ಯಾದಗಿರಿ: ಹೈ-ಕ ಭಾಗದ ಬೇಂದ್ರೆ ಎ. ಕೃಷ್ಣ ಇನ್ನಿಲ್ಲ

By Kannadaprabha News  |  First Published Jul 13, 2020, 10:18 AM IST

ಕನ್ನಡ ನಾಡಿನ ಶ್ರೇಷ್ಠ ಸಾಹಿತ್ಯ ಚೇತನ, ಕವಿರಾಜ ಎ. ಕೃಷ್ಣ ಸುರಪುರ ನಿಧನ| ಯಾದಗಿರಿ ಜಿಲ್ಲೆಯ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕೃಷ್ಣ| ಕೃಷ್ಣ ಅವರ ಅಗಲಿಕೆ ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ|


ನಾಗರಾಜ ನ್ಯಾಮತಿ

ಸುರಪುರ(ಜು.13): ಅಕ್ಷರ ಗಾರುಡಿಗ, ಸಗರನಾಡಿನ ‘ಕವಿರಾಜ’ನೆಂದೇ ಹೆಮ್ಮೆಯ ಕವಿ ಎ. ಕೃಷ್ಣ ಸುರಪುರ (86) ಅನಾರೋಗ್ಯದಿಂದ ಭಾನುವಾರ ಮಧ್ಯಾಹ್ನ ನಿಧನರಾದರು. ಪತ್ನಿ, ಮೂವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅವರು ಆಗಲಿದ್ದಾರೆ.

Tap to resize

Latest Videos

undefined

ನೂತನ ಯಾದಗಿರಿ ಜಿಲ್ಲೆಯ ಪ್ರಥಮ ಸಾಹಿತ್ಯ ಸಮ್ಮೇಳನಾಧ್ಯಕ್ಷರೂ ಆಗಿದ್ದ, ಸರಳ ಮತ್ತು ಸಜ್ಜನಿಕೆಯ, ಮೃದು ಸ್ವಭಾವದ ವ್ಯಕ್ತಿತ್ವ ಎ. ಕೃಷ್ಣ ಅವರು, ವೃತ್ತಿಯಿಂದ ಶಿಕ್ಷಕರಾಗಿದ್ದರೂ ಒಳಮನಸ್ಸಿನಲ್ಲಿ ಸಾಹಿತ್ಯದೆಡೆಗೆ ಹೆಚ್ಚಿನ ಒಲವಿತ್ತು. ಗಾಯತ್ರಿ ಮಂತ್ರದ ಮೇಲೆ ಹೊಸ ವ್ಯಾಖ್ಯಾನ ಬರೆದವರು. ೧೪ನೇ ಕಿರು ವಯಸ್ಸಿನಲ್ಲಿಯೇ ‘ಶ್ರೀ ಮಚ್ಚಂದ್ರಲಾಂಬಾ ಅಣುಪುರಾಣಂ’ ಎಂಬ ಚಂಪೂ ಮಹಾಕಾವ್ಯ ಬರೆದ ಕವಿಕಣಜ.

‘ಎದೆಗಡಲ ಮುತ್ತುಗಳು’ ಕವನ ಸಂಕಲನದ ಮೂಲಕ ನಾಡಿನ ಜನರ ನಾಡಿ ಮೀಟಿದ ಕೃಷ್ಣಾ ಅವರು, ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ಪಾರಂಗತರಾಗಿದ್ದರು. ಚಂಪೂ ಕಾವ್ಯ ಶೈಲಿಯಿಂದ ಹಿಡಿದು ನವ್ಯ ಶೈಲಿಯ ಕವತೆಗಳ ರಚನೆಗಳವರೆಗೆ ಹರಡಿಕೊಂಡಿದೆ. ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿ ಮಾಡಿ ಸುರಪುರಕ್ಕೆ ಕೀರ್ತಿ ತಂದಿದ್ದಾರೆ.

ಯಾದಗಿರಿ: ಮದುವೆಗೆ ನಾಲ್ಕೇ ದಿನ, ಮದುಮಗನಿಗೆ ವಕ್ಕರಿಸಿತು ಕೊರೋನಾ ಸೋಂಕು

ವರಕವಿ ಬೇಂದ್ರೆ ಅವರಿಂದ ಪ್ರಭಾವಿತರಾಗಿ ಬೇಂದ್ರೆ ಕಾವ್ಯದ ಗುಂಗನ್ನು ಪಡೆದು ಶಬ್ದಗಾರುಡಿಗನ ನೆರಳಾದವರು ಇವರು. ಇವರನ್ನು ಅದಕ್ಕಾಗಿಯೇ ‘ಹೈದ್ರಾಬಾದ್ ಕರ್ನಾಟಕದ ಬೇಂದ್ರೆ’ ಎಂದು ಕರೆಯಲಾಗುತ್ತದೆ.
ಕೃಷ್ಣ ಅವರದು ಎಲ್ಲವನ್ನು ಸಮರಸ ಭಾವದಿಂದ ಸ್ವೀಕರಿಸುವ ಹೃದಯವಂತಿಕೆ ಮತ್ತು ಸಮಚಿತ್ತದ ಬರವಣಿಗೆ ಆಗಿತ್ತು. ಅನೇಕ ಉದಯನ್ಮೋಖ ಬರಹಗಾರರ ಪ್ರತಿಭೆ ಗುರುತಿಸಿ, ಅವರಿಗೆ ನೆರವಾಗಿ ಎಲ್ಲ ಹಂತಗಳಲ್ಲಿ ಬೆಂಬಲವಾಗಿ ನಿಂತು ಅವರನ್ನು ಸಾಹಿತ್ಯ ಕೃಷಿಯಲ್ಲಿ ತೊಡಗಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ.

ಎದೆಗಡಲು ಮುತ್ತುಗಳು, ಕರುಣ ಕೀರಿಟ, ಗೀತಾಂಜಲಿ, ಮಂತ್ರರಾಜ ಗಾಯತ್ರಿ, ಶ್ರೀಮಚ್ಚಂದ್ರಲಾಂಬ, ಅಣು ಪುರಾಣ, ಸಂತ ಹೃದಯದ ಶ್ರೀಮಂತ ನುಡಿಗಳು, ಗಾನಗಂಧರ್ವ ಸುರಪುರದ ಆನಂದದಾಸರು, ಸುಪ್ರಭಾತಗಳು, ಹಾಲೋಕುಳಿ, ಅನಂತಗಿರಿ ಮಹಾತ್ಮೆ, ಚಂದ್ರಗಂಗಾ ಸೇರಿದಂತೆ ಅನೇಕ ಗ್ರಂಥಗಳನ್ನು ರಚಿಸಿದ್ದಾರೆ. ಖ್ಯಾತ ಚಲನಚಿತ್ರ ನಿರ್ದೇಶಕರಾಗಿದ್ದ ದಿ.ಜಿ.ವಿ. ಅಯ್ಯರ ಜೊತೆಗೂಡಿ ‘ಗುರುರಾಜರಡಿಯಲ್ಲಿ’ ಎಂಬ ಕೃತಿ ಹೊರತಂದಿದ್ದಾರೆ. ಯಾದಗಿರಿ ಜಿಲ್ಲಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಇವರು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ.

ಎ.ಕೃಷ್ಣ ಸುರಪುರ ನಿಧನಕ್ಕೆ ಜನಪ್ರತಿನಿಽಗಳು, ಸಾಹಿತಿಗಳು, ಕವಿಗಳು, ಬರಹಗಾರರು ಸೇರಿದಂತೆ ಅನೇಕರು ಕಂಬನಿ ಮಿಡಿದಿದ್ದಾರೆ. ನಾಡಿನ ಸಾಹಿತ್ಯ ಲೋಕದ ಕೊಂಡಿ ಕಳಚಿದೆ ಎಂದು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.
ಚಿಕ್ಕಂದಿನಲ್ಲಿಯೇ ತಾಯಿ ಪ್ರೀತಿಯಿಂದ ವಂಚಿತರಾಗಿ, ಅಜ್ಜ ಮಾರ್ಕಾಂಡೇಯ ಪಂಡಿತರಿಂದ ವಿದ್ಯೆ ಬಳುವಳಿಯಾಗಿ ಪಡೆದರು. ಮಾರ್ಕಾಂಡೇಯ ಪಂಡಿತರನ್ನು ಹೈದ್ರಾಬಾದಿನ ನಿಜಾಮ ಕರೆಯಿಸಿ ಅವರಿಂದ ಸಲಹೆ-ಸೂಚನೆಗಳನ್ನು ಪಡೆಯುತ್ತಿದ್ದರು. ಸೋದರ ಮಾವನ ಆಶ್ರಯದಲ್ಲಿ ಬೆಳೆದ ಕೃಷ್ಣರಿಗೆ ಅತ್ಯಂತ ಬಡತನ ಪರಿಸ್ಥಿತಿಯಿತ್ತು.

ಅಂತಹುದರಲ್ಲಿಯೇ ಅಲ್ಪ- ಸ್ವಲ್ಪ ಶಾಲೆಗೆ ಹೋಗಿ ಕಲಿತು, ನಂತರ ಪ್ರಾಥಮಿಕ ಶಾಲಾ ಶಿಕ್ಷಕರಾದರು. ಆದರೆ ಇವರು ಶಾಲೆಯಲ್ಲಿ ಕಲಿತದ್ದಕ್ಕಿಂತ ಹೊರಗೆ ಕಲಿತದ್ದೇ ಹೆಚ್ಚು. ಕವಿತ್ವ ಇವರಿಗೆ ದೈವದತ್ತವಾಗಿ ಒಲಿದು ಬಂದಿತ್ತು. ತಮ್ಮ ೮ನೇಯ ವಯಸ್ಸಿನಲ್ಲಿಯೇ ಕಾವ್ಯದ ಗುಂಗಿಗೆ ಬಿದ್ದ ಕವಿಮಯಯಾಗಿದ್ದಾರೆ.

ಯಾದಗಿರಿ ಜಿಲ್ಲೆಯ ಪ್ರಥಮ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಎ. ಕೃಷ್ಣಾ ಅವರ ಅಗಲಿಕೆ ಸಾರಸ್ವತ ಲೋಕಕ್ಕೆ ಭಾರಿ ನಷ್ಟವಾಗಿದೆ. ಕನ್ನಡದ ಕಟ್ಟಾಳು ದಿ.ಎಂ.ಆರ್.ಬುದ್ಧಿವಂತ ಶೆಟ್ಟರು ಕಟ್ಟಿ ಬೆಳೆಸಿದ್ದ ರಂಗಂಪೇಟೆಯ ಕನ್ನಡ ಸಾಹಿತ್ಯ ಸಂಘಕ್ಕೆ ಬೇಂದ್ರೆಯವರು ಬಂದಿದ್ದಾಗ, ಇಲ್ಲಿಗೆ ಸಮೀಪದ ದೇವಪುರಕ್ಕೆ ಹೋಗಿ ’ಮಹಾಕವಿ ಲಕ್ಷ್ಮೀಶ’ನ ತಾಣವನ್ನು ನೋಡಿದರು. ಜೈಮಿನಿ ಭಾರತದ ಮೂಲಪ್ರತಿಯನ್ನು ಒಯ್ದರು, ಅದಕ್ಕೆ ಎ.ಕೃಷ್ಣರೇ ಪ್ರತ್ಯಕ್ಷ ಸಾಕ್ಷಿ.ಎಂದು ಯಾದಗಿರಿ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಸಿದ್ಧಪ್ಪ ಹೊಟ್ಟಿ ಅವರು ತಿಳಿಸಿದ್ದಾರೆ. 

ಹಿರಿಯ ಸಾಹಿತಿ ಎ. ಕೃಷ್ಣ ಅವರು ನಮ್ಮನ್ನು ಬಿಟ್ಟು ಅಗಲಿರುವುದು ಸಾರಸ್ವತ ಲೋಕಕ್ಕೆ ತುಂಬಲಾರದ ನಷ್ಟ. ಕಿರಿಯ ಸಾಹಿತಿಗಳಿಗೆ ಮಾರ್ಗದರ್ಶಕರಾಗಿದ್ದರು. ಕನ್ನಡ ಸಾಹಿತ್ಯ ಅಭಿವೃದ್ಧಿಗೆ ಸದಾ ತುಡಿಯುತ್ತಿದ್ದರು. ಯುವಜನತೆಯಲ್ಲಿ ಕನ್ನಡ ಸಾಹಿತ್ಯ ಓದುವ ಹವ್ಯಾಸ ಬೆಳೆಸುವ ಹುಮ್ಮಸ್ಸು ಹೊಂದಿದ್ದರು. ಹಿರಿಯ ಸಾಹಿತಿ ಮತ್ತೊಮ್ಮೆ ಹುಟ್ಟಿ ಬರಲಿ ಎಂದು ಸುರಪು ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ  ಶ್ರೀನಿವಾಸ ಜಾಲವಾದಿ ಅವರು ತಿಳಿಸಿದ್ದಾರೆ. 
 

click me!