ಎತ್ತಿನಹೊಳೆ ನೀರಿನ ಯೋಜನೆ ನಿಧಾನಗತಿ: ಗೃಹ ಸಚಿವ ಪರಮೇಶ್ವರ್ ಅಸಮಾಧಾನ

Published : Feb 22, 2025, 08:40 PM IST
ಎತ್ತಿನಹೊಳೆ ನೀರಿನ ಯೋಜನೆ ನಿಧಾನಗತಿ: ಗೃಹ ಸಚಿವ ಪರಮೇಶ್ವರ್ ಅಸಮಾಧಾನ

ಸಾರಾಂಶ

ರಾಯದುರ್ಗ ಹಾಗೂ ತುಮಕೂರು-ದಾವಣಗೆರೆ ಮಾರ್ಗದ ರೈಲ್ವೆ ಯೋಜನೆ ಮತ್ತು ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯು ನಿಧಾನಗತಿಯಲ್ಲಿ ಸಾಗಿದ್ದು ವಿವಿಧ ಹಂತವಾರು ಭೂಸ್ವಾಧೀನ ಪ್ರಕ್ರಿಯೆ ಆಗಿಲ್ಲವೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು. 

ತುಮಕೂರು (ಫೆ.22): ರಾಯದುರ್ಗ ಹಾಗೂ ತುಮಕೂರು-ದಾವಣಗೆರೆ ಮಾರ್ಗದ ರೈಲ್ವೆ ಯೋಜನೆ ಮತ್ತು ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯು ನಿಧಾನಗತಿಯಲ್ಲಿ ಸಾಗಿದ್ದು ವಿವಿಧ ಹಂತವಾರು ಭೂಸ್ವಾಧೀನ ಪ್ರಕ್ರಿಯೆ ಆಗಿಲ್ಲವೆಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅಸಮಾಧಾನ ವ್ಯಕ್ತಪಡಿಸಿದರು. ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಭೂಸ್ವಾಧೀನಕ್ಕೆ ಎಲ್ಲೆಲ್ಲಿ ಸಮಸ್ಯೆಗಳಿವೆ? ಯಾವ ಕಾರಣದಿಂದ ನಿಂತಿವೆ ಎಂಬುದನ್ನು ಸಭೆಯಲ್ಲಿ ಪರಿಶೀಲಿಸಿ ಮಾಹಿತಿ ಪಡೆದಿದ್ದೇನೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು. 

ಹೇಮಾವತಿ ಯೋಜನೆಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಕುಣಿಗಲ್ ಸೇರಿದಂತೆ ಜಿಲ್ಲೆಯ ನಾಲ್ಕು ಏತ ನೀರಾವರಿ ಯೋಜನೆಗಳ ಭೂಸ್ವಾಧೀನ ಪ್ರಕ್ರಿಯೆಯಲ್ಲಿರುವ ಸಮಸ್ಯೆಗಳ ಬಗ್ಗೆ ಪರಿಶೀಲಿಸಿದ್ದೇನೆ. ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಿಸಿದಂತೆ 160 ಎಕರೆ ಭೂಸ್ವಾಧೀನ ಆಗಬೇಕಿದೆ. ಕೆಐಎಡಿಬಿ ಯೋಜನೆಯಡಿ 12 ಸಾವಿರ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಇಂಡಸ್ಟ್ರಿಯಲ್ ಹಬ್ ನಿರ್ಮಾಣ ಮಾಡಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ 6 ಹಂತಗಳ ಪೈಕಿ 3 ಹಂತದ ಕಾಮಗಾರಿಗಳು ಪೂರ್ಣಗೊಂಡಿರುವ ಬಗ್ಗೆ ಸಭೆಯಲ್ಲಿ ಪ್ರಗತಿ ಪರಿಶೀಲಿಸಲಾಗಿದೆ ಎಂದು ತಿಳಿಸಿದರು.

ಈ ಬಾರಿ ಆಯವ್ಯಯದಲ್ಲಿ ಜಿಲ್ಲೆಗೆ ಹೆಚ್ಚಿನ ಅನುದಾನ ಮತ್ತು ಯೋಜನೆಗಳನ್ನು ನೀಡುವಂತೆ ಕೇಳಿದ್ದೇನೆ. ಆಯವ್ಯಯದ ಬಗ್ಗೆ ಹೆಚ್ಚಿನ ನಿರೀಕ್ಷೆ ಇಟ್ಟುಕೊಂಡಿದ್ದೇನೆ. ರಾಜ್ಯದಲ್ಲಿ ಪುಂಡರ ಹಾವಳಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ವ್ಹೀಲಿಂಗ್ ಸೇರಿದಂತೆ ಪುಂಡಾಟಿಕೆಯನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಮಾದಕ ವ್ಯಸನಿಗಳ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಡ್ರಗ್ಸ್ ಮುಕ್ತ ಕರ್ನಾಟಕವನ್ನಾಗಿಸುವ ನಿಟ್ಟಿನಲ್ಲಿ ಕಾರ್ಯಚರಣೆ ಕೈಗೊಳ್ಳಲಾಗಿದೆ ಎಂದರು. ನೂರಾರು ಕೆ.ಜಿ.ಡ್ರಗ್ಸ್ ಸುಟ್ಟು ಹಾಕಿದ್ದೇವೆ. ಅಕ್ರಮವಾಗಿ ನೆಲೆಸಿರುವ ವಿದೇಶಿ ಪ್ರಜೆಗಳು ಹಾಗೂ ಡ್ರಗ್ಸ್ ದಂಧೆಯಲ್ಲಿ ತೊಡಗಿರುವವರನ್ನು ಗಡಿಪಾರು ಮಾಡಲಾಗಿದೆ. ವ್ಯಾಸಂಗಕ್ಕಾಗಿ ಬಂದು ವೀಸಾ ಮುಗಿದರೂ ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವವರನ್ನು ಗುರುತಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

10 ಕೋಟಿ ಪ್ರಾಜೆಕ್ಟ್ ಬಗ್ಗೆ ನನ್ನ ಗಮನಕ್ಕೆ ಏಕೆ ತಂದಿಲ್ಲ: ಗೃಹ ಸಚಿವ ಪರಮೇಶ್ವರ್

ಮುಖ್ಯಾಧಿಕಾರಿ ವಿರುದ್ಧ ಗರಂ: 10 ಕೋಟಿಯ ಪಪಂ ಪ್ರಾಜೆಕ್ಟ್ ಬಗ್ಗೆ ನನ್ನ ಗಮನಕ್ಕೆ ಏಕೆ ತಂದಿಲ್ಲ. ಟೌನ್‌ನಲ್ಲಿ ಏನೇ ಸಮಸ್ಯೆ ಇದ್ರು ನನ್ನ ಗಮನಕ್ಕೆ ಎಂದಾದರೂ ತಂದಿದೀರಾ. ಪಪಂಯನ್ನು ಪುರಸಭೆಯನ್ನಾಗಿ ಮಾಡಿರುವ ಪ್ರಸ್ತಾವನೆ ಯಾವ ಹಂತದಲ್ಲಿದೆ ನಿಮಗೇ ಗೊತ್ತಾ. ಅಭಿವೃದ್ಧಿಯ ವಿಚಾರದಲ್ಲಿ ನಿರ್ಲಕ್ಷ ಮಾಡಿದ್ರೇ ನಿನ್ನನ್ನ ಅಮಾನತು ಮಾಡಿ ಮನೆಗೆ ಕಳಿಸ್ತೀನಿ ಎಂದು ಪಪಂ ಮುಖ್ಯಾಧಿಕಾರಿ ಕೆ.ಎಸ್.ಉಮೇಶ್‌ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಖಡಕ್ ಎಚ್ಚರಿಕೆ ನೀಡಿದರು. ಪಟ್ಟಣದ ಪಪಂ ಸಭಾಂಗಣದಲ್ಲಿ ತಾಲೂಕು ಆಡಳಿತ ಮತ್ತು ತಾಪಂನಿಂದ ಸೋಮವಾರ ಏರ್ಪಡಿಸಲಾಗಿದ್ದ ಕೊರಟಗೆರೆ ಕ್ಷೇತ್ರದ ತಾಲೂಕು ಮಟ್ಟದ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

PREV
Read more Articles on
click me!

Recommended Stories

ಗೃಹ ಲಕ್ಷ್ಮೀ ಅಡಿ 1.24 ಕೋಟಿ ಸ್ತ್ರೀಯರಿಗೆ ₹1.54 ಕೋಟಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಬೆಂಗಳೂರು : ಹೊಸ ಮಾರ್ಗಗಳಿಗೆ ಬರಲಿವೆ ಚಾಲಕ ರಹಿತ ರೈಲು