ವರ್ಷದ ಹಿನ್ನೋಟ: ಚಂದ್ರಶೇಖರ್‌ ಗುರೂಜಿ ಹತ್ಯೆಯಿಂದ ಬೆಚ್ಚಿಬಿದ್ದಿದ್ದ ನಗರ

By Kannadaprabha NewsFirst Published Dec 31, 2022, 8:14 AM IST
Highlights

ನಗರದಲ್ಲಿ ಈ ವರ್ಷ ನಡೆದ ಸರಳವಾಸ್ತು ಚಂದ್ರಶೇಖರ್‌ ಗುರೂಜಿ ಹತ್ಯೆ ಹಾಗೂ ಹಳೇಹುಬ್ಬಳ್ಳಿಯ ಗಲಭೆ ಪ್ರಕರಣ ನಗರವನ್ನು ಬೆಚ್ಚಿ ಬೀಳಿಸಿದೆ. ನಗರ ಬೆಳೆದಂತೆ ಅಪರಾಧ ಪ್ರಕರಣಗಳು ಏರುತ್ತಿವೆ. ಅದರಲ್ಲಿ ಸೈಬರ್‌ ವಂಚನೆ ಪ್ರಕರಣಗಳದ್ದೇ ಸಿಂಹಪಾಲು.

ಬಾಲಕೃಷ್ಣ ಜಾಡಬಂಡಿ

 ಹುಬ್ಬಳ್ಳಿ (ಡಿ.31) : ನಗರದಲ್ಲಿ ಈ ವರ್ಷ ನಡೆದ ಸರಳವಾಸ್ತು ಚಂದ್ರಶೇಖರ್‌ ಗುರೂಜಿ ಹತ್ಯೆ ಹಾಗೂ ಹಳೇಹುಬ್ಬಳ್ಳಿಯ ಗಲಭೆ ಪ್ರಕರಣ ನಗರವನ್ನು ಬೆಚ್ಚಿ ಬೀಳಿಸಿದೆ. ನಗರ ಬೆಳೆದಂತೆ ಅಪರಾಧ ಪ್ರಕರಣಗಳು ಏರುತ್ತಿವೆ. ಅದರಲ್ಲಿ ಸೈಬರ್‌ ವಂಚನೆ ಪ್ರಕರಣಗಳದ್ದೇ ಸಿಂಹಪಾಲು.

ಜಿಲ್ಲೆಯಲ್ಲಿ ಡಿಸೆಂಬರ್‌ 30ರ ವರೆಗೆ 1,712ಕ್ಕೂ ಪ್ರಕರಣ ವರದಿಯಾಗಿವೆ. ಈ ವರ್ಷ ಒಟ್ಟು 470 ಅಸಹಜ ಸಾವು ಪ್ರಕರಣ ದಾಖಲಾಗಿವೆ. ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯಲ್ಲಿ 2022ರಲ್ಲಿ ಕಳ್ಳತನ, ದರೋಡೆ, ಚಾಕು ಇರಿತ, ಜೂಜಾಟ, ಗಾಂಜಾ ಮಾರಾಟ, ಜಗಳ, ಕಾಣೆ ಸೇರಿ 2570ಕ್ಕೂ ಅಧಿಕ ಅಪರಾಧ ಪ್ರಕರಣ ವರದಿಯಾಗಿವೆ. ಇದರಲ್ಲಿ ಸೈಬರ್‌ ಠಾಣೆಯಲ್ಲಿ (351) ಪ್ರಕರಣ ದಾಖಲಾಗಿವೆ.

ವರ್ಷದ ಹಿನ್ನೋಟ; ಧಾರವಾಡ ಪಾಲಿಗೆ ಬೇವು-ಬೆಲ್ಲದ ಸಮರಸ 2022

ಹುಬ್ಬಳ್ಳಿ ಗಲಭೆ ಪ್ರಕರಣ:

ಯುವಕನೊಬ್ಬ ವ್ಯಾಟ್ಸ್‌ಆ್ಯಪ್‌ನ ಸ್ಟೇಟಸ್‌ನಲ್ಲಿ ಪ್ರಚೋದನಾತ್ಮಕ ಸಂದೇಶ ಇಟ್ಟುಕೊಂಡಿದ್ದನ್ನು ಖಂಡಿಸಿ ಏ. 16ರಂದು ರಾತ್ರೋರಾತ್ರಿ ಹಳೇ ಹುಬ್ಬಳ್ಳಿ ಠಾಣೆ ಎದುರು ಮುಸ್ಲಿಂ ಸಮುದಾಯದವರು ಭಾರೀ ಪ್ರತಿಭಟನೆ ನಡೆಸಿದ್ದರು. ಈ ವೇಳೆ ವಿಕೋಪಕ್ಕೆ ತಿರುಗಿ ಪೊಲೀಸ್‌ರ ಮೇಲೆ ಹಾಗೂ ಅವರ ವಾಹನದ ಮೇಲೆ ಕಲ್ಲು ತೂರಾಟ ನಡೆಸಲಾಯಿತು. ಈ ಘಟನೆಯಿಂದ ಹುಬ್ಬಳ್ಳಿ ಒಂದು ವಾರ ಬೂದಿಮುಚ್ಚಿದ ಕೆಂಡದಂತಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿತ್ತು.

ಕ್ರೂಸರ್‌ ಪಲ್ಟಿ; 9 ಜನರ ಸಾವು

ಧಾರವಾಡ ತಾಲೂಕಿನ ಬಾಡ ಬಳಿ ಮೇ 21ರಂದು ಕ್ರೂಸರ್‌ ಪಲ್ಟಿಯಾದ ಪರಿಣಾಮ 9 ಜನ ಮೃತಪಟ್ಟು, 13 ಜನ ಗಾಯಗೊಂಡಿದ್ದರು. ನಸುಕಿನ ಜಾವ ಮರಕ್ಕೆ ಮದುವೆ ದಿಬ್ಬಣದ ವಾಹನ ಡಿಕ್ಕಿ ಹೊಡೆದಿತ್ತು. ಈ ಘಟನೆ ಮಾಸುವ ಮುನ್ನವೇ ಹುಬ್ಬಳ್ಳಿ ಹೊರವಲಯದ ಬೈಪಾಸ್‌ ರಸ್ತೆಯ ರೇವಡಿಹಾಳ ಸೇತುವೆ ಬಳಿ ಮೇ 24ರಂದು ಮಧ್ಯರಾತ್ರಿ ಬಸ್‌ ಮತ್ತು ಲಾರಿ ನಡುವೆ ಡಿಕ್ಕಿ ಸಂಭವಿಸಿ 8 ಮಂದಿ ಮೃತರಾಗಿದ್ದರು. 27 ಮಂದಿ ಗಾಯಗೊಂಡಿದ್ದರು. ಈ ಎರಡು ಘಟನೆಗಳು ಜಿಲ್ಲೆಯ ಜನರ ಮನಕಲುಕಿದ್ದವು.

ಗ್ರಾಪಂ ಸದಸ್ಯನ ಹತ್ಯೆ:

ಜು. 4ರಂದು ಹುಬ್ಬಳ್ಳಿ ತಾಲೂಕಿನ ಗಂಗಿವಾಳ ಗ್ರಾಪಂ ಸದಸ್ಯ ದೀಪಕ ಪಟದಾರಿ ಹತ್ಯೆ ನಡೆದಿತ್ತು. ಆರೋಪಿಗಳನ್ನು ಬಂಧಿಸುವಂತೆ ಹಾಗೂ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ಆಗ್ರಹಿಸಿದ್ದ ದೀಪಕ ಪತ್ನಿ ಪುಷ್ಪಾ ಸಿಬಿಐ ತನಿಖೆ ನಡೆಯುವ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದರು.

ಸರಳವಾಸ್ತು ಚಂದ್ರಶೇಖರ ಗುರೂಜಿ ಹತ್ಯೆ:

ನಗರದ ಉಣಕಲ್‌ನ ಶ್ರೀನಗರದ ಕ್ರಾಸ್‌ ಬಳಿಯ ಪ್ರೆಸಿಡೆಂಟ್‌ ಹೊಟೇಲ್‌ನಲ್ಲಿ ಹಾಡಹಗಲೇ ಜು. 5ರಂದು ಸರಳವಾಸ್ತು ಗುರು ಚಂದ್ರಶೇಖರ ಗುರೂಜಿ ಹತ್ಯೆ ನಡೆದಿದ್ದು, ಈ ಘಟನೆ ಇಡೀ ರಾಜ್ಯದಲ್ಲಿ ಸಂಚಲನ ಉಂಟು ಮಾಡಿತ್ತು. ಹತ್ಯೆ ಘಟನೆ ನಡೆದ 4 ಗಂಟೆಯೊಳಗೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಬಳಿ ಸಿನಿಮೀಯ ರೀತಿಯಲ್ಲಿ ಆರೋಪಿಗಳನ್ನು ಬಂಧಿಸಲಾಗಿತ್ತು. ಕಲಘಟಗಿ ತಾಲೂಕಿನ ದುಮ್ಮವಾಡ ಗ್ರಾಮದ ಮಹಾಂತೇಶ ಶಿರೂರ ಹಾಗೂ ಮಂಜುನಾಥ ಮರೇವಾಡ ಎಂಬವರು ಗುರೂಜಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು.

ಏಳು ಕಾರ್ಮಿಕರ ಸಾವು:

ಹುಬ್ಬಳ್ಳಿ ಹೊರವಲಯದ ತಾರಿಹಾಳದ ಕೈಗಾರಿಕಾ ಪ್ರದೇಶದ ಸ್ಪಾರ್ಕಲ್‌ ಕಾರ್ಖಾನೆಯಲ್ಲಿ ಜು. 23ರಂದು ಸಂಭವಿಸಿದ ಅಗ್ನಿ ಅವಘಡದಲ್ಲಿ ಏಳು ಕಾರ್ಮಿಕರು ಮೃತಪಟ್ಟಿದ್ದರು.

ಮಗನನ್ನೇ ಕೊಲ್ಲಿಸಿದ ತಂದೆ:

ಸ್ವಂತ ತಂದೆಯೇ ಮಗನ ಕೊಲೆಗೆ ಸುಪಾರಿ ನೀಡಿ ಹತ್ಯೆ ಮಾಡಿಸಿದ ಘಟನೆ ಇಡೀ ನಗರವನ್ನೇ ಬೆಚ್ಚಿ ಬಿಳಿಸಿತ್ತು. ಭರತ್‌ ಮಹಾಜನ್‌ಶೇಠ್‌ ಎಂಬವರು ತಮ್ಮ ಮಗ ಅಖಿಲ್‌ ನಾಪತ್ತೆಯಾಗಿರುವ ಕುರಿತು ಠಾಣೆಗೆ ದೂರು ನೀಡಿದ್ದರು. ಪ್ರಕರಣ ಬೆನ್ನಟ್ಟಿದ ಪೊಲೀಸರಿಗೆ ತಂದೆಯೇ ಸುಪಾರಿ ನೀಡಿ ಕೊಲೆ ಮಾಡಿಸಿದ್ದು ಎಂದು ತಿಳಿದುಬಂದಿತು. ಅಖಿಲ್‌ನ ಶವ ಕಲಘಟಗಿ ತಾಲೂಕಿನ ದೇವಿಕೊಪ್ಪದ ಅರಣ್ಯ ಪ್ರದೇಶದಲ್ಲಿ ಶೆಡ್‌ವೊಂದರ ಬಳಿ ಪತ್ತೆಯಾಗಿತ್ತು. ತಂದೆ ಸೇರಿ 8 ಜನರ ಬಂಧನವಾಗಿತ್ತು.

Dharwad KIADB Scam: ಕೆಐಎಡಿಬಿಯಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ

ತಿಹಾಸಿಕ ದರ್ಗಾ ತೆರವು:

ಬಿಆರ್‌ಟಿಎಸ್‌ ಯೋಜನೆ ಅನುಷ್ಠಾನಕ್ಕಾಗಿ ಕೆಲ ಧಾರ್ಮಿಕ ಕ್ಷೇತ್ರಗಳು ಸೇರಿದಂತೆ ಹಲವು ಪ್ರದೇಶಗಳಲ್ಲಿ ತೆರವು ಕಾರ್ಯಾಚರಣೆ ಅವಶ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಡಿ. 21,22ರಂದು ಎರಡು ದಿನ ಪೊಲೀಸ್‌ ಸರ್ಪಗಾವಲಿನಲ್ಲಿ ಬೈರಿದೇವರಕೊಪ್ಪದ ಸೈಯದ್‌ ಮಹ್ಮದ್‌ ಶಾ ಖಾದ್ರಿ ದರ್ಗಾ ತೆರವು ಮಾಡಲಾಯಿತು. ಹುಬ್ಬಳ್ಳಿ-ಧಾರವಾಡದಲ್ಲಿ 2 ದಿನ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. 2020ರ ಮಾಚ್‌ರ್‍ನಲ್ಲಿ ದರ್ಗಾ ತೆರವಿಗೆ ಕಮಿಟಿಗೆ ಅಂತಿಮ ನೋಟಿಸ್‌ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಕಮಿಟಿ ನ್ಯಾಯಾಲಯದ ಮೆಟ್ಟಿಲೇರಿತ್ತು. ಡಿ. 16ರಂದು ನ್ಯಾಯಾಲಯ ಅರ್ಜಿ ತಿರಸ್ಕರಿಸಿತ್ತು. 44 ಮೀಟರ್‌ ರಸ್ತೆ ನಿರ್ಮಿಸಲು ಸಿದ್ಧರಾಗುವಂತೆ ತಿಳಿಸಿತ್ತು. ಅದರಂತೆ ಜಿಲ್ಲಾಡಳಿತ ಹಾಗೂ ಬಿಆರ್‌ಟಿಎಸ್‌ ಜಂಟಿ ಕಾರ್ಯಾಚರಣೆ ನಡೆಸಿದ್ದು, ಅಂಜುಮನ್‌ ಸಂಸ್ಥೆಯ ನೇತೃತ್ವದಲ್ಲಿ ದರ್ಗಾ ಆವರಣದಲ್ಲಿದ್ದ ಸಮಾಧಿ ಸ್ಥಳಾಂತರ ನಡೆದಿತ್ತು.

click me!