ಪ್ರಸಿದ್ಧ ಯಕ್ಷಗಾನ ಭಾಗವತ ಗುಣವಂತೆ ಕೃಷ್ಣ ಭಂಡಾರಿ (61 )  ಇನ್ನಿಲ್ಲ

By Suvarna News  |  First Published Sep 5, 2021, 6:35 PM IST

* ಯಕ್ಷಗಾನ ಭಾಗವತ, ಕಲಾವಿದ ಗುಣವಂತೆ ಕೃಷ್ಣ ಭಂಡಾರಿ ಇನ್ನಿಲ್ಲ
* ಯಕ್ಷಗಾನ ಪರಂಪರೆಯ ಕುಟುಂಬದಿಂದಲೇ ಬಂದವರು
* ಯಕ್ಷಗಾಣ ಪ್ರಸಾರದ ಕೆಲಸವನ್ನು ಮಾಡುತ್ತಿದ್ದರು
* ಇಡಗುಂಜಿ, ಪೆರ್ಡೂರು, ಸಾಲಿಗ್ರಾಮ ಮೇಳದಲ್ಲಿ ಹೆಸರು ಗಳಿಸಿದ್ದರು


ಉತ್ತರ ಕನ್ನಡ(ಸೆ. 05)  ಯಕ್ಷಗಾನ ಭಾಗವತ, ಕಲಾವಿದ ಗುಣವಂತೆ ಕೃಷ್ಣ ಭಂಡಾರಿ (61 )  ಇನ್ನಿಲ್ಲ.  ಶನಿವಾರ ರಾತ್ರಿ 10.20 ಕ್ಕೆ ಗುಣವಂತೆಯಲ್ಲಿ  ಯಕ್ಷಗಾನ ಲೋಕ ತ್ಯಜಿಸಿದ್ದಾರೆ.

ಭಂಡಾರಿ ಅವರು ಯಕ್ಷಗಾನದ ಹಿನ್ನೆಲೆಯಿರುವ ಕುಟುಂಬದಿಂದಲೇ ಬಂದವರು.  ಅಜ್ಜ ವೆಂಕಪ್ಪ ಭಂಡಾರಿ ವೇಷಧಾರಿಯಾಗಿ ಹೆಸರು ಮಾಡಿದ್ದರು. ಹಾಗೂ ತಂದೆ ಮಂಜು ಭಂಡಾರಿ ಮದ್ದಳೆ ವಾದಕರಾಗಿದ್ದರು. 

Latest Videos

undefined

ಕೃಷ್ಣ ಭಂಡಾರಿ ಒಂದು ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಯಕ್ಷಗಾನ ಹಿನ್ನೆಲೆಯ ಕುಟುಂಬದಿಂದ ಬಂದಿದ್ದ  ಕೃಷ್ಣ ಭಂಡಾರಿಯವರು ಯಕ್ಷಗಾನದ ಎಲ್ಲ ವಿಭಾಗಗಳಲ್ಲಿ ಜನಪ್ರಿಯರಾಗಿದ್ದು ಭಾಗವತರಾಗಿ ದೊಡ್ಡ ಹೆಸರು ಸಂಪಾದಿಸಿದರು. ಉಡುಪಿಯ ಶಿವರಾಮ ಕಾರಂತ ಯಕ್ಷಗಾನ ಕೇಂದ್ರದಲ್ಲಿ ಕಲಿತಿದ್ದ ಅವರು ನಂತರ ಯಕ್ಷಗಾನದ ಖ್ಯಾತ ಕಲಾವಿದ ಕೆರೆಮನೆ ಮಹಾಬಲ ಹೆಗಡೆಯವರ ಬಳಿ ಹೆಚ್ಚಿನ ಅಭ್ಯಾಸ ಮಾಡಿದ್ದರು.  ಇದಾದ ಮೇಲೆ ಇಡಗುಂಜಿ ಯಕ್ಷಗಾನ ಮೇಳ ಸೇರಿದಂತೆ ಅನೇಕ ಕಡೆಗಳಲ್ಲಿ ಕಲಾವಿದರಾಗಿದ್ದರು. ದಿವಂಗತ ಶಂಭು ಹೆಗಡೆ ಕೆರೆಮೆನೆ ಮೊದಲಾದವರ ಜೊತೆ ಕೆಲಸ ಮಾಡಿದ್ದರು.

ಯಕ್ಷಗಾನ ನಡೆಯುತ್ತಿದ್ದಾಗಲೇ ವೇದಿಕೆಯಲ್ಲೇ ಕುಸಿದು ಬಿದ್ದ ಕಲಾವಿದ

ಇಡಗುಂಜಿ ಮೇಳದಲ್ಲಿ ಯಕ್ಷಲೋಕದ ಪಯಣವನ್ನು ಆರಂಭಿಸಿ ಉತ್ತರಪ್ರದೇಶ, ತಮಿಳುನಾಡು, ಮುಂಬೈ ಸೇರಿದಂತೆ ರಾಷ್ಟ್ರದ ಉದ್ದಗಲಕ್ಕೂ ಸಂಚರಿಸಿ ತಮ್ಮ ಕಂಚಿನ ಕಂಠದ ಭಾಗವತಿಕೆಯಿಂದ ಕಲಾವಿದರನ್ನು ಕುಣಿಸಿದ್ದಾರೆ 1992 ರಲ್ಲಿ ಇಡಗುಂಜಿ ಮೇಳದ ಕಲಾವಿದರಾಗಿ ದಿವಂಗತ ಶಂಭು ಹೆಗಡೆಯವರ ಜೊತೆ ಫ್ರಾನ್ಸ್ ಮತ್ತು ಸ್ಪೇನ್ ತಿರುಗಾಟಕ್ಕೆ ಹೋಗಿ ಅಲ್ಲಿನ ಕನ್ನಡಿಗರನ್ನು  ರಂಜಿಸಿದ್ದೆರು.  

ಇಡಗುಂಜಿ, ಪೆರ್ಡೂರು, ಸಾಲಿಗ್ರಾಮ ಮೇಳಗಳು ಹಾಗೂ ಸಾವಿರಾರು ಬಯಲಾಟದ ಪ್ರಸಂಗಗಳಲ್ಲಿ ಬರುವ ಪಾತ್ರಗಳ ಭಾಗವತರಾಗಿದ್ದ ಅವರು 2012-13ನೇ ಸಾಲಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದರು.

ಶ್ರೀ ನಾಗಚೌಡೇಶ್ವರಿ ಯಕ್ಷಕಲಾ ಟ್ರಸ್ಟ್ ರಚಿಸಿಕೊಂಡು ಕಾರವಾರ, ಅಂಕೋಲಾ, ಕುಮಟಾ, ಗೋಕರ್ಣ, ಹೊನ್ನಾವರ, ಮುರ್ಡೇಶ್ವರ, ಶಿರಾಲಿ, ಗುಣವಂತೆ, ಹೊನ್ನಾವರ, ಭಟ್ಕಳ, ಮಂಗಳೂರು ಮುಂತಾದ ಕಡೆ ಯಕ್ಷಗಾನ ತರಬೇತಿ ಶಿಬಿರಗಳನ್ನು ಆಯೋಜಿಸಿ ಕಲಿಕಾ ಶಿಬಿರ ನಡೆಡಸಿಕೊಟ್ಟಿದ್ದರು. ಭಂಡಾರಿ ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಹಾಗೂ ಅಪಾರ ಯಕ್ಷಗಾನ ಪ್ರೇಮಿಗಳನ್ನು ಅಗಲಿದ್ದಾರೆ. 

click me!