ಆಯುಷ್ ಇಲಾಖೆ-ಧರ್ಮಸ್ಥಳ ಟ್ರಸ್ಟ್ ಸಹಯೋಗದಲ್ಲಿ ಆರಂಭ| ಮಾನಸಿಕ ಸ್ಥಿರತೆ ಹಾಗೂ ದೈಹಿಕ ಸದೃಢತೆಗೆ ಯೋಗ ಸಹಕಾರಿ| ಪ್ರಾರಂಭದಲ್ಲಿ ತಾಲೂಕು ಆಸ್ಪತ್ರೆಯ ಆವರಣದಲ್ಲಿ ಚಿಕಿತ್ಸಾ ಕೇಂದ್ರ ಆರಂಭ| ಪಂಚಕರ್ಮ, ಮಣ್ಣಿನ, ಜಲ, ತೈಲ ಹಾಗೂ ಅಭ್ಯಂಗ ಸ್ನಾನ ಮುಂತಾದ ಚಿಕಿತ್ಸೆ|
ಗಜೇಂದ್ರಗಡ(ಮಾ.07): ಕೇಂದ್ರ ಸರ್ಕಾರವು ರಾಷ್ಟ್ರೀಯ ಆಯುಷ್ ಅಭಿಯಾನದಡಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಆರಂಭಿಸಿದ್ದು, ಜಿಲ್ಲೆಯ ವಾಣಿಜ್ಯ ನಗರಿಗೆ ಮತ್ತೊಂದು ಗರಿ ಬಂದಂತಾಗಿದೆ.
ಮಾನಸಿಕ ಸ್ಥಿರತೆ ಹಾಗೂ ದೈಹಿಕ ಸದೃಢತೆಗೆ ಯೋಗ ಸಹಕಾರಿಯಾದರೆ ಇತ್ತ ಆಯುರ್ವೇದ ಚಿಕಿತ್ಸಾ ಪದ್ಧತಿಯು ಹೆಚ್ಚು ವಿಶ್ವಾಸಾರ್ಹ ಎನಿಸುತ್ತಿದೆ. ಹೀಗಾಗಿ ಸಾರ್ವಜನಿಕರಿಗೆ ಯೋಗ ತರಬೇತಿ ಜತೆಗೆ ರೋಗಿಗಳಿಗೆ ಪ್ರಕೃತಿ ಚಿಕಿತ್ಸೆ ನೀಡುವ ಉದ್ದೇಶದಿಂದ ಧರ್ಮಸ್ಥಳದ ಮಂಜುನಾಥೇಶ್ವರ ಟ್ರಸ್ಟ್ ಹಾಗೂ ಆಯುಷ್ ಇಲಾಖೆ ಜಂಟಿಯಾಗಿ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆರಂಭವಾಗಿರುವ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಘಟಕವು ಜನತೆಯ ಗಮನ ಸೆಳೆಯುತ್ತಿದೆ.
undefined
ಪ್ರಕೃತಿ ಚಿಕಿತ್ಸೆಗಾಗಿ ಧಾರವಾಡ, ಉಜಿರೆ ಅಥವಾ ಜಿಲ್ಲೆಯ ಹುಲಕೋಟಿಗೆ ತೆರಳಬೇಕಾದ ಅನಿವಾರ್ಯತೆಯಿತ್ತು. ಆದರೆ ಈಗ ಪಟ್ಟಣದಲ್ಲಿ ಆರಂಭವಾಗಿರುವ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಉಸ್ತುವಾರಿಯನ್ನು ಜಿಲ್ಲಾ ಆಯುಷ್ ಇಲಾಖೆ ನಿರ್ವಹಿಸಲಿದೆ. ಆಸ್ಪತ್ರೆಯಲ್ಲಿ ಧರ್ಮಸ್ಥಳದಲ್ಲಿರುವ ಪ್ರಕೃತಿ ಚಿಕಿತ್ಸಾ ಪದ್ಧತಿಗಳನ್ನು ಅನುಸರಿಸಿ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಕೆಲವು ತಿಂಗಳಲ್ಲಿ ಸುಸಜ್ಜಿತ ಕಟ್ಟಡದೊಂದಿಗೆ ಆರಂಭವಾಗಲಿರುವ ಚಿಕಿತ್ಸಾ ಕೇಂದ್ರದಲ್ಲಿ ಪ್ರತಿ ದಿನ ಎರಡು ಬಾರಿಯಂತೆ ಸಾರ್ವಜನಿಕರಿಗೆ ಉಚಿತವಾಗಿ ಯೋಗ ತರಬೇತಿ ನೀಡಲಾಗುವುದು. ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗುವ ರೋಗಿಗಳಿಗೆ ಪ್ರಕೃತಿ ಚಿಕಿತ್ಸೆಗೆ ಅನುಸಾರವಾಗಿ ಆಹಾರ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಅಲ್ಲದೆ ಚಿಕಿತ್ಸಾ ಕೇಂದ್ರಕ್ಕೆ ಓರ್ವ ಯೋಗ ತರಬೇತುದಾರ, ಓರ್ವ ಆಯುರ್ವೇದ ತಜ್ಞ ಹಾಗೂ ಪ್ರಕೃತಿ ಚಿಕಿತ್ಸಾ ವೈದ್ಯರನ್ನು ನೇಮಿಸಿಕೊಳ್ಳಲಾಗುವುದು. ಆಸ್ಪತ್ರೆಯಲ್ಲಿ ರೋಗಿಗಳಿಗೆ ಪಂಚಕರ್ಮ, ಮಣ್ಣಿನ, ಜಲ, ತೈಲ ಹಾಗೂ ಅಭ್ಯಂಗ ಸ್ನಾನ ಮುಂತಾದ ಚಿಕಿತ್ಸೆಗಳನ್ನು ನೀಡಲಾಗುವುದು.
ಮುಂಡರಗಿ: ದಲಿತರು ಚಹಾ ಕುಡಿದ ಕಪ್ ತೊಳೆದ ತಹಸೀಲ್ದಾರ್
ಪ್ರಾರಂಭದಲ್ಲಿ ಚಿಕಿತ್ಸಾ ಕೇಂದ್ರವನ್ನು ತಾಲೂಕು ಆಸ್ಪತ್ರೆಯ ಆವರಣದಲ್ಲಿ ಆರಂಭಿಸಲಾಗಿದ್ದು, ಆನಂತರದ ದಿನಗಳಲ್ಲಿ ಪಟ್ಟಣದ ಹೊರವಯಲದಲ್ಲಿ ಸೂಕ್ತ ನಿವೇಶನ ಆಯ್ಕೆ ಮಾಡಿ ಸುಸಜ್ಜಿತ ಆಸ್ಪತ್ರೆ ನಿರ್ಮಿಸುವ ಜತೆಗೆ ಚಿಕಿತ್ಸಾ ಕೇಂದ್ರದಲ್ಲಿನ ವೈದ್ಯಕೀಯ ಸಿಬ್ಬಂದಿ ವೇತನ, ಔಷಧಿ ವೆಚ್ಚ, ಆಸ್ಪತ್ರೆ ನಿರ್ವಹಣೆ ವೆಚ್ಚವನ್ನು ರಾಷ್ಟ್ರೀಯ ಆಯುಷ್ ಅಭಿಯಾನದಿಂದ ಭರಿಸಲಾಗುವುದು ಎನ್ನುತ್ತಿದೆ ಇಲಾಖೆ.
ಗಜೇಂದ್ರಗಡ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ತಾತ್ಕಾಲಿಕವಾಗಿ ಉದ್ಘಾಟನೆಯಾಗಿರುವ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರವು ಮುಂದಿನ ದಿನಗಳಲ್ಲಿ ಸುಸಜ್ಜಿತ ಕಟ್ಟಡದಲ್ಲಿ ಯೋಗ ತರಬೇತಿ ಜತೆಗೆ ಚಿಕಿತ್ಸಾ ಕೇಂದ್ರದಲ್ಲಿ ಚಿಕಿತ್ಸಾ ಪದ್ಧತಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ಸುಜಾತಾ ಪಾಟೀಲ ಹೇಳಿದ್ದಾರೆ.
ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರ ಉದ್ಘಾಟನೆಯಾಗಿದ್ದರಿಂದ ಈ ಹಿಂದೆ ಪ್ರಕೃತಿ ಚಿಕಿತ್ಸೆಗಾಗಿ ಉಜಿರೆ ಅಥವಾ ಧಾರವಾಡಕ್ಕೆ ತೆರಳುವುದು ತಪ್ಪಲಿದೆ. ಹೀಗಾಗಿ ಶೀಘ್ರದಲ್ಲಿಯೇ ಸುಸಜ್ಜಿತವಾದ ಚಿಕಿತ್ಸಾ ಕೇಂದ್ರ ನಿರ್ಮಾಣಕ್ಕೆ ಸೂಕ್ತ ನಿವೇಶನ ನೀಡಲಾಗುವುದು ಎಂದು ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಶಾಸಕ ಕಳಕಪ್ಪ ಬಂಡಿ ತಿಳಿಸಿದ್ದಾರೆ.