Mangaluru Beef Stalls Row: ಬೀಫ್ ಸ್ಟಾಲ್ ಕೈಬಿಡದಿದ್ರೆ ಮಾರ್ಕೆಟ್ ಶಂಕು ಸ್ಥಾಪನೆಗೆ ಹೋಗಲ್ಲ: ಶಾಸಕ ವೇದವ್ಯಾಸ ಕಾಮತ್

By Suvarna News  |  First Published Nov 7, 2022, 3:47 PM IST

Mangaluru Beef Stalls Row: ಬೀಫ್ ಸ್ಟಾಲ್ ಯೋಜನೆ ಕೈ ಬಿಡದಿದ್ದರೆ ಮಾರ್ಕೆಟ್ ಶಂಕುಸ್ಥಾಪನೆಗೆ ಹೋಗಲ್ಲ ಎಂದು ಮಂಗಳೂರು ಉತ್ತರ ಶಾಸಕ ವೇದವ್ಯಾಸ ಕಾಮತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ


ವರದಿ: ಭರತ್ ರಾಜ್, ಏಷ್ಯಾನೆಟ್ ಸುವರ್ಣ ನ್ಯೂಸ್, ಮಂಗಳೂರು

ಮಂಗಳೂರು (ನ. 07): ಮಂಗಳೂರು ಸ್ಮಾರ್ಟ್ ಸಿಟಿ (Mangaluru Smart City) ಯೋಜನೆಯಡಿ ನಿರ್ಮಾಣವಾಗುತ್ತಿರುವ ನೂತನ ಸೆಂಟ್ರಲ್ ಮಾರ್ಕೆಟ್ ಕಟ್ಟಡದಲ್ಲಿ 9 ಬೀಫ್ ಸ್ಟಾಲ್ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿ ಮಂಗಳೂರು ಉತ್ತರ ಶಾಸಕ ವೇದವ್ಯಾಸ ಕಾಮತ್ (Vedavyas Kamath) ಗರಂ ಆಗಿದ್ದು, ಬೀಫ್ ಸ್ಟಾಲ್ ಯೋಜನೆ ಕೈ ಬಿಡದೇ ಇದ್ದರೆ ಮಾರ್ಕೆಟ್ ಶಂಕುಸ್ಥಾಪನೆಗೆ ಹೋಗಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಮಂಗಳೂರಿನಲ್ಲಿ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, 9 ಬೀಫ್ ಸ್ಟಾಲ್ ನಿರ್ಮಾಣದ ಬಗ್ಗೆ ವಿಎಚ್‌ಪಿ (VHP) ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಮಾರುಕಟ್ಟೆ ನನ್ನ ಕ್ಷೇತ್ರದ ಪುರಾತನ ಮಾರುಕಟ್ಟೆ. ನಾನು ನಾಲ್ಕು ವರ್ಷದಿಂದ ಶಾಸಕನಾದ್ರೂ ನಾನು ಸ್ವಯಂ ಸೇವಕ ಸಂಘದ ಸೇವಕ‌. ಇಲ್ಲಿ ಬೀಪ್ ಸ್ಟಾಲ್ ನಿರ್ಮಾಣದ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ ಎಂದರು. 

Tap to resize

Latest Videos

ನಿರ್ಮಾಣ ಆಗಲಿರುವ ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್ ಯೋಜನೆ ಕೈ ಬಿಡಬೇಕು.‌ ಇಲ್ಲದಿದ್ರೆ ನಾನು ಮುಂದಿನ ದಿನದಲ್ಲಿ ಇದ್ರ ಶಂಕುಸ್ಥಾಪನೆಗೂ ಹೋಗಲ್ಲ ಎಂದ ಅವರು "ಈ ಹಿಂದಿನ ಸರ್ಕಾರದಲ್ಲಿ ಈ ಕಟ್ಟಡದ ಯೋಜನೆ ಹಾಕಲಾಗಿತ್ತು‌. ಆದ್ರೆ ಬಿಜೆಪಿ ಸರ್ಕಾರ ಇತ್ತೀಚಿಗೆ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತಂದಿದೆ. ಆದ್ರೆ ಈ ಹಿಂದೆನೇ ಕಾಮಗಾರಿ ಆಗಬೇಕಿತ್ತು. ಆದ್ರೆ ಕಾಂಗ್ರೆಸ್ ಇದಕ್ಕೆ ಕೋರ್ಟ್‌ ನಿಂದ ಸ್ಟೇ ತಂದಿತ್ತು.‌ ಇಲ್ಲಿ ವಿವಿಧ ಯೋಜನೆಗಳಿಗೆ ಕಾಂಗ್ರೆಸ್ ಅಡ್ಡಿ ಪಡಿಸಿದೆ. ಈ ಯೋಜನೆ ಈ ಹಿಂದೆ ಅನುಷ್ಠಾನ ಆಗಿತ್ತು. ಆದ್ರೆ ಗೋ ಹತ್ಯೆ ನಿಷೇಧದ ಬಳಿಕ ಈ ಯೋಜನೆ ಬದಲಾವಣೆಗೆ ಗಮನ ಹರಿಸಿರಲಿಲ್ಲ. ಸದ್ಯ ನಾವು ಈ ವಿಚಾರದ ಬಗ್ಗೆ ಗಮನ ಹರಿಸ್ತೇವೆ‌" ಎಂದರು. 

"ಸೆಂಟ್ರಲ್ ಮಾರ್ಕೆಟ್ ನಲ್ಲಿ ಯಾವುದೇ ಬೀಪ್ ಸ್ಟಾಲ್ ಆಗದಂತೆ ನೋಡ್ತೇವೆ. ಅಕ್ರಮ ಕಸಾಯಿ ಖಾನೆ ಬಗ್ಗೆ ಎಲ್ಲಾ ಶಾಸಕರು ಜಾಗೃತರಾಗಿದ್ದಾರೆ. ಎಲ್ಲೇ ಅಕ್ರಮ ಕಸಾಯಿ ಖಾನೆ ಇದ್ದರೂ ಅಂತಹ ಸ್ಥಳ ಗುರುತಿಸಿ ಸರ್ಕಾರದ ಮೂಲಕ ಆಸ್ತಿ ಮುಟ್ಟುಗೋಲು ಹಾಕಲಾಗುತ್ತೆ‌. ಈ ಬಗ್ಗೆ ಈಗಾಗಲೇ ಹಲವು ಆಸ್ತಿ ಕಾನೂನು ಮೂಲಕ ಜಪ್ತಿ ಮಾಡಲಾಗಿದೆ. ಈ ಮೂಲಕ ಗೋ ಹತ್ಯೆ ನಿಷೇಧ ಮಾಡಿ ಜನ್ರಲ್ಲಿ ಜಾಗೃತಿ ಮೂಡಿಸಲಾಗುತ್ತೆ ಎಂದು ಕಾಮತ್‌ ಹೇಳಿದರು. 

ಇದನ್ನೂ ಓದಿ: ಮಂಗಳೂರಿನಲ್ಲಿ 9 ಬೀಫ್ ಸ್ಟಾಲ್​ಗೆ ಅವಕಾಶ: ವಿಶ್ವ ಹಿಂದೂ ಪರಿಷತ್‌ ಕಿಡಿ

ಏನಿದು 'ಬೀಫ್ ಸ್ಟಾಲ್' ವಿವಾದ?: ಬಿಜೆಪಿ ಆಡಳಿತದ ಮಂಗಳೂರು ಮಹಾನಗರ ಪಾಲಿಕೆಯಿಂದಲೇ ಬೀಫ್ ಸ್ಟಾಲ್ ನಿರ್ಮಾಣ ಯೋಜನೆ ಹಾಕಲಾಗಿದೆ. ಇದರ ವಿರುದ್ದ ವಿಶ್ವಹಿಂದೂ ಪರಿಷತ್ ಕೆಂಡ ಕಾರಿದ್ದು, ಶಾಸಕ ವೇದವ್ಯಾಸ ಕಾಮತ್‌ಗೂ ಮನವಿ ಸಲ್ಲಿಸಿದೆ. ಮಂಗಳೂರಿನ ನೂತನ ಸೆಂಟ್ರಲ್ ಮಾರ್ಕೆಟ್ ನಿರ್ಮಾಣ ಯೋಜನೆಯಲ್ಲಿ ಬೀಫ್ ಸ್ಟಾಲ್ ಗಳಿಗೆ ಅವಕಾಶ ನೀಡಲಾಗಿದೆ.‌ 9 ಬೀಫ್ ಸ್ಟಾಲ್ ನಿರ್ಮಾಣದ ನೀಲ ನಕಾಶೆ ಸಿದ್ದವಾಗಿದ್ದು, 114 ಕೋಟಿ ವೆಚ್ಚದಲ್ಲಿ ನೂತನ ಸೆಂಟ್ರಲ್ ‌ಮಾರ್ಕೆಟ್ ನಿರ್ಮಾಣವಾಗಲಿದೆ. 

ನೂತ‌ನ ಸೆಂಟ್ರಲ್ ಮಾರ್ಕೆಟ್‌ನ ಲೋವರ್ ಗ್ರೌಂಡ್ ಫ್ಲೋರ್ ನಲ್ಲಿ 9 ಭೀಫ್ ಸ್ಪಾಲ್ ಗೆ ಅವಕಾಶ ನೀಡಿರೋ ಮಾರ್ಕೆಟ್‌ನ ತ್ರೀಡಿ ನಕಾಶೆ ಸದ್ಯ ಸ್ಮಾರ್ಟ್ ಸಿಟಿ ಮಂಡಳಿ ಮುಂದಿದೆ‌. ನಕಾಶೆಯಲ್ಲಿ 9 ಬೀಫ್ ಸ್ಟಾಲ್‌ಗಳ ಬಗ್ಗೆ ಉಲ್ಲೇಖಿಸಿ ಮ್ಯಾಪ್ ರೆಡಿಯಾಗಿದೆ. 18 ತಿಂಗಳಲ್ಲಿ ‌ನಿರ್ಮಾಣಗೊಳ್ಳಲಿರೋ ನೂತನ ಸೆಂಟ್ರಲ್ ‌ಮಾರ್ಕೆಟ್ ಕಟ್ಟಡ ಇದಾಗಿದ್ದು, ಸರ್ಕಾರಿ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಾಣಗೊಳ್ಳಲಿದೆ.

ಕಟ್ಟಡ ನಿರ್ಮಾಣಗೊಂಡ ನಂತರ ಮಂಗಳೂರು ಪಾಲಿಕೆಯಿಂದಲೇ ಸ್ಟಾಲ್‌ಗಳ ಏಲಂ ನಡೆಯಲಿದ್ದು, ಪ್ರಸ್ತಾವಿತ ಯೋಜನೆಯಲ್ಲಿ ಬೀಫ್ ಸ್ಟಾಲ್‌ಗೆ ಅವಕಾಶ ಕೊಟ್ಟಿದ್ದಕ್ಕೆ ವಿಎಚ್‌ಪಿ ಕಿಡಿ ಕಾರಿದೆ. ತರಕಾರಿ, ಕೋಳಿ ಅಂಗಡಿಗಳ ಜೊತೆಗೆ ಬೀಫ್ ಸ್ಟಾಲ್ ಗೆ ಅವಕಾಶ ನೀಡಲಾಗಿದೆ. ಗೋ ಹತ್ಯೆ ನಿಷೇಧ ಕಾಯ್ದೆ ಬಳಿಕವೂ ಬಿಜೆಪಿಯಿಂದ ಬೀಫ್ ಸ್ಟಾಲ್‌ಗೆ ಅವಕಾಶ ಸರಿಯಲ್ಲ. ಪಾಲಿಕೆ ಮತ್ತು ಸ್ಮಾರ್ಟ್ ಸಿಟಿ ಮಂಡಳಿ ತಕ್ಷಣ ಈ ಯೋಜನೆ ಕೈ ಬಿಡಬೇಕು. ಕೈ ಬಿಡದೇ ಇದ್ದಲ್ಲಿ ಉಗ್ರ ಹೋರಾಟ ನಡೆಸುವುದಾಗಿ ವಿಎಚ್‌ಪಿ ಕರ್ನಾಟಕ ದಕ್ಷಿಣ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್ ವೆಲ್ ಎಚ್ಚರಿಕೆ ನೀಡಿದ್ದಾರೆ.

click me!