ದೇವರು ಮೃತ ಸಂಧ್ಯಾರಾಣಿ ಆತ್ಮಕ್ಕೆ ಶಾಂತಿ ನೀಡಲಿ ಅವಳ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರಿಗೆ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದ ಸಚಿವ ಈಶ್ವರ ಖಂಡ್ರೆ.
ಬೀದರ್(ಸೆ.29): ಬೀದರ್ ಜಿಲ್ಲೆಯಾದ್ಯಂತ ಸುರಿದ ಭಾರಿ ಮಳೆಯಿಂದಾಗಿ ಭಾಲ್ಕಿ ತಾಲೂಕಿನ ಬಾಜೋಳಗಾ ಗ್ರಾಮದಲ್ಲಿ ಗುರುವಾರ ಸುರಿದ ಧಾರಾಕಾರ ಮಳೆಯಿಂದಾಗಿ ಗೋಡೆ ಕುಸಿದು ಆಟ ಆಡುತ್ತಿದ್ದ ಬಾಲಕಿ ಸಂಧ್ಯಾರಾಣಿ ಸಂಜೀವಕುಮಾರ ಕಾಂಬಳೆ (8) ಸಾವನ್ನಪ್ಪಿರುವ ಘಟನೆ ನಡೆದಿದೆ.
ಈ ಕುರಿತಂತೆ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯಿಸಿದ್ದು, ದೇವರು ಮೃತ ಸಂಧ್ಯಾರಾಣಿ ಆತ್ಮಕ್ಕೆ ಶಾಂತಿ ನೀಡಲಿ ಅವಳ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕುಟುಂಬ ಸದಸ್ಯರಿಗೆ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಇಂದಿನಿಂದ 3 ದಿನ ಬೆಳಗಾವಿಯಲ್ಲಿ ಮೋಡ ಬಿತ್ತನೆ
ಮೃತ ಸಂಧ್ಯಾರಾಣಿ ಕುಟುಂಬಕ್ಕೆ ಸರ್ಕಾರದ ವತಿಯಿಂದ ಆದಷ್ಟು ಬೇಗ ಪರಿಹಾರ ನೀಡುವ ಭರವಸೆ ನೀಡಿದ್ದೇನೆ. ಘಟನೆ ಸಂಬಂಧ ಈಗಾಗಲೇ ಅಧಿಕಾರಿಗಳ ಜೊತೆ ಮಾತನಾಡಿ ಸ್ಥಳಕ್ಕೆ ಭೇಟಿ ನೀಡುವಂತೆ ಸೂಚನೆ ನೀಡಿದ್ದೇನೆ. ತಹಸೀಲ್ದಾರ್ ಸೇರಿದಂತೆ ಇತರ ಅಧಿಕಾರಿಗಳು ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ ಎಂದು ಸಚಿವ ಖಂಡ್ರೆ ತಿಳಿಸಿದ್ದಾರೆ.
ಜಿಲ್ಲೆಯ ಹಲವಾರು ಕಡೆಗಳಲ್ಲಿ ರಸ್ತೆಗಳು, ಚರಂಡಿ ತುಂಬಿ ಹರಿಯುತ್ತಿದ್ದಲ್ಲದೆ ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳ ಒಳ ಹೊಕ್ಕಿರುವ ಮಳೆ ನೀರಿನಿಂದಾಗಿ ಅಪಾರ ಹಾನಿಯುಂಟಾಗಿದೆ.
ಬೀದರ್‌ನಲ್ಲಿ ಮಳೆ ನೀರಿನ ಆವಾಂತರ:
ಬೀದರ್‌ನ ನಯಾಕಮಾನ್‌ನಿಂದ ಗೋರನಳ್ಳಿ ಮಾರ್ಗದ ರಾಜಕಾಲುವೆ ತುಂಬಿ ಹರಿದ ಪರಿಣಾಮ ರಸ್ತೆ ಸಂಚಾರ ಸಂಚಕಾರವಾಗಿ ಪರಿಣಮಿಸಿದ್ದು, ವಾಹನ ಅನೇಕ ಸವಾರರು ರಸ್ತೆ ಗುಂಡಿಯಲ್ಲಿ ಬಿದ್ದು ಗಾಯಗೊಂಡಿದ್ದರೆ ಬಸವ ನಗರ ಕಾಲೋನಿಯ ಮನೆಯೊಂದರಲ್ಲಿ ಮಳೆ ನೀರು ಹೊಕ್ಕು ಮನೆ ಮಂದಿಯೆಲ್ಲ ಮೊಣಕಾಲೆತ್ತರ ನೀರಿನಲ್ಲಿಯೇ ಕೆಲ ಹೊತ್ತು ಕಾಲ ಕಳೆಯುವಂತಾಗಿತ್ತು. ಇನ್ನು ಡಾ. ಅಂಬೇಡ್ಕರ್ ವೃತ್ತದಲ್ಲಿರುವ ಮಳಿಗೆಯ ಅರ್ಧದಷ್ಟು ನೀರು ನಿಂತು ಮೊಬೈಲ್ ಅಂಗಡಿಗಳಿಗೆ ಭಾರಿ ಹಾನಿಯುಂಟು ಮಾಡಿದ್ದು ಅಗ್ನಿಶಾಮಕ ದಳದಿಂದ ನೀರು ಹೊರ ಹಾಕಲಾಯಿತು.
ಧಾರಾಕರ ಮಳೆ, ಹಳ್ಳದಂತಾದ ಮುಖ್ಯರಸ್ತೆಗಳು
ಬೀದರ್: ಜಿಲ್ಲಾ ಕೇಂದ್ರ ಬೀದರ್‌ನಲ್ಲಿ ಗುರುವಾರ ಸಂಜೆ ಭಾರಿ ಮಳೆಯಾಗಿದ್ದು ರಸ್ತೆಗಳೆಲ್ಲ ನೀರಿನಿಂದ ಆವೃತ್ತವಾಗಿ ರಸ್ತೆ ಸಂಚಾರ ಕಠಿಣವಾಯಿತಲ್ಲದೆ ಸತತ ಒಂದು ತಾಸು ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶದಲ್ಲಿನ ಅಂಗಡಿ, ಮನೆಗಳಗೆ ನೀರು ಹೊಕ್ಕಿದ್ದು ಜನ ಸಂಕಷ್ಟ ಅನುಭವಿಸುವಂತಾಯಿತು.
ಗುರುವಾರ ಬೆಳಗ್ಗೆಯಿಂದ ಸುಡು ಬಿಸಿಲು ಇತ್ತು. ಆದರೆ ಮಧ್ಯಾಹ್ನ 4 ಗಂಟೆ ಸುಮಾರಿಗೆ ನಿರಂತರ ಒಂದು ಗಂಟೆಯವರೆಗೆ ಸುರಿದ ಭಾರಿ ಮಳೆಗೆ ಇಡೀ ಬೀದರ್ ನಗರವೆ ಹಳ್ಳ ಕೊಳ್ಳದಂತೆ ಬದಲಾವಣೆಯಾಗಿತ್ತು.
ಗುಡುಗು, ಸಿಡಿಲು, ಗಾಳಿಯೊಂದಿಗೆ ಜೋರಾಗಿ ಬಿದ್ದ ಮಳೆಗೆ ಬೀದರ್‌ನ ಎಲ್ಲ ರಸ್ತೆಗಳಲ್ಲಿ ನೀರೇ ನೀರು ತುಂಬಿತ್ತು. ರಸ್ತೆ ಬದಿಯ ಚರಂಡಿಗಳು ತುಂಬಿಕೊಂಡು ರಸ್ತೆಯ ಮೇಲೆ ನೀರು ಹರಿಯಲು ಆರಂಭಿಸಿದವು.
ಸಿಎಂ ಸಿದ್ದರಾಮಯ್ಯ ರಾಹುಲ್, ಸೋನಿಯಾ ಮಾತು ಕೇಳಿಕೊಂಡು ತಮಿಳನಾಡಿಗೆ ನೀರು ಬಿಡ್ತಿದ್ದಾರೆ: ಭಗವಂತ ಖೂಬಾ
ಸಂಜೆ 5 ಗಂಟೆಗೆ ಸ್ವಲ್ಪ ಮಳೆ ಕಡಿಮೆಯಾಗುತ್ತಲೇ ರಸ್ತೆಗೆ ಇಳಿದ ವಾಹನಗಳು ಮಳೆ ನೀರಿನಲ್ಲಿ ಅರ್ಧ ಭಾಗದಷ್ಟು ಮುಳುಗಿದವು. ನಗರದ ಮುಖ್ಯರಸ್ತೆಯ ಅಕ್ಕಪಕ್ಕ ನಿಲ್ಲಿಸಿದ ವಾಹನಗಳಂತೂ ನೀರಿನಲ್ಲಿಯೇ ಮುಳುಗಿ ಹೋಗಿದ್ದವು.
ನಗರದ ಯಾವುದೇ ರಸ್ತೆಯ ಮೇಲೆ ತೆರಳಿದರೂ ಮೊಣಕಾಲಿನವರೆಗೆ ನೀರು ನಿಂತಿದ್ದವು. ಹೀಗಾಗಿ ಬಹಳಷ್ಟು ವಾಹನಗಳಲ್ಲಿ ನೀರು ಹೊಕ್ಕಿದ್ದರಿಂದ ವಾಹನ ಸವಾರರು ಮನೆಗೆ ತೆರಳಲು ಪರದಾಡುವಂತಾಗಿತ್ತು.
ನಿರ್ಣಾ ಹೋಬಳಿಯಲ್ಲಿ ಅತೀ ಹೆಚ್ಚು ಮಳೆ:
ಬೀದರ್ ಜಿಲ್ಲೆಯಾದ್ಯಂತ ಬುಧವಾರ 6.91ಮಿಮೀ ಮಳೆಯಾಗಿತ್ತು. ನಿರ್ಣಾ ಹೋಬಳಿಯಲ್ಲಿ ಅತೀ ಹೆಚ್ಚು 49ಮಿಮೀ ಮಳೆ ಬಿದ್ದಿದ್ದು, ಕಳೆದ ಮೂರ್ನಾಲ್ಕು ದಿನಗಳಿಂದ ಜಿಲ್ಲೆಯ ಅಲ್ಲಲ್ಲಿ ಮಳೆ ಸುರಿಯುತ್ತಿದೆ.