ಹೃದಯವನ್ನು ಹಾಗೂ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗೆ ಕಸಿ ಮಾಡಲು ಗ್ರೀನ್ ಕಾರಿಡಾರ್ ಮೂಲಕ ಧಾರವಾಡದಿಂದ ರಸ್ತೆ ಮಾರ್ಗವಾಗಿ ತೆಗೆದುಕೊಂಡು ಬರಲಾಯಿತು.
ಬೆಳಗಾವಿ(ಸೆ.24): ರಸ್ತೆ ಅಪಘಾತದಲ್ಲಿ ತಲೆಗೆ ಪೆಟ್ಟು ಬಿದ್ದು ತೀವ್ರವಾಗಿ ಗಾಯಗೊಂಡು ಧಾರವಾಡದ ಎಸ್‌ಡಿಎಂ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಮೆದಳು ನಿಷ್ಕ್ರೀಯಗೊಂಡು ಜೀವನ್ಮರಣದ ನಡುವೆ ಹೋರಾಡುತ್ತಿದ್ದ 39 ವರ್ಷದ ಯುವಕ ಗಿರೀಶ ಸೋಮಪ್ಪ ಕುರಿ ತನ್ನ ಅಂಗಾಂಗಳನ್ನು ದಾನ ಮಾಡಿ ಒಬ್ಬರಿಗೆ ಜೀವದಾನ ಮತ್ತು ಇಬ್ಬರು ಅಂಧರಿಗೆ ಬೆಳಕಾಗಿ ಸಮಾಜಕ್ಕೆ ಮಾದರಿಯಾಗಿದ್ದಾರೆ. ಹೃದಯವನ್ನು ಹಾಗೂ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿರುವ ರೋಗಿಗೆ ಕಸಿ ಮಾಡಲು ಗ್ರೀನ್ ಕಾರಿಡಾರ್ ಮೂಲಕ ಧಾರವಾಡದಿಂದ ರಸ್ತೆ ಮಾರ್ಗವಾಗಿ ತೆಗೆದುಕೊಂಡು ಬರಲಾಯಿತು. ಪೊಲೀಸರು ಸಂಪೂರ್ಣವಾಗಿ ಝೀರೊ ಟ್ರಾಫಿಕ್ ಅಥವಾ ಗ್ರೀನ್ ಕಾರಿಡಾರ (ಹಸಿರು ಪಥ) ಮೂಲಕ ಅಂಗಾಂಗಗಳನ್ನು ಸ್ಥಳಾಂತರಿಸಲು ಅವಕಾಶ ಕಲ್ಪಿಸಿಕೊಟ್ಟರು.
ಮೆದಳು ನಿಷ್ಕ್ರೀಯಗೊಂಡಿದ್ದರೂ ಅಂಗಾಂಗಗಳು ಕಾರ್ಯನಿರ್ವಹಿಸುತ್ತಿದ್ದವು. ಮೆದುಳು ನಿಷ್ಕ್ರೀಯಗೊಂಡ ಯುವಕನ ಪತ್ನಿ ಹಾಗೂ ಕುಟುಂಬ ಸದಸ್ಯರಿಗೆ ಆಪ್ತಸಮಾಲೋಚನೆ ಮಾಡಿ, ನೀವು ದಾನ ಮಾಡುವ ಅಂಗಾಂಗಗಳು ಜನರ ಜೀವ ಉಳಿಸುವಲ್ಲಿ ಸಹಕಾರಿಯಾಗಲಿವೆ ಎಂದು ಹೇಳಿದಾಗ, ಸ್ವಇಚ್ಚೆಯಿಂದ ಅಂಗಾಂಗಗಳನ್ನು ದಾನ ಮಾಡಲು ಒಪ್ಪಿದರು.
19 ವರ್ಷದ ಕಲಬುರಗಿ ಯುವಕನ ಬ್ರೇನ್ ಡೆಡ್, ಝೀರೋ ಟ್ರಾಫಿಕ್ ಮೂಲಕ ಅಂಗಾಂಗ ರವಾನೆ!
ಮೆದುಳು ನಿಷ್ಕ್ರೀಯಗೊಂಡ ಯುವಕನ ಹೃದಯವನ್ನು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವ್ಯಕ್ತಿಗೆ ಹೃದಯ ಶಸ್ತ್ರಚಿಕಿತ್ಸಾ ತಜ್ಞವೈದ್ಯರ ತಂಡವು ಹೃದಯ ಕಸಿ ಮಾಡುವಲ್ಲಿ ನಿರತರಾದರು. ಕೊಪ್ಪಳ ಜಿಲ್ಲೆಯ ಕುಣಿಕೇರಿ ತಾಂಡಾದ ಯುವಕನಾದ ಗಿರೀಶ ಸೋಮಪ್ಪ ಕುರಿ ಮೃತಪಟ್ಟರೂ ಜನರ ಜೀವ ಉಳಿಸಿ, ಇಬ್ಬರ ಬಾಳಿಗೆ ಬೆಳಕಾಗಿ ಸಾರ್ಥಕತೆ ಮೆರೆದ. ಮೃತ ಯುವಕನಿಗೆ ಪತ್ನಿ, ಮೂವರು ಮಕ್ಕಳು ಹಾಗೂ ಅಪಾರ ಬಂಧು-ಬಳಗ ಇದ್ದಾರೆ.
ಬೆಳಗಾವಿ ಹಾಗೂ ಹುಬ್ಬಳ್ಳಿ ಧಾರವಾಡ ಪೊಲೀಸ್ ಇಲಾಖೆಯ ಕಾರ್ಯ ಅತ್ಯಂತ ಶ್ಲಾಘನೀಯ. ಅತ್ಯಂತ ಜನಸಂದಣಿ ಹಾಗೂ ಸಂಚಾರ ದಟ್ಟಣೆಯಿಂದ ಕೂಡಿದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗ್ರೀನ್ ಕಾರಿಡಾರ್ ನಿರ್ಮಿಸಿ ಅಂಗಾಂಗಳನ್ನು ಶೀಘ್ರ ಸ್ಥಳಾಂತರಿಸಲು ಅವಕಾಶ ಕಲ್ಪಿಸಿಕೊಟ್ಟರು.
ಅಂಗಾಂಗಳನ್ನು ದಾನ ಮಾಡಿದ ಯುವಕ ಹಾಗೂ ಆತನ ಕುಟುಂಬ ಸದಸ್ಯರು, ಪೊಲೀಸರ ಕಾರ್ಯವನ್ನು ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ, ಸಂಸ್ಥೆಯ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಎಂ.ವಿ. ಜಾಲಿ ಅಭಿನಂದಿಸಿದ್ದಾರೆ.