ಕೊಡಗು: ಕಟ್ಟಡ ಕಾಮಗಾರಿ ವೇಳೆ ಮಣ್ಣು ಕುಸಿತ, ಮೂವರ ದುರ್ಮರಣ

By Girish GoudarFirst Published Oct 31, 2023, 10:27 PM IST
Highlights

ಮಣ್ಣಿನಡಿಯಲ್ಲಿ ಸಿಲುಕಿರುವವರಿಗಾಗಿ ಶೋಧ ಕಾರ್ಯಾಚರಣೆ ಆರಂಭಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ 

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು 

ಕೊಡಗು(ಅ.31): ಅವರೆಲ್ಲರೂ ಬದುಕು ಕಟ್ಟಿಕೊಳ್ಳಲು ಕೂಲಿ ಕೆಲಸಕ್ಕಾಗಿ ಕೊಡಗಿಗೆ ಬಂದಿದ್ದವರು. ಆದರೆ ಮಣ್ಣಿನ ದಿಬ್ಬದ ರೂಪದಲ್ಲಿ ಕಾದು ಕುಳಿತಿದ್ದ ಜವರಾಯನ ಅಟ್ಟಹಾಸಕ್ಕೆ ಸಿಲುಕಿ ಮೂವರು ಕಾರ್ಮಿಕರಿ ಸ್ಥಳದಲ್ಲಿಯೇ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಮಡಿಕೇರಿ ನಗರದಲ್ಲಿ ಕಟ್ಟಡ ಕಾಮಗಾರಿಗಾಗಿ ಪಿಲ್ಲರ್ ಗುಂಡಿ ತೆಗೆಯುವ ವೇಳೆ ಮಣ್ಣಿನ ದಿಬ್ಬ ಕುಸಿದು ಮೂವರು ಮಣ್ಣಿನಡಿ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ನಡೆದಿದೆ. 

ನಗರದ ಸ್ಟುವರ್ಟ್ ಹಿಲ್ ನಲ್ಲಿ ಪ್ರದೀಪ್ ಎಂಬುವರ ಮನೆಯ ನಿರ್ಮಾಣಕ್ಕಾಗಿ ಪಿಲ್ಲರ್ ಗುಂಡಿ ತೆಗೆಯುತ್ತಿದ್ದರು. ಈ ವೇಳೆ ಪಕ್ಕದಲ್ಲಿಯೇ ಇದ್ದ 15 ರಿಂದ 20 ಅಡಿ ಎತ್ತರದ ಮಣ್ಣಿನ ದಿಬ್ಬ ಕುಸಿದು ಬಿದ್ದಿದೆ. ಪರಿಣಾಮ ಮಣ್ಣಿನಡಿಯಲ್ಲಿ ಸಿಲುಕಿ ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಹಾವೇರಿಯ ಆನಂದ (35), ಬಸವ (35) ಹಾಗೂ ಹುಬ್ಬಳಿಯ ಲಿಂಗಪ್ಪ (45) ಎಂದು ಗುರುತ್ತಿಸಲಾಗಿದೆ. 38 ವರ್ಷದ ತುಮಕೂರು ಜಿಲ್ಲೆಯ ಮಂಜು ಮತ್ತು ರಾಜು ಎಂಬಿಬ್ಬರನ್ನು ರಕ್ಷಿಸಲಾಗಿದೆ.

ಡಿಕೆಶಿ ಅವರ ಆಸ್ತಿ ಅಕ್ರಮ ಎನ್ನುವ ಎಚ್‌ಡಿಕೆ ಅವರದ್ದು ಬೇನಾಮಿ ಅಲ್ಲವೆ: ಕೆಪಿಸಿಸಿ ವಕ್ತಾರ ಲಕ್ಷ್ಮಣ್

ಮಡಿಕೇರಿ ನಗರದ ಸ್ಟುವರ್ಟ್ ಹಿಲ್ ನಲ್ಲಿ ಅಲ್ಲಿನ ನಿವಾಸಿ ಪ್ರದೀಪ್ ಎಂಬುವರ ಮನೆ ನಿರ್ಮಾಣ ಕಾರ್ಯಕ್ಕಾಗಿ 9 ಕಾರ್ಮಿಕರು ಪಿಲ್ಲರ್ ಗುಂಡಿಗಳನ್ನು ತೆಗೆಯುತ್ತಿದ್ದರು. ಈ ವೇಳೆ 15 ರಿಂದ 20 ಎತ್ತರದ ಮಣ್ಣಿನ ದಿಬ್ಬ ಕುಸಿದಿದೆ. ಮಣ್ಣು ಕುಸಿದಿದ್ದರಿಂದ ಮಣ್ಣಿನ ಅಡಿಯಲ್ಲಿ ಐದು ಜನರು ಸಿಲುಕಿದ್ದಾರೆ. ಅದರಲ್ಲಿ ಸ್ವಲ್ಪ ಕಾಣಿಸುತ್ತಿದ್ದ ರಾಜು ಮತ್ತು ಮಂಜು ಎಂಬಿಬ್ಬರನ್ನು ರಕ್ಷಿಸಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿ ಶಾಮಕ ದಳದ ಸಿಬ್ಬಂದಿ, ಹಾಗೂ ಮಡಿಕೇರಿ ಪೊಲೀಸರು ಕಾರ್ಯಾಚರಣೆ ನಡೆಸಿ ಒಂದು ಗಂಟೆಯಲ್ಲೇ ಮೂವರನ್ನು ಮಣ್ಣಿನಿಂದ ಹೊರ ತೆಗೆದಿದ್ದಾರೆ. ಬಾರಿ ಪ್ರಮಾಣದ ಮಣ್ಣು ಕುಸಿದು ಮೇಲೆ ಬಿದ್ದಿದ್ದರಿಂದ ಮೂವರನ್ನು ಹೊರತೆಗೆಯುವಷ್ಟರಲ್ಲಿ ಮೂವರು ಮೃತಪಟ್ಟಿದ್ದರು. 

ಸದ್ಯ ಇಬ್ಬರನ್ನು ರಕ್ಷಿಸಲಾಗಿದ್ದು ಇಬ್ಬರಿಗೂ ಕೊಡಗು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆ ಮಡಿಕೇರಿ ಶಾಸಕ ಮಂತರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ ಹಾಗೂ ಎಸ್.ಪಿ. ರಾಮರಾಜನ್ ಸ್ಥಳಕ್ಕೆ ದೌಡಾಯಿಸಿ ಮಣ್ಣಿನಡಿ ಸಿಲುಕಿದ್ದವರನ್ನು ಹೊರ ತೆಗೆಯುವವರೆಗೂ ಸ್ಥಳದಲ್ಲಿಯೇ ಇದ್ದು ಕಾರ್ಯಾಚರಣೆಗೆ ನೆರವಾದರು. ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಕೊಡಗು ಎಸ್.ಪಿ. ರಾಮರಾಜನ್ ಕಟ್ಟಡದ ಕಾಮಗಾರಿ ಮಾಡುವ ವೇಳೆ ಈ ದುರ್ಘಟನೆ ನಡೆದಿದೆ.  ಕಾಮಗಾರಿ ಮಾಡುವಾಗ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಮೂವರ ಸಾವಿಗೆ ಕಾರಣವಾಗಿದೆ. ಹೀಗಾಗಿ ಸಂಬಂಧಿಸಿದವರ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಹೇಳಿದ್ದಾರೆ. 

ಕಾರ್ಮಿಕರೆಲ್ಲರೂ ಬೇರೆ ಬೇರೆ ಜಿಲ್ಲೆಯವರಾಗಿದ್ದು, ಉಡುಪಿ ಮೂಲದ ಗುತ್ತಿಗೆದಾರ ಮನು ಎಂಬಾತನ ಬಳಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 17 ರಂದು ಗುತ್ತಿಗೆದಾರರ ಮೂಲಕ ಮಡಿಕೇರಿಗೆ ಬಂದು ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಇನ್ನು ಮೂವರು ಮೃತಪಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಕೊಡಗು ಉಸ್ತುವಾರಿ ಸಚಿವ ಭೋಸರಾಜ್ ಅವರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಮೃತರನ್ನು ಕಂಡು ಸಂತಾಪ ಸೂಚಿಸಿದರು. ಅಲ್ಲದೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು. ಮೃತರೆಲ್ಲರೂ ಕೂಲಿ ಕಾರ್ಮಿಕರಾಗಿದ್ದು, ಕೂಲಿಗಾಗಿಯೇ ಹುಬ್ಬಳಿಯಿಂದ ಕೊಡಗಿಗೆ ಬಂದಿರುವುದರಿಂದ ಅವರ ಕುಟುಂಬಕ್ಕೆ ತಲಾ 2 ಲಕ್ಷ ಪರಿಹಾರ ಘೋಷಿಸಿದ್ದಾರೆ. 

click me!