
ಯಾದಗಿರಿ/ರಾಯಚೂರು : ನಿನ್ನೆ ಅಂದರೆ ಎಪ್ರಿಲ್ 16ರಂದು ಮಂತ್ರಾಲಯಕ್ಕೆ ರಾಯರ ದರ್ಶನಕ್ಕೆಂದು ಹೊರಟ್ಟಿದ್ದ ಚಿಕ್ಕಮಗಳೂರು ಮತ್ತು ಹಾಸನದ 8 ಮಂದಿ ಕುಟುಂಬದವರು ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದ ಕಹಿ ಘಟನೆ ಮಾಸುವ ಮುನ್ನವೇ ರಾಜ್ಯದಲ್ಲಿ ಮತ್ತೊಂದು ಭೀಕರ ರಸ್ತೆ ದುರಂತ ಸಂಭವಿಸಿದೆ. ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಬಳಿ ಖಾಸಗಿ ಬಸ್ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಒಂದೇ ಕುಟುಂಬದ ಆರು ಮಂದಿ ಸಜೀವ ದಹನಗೊಂಡಿದ್ದಾರೆ. ಈ ದುರಂತವು ರಾಜ್ಯದ ಜನರನ್ನು ಬೆಚ್ಚಿಬೀಳಿಸಿದೆ. ಅಪಘಾತ ಅದೆಷ್ಟು ಭಯಾನಕವಾಗಿತ್ತು ಎಂದರೆ ಘಟನಾ ಸ್ಥಳದಲ್ಲಿ ಹೊತ್ತಿ ಉರಿದ ತಲೆಬುರುಡೆಗಳು ಕಾಣಿಸಿತು.
ಇಂದು ಬೆಳಗ್ಗೆ ಸುಮಾರು 9:45ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಕಲಬುರಗಿಯತ್ತ ಸಾಗುತ್ತಿದ್ದ ಖಾಸಗಿ ಬಸ್ ಮತ್ತು ಕಲಬುರಗಿಯಿಂದ ರಾಯಚೂರು ಜಿಲ್ಲೆಯ ಸಿರವಾರ ಕಡೆಗೆ ತೆರಳುತ್ತಿದ್ದ ಕಾರಿನ ನಡುವೆ ಭೀಕರ ಡಿಕ್ಕಿಯಾಗಿದೆ. ಡಿಕ್ಕಿಯ ತೀವ್ರತೆಗೆ ಕಾರು ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿ ಕ್ಷಣಾರ್ಧದಲ್ಲಿ ಹೊತ್ತಿ ಉರಿದಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಎಂಟು ಮಂದಿಯಲ್ಲಿ ಆರು ಮಂದಿ ಸ್ಥಳದಲ್ಲೇ ಸಜೀವ ದಹನಗೊಂಡಿದ್ದಾರೆ. ಮೃತರು ರಾಯಚೂರು ಜಿಲ್ಲೆಯ ಸಿರವಾರ ಪಟ್ಟಣದ ಪಂಚಾಯತ್ ಸದಸ್ಯ ಕೃಷ್ಣನಾಯಕ ಕುಟುಂಬಸ್ಥರು ಎಂದು ಗುರುತಿಸಲಾಗಿದೆ. ಮೃತರಲ್ಲಿ ಕೃಷ್ಣನಾಯಕ (52), ಪತ್ನಿ ಅನಂತಕಲಾ (45), ಅಳಿಯ ಶರಣಪ್ಪ (36), ಮಗಳು ನಿಸರ್ಗ (30), ಶಶಿಕಲಾ (30) ಹಾಗೂ ಮಗು ಸಿದ್ಧಾರ್ಥ (3) ಸೇರಿದ್ದಾರೆ.
ಕಾರಿನಲ್ಲಿ ಇದ್ದ ಅದ್ವಿಕಾ (5) ಮತ್ತು ಶ್ರೀನಿಧಿ (ಒಂದೂವರೆ ವರ್ಷದ ಮಗು) ಗಂಭೀರವಾಗಿ ಗಾಯಗೊಂಡಿದ್ದು, ಯಾದಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಿದೆ. ಮೃತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ
ಈ ಕುಟುಂಬ ಅಮಾವಾಸ್ಯೆ ನಿಮಿತ್ತ ತಿಂಥಣಿ ಮೌನೇಶ್ವರ/ವೇಣುಗೋಪಾಲ ಸ್ವಾಮಿ ದರ್ಶನ ಮುಗಿಸಿಕೊಂಡು ಸಿರವಾರಕ್ಕೆ ವಾಪಸ್ಸಾಗುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಸಂತೋಷದ ಪ್ರಯಾಣ ಕ್ಷಣಾರ್ಧದಲ್ಲಿ ದುರಂತ ಅಂತ್ಯ ಕಂಡಿದೆ. ಅಪಘಾತದಲ್ಲಿ ಬಸ್‌ಗೂ ಬೆಂಕಿ ತಗುಲಿದರೂ, ಅದರಲ್ಲಿದ್ದ ಸುಮಾರು 33 ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೆಲವರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.
ಅಪಘಾತದ ತೀವ್ರತೆಗೆ ಕಾರಿನ ಬಾಗಿಲುಗಳು ಲಾಕ್ ಆಗಿ ಒಳಗಿದ್ದವರು ಹೊರಬರಲು ಸಾಧ್ಯವಾಗಿಲ್ಲ. ಬೆಂಕಿ ವೇಗವಾಗಿ ವ್ಯಾಪಿಸಿ ಕಾರು ಸಂಪೂರ್ಣ ಕರಕಲಾಗಿದ್ದು, ಸುಟ್ಟ ಅವಶೇಷಗಳ ನಡುವೆ ತಲೆಬುರುಡೆಗಳು ಪತ್ತೆಯಾಗಿದ್ದು ಆ ದೃಶ್ಯಗಳು ಮನಕಲುಕುವಂತಿತ್ತು. ಘಟನೆಯ ಮಾಹಿತಿ ತಿಳಿದು ಸುರಪುರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯ ನಡೆಸಿದರು. ಬಳಿಕ ಮೃತದೇಹಗಳನ್ನು ಹೊರತೆಗೆದು ಗುರುತಿಸುವ ಕಾರ್ಯ ಮಾಡಲಾಯ್ತು.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ಅಪಘಾತದ ನಿಖರ ಕಾರಣ ಪತ್ತೆಹಚ್ಚುವ ಕಾರ್ಯ ಆರಂಭಿಸಿದ್ದಾರೆ. ಅತಿವೇಗ, ನಿರ್ಲಕ್ಷ್ಯ ಚಾಲನೆ ಅಥವಾ ತಾಂತ್ರಿಕ ದೋಷವೇ ಕಾರಣವೇ ಎಂಬುದು ತನಿಖೆಯಿಂದ ತಿಳಿಯಬೇಕಾಗಿದೆ. ಈ ದುರಂತದಿಂದ ರಾಜ್ಯದಲ್ಲಿ ರಸ್ತೆ ಸುರಕ್ಷತೆ ಕುರಿತು ಮತ್ತೆ ಪ್ರಶ್ನೆಗಳು ಎದ್ದಿವೆ. ಇತ್ತೀಚಿನ ಸರಣಿ ಅಪಘಾತದಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದೆ.