ಬಳ್ಳಾರಿ ಜಿಪಂನ ಮೊದಲ ಮಹಿಳಾ ಅಧಿಕಾರಿ ನಂದಿನಿ| ಜಿಪಂ ಅಧ್ಯಕ್ಷೆ-ಉಪಾಧ್ಯಕ್ಷೆ-ಸಿಇಒ ಮೂವರು ಮಹಿಳೆಯರು| ಈ ಮೂಲಕ ಬಳ್ಳಾರಿ ಜಿಪಂ ಸಂಪೂರ್ಣ ವನಿತಾ ಕೈವಶ|
ಬಳ್ಳಾರಿ(ಆ.26): ಜಿಲ್ಲಾ ಪಂಚಾಯಿತಿ ಸಿಇಒ ಕೆ. ನಿತೀಶ್ ಅವರ ವರ್ಗಾವಣೆಯಾಗಿದ್ದು, ಅವರ ಸ್ಥಾನಕ್ಕೆ ತುಮಕೂರು ಜಿಲ್ಲೆಯ ತಿಪಟೂರು ಸಹಾಯಕ ಆಯುಕ್ತೆ ಕೆ.ಆರ್. ನಂದಿನಿ ನೇಮಕಗೊಂಡಿದ್ದಾರೆ. ಈ ಮೂಲಕ ಬಳ್ಳಾರಿ ಜಿಪಂ ಸಂಪೂರ್ಣ ವನಿತಾ ಕೈವಶವಾದಂತಾಗಿದೆ. ಇನ್ನೇನಿದ್ದರೂ ಇಲ್ಲಿ ವನಿತೆಯರ ದರ್ಬಾರ್! ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ, ಉಪಾಧ್ಯಕ್ಷೆ ಮಹಿಳೆಯರಾಗಿದ್ದು, ಇದೀಗ ಸಿಇಒ ಸಹ ಮಹಿಳೆ ನೇಮಕಗೊಳ್ಳುತ್ತಿರುವುದು ವಿಶೇಷ.
ನಂದಿನಿ ಅವರು ಕೋಲಾರ ಜಿಲ್ಲೆಯವರು. ಇವರು 2017ರ ಬ್ಯಾಚಿನ ಐಎಎಸ್ ಅಧಿಕಾರಿಯಾಗಿದ್ದು, ಇಲ್ಲಿನ ಜಿ.ಪಂ.ನ 39ನೇ ಸಿಇಒ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ವಿಶೇಷ ಎಂದರೆ ಬಳ್ಳಾರಿ ಜಿಲ್ಲಾ ಪಂಚಾಯಿತಿಗೆ ಮೊದಲ ಮಹಿಳಾ ಅಧಿಕಾರಿ ಇವರು. ಈ ಹಿಂದೆ ಜಿಲ್ಲಾಧಿಕಾರಿಗಳಾಗಿದ್ದ ಗೌರಿ ತ್ರಿವೇದಿ ಹಾಗೂ ಡಾ. ಎನ್. ಮಂಜುಳಾ ಅವರು ಜಿ.ಪಂ. ಪ್ರಭಾರಿಯಾಗಿ ಕೆಲ ತಿಂಗಳು ಕಾರ್ಯನಿರ್ವಹಿಸಿದ್ದರು. ಕಳೆದ ವರ್ಷ ಪೊಬೆಷನರಿಯಾಗಿ ಕೆಲವು ತಿಂಗಳು ಕಾಲ ನಂದಿನಿ ಅವರು ಬಳ್ಳಾರಿಯಲ್ಲಿ ತರಬೇತಿ ಪಡೆದಿದ್ದರು.
ಮೇಲಾಧಿಕಾರಿ ಕಿರುಕುಳ: ಬ್ಯಾಂಕಲ್ಲಿ live ಸೂಸೈಡ್ ಮಾಡ್ಕೊಂಡ ಲೀಗಲ್ ಅಡ್ವೈಸರ್
ಜಿ.ಪಂ. ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಹಾಗೂ ಉಪಾಧ್ಯಕ್ಷೆ ದೀನಾ ಮಂಜುನಾಥ್ ಅವರು ತಮ್ಮ ಪರಿಮಿತಿಯಲ್ಲಿ ಅತ್ಯುತ್ತಮ ಕೆಲಸ ಮಾಡಿಕೊಂಡಿದ್ದು ಇದೀಗ ಸಿಇಒ ಆಗಿ ನೇಮಕವಾಗಿರುವ ನಂದಿನಿ ಸಹ ಅತ್ಯುತ್ತಮ ಕೆಲಸಗಾರರು ಎಂದು ಹೆಸರು ಪಡೆದಿದ್ದಾರೆ. ಹೀಗಾಗಿ ಜಿಲ್ಲೆಯ ಗ್ರಾಮೀಣ ಭಾಗಗಳ ಅಭಿವೃದ್ಧಿ ನೆಲೆಯಲ್ಲಿ ಒಂದಷ್ಟು ನೆರವಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.