಿದೆ. ಆದರೆ, ಜೀವನ ಬಂಡಿ ಸಾಗಿಸಲು ಇವರ ಕಾಲುಗಳೇ ಚಕ್ರಗಳಾಗಿವೆ.
ಇದು ಭವಿಷ್ಯವನ್ನು ಕಿತ್ತುಕೊಂಡ ಕೊರೋನಾ ವೈರಸ್‌ನಿಂದ ಬಂದ ಸಂಕಷ್ಟ. ಶೈಕ್ಷಣಿಕ ವರ್ಷ ಎಂದು ಆರಂಭವಾಗುತ್ತದೆ ಎಂಬ ಅನಿಶ್ಚಿತತೆ ನಡುವೆ ಮೂರು ತಿಂಗಳಿಂದ ಕೆಲಸವಿಲ್ಲದೆ ಜೀವನ ಸಾಗಿಸಲು ಪರಿತಪಿಸುತ್ತಿರುವ ಹೆತ್ತವರ ಕಷ್ಟ ಕಣ್ಣಾರೆ ಕಂಡು ಮರುಗಿದ ಮಕ್ಕಳು ತಕ್ಕಡಿ ಹಿಡಿದು ವ್ಯಾಪಾರಕ್ಕೆ ನಿಂತಿದ್ದಾರೆ. ಇದು ಕುಕನೂರಿನ ವಿವಿಧ ಭಾಗಗಳಲ್ಲಿ ಕಂಡು ಬರುತ್ತಿರುವ ದೃಶ್ಯ.
undefined
ಗಂಗಾವತಿ: ಕಾಯಕಲ್ಪಕ್ಕೆ ಕಾದಿದೆ ವಿಜಯನಗರ ಕಾಲದ ಅಮೃತೇಶ್ವರ ದೇವಸ್ಥಾನ
ಕೊರೋನಾ ವೈರಸ್ ಹಿನ್ನೆಲೆಯಲ್ಲಿ ಶಾಲಾ-ಕಾಲೇಜಿಗೆ ಸರ್ಕಾರ ರಜೆ ಘೋಷಿಸಿ ಮೂರು ತಿಂಗಳಾಗಿದೆ. ಬೇಸಿಗೆಯ ರಜೆಯ ದಿನಗಳನ್ನು ಕಳೆಯಲು ಸಂಬಂಧಿಕರ ಊರುಗಳಿಗೆ ತೆರಳುತ್ತಿದ್ದ ಮಕ್ಕಳು ಕೊರೋನಾ ಹಿನ್ನೆಲೆ ಊರು ಬಿಟ್ಟು ಕದಲುವಂತಿಲ್ಲ. ಇಷ್ಟುದಿನ ಹೆತ್ತವರು ತಮ್ಮನ್ನು ಶಾಲೆಗೆ ಕಳುಹಿಸಲು ಎಷ್ಟುಕಷ್ಟಪಡುತ್ತಿದ್ದರು ಎಂಬವದನ್ನು ಅರಿಯದ ಮಕ್ಕಳು ಇಂದು ಮನೆಯಲ್ಲಿಯೇ ಇದ್ದು ಕಣ್ಣಾರೆ ಕಾಣುತ್ತಿದ್ದಾರೆ. ಹೀಗಾಗಿ ಮಕ್ಕಳು ಆಟವಾಡಿ ಕಾಲ ಕಳೆಯದೆ ಸಣ್ಣ ಪುಟ್ಟವ್ಯಾಪಾರ ನಡೆಸುವ ಮೂಲಕ ಹೆತ್ತವರ ಕಷ್ಟಕ್ಕೆ ಹೆಗಲಾಗುತ್ತಿದ್ದಾರೆ.
ತರಕಾರಿ, ಬ್ರೇಡ್ ಮಾರಾಟ:
ನಾನು ವ್ಯಾಪಾರ ಮಾಡುತ್ತೇನೆ. ನನಗೆ ತರಕಾರಿ, ಹಾಲು, ಬ್ರೇಡ್ ತಂದುಕೊಡಿ. ಅದರಿಂದ ಬಂದ ಆದಾಯದಿಂದ ಮನೆಗೆ ನೆರವಾಗಲಿ ಎಂದು ಮಕ್ಕಳು ಪಾಲಕರ ಎದುರು ಹಠ ಹಿಡಿಯುತ್ತಿದ್ದಾರೆ. ಚಿಕ್ಕವಯಸ್ಸಿನಲ್ಲಿಯೇ ಮಕ್ಕಳು ದುಡಿಯುವ ಆಸೆ ಕಂಡು ಪಾಲಕರು ಮಾರುಕಟ್ಟೆಯಿಂದ ತರಕಾರಿ, ಬ್ರೇಡ್, ಹಾಲು ತಂದು ಕೊಡುತ್ತಿದ್ದಾರೆ. ಮಕ್ಕಳು ಅದನ್ನು ತೆಗೆದುಕೊಂಡು ಪಟ್ಟಣದ 19 ವಾರ್ಡ್‌ಗಳಲ್ಲಿ ಸಂಚರಿಸಿ ಬೆಳಗ್ಗೆ ಹಾಗೂ ಸಂಜೆ ಮಾರಾಟ ಮಾಡುತ್ತಿದ್ದಾರೆ. ಅದರಿಂದ ಬರುವ ಆದಾಯದ ಕುಟುಂಬ ನಿರ್ವಹಣೆಗೆ ಸಹಕಾರಿಯಾಗಿದೆ ಎನ್ನುತ್ತಾರೆ ಪಾಲಕರು.
100 ರಿಂದ 200 ಆದಾಯ:
ಕೆಜಿ ತರಕಾರಿಗೆ 2 ರಿಂದ 3, ಹಾಲಿನ ಪ್ಯಾಕೇಟ್ 1 ಹಾಗೂ ಬ್ರೇಡ್‌ಗೆ 2 ಲಾಭ ದೊರೆಯುತ್ತಿದೆ. ಬೆಳಗ್ಗೆಯಿಂದ ಸಂಜೆ ವರೆಗೂ ವ್ಯಾಪಾರ ಮಾಡಿದರೆ ದಿನಕ್ಕೆ 100 ರಿಂದ 200 ಲಾಭ ದೊರೆಯುತ್ತಿದೆ. ಇದು ಮನೆಯ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ನೆರವಾಗುತ್ತಿದೆ. ನಿತ್ಯ ಹತ್ತಾರು ಮಕ್ಕಳು ಬೆಳಗಾಗುತ್ತಿದ್ದಂತೆ ತರಕಾರಿ, ಹಾಲು, ಬ್ರೇಡ್ ಎಂದು ಕೂಗುತ್ತಾ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಕಣ್ಣಿಗೆ ಕಾಣುತ್ತಿದ್ದಾರೆ. ಒಟ್ಟಾರೆ ಕೊರೋನಾ ವೈರಸ್ ಮಕ್ಕಳ ಬಾಲ್ಯವನ್ನು ಕಸಿದುಕೊಂಡು ಓದುವ ವಯಸ್ಸಿನಲ್ಲಿಯೇ ದುಡಿಮೆಗೆ ಹಚ್ಚಿದೆ. ಇದು ಬೇಸರದ ಸಂಗತಿ ಆದರೂ ಮನೆ ನಿರ್ವಹಣೆಗೆ ಅನಿವಾರ್ಯವಾಗಿದೆ.
ಮಕ್ಕಳು ವ್ಯಾಪಾರಕ್ಕೆ ನಿಂತಿರುವುದು ಬೇಸರದ ಸಂಗತಿ. ಸರ್ಕಾರ ಮತ್ತು ಶಾಸಕರು ವ್ಯಾಪಾರಸ್ಥ ಕುಟುಂಬಗಳನ್ನು ಹುಡುಕಿ ಸಹಾಯಹಸ್ತ ನೀಡಬೇಕು. ಏನೂ ಅರಿಯದ ಮಕ್ಕಳು ಶಾಲಾ ಮಟ್ಟದ ಜೀವನ ಮೊಟಕುಗೊಳಿಸಿ ಜೀವನ ಪೂರ್ತಿ ದುಡಿಯಬೇಕಾಗುತ್ತದೆ ಎಂದು ವಕೀಲ ಮಲ್ಲಿಕಾರ್ಜುನ ಉಜ್ಜಮ್ಮನವರ ಅವರು ಹೇಳಿದ್ದಾರೆ.