ಡ್ರ್ಯಾಗನ್ ಬೆಳೆ ರೈತರಿಗೆ ಕಡಿಮೆ ನಷ್ಟ ಉಂಟು ಮಾಡುವ ಬೆಳೆಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತೆ. ಏನೋ ಸಮಸ್ಯೆಯಾಗಿ ಆದಾರ ಬರಲಿಲ್ಲ ಅಂತಾದ್ರು ಈ ಬೆಳೆ ರೈತನಿಗೆ ನಷ್ಟವನ್ನ ಉಂಟು ಮಾಡೋದಿಲ್ಲ. ಹೀಗಾಗಿ ಸಧ್ಯ ವಿಜಯಪುರ ಜಿಲ್ಲೆಯಲ್ಲಿ ಡ್ರ್ಯಾಗನ್ ಬೆಳೆಯತ್ತ ರೈತರು ತಮ್ಮ ಆಸಕ್ತಿಯನ್ನ ತೋರಿಸ್ತಿದ್ದಾರೆ.
ಷಡಕ್ಷರಿ ಕಂಪೂನವರ್ ಏಷ್ಯಾನೆಟ್ ಸುವರ್ಣ ನ್ಯೂಸ್
ವಿಜಯಪುರ(ಅ.31): ಜಿಲ್ಲೆಯಲ್ಲಿ ಈ ಬಾರಿ ವರುಣರಾಯ ಕೈಕೊಟ್ಟಿದ್ದು, ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ. ಮಳೆ ಇಲ್ಲದೆ ಬೆಳೆದ ಬೆಳೆಯುವ ಓಣಗಿ ಹೋಗ್ತಿದ್ದು, ರೈತರು ಕಂಗಾಲಾಗಿದ್ದಾರೆ. ಆದ್ರೆ ಈ ಬರದ ನಡುವೆಯೂ ಯುವ ರೈತನೊಬ್ಬ ಡ್ರ್ಯಾಗನ್ ಫ್ರೂಟ್ ಬೆಳೆದು ಲಕ್ಷಾಂತರ ರೂ. ಆದಾಯ ಪಡೆದಿದ್ದಾನೆ. ಮಳೆಯಾಗದೆ ನೀರಿಗೆ ಕೊರತೆ ಉಂಟಾಗಿದ್ರೂ, ಇರೋ ನೀರನ್ನೇ ಸದುಪಯೋಗ ಮಾಡಿಕೊಂಡು ಈಗ ಸಖತ್ ಆದಾಯ ಗಳಿಕೆ ಮಾಡ್ತಿದ್ದಾನೆ.
ಬರದ ನಡುವೆಯೂ ರೆಡ್ ಡ್ರ್ಯಾಗನ್ ಆರ್ಭಟ..!
ಯಸ್, ವಿಜಯಪುರ ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಹಾಗೂ ಹಿಂಗಾರು ಎರಡು ಮಳೆಗಳು ಕೈಕೊಟ್ಟಿವೆ. ಮಳೆ ಇಲ್ಲದೆ ಬೆಳೆಗಳು ಕೈಗೆ ಬಂದಿಲ್ಲ. ಆದ್ರೆ ಈ ನಡುವೆ ತಿಕೋಟ ತಾಲೂಕಿನ ರತ್ನಾಪುರ ಗ್ರಾಮದ ಪ್ರವೀಣ ಎನ್ನುವ ಯುವ ರೈತ ಡ್ರ್ಯಾಗನ್ ಫ್ರೂಟ್ ಬೆಳೆದು ಭರ್ಜರಿ ಆದಾಯ ಪಡೆಯುತ್ತಿದ್ದಾನೆ. ಈ ಬಾರಿ ಬರದಿಂದ ಜಿಲ್ಲೆಯಲ್ಲಿ ಬೆಳೆದ ಬೆಳೆಯೂ ಕೈಗೆ ಬರದೆ ರೈತರು ಆತಂಕದಲ್ಲಿದ್ದರೆ, ಪ್ರವೀಣ ಮಾತ್ರ ಡ್ರ್ಯಾಗನ್ ಬೆಳೆಯ ಮೂಲಕ ಲಕ್ಷಾಂತರ ರೂಪಾಯಿ ಆದಾಯ ಪಡೆದಿದ್ದಾನೆ. ಎರಡು ಎಕರೆಯಲ್ಲಿ ಡ್ರ್ಯಾಗನ್ ಬೇಸಾಯ ಮಾಡಿದ್ದು, ಎಕರೆಗೆ 4 ಲಕ್ಷ ಆದಾಯ ಗಳಿಸಿದ್ದಾನೆ. ಇನ್ನು ಡಿಸೆಂಬರ್‌ವರೆಗೂ ಹಣ್ಣು ಮಾರಾಟವಾಗಲಿವೆ. ಜೂನ್ ನಿಂದ ಈ ವರೆಗೆ ಕೇವಲ 5 ತಿಂಗಳಲ್ಲಿ 8 ಲಕ್ಷ ಲಾಭ ಗಳಿಸಿದ್ದಾನೆ.
ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರ ಬದಲಾಗಲ್ಲ: ಸಚಿವ ಸತೀಶ ಜಾರಕಿಹೊಳಿ
ಕಡಿಮೆ ನೀರಲ್ಲಿ ಬೆಳೆಯೋ ಟಫ್ ಬೆಳೆ ಡ್ರ್ಯಾಗನ್..!
ಯುವ ರೈತ ಪ್ರವೀಣ ಬರದ ನಡುವೆಯೂ ಇಷ್ಟೊಂದು ಆದಾಯ ಪಡೆಯುತ್ತಿರೋದರ ಹಿಂದೆ ಇರೋದು ಆತ ಆಯ್ಕೆ ಮಾಡಿಕೊಂಡಿರುವ ಬೆಳೆ ಯಾವುದು ಅನ್ನೋದು. ಪ್ರವೀಣ ಕಳೆದ 5 ವರ್ಷಗಳಿಂದ ಡ್ರ್ಯಾಗನ್ ಬೆಳೆಯುತ್ತಿದ್ದಾನೆ. ಡ್ರ್ಯಾಗನ್ ಅದೆಂಥ ಟಫ್ ಬೆಳೆ ಎಂದರೆ ಬರ ಮತ್ತು ಅತಿವೃಷ್ಟಿ ಎರಡಕ್ಕೂ ಈ ಬೆಳೆ ಬಗ್ಗಲ್ಲ. ಅತಿಯಾಗಿ ಮಳೆ ಬಂದ್ರೂ ಈ ಗಿಡಕ್ಕೆ ಸಮಸ್ಯೆ ಇಲ್ಲ. ಬರ ಇದ್ದು, ಸ್ವಲ್ಪ ನೀರು ಸಿಕ್ಕರು ಸಾಕು ಬೆಳೆ ಜಮೀನು ಮಾಲಿಕನ ಕೈಗೆ ಹಣದ ಪೇಟಿಯನ್ನೆ ನೀಡಿ ಬಿಡುತ್ತೆ.
ಬೋರ್‌ವೆಲ್ ಬಂದ್ ಆದ್ರೂ ನಿಲ್ಲದ ಆದಾಯ..!
ಇಷ್ಟೊಂದು ಆದಾಯ ಪಡೆಯುತ್ತಿರೋ ಪ್ರವೀಣಗೆ ಬರದ ಹೊಡೆತ ಬಿದ್ದಿಲ್ಲ ಅಂತಲ್ಲ. ಮಳೆ ಕೊರತೆಯಿಂದ ಜಮೀನಿನಲ್ಲಿದ್ದ ಎರಡು ಬೋರ್ ವೆಲ್ ಪೈಕಿ ಈಗಾಗಲೇ ಒಂದು ಬಂದ್ ಆಗಿದೆ. ಇನ್ನೊಂದು ಬೋರ್‌ವೆಲ್‌ನಿಂದ ಕೇವಲ ಅರ್ಧ ಇಂಚಿನಷ್ಟು ನೀರು ಲಭ್ಯವಾಗ್ತಿದೆ. ಆದರೂ ಸಹ ಹನಿ ನೀರಾವರಿ ಬಳಕೆ ಮಾಡಿ ಕಡಿಮೆ ನೀರಲ್ಲಿ ಲಕ್ಷ-ಲಕ್ಷ ಆದಾಯ ಪಡೆದಿದ್ದಾನೆ. ಪ್ರತಿ ವರ್ಷ 2 ಎಕರೆಯಲ್ಲಿ 12 ರಿಂದ 15 ಲಕ್ಷ ಆದಾಯ ಬರ್ತಿತ್ತು. ಆದ್ರೆ ಬರದ ಹೊಡೆತ, ನೀರಿನ ಕೊರತೆಯಿಂದ ಆದಾಯ ಕುಂಠಿತವಾಗಿದೆ.
ವಿಜಯಪುರ ಬಸವ ಜಿಲ್ಲೆ ಮಾಡುವ ವಿಚಾರದಲ್ಲಿ ಲಿಂಗಾಯತ ಸಮುದಾಯ ಪರವೂ ಇಲ್ಲ, ವಿರೋಧವೂ ಇಲ್ಲ: ಡಾ ಎಸ್‌ಬಿ ಜಾಮದಾರ
ಬರದ ನಾಡಿಗೆ ಹೇಳಿ ಮಾಡಿಸಿದ ಬೆಳೆ ಡ್ರ್ಯಾಗನ್..!
ವಿಜಯಪುರ ಜಿಲ್ಲೆಯ ರೈತರು ಮಳೆಯಿಂದ ಸಮೃದ್ಧಿ ಕಂಡಿದ್ದಕ್ಕಿಂತ ಹೆಚ್ಚು ಬರಗಾಲದಿಂದಲೇ ನಲುಗಿ ಹೋಗಿದ್ದಾರೆ. ಕೆಲ ಬಾರಿ ಮಳೆಯಾದ್ರು ಅತಿವೃಷ್ಟಿಯಿಂದಲು ರೈತರಿಗೆ ಸಂಕಷ್ಟಗಳು ಎದುರಾಗಿವೆ. ಆದ್ರೆ ಈ ನಡುವೆ ಬರದ ನಾಡು ಎನ್ನುವ ಕುಖ್ಯಾತಿಗೆ ಪಾತ್ರವಾಗಿರೋ ವಿಜಯಪುರ ಜಿಲ್ಲೆಗೆ ಡ್ರ್ಯಾಗನ್ ಬೆಳೆ ಹೇಳಿ ಮಾಡಿಸಿದ ಹಾಗಿದೆ. ಡ್ರ್ಯಾಗನ್ ಬೆಳೆ ರೈತರಿಗೆ ಅಪಾರ ಪ್ರಮಾಣದಲ್ಲಿ ನಷ್ಟದಿಂದ ನಲಗುವಂತೆ ಮಾಡುವ ಬೆಳೆಯೇ ಅಲ್ಲವಂತೆ. ಯಾಕಂದ್ರೆ ಡ್ರ್ಯಾಗನ್ ಬೆಳೆಗೆ ಯಾವುದೇ ಮೆಂಟೆನೆನ್ಸ್ ಖರ್ಚಿಲ್ಲ. ಕೀಟದ ಕಾಟವಿಲ್ಲದ ಕಾರಣ, ಕೀಟನಾಶಕ, ಗೊಬ್ಬರ ಅಂತಾ ಖರ್ಚು ಮಾಡುವ ಅವಶ್ಯಕತೆಯು ಇಲ್ಲವಂತೆ.
ಡ್ರ್ಯಾಗನ್ ಬೆಳೆಯತ್ತ ಮುಖ ಮಾಡ್ತಿರೋ ಗುಮ್ಮಟನಗರಿ ರೈತರು..!
ಡ್ರ್ಯಾಗನ್ ಬೆಳೆ ರೈತರಿಗೆ ಕಡಿಮೆ ನಷ್ಟ ಉಂಟು ಮಾಡುವ ಬೆಳೆಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತೆ. ಏನೋ ಸಮಸ್ಯೆಯಾಗಿ ಆದಾರ ಬರಲಿಲ್ಲ ಅಂತಾದ್ರು ಈ ಬೆಳೆ ರೈತನಿಗೆ ನಷ್ಟವನ್ನ ಉಂಟು ಮಾಡೋದಿಲ್ಲ. ಹೀಗಾಗಿ ಸಧ್ಯ ವಿಜಯಪುರ ಜಿಲ್ಲೆಯಲ್ಲಿ ಡ್ರ್ಯಾಗನ್ ಬೆಳೆಯತ್ತ ರೈತರು ತಮ್ಮ ಆಸಕ್ತಿಯನ್ನ ತೋರಿಸ್ತಿದ್ದಾರೆ. ಕಡಿಮೆ ನೀರು, ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯ ಕೊಡುವ ಬೆಳೆಯಾಗಿರೋ ಕಾರಣ, ಬರದ ನಾಡು ವಿಜಯಪುರದಲ್ಲಿ ರೈತರು ಈಗ ಡ್ರ್ಯಾಗನ್ ಬೆಳೆಯತ್ತ ಮುಖ ಮಾಡ್ತಿದ್ದಾರೆ.