ಚಿನ್ನಕ್ಕಾಗಿ ದೊಡ್ಡ ಕೆರೆಯ ನೀರು ಖಾಲಿ ಮಾಡಲು ಮುಂದಾದರು

By Kannadaprabha NewsFirst Published Dec 14, 2020, 1:26 PM IST
Highlights

ಚಿನ್ನಕ್ಕಾಗಿ ಜನರು ದೊಡ್ಡದ ಕೆರೆಯ ನೀರನ್ನು ಸಂಪೂರ್ಣ ಖಾಲಿ ಮಾಡಲು ಮುಂದಾಗಿದ್ದರು. ಮಹಿಳೆ ಮಾತಿನಿಂದ ಈ ನಿರ್ಧಾರ ಕೈಗೊಂಡಿದ್ದರು. 

ರಾಮನಗರ (ಡಿ.14):  ಮಹಿಳೆಯೊಬ್ಬರ ಮಾತು ನಂಬಿಕೊಂಡು ಕಳೆದು ಹೋಗಿದ್ದ ಚಿನ್ನದ ಸರ ಹುಡುಕಲು ಇಡೀ ಕೆರೆಯನ್ನೇ ಬರಿದು ಮಾಡಲು ಗ್ರಾಮದ ಜನರು ಮುಂದಾಗಿದ್ದರು. ಆದರೆ, ಅದೃಷ್ಟವಶಾತ್‌ ವ್ಯಕ್ತಿಯೊಬ್ಬರು ನೀಡಿದ ದೂರಿನ ಮೇರೆಗೆ ಕೆರೆ ಬರಿದು ಮಾಡುವ ಕಾರ್ಯ ಸ್ಥಗಿತಗೊಂಡಿದೆ.

ಇಂತ​ಹ​ದೊಂದು ವಿಲ​ಕ್ಷ​ಣ​ಕಾರಿ ಘಟನೆ ನಡೆ​ದಿ​ರು​ವುದು ರಾಮ​ನ​ಗರ ತಾಲೂ​ಕಿನ ಬಿಳ​ಗುಂಬ ಗ್ರಾಮ​ದಲ್ಲಿ. ಸ್ಥಳೀಯ ವಾಸಿ ಸವಿತಾ ಎಂಬು​ವರ ಚಿನ್ನದ ಒಡ​ವೆಗಳನ್ನು ಮೂರು ದಿನ​ಗಳ ಹಿಂದೆ ಮನೆ​ಯಿಂದ ಕಾಣೆ​ಯಾ​ಗಿ​ದ್ದವು.

ಈ ವಿಚಾ​ರ​ವಾಗಿ ಮನೆ​ಯಲ್ಲಿ ಪತಿ ಭಗ​ವಂತ ಮತ್ತು ಸವಿತಾ ನಡುವೆ ​ಪ್ರ​ತಿ​ನಿತ್ಯ ಜಗಳ ನಡೆ​ಯು​ತ್ತಿ​ತ್ತು. ಇದ​ರಿಂದ ರೋಸಿ ಹೋದ ಸವಿತಾ ತನ್ನ​ಲ್ಲಿದ್ದ ಮಾಂಗಲ್ಯ ಸರ, ಚಿನ್ನದ ಬಳೆ, ಉಂಗುರ ಸೇರಿ​ದಂತೆ ಬರೋ​ಬ್ಬರಿ 250 ಗ್ರಾಂ ಚಿನ್ನದ ಒಡ​ವೆ​ಗ​ಳನ್ನು ಕವರ್‌ನಲ್ಲಿ ಕಟ್ಟಿಹಲ​ಗೇ​ಗೌ​ಡನ ಕಟ್ಟೆಕೆರೆಗೆ ಎಸೆ​ದಿ​ದ್ದಾಗಿ ಸುಳ್ಳು ಹೇಳಿ​ದ್ದಾ​ರೆ. ಇದನ್ನೇ ಸತ್ಯ​ವೆಂದು ನಂಬಿ​ಕೊಂಡ ಗ್ರಾಮದ ಮುಖಂಡರು ಸಭೆ ಸೇರಿ​ದ್ದಾರೆ. ಇಡೀ ಕೆರೆಯ ನೀರನ್ನು ಬರಿದು ಮಾಡಿ, ಚಿನ್ನ​ವಿ​ರುವ ಕವರ್‌ ಅನ್ನು ಹೊರ ತೆಗೆ​ಯಲು ನಿರ್ಧಾರ ಕೈಗೊಂಡಿ​ದ್ದಾ​ರೆ. ಬಿಳಗುಂಬ ಗ್ರಾಪಂ ಎದುರಲ್ಲೆ ಕೆರೆ ನೀರು ಬರಿದು ಮಾಡುವ ಕಾರ್ಯಕ್ಕೆ ಕೆಲ ಗ್ರಾಮಸ್ಥರು ಮುಂದಾಗಿದ್ದರು. ನೀರನ್ನು ಮತ್ತೆ ಕೆರೆಗೆ ತುಂಬಿಸುವುದಾಗಿ ಮಾತು ನೀಡಿದ್ದರು ಎನ್ನಲಾಗಿದೆ.

ಕಾಂಗ್ರೆಸ್‌ - ಬಿಜೆ​ಪಿಯಿಂದ ಜೆಡಿ​ಎಸ್‌ ಮನೆಗೆ ಕನ್ನ ! ಪಕ್ಷ ಬಿಟ್ಟು ತೆರಳಿದ ಮುಖಂಡರು

ಡಿಸೆಂಬರ್‌ 9ರಂದು ಕೆರೆಗೆ ಮೋಟಾರ್‌ ಅಳವಡಿಸಿ, ಸುಮಾರು 1 ಗಂಟೆಗಳ ಕಾಲ ನೀರನ್ನು ಹೊರಗೆ ಸಾಗಿಸಲು ಪ್ರಾರಂಭಿ​ಸಿ​ದ್ದಾರೆ. ಈ ವಿಚಾ​ರ​ವನ್ನು ಅದೇ ಗ್ರಾಮದ ಬಿ.ಟಿ.ರಾಜೇಂದ್ರ ಎಂಬುವವರು ಜಿಲ್ಲಾಡಳಿತದ ಗಮ​ನಕ್ಕೆ ​ತಂದು ದೂರು ನೀಡಿದ್ದಾರೆ. ಸವಿತಾ ಎಂಬುವವರು ಒಡವೆಯನ್ನು ಕಳೆದುಕೊಂಡು, ಕೆರೆಗೆ ಎಸೆದಿರುವುದಾಗಿ ಸುಳ್ಳು ಹೇಳಿದ್ದಾರೆ. ಕೆರೆಯ ನೀರು ಖಾಲಿಯಾಗುವುದನ್ನು ತಡೆಯಬೇಕು ಎಂದು ಮನವಿ ಮಾಡಿದ ಬಳಿಕ ಕೆರೆ ನೀರು ಖಾಲಿ ಮಾಡುವ ಕಾರ್ಯಕ್ಕೆ ಪಂಚಾ​ಯಿತಿ ಅಭಿ​ವೃದ್ಧಿ ಅಧಿ​ಕಾರಿ ತಡೆ​ವೊ​ಡ್ಡಿ​ದ್ದಾರೆ.

ಗ್ರಾಮಸ್ಥರ ಹೇಳಿಕೆ ಏನು?

250 ಗ್ರಾಂ ಚಿನ್ನ ಎಂದರೆ ಹುಡುಗಾಟವಲ್ಲ. ಸವಿತಾ ಅವರು ಯಾವುದೋ ಕೋಪದಲ್ಲಿ ಒಡವೆಗಳನ್ನೆಲ್ಲ ಕೆರೆಗೆ ಎಸೆದಿರುವುದಾಗಿ ಹೇಳಿದ್ದರು. ಹೀಗಾಗಿ ನಾವು ಅವರ ಕುಟುಂಬಕ್ಕೆ ಒಳ್ಳೆಯದಾಗಲಿ ಎಂಬ ಆಸೆಯಿಂದ ನೀರು ಖಾಲಿ ಮಾಡಲು ಮುಂದಾಗಿದ್ದವು. ಆದರೆ, ಈವರೆಗೂ ಹನಿ ನೀರನ್ನು ಕೆರೆಯಿಂದ ತೆಗಿದಿಲ್ಲ. ಅಷ್ಟರಲ್ಲಿ ನಮ್ಮೂರಿನ ಒಬ್ಬರೆ ದೂರು ನೀಡಿದ್ದರು ಎನ್ನು​ತ್ತಾರೆ ಗ್ರಾಮ​ಸ್ಥರು.

ಒಡವೆ ಎಲ್ಲಿದೆ?

ಸವಿತಾ ಒಡ​ವೆ​ಗ​ಳನ್ನು ಕೆರೆಗೆ ಎಸೆ​ದಿ​ರುವುದು ಸುಳ್ಳು ಎಂಬುದು ಗೊತ್ತಾ​ಗು​ತ್ತಿ​ದ್ದಂತೆ ಗ್ರಾಮಸ್ಥರಿಗೆ ಒವ​ಡೆ​ಗಳು ಎಲ್ಲಿವೆ ಎಂಬು ಪ್ರಶ್ನೆ ಕಾಡುತ್ತಿದೆ. ನಿಜವಾಗಿಯು ಒಡವೆ ಕೆರೆಯಲ್ಲಿಯೇ ಇದೆಯೇ? ಇಲ್ಲವೇ ಎಲ್ಲೊ ಕಳೆದುಕೊಂಡಿದ್ದಾರೆಯೇ? ಎಂಬು​ದಕ್ಕೆ ಸವಿತಾ ಅವರೇ ಉತ್ತ​ರಿ​ಸ​ಬೇ​ಕಿದೆ.

click me!