ಮಾಜಿ ಸಿಎಂ ಯಡಿಯೂರಪ್ಪ ಹಿಂದೂ ಅಲ್ಲ, ವೀರಶೈವ ಲಿಂಗಾಯತ ಎಂದು ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ತುಮಕೂರು (ನ.10): ಮಾಜಿ ಸಿಎಂ ಯಡಿಯೂರಪ್ಪ ಹಿಂದೂ ಅಲ್ಲ, ವೀರಶೈವ ಲಿಂಗಾಯತ ಎಂದು ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಸಾಗರನಹಳ್ಳಿ ನಟರಾಜ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ತುಮಕೂರಿನ ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ವೀರಶೈವ- ಲಿಂಗಾಯತರಲ್ಲಿ 106 ಉಪ ಪಂಗಡಗಳಿವೆ, ಅವರೆಲ್ಲರೂ ವೀರಶೈವ ಲಿಂಗಾಯತರು, ಇದಿಷ್ಟೇ ಅಲ್ಲದೆ ಇವತ್ತಿನಿಂದ ಯಾರು ಲಿಂಗಾಧಾರಣೆ ಮಾಡ್ತಾರೋ. ಅವರೆಲ್ಲರೂ ವೀರಶೈವ ಲಿಂಗಾಯತರು ನಮ್ಮ ಬೈಲವನ್ನೆಲ್ಲಾ ಒಪ್ಪಿಕೊಂಡು ಬರೋರಿಗೆ ಸ್ವಾಗತ. ವೀರಶೈವ ಲಿಂಗಾಯತ ಅನ್ನೋದು ಪ್ರತ್ಯೇಕ ಧರ್ಮ, ಹಿಂದೂ ಧರ್ಮಕ್ಕೂ, ನಮ್ಮ ಆಚರಣೆಗೂ ತುಂಬಾ ವ್ಯತ್ಯಾಸ ಇದೆ. ನಮ್ಮದೇ ಪ್ರತ್ಯೇಕ ಧರ್ಮ, ಹೇಗೆ ಬೌದ್ಧ ಧರ್ಮ, ಸಿಕ್ ಧರ್ಮ ಅಂತ ಪ್ರತ್ಯೇಕ ಮಾಡ್ತಿರೋ ಹಾಗೇ ನಮಗೂ ಪ್ರತ್ಯೇಕ ಧರ್ಮ ಕೊಡಿ ಎಂದು ಒತ್ತಾಯಿಸಿದ್ರು. ಎಂ.ಬಿ ಪಾಟೀಲ್ ಅವರು ನಡೆಸಿದ ಪ್ರತ್ಯೇಕ ಧರ್ಮ ಹೋರಾಟ ಸರಿಯಿದೆ, ಅದನ್ನ ನಾವು ಒಪ್ಪಿಕೊಳ್ತಿವಿ. ಆದರೆ ವೀರಶೈವ ಲಿಂಗಾಯತರೆಲ್ಲಾ ಒಂದೇ ಎಂದರು.
ವೀರಶೈವ ಲಿಂಗಾಯತ ಧರ್ಮ ಹಿಂದೂ ಧರ್ಮದಿಂದ ಪ್ರತ್ಯೇಕ ಧರ್ಮ ಅನ್ನೋದಿಕ್ಕೆ ನಮ್ಮಲ್ಲಿ ಹಲವು ಆಚರಣೆಗಳಿವೆ, ಅವು ವಿಭಿನ್ನವಾಗಿವೇ. ಕೆಲವರಿಗೆ ವಿಭೂತಿ ಧರಿಸೋದು ಇಷ್ಟ ಇಲ್ಲದೇ ಇರ್ಬಹುದು. ಇನ್ನು ಕೆಲವರಿಗೆ ರುದ್ರಾಕ್ಷಿ ಧರಿಸೋದು ಇಷ್ಟ ಇಲ್ಲದೆ ಇರ್ಬಹುದು. ಇಂತಹವುದೆಲ್ಲಾ ಸೇರಿ ವೀರಶೈವ ಲಿಂಗಾಯತ ಧರ್ಮವಾಗಿದೆ. ನಾವು ಸಹ ಹಿಂದೂ ಧರ್ಮದ ಎಲ್ಲಾ ಹಬ್ಬಗಳನ್ನ ಮಾಡ್ತಿವಿ. ನಮ್ಮ ಆಚರಣೆ , ಶಾಸ್ತ್ರ, ಸಂಸ್ಕೃತಿ ಬೇರೆ. ನಾವು ಹಿಂದೂಗಳಲ್ಲ ನಮಗೆ ಪ್ರತ್ಯೇಕ ಧರ್ಮ ಕೊಡಿ ಅಂತ ಈಗಲೂ ಕೇಳ್ತಿವಿ. ಸದ್ಯ ಸಮಾವೇಶದಲ್ಲಿ ವೀರ ಶೈವ ಮತ್ತು ಲಿಂಗಾಯತರು ಪ್ರತ್ಯೇಕ ಅಲ್ಲಾ ಒಂದೇ ಧರ್ಮ ಅನ್ನುವ ಕುರಿತು ಚರ್ಚೆ ನಡೆಯುತ್ತದೆ. ಆದರೆ ಹಿಂದೂ ಧರ್ಮದಿಂದ ಪ್ರತ್ಯೇಕ ಧರ್ಮದ ಸ್ಥಾನ ಮಾನ ಕೊಡಿ ಎನ್ನುವ ಬಗ್ಗೆ ಚರ್ಚೆ ಮಾಡಲ್ಲ ಎಂದರು.
ಹಿಂದೂ ಪದ ವಿವಾದಕ್ಕೆ ವಿಷಾದ, ಆಕ್ಷೇಪಿಸಿದವರಿಗೆಲ್ಲ ದಾಖಲೆ ಕಳಿಸುವೆ ಎಂದ ಜಾರಕಿಹೊಳಿ
ಜೊತೆಗೆ ಬಿಜೆಪಿ ಪ್ರಬಲ ನಾಯಕ ಯಡಿಯೂರಪ್ಪ ವೀರಶೈವ ಲಿಂಗಾಯತ ಅನ್ನೋದಾದ್ರೆ, ಅವರು ಹಿಂದೂ ಅಲ್ಲ, ನಾನು ಹಿಂದೂ ಅಲ್ಲ ಅಂತ ಹೇಳೋದು ಬಿಡೊದು ಯಡಿಯೂರಪ್ಪ ಅವರ ವೈಯಕ್ತಿಕ ವಿಚಾರ ಎಂದರು.
ಹಿಂದೂ ಅನ್ನೋದು ನಾಗರಿಕ ಸಮಾಜ ಬಳಸದಂತ ಪದವಾಗಿದೆ: ಸಾಹಿತಿ ಸೂಳಿಭಾವಿ
ಇದೇ ನವೆಂಬರ್ 12 ಮತ್ತು13 ರಂದು ಸಿದ್ದಗಂಗಾ ಮಠದಲ್ಲಿ ನಡೆಯಲಿರುವ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಸಮಾವೇಶದ ಬಗ್ಗೆ ಮಾಹಿತಿ ನೀಡಲು ಸುದ್ದಿಗೋಷ್ಟಿ ನಡೆಸಲಾಯ್ತು.