ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಮೆಗೋಟಿ ಬಳಿ ನಡೆದ ಘಟನೆ| ಪದೇ ಪದೇ ಚಿರತೆ ದಾಳಿಗೆ ತತ್ತರಿಸಿದ ಜನತೆ| ಕಳೆದ ಒಂದು ತಿಂಗಳಲ್ಲಿ ಮನುಷ್ಯರ ಮೇಲೆ ಚಿರತೆ ದಾಳಿ ನಡೆದಿರುವುದು ಇದು ಮೂರನೇ ಪ್ರಕರಣ|
ಗಂಗಾವತಿ(ನ.06): ಚಿರತೆ ದಾಳಿಗೆ ಯುವಕ ಬಲಿಯಾದ ಘಟನೆ ತಾಲೂಕಿನ ಆನೆಗೊಂದಿಯ ಮೇಗೋಟಿ ಬಳಿ ಗುರುವಾರ ಬೆಳಗಿನ ಜಾವ ನಡೆದಿದೆ.
ದುರ್ಗಾ ಬೆಟ್ಟದ ದುರ್ಗಾ ದೇವಸ್ಥಾನದ ಅಡುಗೆದಾರ ಹುಲಗೇಶ ದೊಡ್ಡವೀರಪ್ಪ (23) ಎನ್ನುವ ಯುವಕ ಬಲಿಯಾಗಿದ್ದಾರೆ. ಅವರು ಬೆಳಗಿನ ಜಾವ ಬಹಿರ್ದೆಸೆ ಮುಗಿಸಿ ವಾಪಾಸಾಗುತ್ತಿರುವ ಸಂದರ್ಭದಲ್ಲಿ ಚಿರತೆ ದಾಳಿ ನಡೆಸಿದೆ. ಹುಲಗೇಶ ಅವರನ್ನು ಗುಡ್ಡದ ಗವಿಯೊಳಗೆ ಎಳೆದುಕೊಂಡು ಹೋಗಿದೆ. ತಲೆ ಮತ್ತು ಒಂದು ಕಾಲು, ಕೈ ತಿಂದು ಹಾಕಿದ್ದು, ಉಳಿದ ಭಾಗ ಗವಿಯ ಹೊರಗೆ ಬಿಟ್ಟು ಹೋಗಿದೆ.
undefined
ಮದುವೆ ಸಿದ್ಧತೆಯಲ್ಲಿದ್ದ ಹುಲಗೇಶ:
ಆನೆಗೊಂದಿಯ ದುರ್ಗಾ ಬೆಟ್ಟದ ದುರ್ಗಾ ದೇವಸ್ಥಾನದ ಅಡುಗೆದಾರರನಾಗಿ ಕೆಲಸ ಮಾಡುತ್ತಿದ್ದ ಹುಲಗೇಶ ಅವರ ಮದುವೆಗೆ ಇನ್ನು ಒಂದು ತಿಂಗಳ ಬಾಕಿ ಇತ್ತು. ಭಾಗ್ಯನಗರದ ಯುವತಿಯ ಜತೆ ನಿಶ್ಚಿತಾರ್ಥ ಮುಗಿದಿತ್ತು. ಮದುವೆ ಹಿನ್ನೆಲೆಯಲ್ಲಿ ಆನೆಗೊಂದಿಯಲ್ಲಿ ಮನೆಯ ದುರಸ್ತಿ ಕಾರ್ಯ ನಡೆಸುತ್ತಿದ್ದರು. ಇಂತಹ ಸಂದರ್ಭದಲ್ಲಿ ಈ ಘಟನೆ ನಡೆದಿರುವುದು ಆಘಾತ ಮೂಡಿಸಿದೆ ಎಂದು ಹುಲಗೇಶ ಅವರ ತಂದೆ ದೊಡ್ಡವೀರಪ್ಪ ಹೇಳಿದರು.
ರಕ್ತ ಗುರುತಿನಿಂದ ಪತ್ತೆಯಾದ ಶವ:
ಹುಲಗೇಶ ಕಾಣೆಯಾದ ಬಗ್ಗೆ ಅವರ ಮನೆಯವರಿಗೆ ದುರ್ಗಾ ದೇವಸ್ಥಾನದ ಸಿಬ್ಬಂದಿ ಮಾಹಿತಿ ನೀಡಿದರು. ಎರಡು ದಿನಗಳಿಂದ ಹುಲಗೇಶ ಮನೆಗೆ ಬಂದಿರಲಿಲ್ಲ ಎಂಬ ಮಾಹಿತಿ ಕುಟುಂಬದವರಿಂದ ಲಭ್ಯವಾಯಿತು. ಆದರೆ ಬುಧವಾರ ರಾತ್ರಿ ಹುಲಗೇಶ ದೇವಸ್ಥಾನದಲ್ಲಿದ್ದರು, ಬೆಳಗ್ಗೆ ಕಾಣೆಯಾಗಿದ್ದಾರೆ ಎಂಬುದನ್ನು ಅರಿತು ದೇವಸ್ಥಾನದ ಸಿಬ್ಬಂದಿ ಹುಡುಕಾಡಿದರು. ಗುಡ್ಡ-ಬೆಟ್ಟಗಳು, ಗುಹೆಯ ಸಮೀಪ ನೋಡಿದಾಗ ದಾರಿಯುದ್ದಕ್ಕೂ ರಕ್ತ ಬಿದ್ದಿರುವುದು ಕಂಡುಬಂತು. ಬಳಿಕ ಗುಹೆಯ ಹೊರಗೆ ಹುಲಗೇಶ ಅವರ ಕಾಲು ಮತ್ತು ಬಟ್ಟೆ, ರುಂಡ ಪತ್ತೆಯಾಗಿದೆ. ಇದರಿಂದ ಚಿರತೆ ದಾಳಿ ನಡೆಸಿರುವುದು ಖಚಿತವಾಯಿತು. ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರು. ಚಿರತೆ ದಾಳಿ ನಡೆಸಿರುವ ಬಗ್ಗೆ ಅರಣ್ಯಾಧಿಕಾರಿಗಳು ದೃಢಪಡಿಸಿದ್ದು, ಶವ ಪರೀಕ್ಷೆ ಕಳುಹಿಸಿಕೊಟ್ಟಿದ್ದಾರೆ.
ಗಂಗಾವತಿ: ಜಂಗ್ಲಿ-ರಂಗಾಪುರದ ಬಳಿ ಮತ್ತೆ ಚಿರತೆ ಪ್ರತ್ಯಕ್ಷ, ಬೆಚ್ಚಿಬಿದ್ದ ಗ್ರಾಮಸ್ಥರು
ಮೂರನೇ ಘಟನೆ:
ಕಳೆದ ಒಂದು ತಿಂಗಳಲ್ಲಿ ಮನುಷ್ಯರ ಮೇಲೆ ಚಿರತೆ ದಾಳಿ ನಡೆದಿರುವುದು ಇದು ಮೂರನೇ ಪ್ರಕರಣ. ಒಂದು ತಿಂಗಳ ಹಿಂದೆ ಜಂಗ್ಲಿ ರಂಗಾಪುರ ಬಳಿ ವೃದ್ಧೆಯ ಮೇಲೆ ಚಿರತೆ ದಾಳಿ ನಡೆಸಿ ಗಾಯಗೊಳಿಸಿತ್ತು. ಆನಂತರ ದುರ್ಗಾಬೆಟ್ಟದ ಬಳಿ ಹೈದರಾಬಾದ್‌ನ ಪ್ರವಾಸಿಗರ ಮೇಲೆ ದಾಳಿ ನಡೆಸಿತ್ತು. 8 ವರ್ಷದ ಬಾಲಕ ಗಾಯಗೊಂಡಿದ್ದ. ಗುರುವಾರ ಬೆಳಗಿನ ಜಾವ ಈ ಘಟನೆ ನಡೆದಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ಅರಣ್ಯಾಧಿಕಾರಿಗಳು ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
ಸರ್ಕಾರದಿಂದ 7.50 ಲಕ್ಷ ಪರಿಹಾರ
ಹುಲಗೇಶ ಕುಟುಂಬಕ್ಕೆ ಸರ್ಕಾರ ತಕ್ಷಣ 7.50 ಲಕ್ಷ ಪರಿಹಾರ ನೀಡಲು ಸೂಚನೆ ನೀಡಿದೆ ಎಂದು ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು. ಬೆಂಗಳೂರಿನಲ್ಲಿರುವ ಶಾಸಕರು ದೂರವಾಣಿ ಮೂಲಕ ಈ ವಿಷಯ ತಿಳಿಸಿದ್ದು, ಅರಣ್ಯ ಸಚಿವ ಆನಂದ ಸಿಂಗ್ ಅವರನ್ನು ಭೇಟಿಯಾಗಿ ಪರಿಹಾರ ನೀಡಬೇಕು ಮತ್ತು ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿರುವುದಾಗಿ ಹೇಳಿದರು. ಸರ್ಕಾರ ಇನ್ನು ಹೆಚ್ಚಿನ ಪರಿಹಾರ ನೀಡಲು ಶಿಫಾರಸು ಮಾಡಲಾಗಿದೆ ಎಂದರು. ಎರಡು ದಿನಗಳ ಆನಂತರ ಆನೆಗೊಂದಿಗೆ ತೆರಳಿ ಕುಟಂಬದವರೊಂದಿಗೆ ಸಾಂತ್ವನ ಹೇಳಲಾಗುತ್ತದೆ ಎಂದರು.
ಪರಿಹಾರ ನೀಡಲು ಒತ್ತಾಯ
ಕೂಡಲೆ ಅರಣ್ಯಾಧಿಕಾರಿಗಳು ಮೃತನ ಪಾಲಕರಿಗೆ ಪರಿಹಾರ ನೀಡಬೇಕೆಂದು ಆನೆಗೊಂದಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪೊಲೀಸ್ ಠಾಣೆಯ ಆವರಣದಲ್ಲಿ ಗ್ರಾಮಸ್ಥರು ಆಗಮಿಸಿ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮತ್ತು ಅರಣ್ಯಾಧಿಕಾರಿಗಳಿಗೆ ಮನವಿ ನೀಡಿ, ಮೃತ ಹುಲಗೇಶ ಅವರ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಬೇಕು ಮತ್ತು ಆತನ ಕುಟುಂಬದ ಸದಸ್ಯರಿಗೆ ಉದ್ಯೋಗ ಒದಗಿಸಬೇಕು ಮತ್ತು ಆ ಭಾಗದಲ್ಲಿ ಸಂಚರಿಸುತ್ತಿರುವ ಚಿರತೆ ಮತ್ತು ಕರಡಿಗಳನ್ನು ಸೆರೆ ಹಿಡಿಯಬೇಕೆಂದು ಆಗ್ರಹಿಸಿದರು. ಮನವಿಗೆ ಪ್ರತಿಕ್ರಿಯಿಸಿದ ಅರಣ್ಯಾಧಿಕಾರಿ ಶಿವಾನಂದ ಮೇಟಿ, ಸರ್ಕಾರದಿಂದ 7.50 ಲಕ್ಷ ಪರಿಹಾರ ಬರುತ್ತದೆ. ಹೆಚ್ಚಿನ ಸೌಲಭ್ಯ ನೀಡಲು ಮೇಲಧಿಕಾರಿ ಜತೆ ಚರ್ಚಿಸುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ಸುದರ್ಶನ ವರ್ಮಾ, ಗೋವರ್ಧನ, ರಾಮು, ಪ್ರದೀಪಕುಮಾರ ಇತರರು ಇದ್ದರು.
ಶ್ರೀನಾಥ ಪರಿಹಾರ
ತಾಲೂಕಿನ ಆನೆಗೊಂದಿಯ ಮೇಗೋಟಿಯಲ್ಲಿ ಚಿರತೆ ದಾಳಿಗೆ ಬಲಿಯಾಗಿರುವ ಹುಲಗೇಶ ಕುಟುಂಬಕ್ಕೆ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ ಅವರು . 10 ಸಾವಿರ ಪರಿಹಾರ ನೀಡಿದರು. ಕುಟುಂಬದವರಿಗೆ ಸಾಂತ್ವ ಹೇಳಿದ ಅವರು, ಕೂಡಲೆ ಸರ್ಕಾರ ಮೃತನ ಕುಟಂಬಕ್ಕೆ . 2 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆನೆಗೊಂದಿ ಭಾಗದಲ್ಲಿ ಚಿರತೆ ಮತ್ತು ಕರಡಿಗಳು ಅತಿಯಾಗಿ ಸಂಚರಿಸುತ್ತಿದ್ದು, ಕೂಡಲೆ ಅರಣ್ಯಾಧಿಕಾರಿಗಳು ಬೋನು ಇಟ್ಟು ಸೆರೆ ಹಿಡಿಯಬೇಕು ಮತ್ತು ಸಿಬ್ಬಂದಿ ರಾತ್ರಿ ಗಸ್ತು ಹಾಕಿ ಪ್ರಾಣಿಗಳ ಬಗ್ಗೆ ನಿಗಾವಹಿಸಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್‌ನಿಂದ ಪರಿಹಾರ
ಹುಲಗೇಶ ಅವರ ಕುಟುಂಬಕ್ಕೆ ಕಾಂಗ್ರೆಸ್ ಕಾರ್ಯಕರ್ತರು 5 ಸಾವಿರ ಪರಿಹಾರ ನೀಡಿದರು. ಆನೆಗೊಂದಿಗೆ ತೆರಳಿ ಮೃತನ ಕುಟುಂಬದವರಿಗೆ ಸಾಂತ್ವನ ಹೇಳಿದ ಕಾರ್ಯಕರ್ತರು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರ ಮಾರ್ಗದರ್ಶನದಲ್ಲಿ ಹುಲುಗಪ್ಪ ಅವರ ಕುಟುಂಬಕ್ಕೆ ಪರಿಹಾರ ನೀಡಿರುವುದಾಗಿ ಮಹ್ಮದ್ ಅಸೀಫ್ ಹುಸೇನ್ ತಿಳಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಕಾಸಿಂಸಾಬ್ ಗದ್ವಾಲ, ಮುಸ್ತಾಕ್ ಅಲಿ, ಅಜಗರ ಅಲಿ, ರಮೇಶ ಹಾದಿಮನಿ, ಕೆ. ವೆಂಕಟೇಶ ಬಾಬು, ವಿಶ್ವನಾಥ ಮಾಲೀಪಾಟೀಲ, ಮುಕ್ತಿಯಾರ ಆನೆಗೊಂದಿ ಇದ್ದರು.