ರಿಯಾಜಅಹ್ಮದ ಎಂ ದೊಡ್ಡಮನಿ
ಡಂಬಳ (ನ.7) : ಹೋಬಳಿಯ ವ್ಯಾಪ್ತಿಯಲ್ಲಿ ಈಚೆಗೆ ಸುರಿದ ಮಳೆಗೆ ಈರುಳ್ಳಿ ಬೆಳೆಯು ಸಂಪೂರ್ಣವಾಗಿ ಹಾಳಾಗಿ ಹೋಗಿದ್ದು, ಅಳುದುಳಿದ ಬೆಳೆಗಳನ್ನು ಮಾರಾಟ ಮಾಡಲು ಮಾರುಕಟ್ಟೆಗೆ ಹೋದರೆ ಅಲ್ಲಿಯೂ ಬೆಲೆ ಕುಸಿತದ ಬರೆ ರೈತನಿಗೆ ಬೀಳುತ್ತಿದೆ.
ಈರುಳ್ಳಿ ಬೆಳೆದ ರೈತರ ಕಣ್ಣಲ್ಲಿ ನಿಲ್ಲದ ಕಣ್ಣೀರು..!
ಡಂಬಳ, ಮೇವುಂಡಿ, ಬರದೂರ, ಮುರಡಿ, ಅತ್ತಿಕಟ್ಟಿತಾಂಡಾ, ಡೋಣಿ, ಪೇಠಾಲೂರ, ಡೋಣಿ ತಾಂಡಾ, ಶಿವಾಜಿ ನಗರ, ಚುರ್ಚಿಹಾಳ, ಜಂತ್ಲಿ ಶಿರೂರ, ಹಳ್ಳಿಕೇರಿ, ಹಳ್ಳಿಗುಡಿ, ವೆಂಕಟಾಪುರ, ಡ.ಸಾ. ರಾಮೇನಳ್ಳಿ, ಯಕ್ಲಾಸಪುರ, ಬರದೂರ ಗ್ರಾಮಗಳಲ್ಲಿ ಸಾವಿರಾರು ಹೆಕ್ಟೇರ್ ಬೆಳೆದಿದ್ದ ಈರುಳ್ಳಿ ಬೆಳೆ ಸತತವಾಗಿ ಸುರಿದ ಮಳೆಗೆ ಹಾಳಾಗಿದೆ. ಅದರಲ್ಲಿಯೆ ಅಳಿದುಳಿದ ಈರುಳ್ಳಿ ಬೆಳೆಗೆ ಸರಿಯಾದ ಬೆಲೆ ಸಿಗದೆ ರೈತರ ಬದುಕಿಗೆ ಕಣ್ಣೀರು ತರಿಸುತ್ತಿದೆ.
ಈರುಳ್ಳಿ ಬೆಲೆ ಕುಸಿತದಿಂದ ಆರ್ಥಿಕ ತೊಂದರೆಯಲ್ಲಿರುವ ರೈತರಿಗೆ ಸೂಕ್ತ ಪರಿಹಾರ ನೀಡಬೇಕು ಮತ್ತು ಖರೀದಿ ಕೇಂದ್ರಗಳನ್ನು ತೆರೆಯಲು ಮುಂದಾಗಬೇಕು ಎನ್ನುವುದು ರೈತರ ಬೇಡಿಕೆಯಾಗಿದೆ.
ಸತತ ಮಳೆಗೆ ಕೊಳೆತ ಈರುಳ್ಳಿ:
ತಾಲೂಕಿನಲ್ಲಿ ಸಾವಿರಾರು ಹೆಕ್ಟೇರ್‌ನಲ್ಲಿ ಬೆಳೆದ ಈರುಳ್ಳಿ ಬೆಳೆಗಳಲ್ಲಿ ಅಲ್ಪ ಸ್ವಲ್ಪ ಉಳಿದ ಈರುಳ್ಳಿಯನ್ನು ಕೊಯ್ಲು ಮಾಡಿ ಮಾರಾಟ ಮಾಡಬೇಕೆಂದರೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಇಲ್ಲದೆ ಕಾರಣ ಕೆಲ ರೈತರು ತಾವು ಬೆಳೆದ ಈರುಳ್ಳಿಯನ್ನು ಮಾರುಕಟ್ಟೆಗೆ ಸಾಗಿಸದೆ ಹೊಲದಲ್ಲಿಯೇ ಬಿಟ್ಟಿದ್ದಾರೆ
ಜಮೀನನ್ನು ಹದಗೊಳಿಸುವುದು, ಬಿತ್ತನೆ ಮಾಡುವುದರಿಂದ ಹಿಡಿದು ಕೀಳುವ ವರೆಗೆ ರೈತರು ಸಾಕಷ್ಟುಖರ್ಚು ಮಾಡಿದ್ದಾರೆ. ಒಂದು ಎಕರೆಗೆ .50ರಿಂದ 60 ಸಾವಿರ ವರೆಗೆ ವ್ಯಯವಾಗಿದೆ. ಆದರೆ, .800ರಿಂದ .1 ಸಾವಿರದ ವರೆಗೆ ಮಾತ್ರ ಮಾರಾಟ ಮಾಡಲಾಗುತ್ತಿದೆ.
ಬೆಂಗಳೂರಿಗೆ ಈರುಳ್ಳಿ ಮಾರಲು ಹೋದ ಡಂಬಳ ಹಾಗೂ ಸುತ್ತಮುತ್ತಲಿನ ರೈತರು ಪೇಚಿಗೆ ಸಿಲುಕಿದ ಸಂದರ್ಭಗಳಿವೆ. ಅಲ್ಲಿ ಸೂಕ್ತ ಬೆಲೆ ಸಿಗದೆ ಲಾರಿ ಬಾಡಿಗೆ ಭರಿಸಲು ಆಗದೆ ಸಾಲ-ಸೋಲ ಮಾಡಿ ಗ್ರಾಮಕ್ಕೆ ಮರಳಿದ ಉದಾಹರಣೆಗಳಿವೆ.
ಬೆಲೆ ಕುಸಿತ: 5 ಎಕರೆ ಸಮೃದ್ಧವಾಗಿ ಬೆಳೆದು ನಿಂತ ಈರುಳ್ಳಿ ಬೆಳೆ ನಾಶ ಮಾಡಿದ ರೈತ!
2 ಎಕರೆಗೆ ಸುಮಾರು .1 ಲಕ್ಷದ ವರೆಗೆ ಖರ್ಚು ಮಾಡಿರುವ ನಮಗೆ ಒಂದು ಕಡೆ ನಿರಂತರ ಮಳೆಗೆ ಬೆಳೆ ಹಾಳಾಗಿದೆ. ಅಳಿದುಳಿದ ಈರುಳ್ಳಿ ಬೆಳೆಗೆ ಬೆಲೆ ಇಲ್ಲದೆ ನಷ್ಟಕ್ಕೆ ಕಾರಣವಾಗಿದೆ. ಸರ್ಕಾರ ಇಂತಹ ಸಂದರ್ಭದಲ್ಲಿ ಸೂಕ್ತ ಪರಿಹಾರ ಒದಗಿಸಲು ಮುಂದಾಗಬೇಕು.
ಹಾಲಪ್ಪ ಹರ್ತಿ, ಈರಣ್ಣ ನಂಜಪ್ಪನವರ, ಹನುಮಂತಪ್ಪ ಚವಡಕಿ, ಪೇಠಾಲೂರ, ಡಂಬಳ ಗ್ರಾಮದ ರೈತರು