1446 ಜನರು ಉತ್ತರ ಪ್ರದೇಶಕ್ಕೆ| ಆರೋಗ್ಯ ತಪಾಸಣೆ ಮಾಡಿಸಿ ಕಳುಹಿಸಿಕೊಡಲಾಯಿತು|ನೈಋುತ್ಯ ರೈಲ್ವೆಯಿಂದ ಉತ್ತರ ಪ್ರದೇಶಕ್ಕೆ ಇದೆ ಮೊದಲ ಬಾರಿಗೆ ಶ್ರಮಿಕ್ ಎಕ್ಸ್‌ಪ್ರೆಸ್ ತೆರಳಿದೆ| ಮಧ್ಯಾಹ್ನ 12.22ಕ್ಕೆ ಇಲ್ಲಿಂದ ಹೊರಟ ರೈಲು ಉತ್ತರ ಪ್ರದೇಶದ ಲಕ್ನೋ ಮೂಲಕ ಬಸ್ತಿ, ಅಜಮಘಡ ತಲುಪಲಿದೆ| ರಸ್ತೆಬದಿ ಫಾಸ್ಟ್‌ಫುಡ್, ಬಟ್ಟೆ ವ್ಯಾಪಾರಿ, ಪಾತ್ರೆ ವ್ಯಾಪಾರಿಗಳು, ಖಾಸಗಿ ಕಂಪನಿಗಳ ಉದ್ಯೋಗಿಗಳು ತೆರಳಿದ್ದಾರೆ|
ಹುಬ್ಬಳ್ಳಿ(ಮೇ.18): ಇಲ್ಲಿನ ನೈಋುತ್ಯ ರೈಲ್ವೆ ನಿಲ್ದಾಣದಿಂದ ಭಾನುವಾರ ಮಧ್ಯಾಹ್ನ ವಿವಿಧ ಜಿಲ್ಲೆಗಳ 1446 ಜನರು ಉತ್ತರ ಪ್ರದೇಶಕ್ಕೆ ಶ್ರಮಿಕ್ ಎಕ್ಸ್‌ಪ್ರೆಸ್ (07303) ಮೂಲಕ ತೆರಳಿದರು. ಇಂದು(ಸೋಮವಾರ) ಕೂಡ ಯುಪಿಗೆ ರೈಲು ತೆರಳಲಿದ್ದು, ಸಾವಿರಾರು ಕಾರ್ಮಿಕರು ಹೊರಡಲಿದ್ದಾರೆ.
ನೈಋುತ್ಯ ರೈಲ್ವೆಯಿಂದ ಉತ್ತರ ಪ್ರದೇಶಕ್ಕೆ ಇದೆ ಮೊದಲ ಬಾರಿಗೆ ಶ್ರಮಿಕ್ ಎಕ್ಸ್‌ಪ್ರೆಸ್ ತೆರಳಿದೆ. ಮಧ್ಯಾಹ್ನ 12.22ಕ್ಕೆ ಇಲ್ಲಿಂದ ಹೊರಟ ರೈಲು ಉತ್ತರ ಪ್ರದೇಶದ ಲಕ್ನೋ ಮೂಲಕ ಬಸ್ತಿ, ಅಜಮಘಡ ತಲುಪಲಿದೆ. ಕಳೆದ ಮೂರು ದಿನಗಳಿಂದಲೆ ಸೇವಾಸಿಂಧು ಮೂಲಕ ಯುಪಿಗೆ ತೆರಳಲು ನೋಂದಣಿ ಕಾರ್ಯ ಆರಂಭವಾಗಿತ್ತು. ಹೆಚ್ಚಾಗಿ ರಸ್ತೆಬದಿ ಫಾಸ್ಟ್‌ಫುಡ್, ಬಟ್ಟೆ ವ್ಯಾಪಾರಿ, ಪಾತ್ರೆ ವ್ಯಾಪಾರಿಗಳು, ಖಾಸಗಿ ಕಂಪನಿಗಳ ಉದ್ಯೋಗಿಗಳು ತೆರಳಿದ್ದಾರೆ. ಬೆಳಗ್ಗೆ ಹುಬ್ಬಳ್ಳಿ ಹೊಸ ಬಸ್ ನಿಲ್ದಾಣಕ್ಕೆ ಆಗಮಿಸಿದ ಕಾರ್ಮಿಕರಿಗೆ ಥರ್ಮಲ್ ಸ್ಕ್ರೀನಿಂಗ್ ಪರೀಕ್ಷೆ ಮಾಡಲಾಯಿತು. ಜಿಲ್ಲಾಡಳಿತ ಹೊಸ ಬಸ್ ನಿಲ್ದಾಣದಿಂದ ಬಸ್ ಮೂಲಕ ಕಾರ್ಮಿಕರನ್ನು ರೈಲ್ವೆ ನಿಲ್ದಾಣಕ್ಕೆ ಕರೆದುಕೊಂಡು ಹೋಗುವ ವ್ಯವಸ್ಥೆ ಮಾಡಿತು. ಅಲ್ಲಿ ಕಾರ್ಮಿಕರಿಗೆ ಮಧ್ಯಾಹ್ನ ಊಟವನ್ನು ಪೂರೈಕೆ ಮಾಡಲಾಯಿತು. ಒಂದೊಂದು ಬೋಗಿಯಲ್ಲಿ 70 ಜನರಂತೆ 22 ಬೋಗಿಗಳಲ್ಲಿ ಜನರನ್ನು ಕಳಿಸಲಾಗಿದೆ.
ಲಾಕ್‌ಡೌನ್: ಮಂಗಳೂರಿಂದ ನಡೆದು ಹುಬ್ಬಳ್ಳಿಗೆ ಬಂದಿದ್ದವರು ಇಲ್ಲಿಂದರೂ ಕಾಲ್ಕಿತ್ತರು..!
ಪರದಾಡಿದ ಯುವಕರು
ಇನ್ನು, ಬಿಹಾರಕ್ಕೂ ಭಾನುವಾರ ಇಲ್ಲಿಂದ ರೈಲು ತೆರಳಬೇಕಿತ್ತು. ಆದರೆ, ಶನಿವಾರ ರೈಲನ್ನು ರದ್ದುಗೊಳಿಸಲಾಗಿತ್ತು. ಇದನ್ನು ಅರಿಯದ ವಿವಿಧ ಜಿಲ್ಲೆಗಳ ಬಿಹಾರಿಗಳು ತಮ್ಮೂರಿಗೆ ತೆರಳುವ ಹುಮ್ಮಸ್ಸಿನಿಂದ ಆಗಮಿಸಿದ್ದರು. ಶನಿವಾರ ರಾತ್ರಿಯೆ ಆಗಮಿಸಿದ್ದ ಇವರು ಇಲ್ಲಿನ ಲ್ಯಾಮಿಂಗ್ಟನ್ ರಸ್ತೆಯಲ್ಲೆ ವಾಸ್ತವ್ಯ ಹೂಡಿ ನಿದ್ರಿಸಿದ್ದರು. ಆದರೆ, ರೈಲು ರದ್ದಾದ ಕಾರಣದಿಂದ ಪರದಾಡಿದರು. ವಿಷಯ ತಿಳಿಯುತ್ತಿದ್ದಂತೆ ಬೇಸರ ವ್ಯಕ್ತಪಡಿಸಿದರು.