ತಾಲೂಕಿನ ಬುಡನಾಳ ಗ್ರಾಮ ಅರಣ್ಯ ಪ್ರದೇಶದಲ್ಲಿರುವ ‘ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ವನ’ ಹಾಗೂ ‘ಅಮೃತ ಸಸ್ಯ ಸಂಜೀವಿನಿ ವನ’ದ ಕುರಿತು ಜಿಲ್ಲೆಯ ಪ್ರವಾಸಿಗರಿಗೆ ಮಾಹಿತಿಯೇ ಇಲ್ಲವಾಗಿದೆ.
ಅಜೀಜಅಹ್ಮದ ಬಳಗಾನೂರ
ಹುಬ್ಬಳ್ಳಿ (ಜೂ.5) ತಾಲೂಕಿನ ಬುಡನಾಳ ಗ್ರಾಮ ಅರಣ್ಯ ಪ್ರದೇಶದಲ್ಲಿರುವ ‘ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನ ವನ’ ಹಾಗೂ ‘ಅಮೃತ ಸಸ್ಯ ಸಂಜೀವಿನಿ ವನ’ದ ಕುರಿತು ಜಿಲ್ಲೆಯ ಪ್ರವಾಸಿಗರಿಗೆ ಮಾಹಿತಿಯೇ ಇಲ್ಲವಾಗಿದೆ.
ಹುಬ್ಬಳ್ಳಿ ನಗರದಿಂದ ಕೇವಲ 12 ಕಿಮೀಗಳ ಅಂತರದಲ್ಲಿ ಹಚ್ಚಹಸಿರಿನಿಂದ ಕಂಗೊಳಿಸುತ್ತಿರುವ ಈ ಉದ್ಯಾನ 14 ಹೆಕ್ಟೇರ್ ಪ್ರದೇಶದಲ್ಲಿ ನಿರ್ಮಾಣವಾಗಿದೆ. ಇಲ್ಲಿ ಚಿಕ್ಕಮಕ್ಕಳು ಆಟವಾಡಲು, ಹಿರಿಯರಿಗೆ ವಿಶ್ರಾಂತಿ ಪಡೆಯಲು ಬೇಕಾದ ಆಸನದ ವ್ಯವಸ್ಥೆ ಇಲ್ಲಿ ಕಲ್ಪಿಸಲಾಗಿದೆ. ಆದರೆ, ಇದರ ಬಗ್ಗೆ ಜನರಿಗೆ ಮಾಹಿತಿ ಇಲ್ಲದೇ ಹೆಚ್ಚಿನ ಜನ ಇತ್ತ ಬರುತ್ತಿಲ್ಲ.
ಮರಗಳನ್ನೇ ಮಕ್ಕಳೆಂದು ಭಾವಿಸಿರುವ ಸಾಲುಮರದ ತಿಮ್ಮಕ್ಕ
ಉದ್ಯಾನದಲ್ಲಿ ಏನೇನಿವೆ?:
ಸುಂದರವಾದ ಮಕ್ಕಳ ಉದ್ಯಾನ, ಸ್ವಾಸ್ತ್ಯ ವನ, ಬಾಲಚಿಕಿತ್ಸಾ ವನ, ಸ್ತ್ರೀ ರೋಗಗಳ ವನ, ಸೌಂದರ್ಯ ವರ್ಧಕ ವನ, ಸಾಮಾನ್ಯ ರೋಗಗಳ ವನ, ರಾಶಿ-ನಕ್ಷತ್ರ ವನ, ವ್ರತಗಳ ವನ, ಷಡ್ರಸ ವನ, ಪಂಚವಟಿ ವನ, ಮನೆಮದ್ದು ವನ, ಶಿವ ಪಂಚಾಯತ ವನ, ಅಷ್ಟದಿಕ್ಪಾಲಕರ ವನ, ನವಗ್ರಹ ವನ, ಸಪ್ತ ಋುಷಿಗಳ ವನ, ಅಗ್ರೌಷಧ ವನ, ಆಯುರ್ವೇದ ಗುಂಪುಗಳ ವನ, ಪಶು ಚಿಕಿತ್ಸಾ ವನ, ಚರಕ ವನ, ಚಿಣ್ಣರ ಆಟಿಕೆಗಳ ವನ, ಸುಗಂಧ ದ್ರವ್ಯಗಳ ವನ, ಗಿಡಮೂಲಿಕಾ ವನ, ತಪೋವನ, ಬೀಜೋತ್ಪಾದನಾ ಕೇಂದ್ರ, ಸಸ್ಯಪಾಲನಾಲಯ ಸೇರಿದಂತೆ ಹಲವು ವೈವಿದ್ಯಗಳನ್ನು ಇಲ್ಲಿ ನಿರ್ಮಿಸಲಾಗಿದೆ. ಪ್ರಾಣಿಗಳಿಗೆ ಬೇಕಾದ ಅರವಟ್ಟಿಗೆ, ಹಲವು ಪ್ರಾಣಿ- ಪಕ್ಷಿಗಳ ಜೀವನ ಕುರಿತು ಮಾಹಿತಿ ಫಲಕಗಳನ್ನು ಹಾಕಲಾಗಿದೆ.
ಬಾರದ ಜನತೆ:
ಸುಂದರ ಪ್ರಕೃತಿಯ ಮಡಿಲಲ್ಲಿ ನಿರ್ಮಾಣವಾಗಿರುವ ಈ ಉದ್ಯಾನ ಪ್ರವೇಶ ಶುಕ್ಲ ಕೇವಲ .20, ಮಕ್ಕಳಿಗೆ .10 ನಿಗದಿಗೊಳಿಸಲಾಗಿದೆ. ಹುಬ್ಬಳ್ಳಿ ನಗರಕ್ಕೂ ತುಂಬಾ ಹತ್ತಿರವಿದೆ. ಆದರೆ, ಇದರ ಕುರಿತು ಜನರಿಗೆ ಮಾಹಿತಿಯ ಕೊರತೆಯಿದ್ದು, ದಿನಕ್ಕೆ ಬೆರಳೆಣಿಕೆಯ ಜನರು ಬರುತ್ತಿದ್ದಾರೆ. ಅದೂ ಪ್ರೇಮಿಗಳೇ ಹೆಚ್ಚು. ಉದ್ಯಾನದ ಪ್ರದೇಶದಲ್ಲಿ ಎಲ್ಲಿ ನೋಡಿದರೂ ಇವರೇ ಕಾಣಸಿಗುತ್ತಾರೆ.
ಸಾಲುಮರದ ತಿಮ್ಮಕ್ಕಗೆ ಸಚಿವ ಸಂಪುಟ ದರ್ಜೆ ಸ್ಥಾನಮಾನ, ಜನ್ಮದಿನದಂದೇ ಸಿಕ್ತು ವಿಶೇಷ ಉಡುಗೊರೆ
ಈ ಮೊದಲು ಇಲ್ಲಿ ಸಸ್ಯಪಾಲನಾಲಯವಿತ್ತು. 2014-15ರಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷೋದ್ಯಾನವನ್ನಾಗಿ ಅಭಿವೃದ್ಧಿಪಡಿಸಲಾಗಿದೆ. ಈ ವನದ ಕುರಿತು ಈಗಾಗಲೇ ಹಲವು ಬಾರಿ ಪ್ರಚಾರ ಕಾರ್ಯ ಕೈಗೊಳ್ಳಲಾಗಿದೆ. ಹುಬ್ಬಳ್ಳಿಯಿಂದ 12 ಕಿಮೀ ದೂರದಲ್ಲಿರುವುದರಿಂದ ಪ್ರವಾಸಿಗರು ಆಗಮಿಸಲು ಮನಸ್ಸು ಮಾಡುತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಕುರಿತು ಹೆಚ್ಚಿನ ಪ್ರಚಾರ ಕೈಗೊಳ್ಳಲಾಗುವುದು.
ಶ್ರೀಧರ ತೆಗ್ಗಿನಮನಿ, ವಲಯ ಅರಣ್ಯಾಧಿಕಾರಿ, ಪ್ರಾದೇಶಿಕ ವಲಯ ಹುಬ್ಬಳ್ಳಿ
ಪ್ರಕೃತಿಯ ಮಡಿಲಲ್ಲಿ ಸುಂದರ ಸಸ್ಯೋದ್ಯಾನ ಮಾಡಿರುವುದು ನಮಗೆ ಸಂತಸ ತಂದಿತ್ತು. ಆದರೆ, ಸೂಕ್ತ ಪ್ರಚಾರದ ಕೊರತೆಯಿಂದಾಗಿ ಜನರು ಬರುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ಇನ್ನು ಮುಂದಾದರೂ ಸೂಕ್ತ ಕ್ರಮ ಕೈಗೊಳ್ಳಲಿ.
ರಾಮು ನಾಯಕ, ಸ್ಥಳೀಯ ನಿವಾಸಿ
ನಗರಕ್ಕೆ ಹತ್ತಿರವಾಗಿರುವ ಸುಂದರ ಉದ್ಯಾನ ಇದು. ಕುಟುಂಬ ಸಮೇತನಾಗಿ 2-3 ಬಾರಿ ಇಲ್ಲಿಗೆ ಬಂದಿದ್ದೇನೆ. ಜನರಿಲ್ಲದೇ ಯಾವಾಗಲೂ ಬಿಕೋ ಎನ್ನುತ್ತಿರುತ್ತದೆ. ಹೆಚ್ಚಿನ ರೀತಿಯಲ್ಲಿ ಪ್ರಚಾರ ಕಾರ್ಯವೂ ನಡೆಯಬೇಕು.
ಅನಿಲ ಕುರ್ತಕೋಟಿ, ಧಾರವಾಡ