
ಮೈಸೂರು: ನಂಜನಗೂಡು ಪಟ್ಟಣದ ಹೊರವಲಯದ ಕೋರೆಹುಂಡಿಗೆಗೆ ತೆರಳುವ ರಸ್ತೆಯಲ್ಲಿ ಬೈಕ್ ಸಮೇತ ಯುವಕನೋರ್ವ ಸಜೀವವಾಗಿ ದಹನವಾಗಿದ್ದು, ಶವ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಯುವಕನ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಮೈಸೂರು ಜಿಲ್ಲೆ ನಂಜನಗೂರು ತಾಲೂಕಿನ ರಾಂಪುರ ಗ್ರಾಮದ ನಿವಾಸಿ ಆದಿತ್ಯ (23) ಮೃತಪಟ್ಟ ಯುವಕ. ನಂಜನಗೂಡಿನಿಂದ ಕೋರೆಹುಂಡಿಗೆಗೆ ತೆರಳುವ ರಸ್ತೆಯಲ್ಲಿರುವ ಹುಲ್ಲಹಳ್ಳಿ ನಾಲೆ ಸಮೀಪದ ನಿರ್ಜನ ಪ್ರದೇಶದಲ್ಲಿ ಬೈಕ್ ಹಾಗೂ ಆದಿತ್ಯನ ಶವ ಸಂಪೂರ್ಣ ಸುಟ್ಟಿರುವ ಸ್ಥಿತಿಯಲ್ಲಿ ಸೋಮವಾರ ರಾತ್ರಿ ಪತ್ತೆಯಾಗಿದೆ.
ಖಾಸಗಿ ಕಾರ್ಖಾನೆಯೊಂದರಲ್ಲಿ ಗುತ್ತಿಗೆ ಆಧಾರದ ನೌಕರನಾಗಿ ಕೆಲಸ ನಿರ್ವಹಿಸುತ್ತಿದ್ದ ಆದಿತ್ಯ, ಸೋಮವಾರ ಬೆಳಗ್ಗೆ ತನ್ನ ಬೈಕ್ ದುರಸ್ತಿ ಮಾಡಿಸುತ್ತೇನೆ ಎಂದು ಮನೆಯಿಂದ ಹೋದವನು ವಾಪಸ್ ಬಂದಿರಲಿಲ್ಲ, ಸಂಜೆ 4ಕ್ಕೆ ಆದಿತ್ಯನ ತಾಯಿ ಅಂಬಿಕಾ ಅವರು ಮನೆಗೆ ಬೇಗ ಬರುವಂತೆ ಕರೆ ಮಾಡಿದಾಗ, ಆದಿತ್ಯ ಮನೆಗೆ ಬೇಗ ಬರುವುದಾಗಿ ತಾಯಿಗೆ ತಿಳಿಸಿದ್ದಾನೆ. ಸಂಜೆ 7ಕ್ಕೆ ಬೈಕ್ ಸಮೇತ ಬೆಂಕಿಗೆ ಆಹುತಿಯಾಗಿರುವುದಾಗಿ ಪರಿಚಿತರು ಪೋನ್ ಮೂಲಕ ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಮೃತನ ತಂದೆ ಮಾದೇಶ, ಮಗನ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ, ನಂಜನಗೂಡು ಗ್ರಾಮಾಂತರ ಠಾಣೆಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೊಳಪಡಿಸಿ ವಾರಸುದಾರರಿಗೆ ಹಸ್ತಾಂತರಿಸಿ ತನಿಖೆ ಕೈಗೊಂಡಿದ್ದಾರೆ.
ಹಾಸನ/ಅರಕಲಗೂಡು: ಹುಡುಗಿಯ ವಿಚಾರಕ್ಕೆ ಯುವಕರ ಗುಂಪೊಂದು ಸಿನಿಮಾ ಶೈಲಿಯಲ್ಲಿ ಬಸ್ ಅಡ್ಡಗಟ್ಟಿ ಬಸ್‌ನಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ ಘಟನೆ ಹಾಸನ ಜಿಲ್ಲೆ ಅರಕಲಗೂಡು ತಾಲೂಕಿನ ಜೋಡಿಗುಬ್ಬಿ ಎಂಬ ಗ್ರಾಮದಲ್ಲಿ ನಡೆದಿದೆ. ಕಾಲೇಜು ವಿದ್ಯಾರ್ಥಿಗಳು ಜೋಡಿಗುಬ್ಬಿಯಿಂದ ಅಜ್ಜೂರು ಕಡೆಗೆ ಬಸ್‌ನಲ್ಲಿ ತೆರಳುತ್ತಿದ್ದ ವೇಳೆ ಸಂತೇಮರೂರು ಬಳಿ ಸ್ಥಳೀಯ ಯುವಕರ ಗುಂಪೊಂದು ಬಸ್‌ನ್ನು ಅಡ್ಡಗಟ್ಟಿ, ಬಸ್‌ನೊಳಗೆ ನುಗ್ಗಿದೆ. ಬಳಿಕ, ವಿದ್ಯಾರ್ಥಿಗಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಬಸ್‌ನಲ್ಲಿದ್ದ ವಿದ್ಯಾರ್ಥಿನಿಯರ ಎದುರೇ ಹಲ್ಲೆ ನಡೆಸಿದ್ದಾರೆ. ಹುಡುಗಿ ವಿಚಾರಕ್ಕೆ ಈ ಗಲಾಟೆ ನಡೆದಿದೆ ಎನ್ನಲಾಗಿದೆ.
ಹುಬ್ಬಳ್ಳಿ: ಹುಟ್ಟಿದ ವೇಳೆ ಕರುಳು ಹೊರ ಬಂದು ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ನವಜಾತ ಶಿಶುವನ್ನು ಭಾನುವಾರ ಕೊಪ್ಪಳದಿಂದ ಹುಬ್ಬಳ್ಳಿ ಕೆಎಂಸಿಆರ್‌ಐಗೆ ಜಿರೋ ಟ್ರಾಫಿಕ್‌ನಲ್ಲಿ ಕರೆತಂದು ಚಿಕಿತ್ಸೆ ನೀಡಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದೆ. ಕುಕನೂರ ತಾಲೂಕಿನ ಗುತ್ತೂರ ಗ್ರಾಮದ ಮಲ್ಲಪ್ಪ-ವಿಜಯಲಕ್ಷ್ಮೀ ದಂಪತಿಗೆ ಶನಿವಾರ ರಾತ್ರಿ ಕುಕನೂರ ಸರ್ಕಾರಿ ಆಸ್ಪತ್ರೆಯಲ್ಲಿ ಗಂಡು ಮಗು ಜನಿಸಿತ್ತು. ಆದರೆ, ಜನನದ ಕ್ಷಣದಲ್ಲೇ ಮಗುವಿನ ಕರುಳುಗಳು ಸಂಪೂರ್ಣವಾಗಿ ಹೊರಗೆ ಬಂದಿದ್ದವು. ಪರಿಸ್ಥಿತಿ ಗಂಭೀರವಾಗಿರುವುದನ್ನು ಅರಿತ ವೈದ್ಯರು, ತುರ್ತು ಶಸ್ತ್ರಚಿಕಿತ್ಸೆ ಅಗತ್ಯವೆಂದು ತಿಳಿಸಿ, ಮಗುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಗೆ ರವಾನಿಸುವಂತೆ ಸೂಚಿಸಿದ್ದರು.
ಮಂಡ್ಯ: ಮಂಡ್ಯ ವಿಶ್ವವಿದ್ಯಾನಿಲಯದ ನಿರ್ಮಾಣ ಹಂತದಲ್ಲಿರುವ ಒಳ ಕ್ರೀಡಾಂಗಣದ ಆವರಣದಲ್ಲಿ ಹತ್ತಕ್ಕೂ ಹೆಚ್ಚು ಡ್ರಗ್ ಸಿರಿಂಜ್‌ಗಳು ಪತ್ತೆಯಾಗಿವೆ. ವಿದ್ಯಾರ್ಥಿಗಳು ಡ್ರಗ್ ಸೇವಿಸಿ ಬಿಸಾಡಿರುವ ಸಿರಿಂಜ್‌ಗಳು ಎಂಬ ಬಗ್ಗೆ ದಟ್ಟ ಅನುಮಾನಗಳು ಮೂಡಿವೆ. ಒಳಾಂಗಣ ಕ್ರೀಡಾಂಗಣ ಕಾಮಗಾರಿ ಏಳೆಂಟು ವರ್ಷಗಳಿಂದ ಪೂರ್ಣಗೊಳ್ಳದೆ ಅರ್ಧಕ್ಕೇ ನಿಂತಿದೆ. ಇದು ವಿಶ್ವವಿದ್ಯಾನಿಲಯದ ಹಿಂಭಾಗದ ಕೊನೆಯಲ್ಲಿದೆ. ಇಲ್ಲಿ ಮದ್ಯದ ಬಾಟಲ್‌ಗಳು, ಸಿಗರೆಟ್ ಪ್ಯಾಕ್‌ಗಳ ಜೊತೆಯಲ್ಲೇ ಸಿರಿಂಜ್‌ಗಳು ಪತ್ತೆಯಾಗಿವೆ. ಸಿರಿಂಜ್‌ಗಳನ್ನು ಆವರಣದ ಸುತ್ತಮುತ್ತ ಬಿಸಾಡಲಾಗಿದೆ.
ವಿಶ್ವವಿದ್ಯಾನಿಲಯಕ್ಕೆ ಎಲ್ಲಿಂದ ಡ್ರಗ್ಸ್ ಪೂರೈಕೆಯಾಗುತ್ತಿದೆ, ಯಾರು ನೀಡುತ್ತಿದ್ದಾರೆ, ವಿದ್ಯಾರ್ಥಿಗಳೇ ತಂದು ಇಲ್ಲಿ ಸೇವಿಸುತ್ತಿರುವರೋ ಅಥವಾ ಹೊರಗಿನವರು ಬಂದು ಇಲ್ಲಿ ಸೇವನೆ ಮಾಡಿ ಬಿಸಾಡಿದ್ದಾರೋ ಎಂಬುದು ಗೊತ್ತಾಗಿಲ್ಲ. ವಿಷಯ ತಿಳಿದು ವಿಶ್ವವಿದ್ಯಾಲಯದ ಉಪಕುಲಪತಿ ಶಿವಚಿತ್ತಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿದ್ದ ಡ್ರಗ್ ಸಿರಿಂಜ್‌ಗಳು, ಮದ್ಯದ ಬಾಟಲ್‌ಗಳು, ಸಿಗರೆಟ್ ಪ್ಯಾಕ್‌ಗಳನ್ನು ತೆರವುಗೊಳಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಎಂಜಿ ರಸ್ತೆಯಲ್ಲಿ ಹೊಸ ವರ್ಷ ಸೆಲೆಬ್ರೇಷನ್‌ಗೆ ಡೆಡ್ ಲೈನ್, ಸಮಯ ಮೀರಿದರೆ ಆಪತ್ತು