ವರ್ಷದ ಹಿನ್ನೋಟ; ಧಾರವಾಡ ಪಾಲಿಗೆ ಬೇವು-ಬೆಲ್ಲದ ಸಮರಸ 2022

By Kannadaprabha News  |  First Published Dec 31, 2022, 8:00 AM IST

ಕೋವಿಡ್‌ ಮಹಾಮಾರಿಯ ಸಂಕಷ್ಟಮಯ ಎರಡು ವರ್ಷ ಕಳೆದ ನಂತರ 2022 ಧಾರವಾಡ ಜಿಲ್ಲೆಗೆ ಬೇವು-ಬೆಲ್ಲದ ಸಮರಸವಾಗಿ ಪರಿಣಮಿಸಿದೆ.ಒಂದೆಡೆ ದುಃಖ, ಸಂಕಷ್ಟತಂದೊಡ್ಡಿದ್ದರೆ, ಮತ್ತೊಂದೆಡೆ ಸಂತಸದ ಕ್ಷಣಗಳನ್ನು ಈ ವರ್ಷ ನೀಡಿದೆ.


ವರ್ಷದ ಹಿನ್ನೋಟ

ಬಸವರಾಜ ಹಿರೇಮಠ

Latest Videos

undefined

ಧಾರವಾಡ (ಡಿ.31) : ಕೋವಿಡ್‌ ಮಹಾಮಾರಿಯ ಸಂಕಷ್ಟಮಯ ಎರಡು ವರ್ಷ ಕಳೆದ ನಂತರ 2022 ಧಾರವಾಡ ಜಿಲ್ಲೆಗೆ ಬೇವು-ಬೆಲ್ಲದ ಸಮರಸವಾಗಿ ಪರಿಣಮಿಸಿದೆ.ಒಂದೆಡೆ ದುಃಖ, ಸಂಕಷ್ಟತಂದೊಡ್ಡಿದ್ದರೆ, ಮತ್ತೊಂದೆಡೆ ಸಂತಸದ ಕ್ಷಣಗಳನ್ನು ಈ ವರ್ಷ ನೀಡಿದೆ. ಜನವರಿಯಲ್ಲಿ ಕಾಣಿಸಿಕೊಂಡ ಕೋವಿಡ್‌ 3ನೇ ಅಲೆ ಬಂದಂತೆಯೇ ನಿಧಾನವಾಗಿ ನಿರ್ಗಮಿಸಿತು. ಈ ಹಿನ್ನೆಲೆ 2022ರ ಆರಂಭದಿಂದಲೂ ಕೊನೆ ವರೆಗೂ ಆರ್ಥಿಕ ಪರಿಸ್ಥಿತಿ ಚೇತರಿಕೆ ಹಾಗೂ ಪುನಶ್ಚೇತನ ಕಂಡಿತು. ಜತೆಗೆ ಶಾಲಾ-ಕಾಲೇಜುಗಳು ಸಹ ಮುಕ್ತವಾಗಿ ತೆರೆದುಕೊಂಡವು. ಪ್ರತಿ ವರ್ಷದಂತೆ ಮಳೆ ಕೂಡಾ ಅತಿವೃಷ್ಟಿಮೂಲಕ ಬೆಳೆ ನಾಶ ಮಾಡಿ ರೈತರನ್ನು ಕಂಗೆಡಿಸಿತು. ಒಂದು ಲಕ್ಷ ಹೆಕ್ಟೇರ್‌ನಷ್ಟುಬೆಳೆ ಹಾನಿಯಾಯಿತು. ಸಾವಿರಕ್ಕೂ ಹೆಚ್ಚು ಮನೆಗಳು ಧರೆಗುರುಳಿದವು.

ಪ್ರತ್ಯೇಕ ಕೂಗು:

ಏತನ್ಮಧ್ಯೆ ಧಾರವಾಡ ನಗರಕ್ಕೆ ನಾಗರಿಕ ಸೌಕರ್ಯ ಒದಗಿಸುವಲ್ಲಿ ಅನ್ಯಾಯವಾಗುತ್ತಿದೆ ಎಂಬ ಕೂಗು ಪ್ರಬಲವಾಗಿ ಧಾರವಾಡ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸುವಂತೆ ಬೇಡಿಕೆ ಮಂಡಿಸಿ ನಾಗರಿಕರ ಸಮಿತಿ ಸರದಿ ಸತ್ಯಾಗ್ರಹ ಮತ್ತು ಪ್ರತಿಭಟನಾ ಮೆರವಣಿಗೆ ಆಯೋಜಿಸಿ ಸರ್ಕಾರದ ಮೇಲೆ ಒತ್ತಡ ಹೇರಿತು. ಜನರ ಆಕ್ರೋಶ ತಗ್ಗಿಸಲು ಧಾರವಾಡದವರೇ ಆದ ಮೇಯರ್‌ ಈರೇಶ ಅಂಚಟಗೇರಿ ಸ್ವಾತಂತ್ರೋತ್ಸವ ದಿನದಂದು ಇಲ್ಲಿನ ಪಾಲಿಕೆ ಕಚೇರಿಯಲ್ಲಿ ಅ. 15ರಂದು ಮಧ್ಯರಾತ್ರಿ 75 ಅಡಿ ಎತ್ತರದ ಧ್ವಜಸ್ತಂಭದ ಮೇಲೆ ರಾಷ್ಟ್ರಧ್ವಜ ಆರೋಹಣ ನೆರವೇರಿಸಿ ಹೊಸ ಇತಿಹಾಸ ಸೃಷ್ಟಿಸಿದರು. ಈ ಮೊದಲು ಹುಬ್ಬಳ್ಳಿ ಕಚೇರಿಯಲ್ಲಿಯೇ ಧ್ವಜಾರೋಹಣ ನೆರವೇರಿಸಲಾಗುತ್ತಿತ್ತು. ಪಾಲಿಕೆಯ ಸರ್ವ ಸಾಧಾರಣ ಸಭೆಯನ್ನು ನಗರದಲ್ಲಿ . 45 ಲಕ್ಷ ವೆಚ್ಚದಲ್ಲಿ ನವೀಕರಿಸಿದ ಹೊಸ ಸಭಾಭವನದಲ್ಲಿ ಏರ್ಪಡಿಸಿ ಅಭಿವೃದ್ಧಿಗೆ ಬಗ್ಗೆ ಚರ್ಚಿಸಲಾಯಿತು.

Dharwad KIADB Scam: ಕೆಐಎಡಿಬಿಯಲ್ಲಿ ಮತ್ತೊಂದು ವಂಚನೆ ಪ್ರಕರಣ ಬೆಳಕಿಗೆ

ಉಪನ್ಯಾಸಕರ ಧರಣಿ:

ಕರ್ನಾಟಕ ವಿವಿ ವ್ಯಾಪ್ತಿಯ ಮಹಾವಿದ್ಯಾಲಯಗಳ ಅತಿಥಿ ಉಪನ್ಯಾಸಕರು ತಮ್ಮ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಿಂಗಳುಗಟ್ಟಲೇ ಪಾಠ-ಪ್ರವಚನ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಇದರ ಪರಿಣಾಮ ತರಗತಿ ನಡೆಯದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ಕೊನೆಗೂ ವಿವಿ ಅವರ ಸಂಬಳ ಹಾಗೂ ಇತರೆ ಸೌಲಭ್ಯಗಳನ್ನು ನೀಡಿದ್ದು ಸಮಾಧಾನದ ಸಂಗತಿ.

ಐಐಐಟಿ ಉದ್ಘಾಟಿಸಿದ ಮುರ್ಮು:

ಈ ಎಲ್ಲ ಕಠಿಣ ಪ್ರಸಂಗಗಳ ನಡುವೆಯೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹುಬ್ಬಳ್ಳಿಯಲ್ಲಿ ಪೌರ ಸನ್ಮಾನ ಸ್ವೀಕರಿಸಿ ನಂತರ ಸತ್ತೂರು ಬಳಿ ಇರುವ ಭಾರತೀಯ ಮಾಹಿತಿ ತಂತ್ರಜ್ಞಾನ (ಐಐಐಟಿ) ಸಂಸ್ಥೆಯ ಉದ್ಘಾಟಿಸಿದರು. ಹಾಗೆಯೇ, ಭಾರತೀಯ ತಂತ್ರಜ್ಞಾನ ಸಂಸ್ಥೆಯ (ಐಐಟಿ) ನೂತನ ಆವರಣ ಕೂಡ ಸಿದ್ಧವಾಗಿದ್ದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೆ ಕಾಯುತ್ತಿದೆ. ಅಲ್ಲದೇ, ಧಾರವಾಡದ ರೈಲು ನಿಲ್ದಾಣ ಅ. 11ರಂದು ಕೇಂದ್ರ ರೈಲ್ವೆ ಸಚಿವ ಅಶ್ವನ್‌ ವೈಷ್ಣವ್‌ ಉದ್ಘಾಟಿಸಿದ್ದು ಧಾರವಾಡ-ಬೆಂಗಳೂರು ಮಧ್ಯೆ ವಂದೇ ಭಾರತ ರೈಲು ಓಡಿಸುವುದು ಸೇರಿ ಹಲವು ಅಭಿವೃದ್ಧಿ ಯೋಜನೆ ಘೋಷಿಸಿದನ್ನು ಸ್ಮರಿಸಬಹುದು. ಕೋವಿಡ್‌ ಹಿನ್ನೆಲೆ ಎರಡು ವರ್ಷ ಸ್ಥಗಿತಗೊಂಡಿದ್ದ ಕೃಷಿ ಮೇಳ ಸೆ. 17ರಿಂದ ನಾಲ್ಕು ದಿನ ‘ಆದಾಯ ದ್ವಿಗುಣಗೊಳಿಸಲು ಕೃಷಿ ತಾಂತ್ರಿಕತೆ’ಗಳು ವಿಷಯದ ಮೇಲೆ

ನಡೆಯಿತು. ಸುಮಾರು 15 ಲಕ್ಷ ಜನರು ಮೇಳದ ಲಾಭ ಪಡೆದರು. ಆರೇಳು ತಿಂಗಳು ಖಾಲಿ ಇದ್ದ ಧಾರವಾಡದ ಕೃಷಿ ವಿವಿ ಕುಲಪತಿಯಾಗಿ ಡಾ. ಪಿ.ಎಲ್‌. ಪಾಟೀಲ ಸಾರಥ್ಯ ವಹಿಸಿದ್ದರೆ ಕರ್ನಾಟಕ ಕಾನೂನು ವಿವಿ ಕುಲಪತಿ ಸ್ಥಾನವನ್ನು ಮೈಸೂರು ಮೂಲದ ಸಿ. ಬಸವರಾಜು ಅಲಂಕರಿಸಿದ್ದಾರೆ. ಜೆಡಿಎಸ್‌ನಿಂದ ಬಿಜೆಪಿ ಸೇರ್ಪಡೆಯಾದ ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿಅವರು ವರ್ಷದ ಕೊನೆಯ ಅಧಿವೇಶನದಲ್ಲಿ ಸಭಾಪತಿ ಸ್ಥಾನ ಪಡೆದಿದ್ದು ಜಿಲ್ಲೆಯ ಮಟ್ಟಿಗೆ ಖುಷಿ ಸಂಗತಿ. ಖ್ಯಾತ ಗಾಯಕಿ ಸಂಗೀತಾ ಕಟ್ಟಿಅವರ ಸುರ್‌ಬಾಹಾರ ಸಂಸ್ಥೆಯಿಂದ ಕೊಡಮಾಡಿದ . 25 ಸಾವಿರ ಮೊತ್ತದ ಸುರ್‌ ಬಾಹರ್‌ ಪ್ರಶಸ್ತಿಯನ್ನು ಖ್ಯಾತ ತಬಲಾ ವಾದಕರಾದ ಪಂ. ರಘುನಾಥ ನಾಕೋಡ ಹಾಗೂ ಪಂ. ರವೀಂದ್ರ ಯಾವಗಲ್‌ ಅವರಿಗೆ ಕೊಡಮಾಡಲಾಯಿತು.

ಚಂಬೆಳಕಿನ ಕವಿ ವಿಧಿವಶ!

ಒಂದು ತಿಂಗಳಿಗೂ ಹೆಚ್ಚಿನ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ಗುಣಮುಖರಾಗದ ಚಂಬೆಳಕಿನ ಕವಿ ಎಂದೇ ಖ್ಯಾತರಾಗಿದ್ದ ನಾಡೋಜ ಚೆನ್ನವೀರ ಕಣವಿ (93) ಚಿಕಿತ್ಸೆ ಫೆ. 16ರಂದು ವಿಧಿವಶವಾದರು. ಜನವರಿ 15ರಂದು ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲು ಆದ ಕಣವಿ ಅವರಿಗೆ ಕೋವಿಡ್‌ ಸೋಂಕು ಖಚಿತಪಟ್ಟಿತ್ತು. ಸೂಕ್ತ ಚಿಕಿತ್ಸೆ ಬಳಿಕ ಸೋಂಕು ನಿವಾರಣೆಯಾಗಿತ್ತು. ಇನ್ನೇನು ಗುಣಮುಖರಾದರು ಎನ್ನುವಷ್ಟರಲ್ಲಿ ಬಹು ಅಂಗಾಂಗಗಳ ವೈಫಲ್ಯದ ತೊಂದರೆಗೆ ಒಳಗಾಗಿ ಅಂದು ಬೆಳಗ್ಗೆ 9.12ಕ್ಕೆ ನಿಧನರಾದರು. ಕಣವಿ ಅವರ ಪಾರ್ಥಿವ ಶರೀರವನ್ನು ಕೆಲಗೇರಿ ಸಮೀಪ ಅವರ ಸೃಷ್ಟಿಫಾಮ್‌ರ್‍ನಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.

ಅಸ್ತಂಗತರಾದ ಜಾನಪದ ಗಾರುಡಿಗ

12 ಗಂಟೆಗಳ ಸುದೀರ್ಘ ಕೃಷ್ಣ ಪಾರಿಜಾತ ಸಣ್ಟಾಟವನ್ನು ಮೂರು ಗಂಟೆಗಳಿಗೆ ತಗ್ಗಿಸಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟಕ್ಕೆ ಪರಿಚಯಿಸಿದ, ಸುಮಾರು ಸಾವಿರ ಹಾಡುಗಳನ್ನು ಕಂಠಪಾಠದಲ್ಲಿಯೇ ಹಾಡುತ್ತಿದ್ದ ಖ್ಯಾತ ಜಾನಪದ ಕಲಾವಿದ ಬಸವಲಿಂಗಯ್ಯ ಹಿರೇಮಠ (62) ಅನಾರೋಗ್ಯದಿಂದ ಜ. 9ರಂದು ನಿಧನರಾದರು. ಯಕೃತ್‌ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಮಣಿಪಾಲ್‌ ಆಸ್ಪತ್ರೆಯಲ್ಲಿ ಮೃತರಾದರು. ಮೂಲತಃ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಬೈಲೂರಿನವರು. ಆದರೆ, ಧಾರವಾಡ ಅವರ ಕರ್ಮಭೂಮಿ. 1994ರಲ್ಲಿ ಜಾನಪದ ಸಂಶೋಧನ ಸಂಸ್ಥೆ ಕಟ್ಟಿಕೊಂಡು ಪತ್ನಿ ವಿಶ್ವೇಶ್ವರಿಯೊಂದಿಗೆ ಊರೂರು ಅಡ್ಡಾಡಿ ಜಾನಪದ ಕಾರ‍್ಯಕ್ರಮ ಕೊಡುವುದೇ ಅವರ ವಿಶೇಷ.

ಧರ್ಮ-ವ್ಯಾಪಾರದ ಗಲಾಟೆ

ಧಾರವಾಡದ ನುಗ್ಗಿಕೇರಿ ಹನುಮಂತ ದೇವಸ್ಥಾನದಲ್ಲಿ ಏ. 11ರಂದು ನಡೆದ ಧರ್ಮ ವ್ಯಾಪಾರ ಗಲಾಟೆ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಯಿತು. ನುಗ್ಗಿಕೇರಿಯಲ್ಲಿ ಹಿಂದೂಯೇತರ ವ್ಯಾಪಾರಿಗಳಿಗೆ ಅವಕಾಶ ಬೇಡ ಎಂದು ಶ್ರೀರಾಮಸೇನೆ ಕಾರ್ಯಕರ್ತರು ಮುಸ್ಲಿಂ ವ್ಯಾಪಾರಸ್ಥರ ಕಲ್ಲಂಗಡಿಗಳನ್ನು ರಸ್ತೆಗೆ ಚೆಲ್ಲಿ ಪ್ರತಿಭಟಿಸಿದ್ದರು. ಪ್ರಕರಣದಲ್ಲಿ ಮೈಲಾರಪ್ಪ, ಮಹಾಲಿಂಗ, ಚಿಂದಾನಂದ ಹಾಗೂ ಕುಮಾರ ಎಂಬುವರ ಮೇಲೆ ಎಫ್‌ಐಆರ್‌ ದಾಖಲಾಗಿತ್ತು. ಅವರು ಜಾಮೀನಿನ ಬಿಡುಗಡೆ ಸಹ ಆದರು. ಬಳಿಕ ಪ್ರಕರಣ ಬೇರೆ ಬೇರೆ ರೂಪ ಪಡೆದಿದ್ದನ್ನು ಸ್ಮರಿಸಬಹುದು.

ಸಾವರ್ಕರ ಭಾವಚಿತ್ರಕ್ಕೆ ಬೆಂಕಿ

ವೀರಸಾವರ್ಕರ್‌ ಭಾವಚಿತ್ರ ಸುಟ್ಟು ಅವಮಾನ ಮಾಡಿದ ಕಾಂಗ್ರೆಸ್‌ ಕಾರ್ಯಕರ್ತರ ಮೇಲೆ ಕ್ರಮವಾಗಬೇಕೆಂದು ಹಿಂದೂಪರ ಸಂಘಟನೆಗಳು ಸೇರಿದಂತೆ ಬಿಜೆಪಿ ಕಾರ್ಯಕರ್ತರು ರಾತ್ರೋರಾತ್ರಿ ಉಪ ನಗರ ಪೊಲೀಸ್‌ ಠಾಣೆ ಎದುರು ಪ್ರತಿಭಟನೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ವಿರುದ್ಧ ಆ. 19ರಂದು ಪ್ರತಿಭಟನೆ ವೇಳೆ ಆಕಸ್ಮಿಕವಾಗಿ ಕಾಂಗ್ರೆಸ್‌ನ ಕೆಲ ಕಾರ್ಯಕರ್ತರು ವೀರ ಸಾವರ್ಕರ್‌ ಭಾವಚಿತ್ರ ಸುಟ್ಟು, ಮೊಟ್ಟೆಹೊಡೆದು ಅವಮಾನಿಸಿದ್ದರು. ಈ ಸುದ್ದಿ ತಿಳಿದ ತಕ್ಷಣ ಹಿಂದೂಪರ ಸಂಘಟನೆಗಳ ಮುಖಂಡರು ಉಪ ನಗರ ಪೊಲೀಸ ಠಾಣೆ ಎದುರು ಪ್ರತಿಭಟನೆ ನಡೆಸಿ ಅವರನ್ನು ಬಂಧಿಸುವಂತೆ ಪಟ್ಟು ಹಿಡಿದರು. 12 ಕಾಂಗ್ರೆಸ್‌ ಮುಖಂಡರ ಮೇಲೆ ಪ್ರಕರಣ ದಾಖಲಾಗಿ ಈಗಲೂ ವಿಚಾರಣೆಯಲ್ಲಿದೆ.

ದೇವರಿಗೆಂದು ಲಾಡ್ಜ್‌ಗೆ ಕರೆದೊಯ್ದರು..

ವಿದ್ಯಾಕಾಶಿ ಧಾರವಾಡದ ಹೆಸರಿಗೆ ಕಪುತ್ರ್ಪ ಚುಕ್ಕೆ ಬರುವ ರೀತಿಯಲ್ಲಿ ವಿಶ್ವೇಶ್ವರಯ್ಯ ಕಾಲೇಜಿನ ಪ್ರಾಚಾರ್ಯರೊಬ್ಬರು ನಡೆದುಕೊಂಡರು. ಅ. 17ರಂದು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಬಸವರಾಜ ಯಡವಣ್ಣವರ ಹಾಗೂ ಪ್ರಾಚಾರ್ಯ ಮಹಾದೇವ ಕುರವತ್ತಿಗೌಡರ ವಿರುದ್ಧ ನೊಂದ ವಿದ್ಯಾರ್ಥಿನಿಯರು ಪೊಲೀಸ್‌ ಠಾಣೆ ಮೆಟ್ಟಿಲು ಏರಿದರು. ದೇವರಿಗೆ ಕರೆದುಕೊಂಡು ಹೋಗುತ್ತೇನೆಂದು ದಾಂಡೇಲಿಯ ಲಾಡ್ಜ್‌ಗೆ ಕರೆದೊಯ್ದ ಅಧ್ಯಕ್ಷ ಬಸವರಾಜ ಯಡವಣ್ಣವರ ಜ್ಯೂಸ್‌ ಎಂದು ಬೀಯರ್‌ ಕುಡಿಸಿ ಲೈಂಗಿಕ ಸಂಪರ್ಕ ಮಾಡಿದ್ದಾನೆ ಎಂದು ಆರೋಪಿಸಲಾಗಿತ್ತು. ಪ್ರಕರಣ ದಾಖಲಾದ ನಂತರ ಇಬ್ಬರೂ ಆರೋಪಿಗಳನ್ನು ಉಪ ನಗರ ಠಾಣೆ ಪೊಲೀಸರು ಬಂಧಿಸಿದ್ದರು.

9 ಕಿಮೀ ಧ್ವಜ ಜಾಥಾ

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ನಿಮಿತ್ತ ಅ. 15ರಂದು ಮಾಜಿ ಸಚಿವ ಸಂತೋಷ ಲಾಡ್‌ ಕಲಘಟಗಿಯಲ್ಲಿ ಬರೋಬ್ಬರಿ ಒಂಭತ್ತು ಕಿಮೀ ಉದ್ದ ಹಾಗೂ ಒಂಭತ್ತು ಅಡಿ ಅಗಲದ ಐತಿಹಾಸಿಕ ದಾಖಲೆಯ ರಾಷ್ಟ್ರಧ್ವಜದ ಜಾಥಾ ನಡೆಸಿ ಇತಿಹಾಸ ಸೃಷ್ಟಿಸಿದರು. ದಾಸ್ತಿಕೊಪ್ಪದ ರಾಷ್ಟ್ರೀಯ ಹೆದ್ದಾರಿ ಸೇತುವೆಯಿಂದ ಶುರುವಾದ ತ್ರಿವರ್ಣ ಧ್ವಜದ ಜಾಥಾ ಗಳಗಿನಗಟ್ಟಿಕ್ರಾಸ್‌ ವರೆಗೆ ಸಾಗಿತು. ಸಂತೋಷ ಲಾಡ್‌ ¶ೌಂಡೇಶನ್‌ ವತಿಯಿಂದ ನಡೆದ ಈ ವಿಶೇಷ ಜಾಥಾದಲ್ಲಿ 12 ಸಾವಿರ ಮಹಿಳೆಯರು ವಿವಿಧ ಬಣ್ಣದ ಉಡುಪು ಧರಿಸಿ ಕುಂಭ ಹೊತ್ತು ಸಾಗಿದರು.

ಕೈದಿಗಳ ಬಿಡುಗಡೆ

ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಅಲ್ಪಾವಧಿಯ ಶಿಕ್ಷೆಗೆ ಒಳಗಾದ ಸನ್ನಡತೆಯ ರಾಜ್ಯದ 81 ಕೈದಿಗಳನ್ನು ಬಿಡುಗಡೆ ಮಾಡಿತು. ಈ ಪೈಕಿ ಧಾರವಾಡದ ಆರು ಕೈದಿಗಳನ್ನು ಅ. 15ರಂದು ಬಿಡುಗಡೆ ಮಾಡಲಾಯಿತು.

ಒಂದೇ ದಿನ ಎರಡು ಘಟಿಕೋತ್ಸವ

ಜೂನ್‌ 7ರ ಒಂದೇ ದಿನ ಧಾರವಾಡದ ಎರಡು ವಿಶ್ವವಿದ್ಯಾಲಯಗಳ ಘಟಿಕೋತ್ಸವಗಳು ನಡೆದವು. ಇಲ್ಲಿನ ಕೃಷಿ ವಿಶ್ವವಿದ್ಯಾಲಯದ 35ನೇ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ 72ನೇ ವಾರ್ಷಿಕ ಘಟಿಕೋತ್ಸವ ಪ್ರತ್ಯೇಕವಾಗಿ ನಡೆದವು.

ಪಂ. ಎಂ. ವೆಂಕಟೇಶಕುಮಾರ್‌ಗೆ ಕಾಳಿದಾಸ ಸಮ್ಮಾನ್‌ ಪ್ರಶಸ್ತಿ

ಹೆಸರಾಂತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತಗಾರ ಪದ್ಮಶ್ರೀ ಪಂ. ಎಂ. ವೆಂಕಟೇಶ ಕುಮಾರ ಮಧ್ಯಪ್ರದೇಶ ಸರ್ಕಾರ ನೀಡುವ ಪ್ರತಿಷ್ಠಿತ ಕಾಳಿದಾಸ ಸಮ್ಮಾನ ಪ್ರಶಸ್ತಿಗೆ ಭಾಜನರಾಗಿದ್ದಾರೆ. 2017ನೇ ಸಾಲಿನ ಪುರಸ್ಕಾರ 2021ರ ಡಿಸೆಂಬರ್‌ನಲ್ಲಿ ಪ್ರಕಟವಾಗಿತ್ತು. ಸಮಾರಂಭಕ್ಕೆ ಅನಿವಾರ‍್ಯ ಕಾರಣಗಳಿಂದ ಭಾಗವಹಿಸದ ಹಿನ್ನೆಲೆಯಲ್ಲಿ ಜನವರಿ ತಿಂಗಳಲ್ಲಿ ಅವರ ಮನೆಗೆ ಕಳುಹಿಸಲಾಗಿತ್ತು. ಹಿಂದೂಸ್ತಾನಿ ಸಂಗೀತ ಕ್ಷೇತ್ರಕ್ಕೆ ಅವರು ನೀಡಿರುವ ಕೊಡುಗೆ, ಸಾಧನೆ ಆಧರಿಸಿ ಈ ಪ್ರಶಸ್ತಿ ನೀಡಿದ್ದು ಪ್ರಶಸ್ತಿಯು . 2 ಲಕ್ಷ ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ.

ಅದ್ಧೂರಿ ಮೆಗಾ ನಾಟಕ

ವೀರ ರಾಣಿ ಕಿತ್ತೂರು ಚೆನ್ನಮ್ಮ ಜೀವನ ಆಧಾರಿತ ಮೆಗಾ ನಾಟಕ ಡಿ. 24 ಹಾಗೂ 25ರಂದು ಕರ್ನಾಟಕ ಕಾಲೇಜು ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಿತು. ಕಿಕ್ಕಿರಿದು ತುಂಬಿದ್ದ ಸಾವಿರಾರು ಪ್ರೇಕ್ಷಕರಿಗೆ ಮಹಾರಾಷ್ಟ್ರದ ಝಾಣತಾ ರಾಜಾ ಮಾದರಿಯಲ್ಲಿ ಚೆನ್ನಮ್ಮನ ಶೌರ್ಯ ತುಂಬಿದ ನಾಟಕ ಮುದ ನೀಡಿತು. ಮೂರುವರೆ ಗಂಟೆ ನಡೆದ ನಾಟಕದಲ್ಲಿ 250ಕ್ಕೂ ಹೆಚ್ಚು ಕಲಾವಿದರು ಶ್ರಮ ವಹಿಸಿದರು. ನಾಟಕಕ್ಕೆ ನಗಾರಿ ಬಾರಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಟಕಕ್ಕೆ ಚಾಲನೆ ನೀಡಿ ಡಬಲ್‌ ಅನುದಾನ ಒದಗಿಸುವ ಭರವಸೆ ನೀಡಿದರು.

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಾವಿಗೆ ಒಂದೂವರೆ ಗಂಟೆ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಿದ ವೈದ್ಯ!

ಕೆರೆಗೆ ತಡೆಗೋಡೆ ನಿರ್ಮಾಣ:

ಅತಿವೃಷ್ಟಿಯಿಂದ ಹಾನಿಗಿಡಾದ ಅಳ್ನಾವರ ಹುಲಿಕೇರಿಯ ಇಂದಿರಮ್ಮನ ಕೆರೆಗೆ . 9 ಕೋಟಿ ವೆಚ್ಚದಲ್ಲಿ ತಡೆಗೋಡೆ ನಿರ್ಮಾಣ ಕಾರ್ಯವು ಇದೇ ವರ್ಷ ಪೂರ್ಣವಾಗಿದ್ದು ಸುತ್ತಲಿನ ರೈತರಿಗೆ ಅನುಕೂಲವಾಗಿದೆ.

ಕಾಳಿ ಯೋಜನೆ ಪ್ರಾರಂಭ..

ಅಳ್ನಾವರ ಪಟ್ಟಣದ ಜನರ ಬಹುದಿನಗಳ ಬೇಡಿಕೆಯಾಗಿದ್ದ ಕಾಳಿ ನದಿ ಕುಡಿಯುವ ಯೋಜನೆಯು . 71 ಕೋಟಿಯಲ್ಲಿ ನಿರ್ಮಾಣವಾಗಿದ್ದು ಪಟ್ಟಣದ ನಲ್ಲಿಗಳಲ್ಲಿ ಶುದ್ಧ ಕುಡಿಯುವ ನೀರು ನೀಡಲಾಗುತ್ತಿದೆ.

click me!