ಸಿಎಂ ನಿವಾಸದ ಎದುರು ಪ್ರತಿಭಟನೆ: ಗರ್ಭಕೋಶ ಶಸ್ತ್ರಚಿಕಿತ್ಸೆ ಸಂತ್ರಸ್ಥ ಮಹಿಳೆಯರ ನಿರ್ಧಾರ

By Girish Goudar  |  First Published Aug 10, 2022, 12:27 PM IST

ಡಾ. ಶಾಂತನಿಂದ ಅನಗತ್ಯ ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಮಹಿಳೆಯರಿಗೆ ಇನ್ನೂ ನ್ಯಾಯ ದೊರೆತಿಲ್ಲ.


ವರದಿ- ಪವನ್ ಕುಮಾರ್, ಏಷ್ಯಾನೆಟ್ ಸುವರ್ಣ ನ್ಯೂಸ್, ಹಾವೇರಿ 

ಹಾವೇರಿ(ಆ.10):  ಡಾ. ಶಾಂತನಿಂದ ಅನಗತ್ಯ ಗರ್ಭಕೋಶ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಮಹಿಳೆಯರಿಗೆ ಇನ್ನೂ ನ್ಯಾಯ ದೊರೆತಿಲ್ಲ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕು ಆಸ್ಪತ್ರೆಯಲ್ಲಿ ಸರ್ಕಾರಿ ವೈದ್ಯರಾಗಿದ್ದ ಡಾ.ಶಾಂತನಿಂದ ಗರ್ಭಕೋಶ ಕಳೆದುಕೊಂಡಿದ್ದ ಮಹಿಳೆಯರಿಗೆ ಸರ್ಕಾರದಿಂದ ಇದುವರೆಗೂ ಪರಿಹಾರವೂ ಮಂಜಾರಾಗಿಲ್ಲ. ಕೆಲ ತಿಂಗಳ ಹಿಂದಷ್ಟೇ ನ್ಯಾಯಕ್ಕಾಗಿ ಆಗ್ರಹಿಸಿ ಶಿಗ್ಗಾಂವಿ ಚಲೋ ಮಾಡಿದ್ದ ಸಂತ್ರಸ್ಥ ಮಹಿಳೆಯರಿಗೆ ಹಾವೇರಿ ಜಿಲ್ಲಾಡಳಿತ ಭರವಸೆ ನೀಡಿತ್ತು. ರಾಣೆಬೆನ್ನೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸರ್ಕಾರಿ ಆಸ್ಪತ್ರೆ ವೈದ್ಯನ ಧನದಾಹಿ ಮನಸ್ಥಿತಿಯಿಂದ ಗರ್ಭಕೋಶ ಕಳೆದುಕೊಂಡ ಮಹಿಳೆಯರು ಇದೀಗ ಮತ್ತೆ ಶಿಗ್ಗಾಂವಿಯಲ್ಲಿ ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

Tap to resize

Latest Videos

undefined

ಸಂತ್ರಸ್ಥ ಮಹಿಳೆಯರು ಈ ಹಿಂದೆ ಏಪ್ರಿಲ್ 25 ರಂದು ರಾಣೆಬೆನ್ನೂರಿಂದ ಶಿಗ್ಗಾಂವಿಯ ಸಿಎಂ ಮನೆಯವರೆಗೆ ಪಾದಯಾತ್ರೆ ಹೊರಟಿದ್ದರು. ಈ ಸಂದರ್ಭದಲ್ಲಿ ಮಧ್ಯಸ್ಥಿಕೆ ವಹಿಸಿದ್ದ ಜಿಲ್ಲಾಡಳಿತ ಪ್ರತಿಭಟನಾಕಾರರನ್ನು ಮನವೊಲಿಸುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೆ, ಸಿಎಂ ಜೊತೆ ಚರ್ಚಿಸಿ ತಮಗೆ ಸೂಕ್ತ ಪರಿಹಾರ ನೀಡುವ ಭರವಸೆ ನೀಡಿತ್ತು. ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಿದ್ದಾರೆ ಎಂದು ಮಹಿಳೆಯರಿಗೆ ತಿಳಿಸಲಾಗಿತ್ತು. ಆದರೆ, ಸಿಎಂ ಮತ್ತು ಜಿಲ್ಲಾಡಳಿತ ನೀಡಿದ ಭರವಸೆ ಭರವಸೆಯಾಗಿಯೇ ಉಳಿದಿದೆ. ಪರಿಣಾಮ ಸಂತ್ರಸ್ತರು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.

ಹಾವೇರಿಯಲ್ಲಿ ನಿಲ್ಲದ ಮಳೆ: ಮನೆ ಗೋಡೆ ಕುಸಿದು ವ್ಯಕ್ತಿ ಸಾವು

ಪ್ರತಿಭಟನೆ ನಡೆದು ನೂರು ದಿನಗಳ ಮೇಲಾದರೂ ಹಾವೇರಿ ಜಿಲ್ಲಾಡಳಿತ ಇವರ ಕಡೆ ಗಮನ ಹರಿಸಿಲ್ಲ. ಇದರಿಂದ ನೊಂದ ಮಹಿಳೆಯರು ಇದೀಗ ಆ. 13 ರಿಂದ ಮತ್ತೆ ಸಿಎಂ ಮನೆಯವರಿಗೆ ಪಾದಯಾತ್ರೆ ನಡೆಸಲು ಮುಂದಾಗಿದ್ದಾರೆ. ಏಪ್ರಿಲ್‌ನಲ್ಲಿ ಜಿಲ್ಲಾಡಳಿತ ತಡೆದ ಪ್ರತಿಭಟನಾ ಸ್ಥಳ ನೆಲೋಗಲ್ಲ ಗ್ರಾಮದಿಂದ ಸಿಎಂ ಶಿಗ್ಗಾಂವಿ ನಿವಾಸದವರೆಗೆ ಪಾದಯಾತ್ರೆ ನಡೆಸುವುದಾಗಿ ಮಹಿಳೆಯರು ಎಚ್ಚರಿಕೆ ರವಾನಿಸಿದ್ದಾರೆ.

ಇದೇ 13 ರಿಂದ ಪಾದಯಾತ್ರೆ ಕೈಗೊಂಡು 15ಕ್ಕೆ ಸಿಎಂ ನಿವಾಸದ ಮುಂದೆ ಧ್ವಜ ಹಾರಿಸುವ ಮೂಲಕ ಸ್ವಾತಂತ್ರೋತ್ಸವ ಆಚರಿಸುವುದಾಗಿ ಪ್ರತಿಭಟನೆಯ ನೇತೃತ್ವ ವಹಿಸಿರುವ ಮುಖಂಡರು ತಿಳಿಸಿದ್ದಾರೆ. ನಮಗೆ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಈ ಬಡ ಮಹಿಳೆಯರಿಗೆ ಸ್ವಾತಂತ್ರ್ಯ ಸಿಕ್ಕಿಲ್ಲ. ಇನ್ಮುಂದೆಯಾದರು ಇವರಿಗೆ ವಿಶೇಷ ಪ್ಯಾಕೇಜ್ ಮೂಲಕ ಸ್ವಾತಂತ್ರ್ಯ ಲಭಿಸಲಿ ಎಂದು ಈ ರೀತಿ ಹೋರಾಟ ಮಾಡುತ್ತಿರುವುದಾಗಿ ಹೇಳ್ತಿದ್ದಾರೆ. 
 

click me!