ನಗರದ 35 ವಾರ್ಡ್‌ಗಳಲ್ಲಿರುವ ಬಹುತೇಕ ರಸ್ತೆಗಳು ಹದಗೆಟ್ಟಿದ್ದರೂ ಸಹ ಇದರ ದುರಸ್ತಿಗೆ ಯಾರೂ ಗಮನ ಹರಿಸುತ್ತಿಲ್ಲ| ಪಂಪಾನಗರದ ಪ್ರಮುಖ ರಸ್ತೆಯಿಂದ ಒಳಗೆ ಹೋಗುವ ಮಾರ್ಗಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿವೆ| ಒಳ ಚರಂಡಿ ಮತ್ತು ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಅಗೆದಿರುವ ರಸ್ತೆಗಳಲ್ಲಿ ಮಳೆ ನೀರು ನಿಂತು ದೊಡ್ಡ ಗುಂಡಿಗಳು ಬಿದ್ದಿವೆ| ಶಾಲೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ಅಟೋ ಮತ್ತು ಮಿನಿ ಬಸ್‌ಗಳು ಹರಸಾಹಸ ಪಡುತ್ತಿವೆ| ಎಷ್ಟೋ ಬಾರಿ ವಾಹನಗಳು ಸಿಕ್ಕಿ ಹಾಕಿಕೊಂಡಿವೆ|
ರಾಮಮೂರ್ತಿ ನವಲಿ
ಗಂಗಾವತಿ(ಅ.4): ನಗರದ 35 ವಾರ್ಡ್‌ಗಳಲ್ಲಿರುವ ಬಹುತೇಕ ರಸ್ತೆಗಳು ಹದಗೆಟ್ಟಿದ್ದರೂ ಸಹ ಇದರ ದುರಸ್ತಿಗೆ ಯಾರೂ ಗಮನ ಹರಿಸುತ್ತಿಲ್ಲ. ಬಂದ ಹಣ ಅಭಿವೃದ್ಧಿಗೆ ಬಳಕೆಯಾಗದೇ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ ಇತರರ ಜೇಬು ಸೇರುತ್ತಿದೆ ಎಂದು ಜನ ಸಾಮಾನ್ಯರು ಆರೋಪಿಸುತ್ತಿದ್ದಾರೆ.
undefined
ನಗರದ ಮೊದಲನೇ ವಾರ್ಡ್ 20-25 ವರ್ಷಗಳ ಹಿಂದೆ ಡಾಲರ್ಸ್ ಕಾಲೋನಿ, ಶ್ರೀಮಂತರ ಪ್ರದೇಶ ಎಂದು ಕರೆಯಲಾಗುತ್ತಿತ್ತು. ಯಾರೇ ಮನೆ ನಿರ್ಮಿಸಿಕೊಳ್ಳಬೇಕಾದರೂ ಮೊದಲು ನಿವೇಶನ ನೋಡುವುದು 1ನೇ ವಾರ್ಡಿನಲ್ಲಿಯೇ ಆಗಿತ್ತು. ಇಲ್ಲಿಯೇ ಮನೆ ನಿರ್ಮಿಸಿಕೊಳ್ಳಲು ಮೊದಲ ಆದ್ಯತೆ. ಆದರೆ ಇತ್ತೀಚಿಗೆ ಈ ವಾರ್ಡ್ ಅಭಿವೃದ್ಧಿಯಲ್ಲಿ ಹಿಂದೆ ಬೀಳುತ್ತಿದ್ದು, ಮೂಲಭೂತ ಸೌಲಭ್ಯಗಳೂ ಮರೀಚಿಕೆಯಾಗಿದೆ. ಆದ್ಯತೆಯಲ್ಲೂ ಕೊನೆಯ ಸ್ಥಾನಕ್ಕೆ ಕುಸಿದಿದೆ. 2500 ಜನಸಂಖ್ಯೆ ಇರುವ ಈ ವಾರ್ಡಿನಲ್ಲಿ ಪಂಪಾನಗರ, ರಾಂಪುರ ಪೇಟೆ ಮತ್ತು ವಾಲ್ಮೀಕಿ ವೃತ್ತದ ಕೆಲ ಪ್ರದೇಶ ಬರುತ್ತದೆ.
ಹದಗೆಟ್ಟ ರಸ್ತೆ:
ಪಂಪಾನಗರದ ಪ್ರಮುಖ ರಸ್ತೆಯಿಂದ ಒಳಗೆ ಹೋಗುವ ಮಾರ್ಗಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿವೆ. ಒಳ ಚರಂಡಿ ಮತ್ತು ಕುಡಿಯುವ ನೀರಿನ ಯೋಜನೆಯ ಕಾಮಗಾರಿಗೆ ಅಗೆದಿರುವ ರಸ್ತೆಗಳಲ್ಲಿ ಮಳೆ ನೀರು ನಿಂತು ದೊಡ್ಡ ಗುಂಡಿಗಳು ಬಿದ್ದಿವೆ. ಶಾಲೆಗೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ಅಟೋ ಮತ್ತು ಮಿನಿ ಬಸ್‌ಗಳು ಹರಸಾಹಸ ಮಾಡುವ ಪ್ರಸಂಗ ಇಲ್ಲಿ ನಿರ್ಮಾಣವಾಗಿದೆ. ಎಷ್ಟೋ ಬಾರಿ ವಾಹನಗಳು ಸಿಕ್ಕಿ ಹಾಕಿಕೊಂಡಿವೆ.
ಸರ್ಕಾರಿ ಆಸ್ಪತ್ರೆಯ ಹಿಂಭಾಗದ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ವಾರ್ಡಿನಲ್ಲಿ ವಿದ್ಯುತ್ ದೀಪಗಳು ಇಲ್ಲದೆ ಇರುವುದರಿಂದ ಕಗ್ಗತ್ತಲಾಗಿ ಪರಿಣಮಿಸಿದೆ. ನಾಗರಿಕರು ನಗರಸಭೆಗೆ ಹೋಗಿ ಪ್ರಶ್ನಿಸಿದರೆ ಅನುದಾನ ಇಲ್ಲ ಎಂಬ ಹಾರಿಕೆ ಉತ್ತರ ಸಿಗುತ್ತದೆ. ಇದರಿಂದ ಬೇಸತ್ತ ಜನರು ನಗರಸಭೆ ಮತ್ತು ಜನಪ್ರತಿನಿಧಿಗಳಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಹಕ್ಕುಪತ್ರ ಇಲ್ಲ:
ಪಂಪಾನಗರದ ಗುಡ್ಡದ ಪ್ರದೇಶದಲ್ಲಿ ವಾಸ ಮಾಡುವ ಸುಮಾರು 50 ಕ್ಕೂ ಹೆಚ್ಚು ಕುಟುಂಬಗಳಿಗೆ ನಗರಸಭೆ ಹಕ್ಕು ಪತ್ರ ವಿತರಿಸಿಲ್ಲ. ಇದರಿಂದ ಇಲ್ಲಿಯ ಜನರು ಮೂಲಭೂತ ಸೌಲಭ್ಯದಿಂದ ವಂಚಿತರಾಗಿದ್ದಾರೆ. ವಿದ್ಯುತ್ ಇಲ್ಲದೇ ಇರುವುದರಿಂದ ರಾತ್ರಿ ವೇಳೆಯಲ್ಲಿ ಚಿರತೆ, ಕರಡಿಗಳು ದಾಳಿ ಮಾಡಬಹುದೆಂದು ಸಾರ್ವಜನಿಕರು ಭಯಭೀತರಾಗಿದ್ದಾರೆ. ಎಷ್ಟೋ ಬಾರಿ ಅಲ್ಲಿಯ ಜನರು ರಾತ್ರಿ ಸಮಯದಲ್ಲಿ ಗಸ್ತು ನಡೆಸಿದ್ದಾರೆ.
ಹಕ್ಕು ಪತ್ರ ನೀಡಬೇಕೆಂದು ನಗರಸಭೆಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಸಹ ಕಾರ್ಯರೂಪಕ್ಕೆ ಬಂದಿಲ್ಲ. ಗಬ್ಬು ನಾರುತ್ತಿರುವ ಚರಂಡಿ: ಪಂಪಾನಗರ ಪ್ರದೇಶದ ರಸ್ತೆಯ ಮೇಲೆ ಕಸದ ರಾಶಿ ಬೀಳುತ್ತದೆ. ಈ ಪ್ರದೇಶದಲ್ಲಿ ನಗರಸಭೆಯಿಂದ ಯಾವುದೇ ಕಸದ ಬುಟ್ಟಿ ಇಟ್ಟಿಲ್ಲ. ಕಸದ ವಿಲೇವಾರಿಗೂ ಗಮನ ಹರಿಸುತ್ತಿಲ್ಲ. ಖಾಲಿ ಸ್ಥಳ ಅಥವಾ ರಸ್ತೆಯ ಮೇಲೆ ಜನರು ಕಸ ಹಾಕುತ್ತಿರುವುದರಿಂದ ಚರಂಡಿಗಳು ದುರ್ನಾತ ಬೀರುತ್ತಿವೆ. ೩ ದಿನಕ್ಕೊಮ್ಮೆ ಮನೆ ಮನೆಗೆ ಬರುವ ಕಸ ವಿಲೇವಾರಿ ಮಾಡುವ ಸಿಬ್ಬಂದಿಗಳು ಕೇವಲ ಮನೆಯ ಕಸ ತೆಗೆದುಕೊಂಡು ಹೋಗುತ್ತಾರೆ. ಆದರೆ, ರಸ್ತೆಯ ಮೇಲೆ ಹಾಕಲಾಗಿದ್ದ ಕಸ ಮಾತ್ರ ರಾಶಿಯಾಗಿ ಬಿದ್ದಿರುತ್ತದೆ.
ಅನುದಾನ ಇಲ್ಲದೆ ಸದಸ್ಯರ ಪರದಾಟ:
ಇಲ್ಲಿಯ ನಗರಸಭೆ ಸದಸ್ಯರು, ವಾರ್ಡಿಗೆ ಒಂದು ರೂಪಾಯಿ ಅನುದಾನ ಸಹ ಲಭ್ಯವಾಗಿಲ್ಲ ಎಂದು ಆರೋಪಿಸುತ್ತಿದ್ದಾರೆ. ರಸ್ತೆ, ಕುಡಿಯುವ ನೀರು ಮತ್ತು ವಿದ್ಯುತ್ ದೀಪಗಳಿಗೆ ಅನುದಾನ ನೀಡದ ಕಾರಣ ಇಲ್ಲಿಯ ಸದಸ್ಯರು ಪರದಾಡುವ ಪ್ರಸಂಗ ಬಂದಿದೆ. ಸದಸ್ಯರಾಗಿ ಒಂದು ವರ್ಷ ಕಳೆದರೂ ಸಹ ಅಧಿಕಾರ ಇಲ್ಲ, ಅನುದಾನ ಇಲ್ಲ, ಶಾಸಕರ ಅನುದಾನ ಇಲ್ಲದೇ ಇರುವುದರಿಂದ ವಾರ್ಡಿನ ಅಭಿವೃದ್ಧಿ
ಮರೀಚಿಕೆಯಾಗಿದೆ.
14ನೇ ಹಣಕಾಸು ಯೋಜನೆಯಲ್ಲಿ 6 ಕೋಟಿ 28 ಲಕ್ಷ ಅನುದಾನ ಬಂದಿದ್ದರೂ ಸಹ ಕಾಂಗ್ರೆಸ್ ಸದಸ್ಯರು ವಾರ್ಡ್‌ಗಳಿಗೆ ನೀಡುವ ಅನುದಾನದಲ್ಲಿ ತಾರತಮ್ಯವಾಗಿದೆ ಎಂದು ಆರೋಪಿಸಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದರಿಂದ ವಾಡ್ ಗರ್ಳ ಅಭಿವೃದ್ಧಿ ಇಂದಿಗೂ ದೂರವಾಗಿದೆ. ಇನ್ನಾದರೂ ನಗರಸಭೆ ಅಧಿಕಾರಿಗಳು, ಸ್ಥಳಿಯ ಶಾಸಕರು, ಸದಸ್ಯರು ವಾರ್ಡಿನ ಕಡೆಗೆ ಗಮನಹರಿಸುವರೇ ಕಾದು ನೋಡಬೇಕಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಈ ಬಗ್ಗೆ ಮಾತನಾಡಿದ ನಗರಸಭೆ 1ನೇ ವಾರ್ಡ್ ನ ಸದಸ್ಯ ವಾಸುದೇವ ನವಲಿ ಅವರು, ನಗರಸಭೆಯಿಂದ ಇಂದಿಗೂ ಯಾವುದೇ ಅಭಿವೃದ್ಧಿ ಅನುದಾನ ಬಂದಿಲ್ಲ, ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟು ಹೋಗಿವೆ, ಒಳ ಚರಂಡಿ ಮಂಡಳಿಯವರು ಕಾಮಗಾರಿ ನೆಪದಲ್ಲಿ ರಸ್ತೆ ಅಗೆದು ಹಾಗೇ ಬಿಟ್ಟಿದ್ದಾರೆ. ಇದರಿಂದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ನಾವು ಚುನಾಯಿತರಾಗಿ 1 ವರ್ಷ ಕಳೆದರೂ ನಗರಸಭೆಯಲ್ಲಿ ಇನ್ನೂ ಅಧಿಕಾರ ಸಿಕ್ಕಿಲ್ಲ. ನಗರಸಭೆಯ ಅಧಿಕಾರಿಗಳಿಗೆ ರಸ್ತೆ ಅಭಿವೃದ್ಧಿ ಬಗ್ಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಸಹ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿದ ಗಂಗಾವತಿ ಯುಜಿಡಿ ಎ.ಇ ಧನ್ಯಶ್ರೀ ಅವರು, ಒಳ ಚರಂಡಿ ಕಾಮಗಾರಿಗಾಗಿ ರಸ್ತೆ ಅಗೆಯಲಾಗಿದೆ. ಕಾಮಗಾರಿ ಮುಗಿಯುವ ವರೆಗೆ ರಸ್ತೆ ದುರಸ್ತಿ ಸಾಧ್ಯವಾಗುತ್ತಿಲ್ಲ. ಪಂಪಾನಗರ ಪ್ರದೇಶದಲ್ಲಿ ಕಾಮಗಾರಿ ನಡೆದಿದೆ. ಪೂರ್ಣಗೊಂಡ ನಂತರ ರಸ್ತೆ ದುರಸ್ತಿಗೊಳಿಸುತ್ತೇವೆ. ಮಳೆ ಬರುತ್ತಿರುವುದರಿಂದ ರಸ್ತೆ ದುರಸ್ತಿ ವಿಳಂಬವಾಗುತ್ತಿದೆ. ಮಳೆ ಇಲ್ಲದ ಸಂದರ್ಭದಲ್ಲಿ ರಸ್ತೆ ದುರಸ್ತಿ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.