ರಂಗಸ್ಥಳದಲ್ಲಿ ರಾಮ, ಲವ-ಕುಶರು, ಮನೆಯಲ್ಲೀಗ ಹಾಡು​ಗಾ​ರ​ರು! ಹಂಡೆ, ತಪ್ಪಲೆಯೇ ರಿದಂ ಪ್ಯಾಡ್‌

By Kannadaprabha NewsFirst Published Apr 19, 2020, 1:58 PM IST
Highlights

ರಾಮಚಂದ್ರ ಹೆಗಡೆ ಕೊಂಡದಕುಳಿ ಬಡಗತಿಟ್ಟು ಯಕ್ಷಲೋಕ ಕಂಡ ಅಗ್ರಪಂಕ್ತಿಯ ಕಲಾವಿದ. ಪ್ರಮುಖ ಕಲಾವಿದರು ರಜೆಯಲ್ಲಿದ್ದಾಗ ಎಲ್ಲರ ಸ್ಥಾನವನ್ನು ತುಂಬ​ಬಲ್ಲ ಅಪ್ರತಿಮ ಕಲಾವಿದ. ಸದ್ಯ ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ತಮ್ಮ ಮಗಳ ಗಾನಸುಧೆಗೆ ಹಿಮ್ಮೇಳದ ಸ್ಥಾನ ತುಂಬುತ್ತಿದ್ದಾರೆ.

ಉಡುಪಿ(ಏ.19): ರಾಮಚಂದ್ರ ಹೆಗಡೆ ಕೊಂಡದಕುಳಿ ಬಡಗತಿಟ್ಟು ಯಕ್ಷಲೋಕ ಕಂಡ ಅಗ್ರಪಂಕ್ತಿಯ ಕಲಾವಿದ. ಪ್ರಮುಖ ಕಲಾವಿದರು ರಜೆಯಲ್ಲಿದ್ದಾಗ ಎಲ್ಲರ ಸ್ಥಾನವನ್ನು ತುಂಬ​ಬಲ್ಲ ಅಪ್ರತಿಮ ಕಲಾವಿದ. ಸದ್ಯ ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿ ತಮ್ಮ ಮಗಳ ಗಾನಸುಧೆಗೆ ಹಿಮ್ಮೇಳದ ಸ್ಥಾನ ತುಂಬುತ್ತಿದ್ದಾರೆ.

ಮೂಲತಃ ಹೊನ್ನಾವರದ ಕೊಂಡದಕುಳಿಯ ರಾಮಚಂದ್ರ ಹೆಗಡೆ 25 ವರ್ಷಗಳಿಂದ ಕುಂದಾಪುರ ಸಮೀಪದ ಕುಂಭಾಶಿಯಲ್ಲಿ ವಾಸ. ಸಾಲಿಗ್ರಾಮ ಮೇಳದಲ್ಲಿ 19 ವರ್ಷ ಸೇವೆ ಸಲ್ಲಿಸಿದ್ದಾರೆ. 20 ವರ್ಷಗಳಿಂದ ತಮ್ಮದೇ ಆದ ಪೂರ್ಣಚಂದ್ರ ಯಕ್ಷ ಪ್ರತಿಷ್ಠಾನ ನಡೆಸುತ್ತಿದ್ದಾರೆ. ರಾಮಚಂದ್ರ ಹೆಗಡೆ ಪುತ್ರಿ ಅಶ್ವಿನಿ ಕೊಂಡದಕುಳಿಯೂ ಮೇರು ಯಕ್ಷ ಕಲಾವಿದೆ. ಪತಿ ಕಡಬಾಳ ಉದಯ ಹೆಗಡೆ ಪ್ರಸಿದ್ಧ ಯಕ್ಷ​ಗಾನ ಕಲಾ​ವಿದ. ರಂಗಸ್ಥಳದಲ್ಲಿ ಜತೆಯಾಗಿ ಹೆಜ್ಜೆ ಹಾಕುವ ಈ ಮೂವರು ಕಲಾವಿದರು ಈಗ ಮನೆಯಲ್ಲೇ ಉಳಿದುಕೊಂಡು ವಿಶಿಷ್ಟ, ವಿಭಿನ್ನ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ.

ಹವ್ಯಾ​ಸ​ಗಳ ಪೋಷಣೆ ಈಗ:

ಸೈಕಾಲಾಜಿಸ್ಟ್‌ ಆಗಿರುವ ಅಶ್ವಿನಿ ಕೊಂಡದಕುಳಿ, ಹಲವು ಯಕ್ಷ ಪ್ರದರ್ಶನಗಳಲ್ಲಿ ಅತಿಥಿ ಕಲಾವಿದೆಯಾಗಿ ಹೆಸರು ಗಳಿಸಿದವರು. ದೂರ​ವಾಣಿ ಮೂಲಕ ಸೈಕಾಲಜಿ ಕೌನ್ಸಿಲಿಂಗ್‌ ಕೆಲಸ ಮಾಡು​ತ್ತಿ​ದ್ದರು. ಕಾಲೇಜು ದಿನಗಳಲ್ಲೇ ಸಂಗೀತ, ಭರತನಾಟ್ಯ, ಚಿತ್ರಕಲೆಯಲ್ಲಿ ಆಸಕ್ತಿ ಹೊಂದಿದ್ದ ಅಶ್ವಿನಿ, ಬಳಿಕ ಯಕ್ಷಗಾನದ ಒತ್ತಡದಲ್ಲಿ ಯಾವುದೇ ಹವ್ಯಾಸಗಳನ್ನು ಮುಂದುವರಿಸಲು ಹೋಗಿರಲಿಲ್ಲ. ಈಗ ಲಾಕ್‌ಡೌನ್‌ನಿಂದಾಗಿ ಮನೆಯಲ್ಲೇ ಕುಳಿತ ಅವರು ತಾವೇ ಸಾಹಿತ್ಯ ಬರೆದು, ಸಂಗೀತ ಸಂಯೋ​ಜಿ​ಸಿ ಹಾಡಿರುವ ಪದ್ಯಗಳನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿ​ಕೊ​ಳ್ಳು​ತ್ತಿ​ದ್ದಾ​ರೆ.

ಹಂಡೆ, ತಪ್ಪಲೆ ರಿದಂ ಪ್ಯಾಡ್‌!:

ಪತಿ ಕಡಬಾಳ ಉದಯ್‌ ಹಾಗೂ ತಂದೆ ರಾಮಚಂದ್ರ ಹೆಗಡೆ ಸಹಕಾರದಲ್ಲಿ ಅಶ್ವಿನಿ ಕೊಂಡದಕುಳಿ ಹಾಡಿರುವ ‘ಸೋಜುಗಾದ ಸೂಜಿಮಲ್ಲಿಗೆ’ ಹಾಡು ಅಭಿಮಾನಿಗಳ ಚಪ್ಪಾಳೆ ಗಿಟ್ಟಿಸಿದೆ. ಇಲ್ಲಿ ಯಾವುದೇ ಸಂಗೀತ ಪರಿಕರಗಳಿಲ್ಲ. ಮನೆಯ ಅಟ್ಟದ ಮೇಲೆ ಮೂಲೆಗುಂಪಾಗಿ ಬಿದ್ದಿರುವ ಹಂಡೆ, ತಪ್ಪಲೆಗಳನ್ನು ರಿದಂ ಪ್ಯಾಡ್‌ ಆಗಿ ಬಳಸಿಕೊಂಡಿದ್ದಾರೆ. ಕಾಲಿಗೆ ಕಟ್ಟುವ ಗೆಜ್ಜೆಯನ್ನೇ ತಾಳ ಮಾಡಿಕೊಂಡು ಹಿಮ್ಮೇಳ ಕಲಾವಿದರಾಗಿ ಪತಿ, ತಂದೆ ಸಾಥ್‌ ನೀಡಿ​ದ್ದಾರೆ.

ಬಡ ಕಲಾವಿದರಿಗೆ ನೆರವಾಗುತ್ತಿದ್ದಾರೆ ಅಶ್ವಿನಿ

ಅಶ್ವಿನಿ ಕೊಂಡದಕುಳಿ ತಾವು ಯಕ್ಷಗಾನದಿಂದಲೇ ಗಳಿಸಿದ ದುಡಿಮೆಯ ಒಂದಷ್ಟುಪಾಲನ್ನು ಬಡ ಯಕ್ಷಗಾನ ಕಲಾವಿದರಿಗೆ ನೆರವಾಗುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ. ಯಕ್ಷಗಾನ ಪ್ರದರ್ಶನವಿಲ್ಲದೇ ಕಂಗೆಟ್ಟಿದ್ದ ಹತ್ತು ಬಡ ಯಕ್ಷಕಲಾವಿದರ ಕುಟುಂಬಕ್ಕೆ 25 ಕೆ.ಜಿ. ಅಕ್ಕಿ ಹಾಗೂ ಒಂದು ತಿಂಗಳಿಗಾಗುವಷ್ಟುದಿನಸಿ ಸಾವåಗ್ರಿಗಳ ಕಿಟ್‌ನ್ನು ಅವರವರ ಮನೆಗೆ ತಲುಪಿಸುತ್ತಿದ್ದಾರೆ. ಇದು ಪ್ರಚಾರಕ್ಕಲ್ಲ, ಇನ್ನೊಬ್ಬರಿಗೆ ಪ್ರೇರಣೆಯಾಗಲಿ ಎನ್ನುವುದಕ್ಕಾಗಿ ಈ ಕಾರ್ಯಕ್ಕೆ ಮುಂದಾಗಿದ್ದೇನೆ ಎನ್ನುತ್ತಾರೆ.

ಕರ್ನಾಟಕದಲ್ಲಿ ವಾರದಲ್ಲಿ ಎರಡು ದಿನ ಮದ್ಯ ಮಾರಾಟ..?

ಕಲೆ ಒಂದು ರೀತಿಯ ಹುಚ್ಚು. ಇಂತಹ ಸಂದರ್ಭಗಳಲ್ಲಿ ಕಲಾವಿದರು ಒಂದಲ್ಲ ಒಂದು ಚಟುವಟಿಕೆಗಳನ್ನು ಮಾಡುತ್ತಲೇ ಇರುತ್ತಾರೆ. ಹಾಡುಗಾರರು, ಹಿಮ್ಮೇಳದವರು ಸ್ವತಂತ್ರ ಕಲಾವಿದರು. ನಾವು ಪರಾತಂತ್ರರು. ಹಿಮ್ಮೇಳವಿಲ್ಲದೇ ನಮಗೇನು ಸಾಧ್ಯವಿಲ್ಲ. ಆದರೂ ಯಕ್ಷಗಾನದ ಕ್ಯಾಸೆಟ್‌ ಹಾಕಿ ಕೇಳುತ್ತೇನೆ ಎಂದು ಪ್ರಸಿದ್ಧ ಯಕ್ಷಗಾನ ಕಲಾವಿದ ರಾಮಚಂದ್ರ ಹೆಗಡೆ ಕೊಂಡದಕುಳಿ ತಿಳಿಸಿದ್ದಾರೆ.

-ಶ್ರೀಕಾಂತ ಹೆಮ್ಮಾಡಿ

click me!