ಚಿಕ್ಕಮಗಳೂರಲ್ಲಿ ಭಾರೀ ಮಳೆ: ಮನೆ ಮೇಲೆ‌ ಮರ ಬಿದ್ದು ಇಬ್ಬರ ದುರ್ಮರಣ

By Girish GoudarFirst Published Aug 10, 2022, 12:01 PM IST
Highlights

ಚಿಕ್ಕಮಗಳೂರು ಜಿಲ್ಲೆಯ ‌ಮೂಡಿಗೆರೆ ತಾಲ್ಲೂಕಿನ ಕೆ ತಲಗೂರು ಗ್ರಾಮದಲ್ಲಿ ನಡೆದ ಘಟನೆ

ವರದಿ: ಆಲ್ದೂರು ಕಿರಣ್ ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು(ಆ.10):  ಚಿಕ್ಕಮಗಳೂರಿನಲ್ಲಿ ವರುಣನ ಅಟ್ಟಹಾಸ ಮುಂದುವರಿದಿದೆ. ಮಳೆಯಿಂದ ಸರಣಿ ಅನಾಹುತಗಳಿಗೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಸಾಕ್ಷಿಯಾಗುತ್ತಿದೆ. ಮಳೆಯಿಂದ ಮನೆಕುಸಿತದ ಪ್ರಕರಣಗಳ ಜೊತೆಗೆ ಪ್ರಾಣಹಾನಿಯೂ ಸಂಭವಿಸುತ್ತಿದ್ದು ಮಲೆನಾಡಿನ ಜನರಲ್ಲಿ ತೀವ್ರ ಆತಂಕ ಎದುರಾಗಿದೆ.  ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಕೆ.ತಲಗೂರು ಗ್ರಾಮದಲ್ಲಿ ಮಳೆಯ ಅಬ್ಬರಕ್ಕೆ ಕಳೆದ ರಾತ್ರಿ ಇಬ್ಬರು ಬಲಿಯಾಗಿದ್ದಾರೆ.ಬಾಳೂರು ವ್ಯಾಪ್ತಿಯ ಕೆ ತಲಗೂರು ಗ್ರಾಮದಲ್ಲಿ ಮನೆ ಮೇಲೆ ಬೃಹದಾಕಾರದ ಮರ ಬಿದ್ದು ಸುಖನಿದ್ರೆ ಮಲಗಿದ್ದ ಇಬ್ಬರು ಜೀವ ಬಿಟ್ಟಿದ್ದಾರೆ, ಮನೆಯಲ್ಲಿ ಮಲಗಿದ್ದ ಚಂದ್ರಮ್ಮ ಹಾಗೂ ಸರಿತಾ ದುರಂತ ಸಾವು ಕಂಡಿದ್ದಾರೆ, ಸುನಿಲ್ ಹಾಗೂ ದೀಕ್ಷಿತ್ ಎಂಬ ಮಕ್ಕಳು ಸ್ವಲ್ಪದರಲ್ಲೇ ಪಾರಾಗಿದ್ದಾರೆ. ತಡರಾತ್ರಿ ನಡೆದಿರುವ ಈ ಘಟನೆ ಸ್ಥಳೀಯರಿಗೆ ಗಾಬರಿ ಹುಟ್ಟಿಸಿದೆ. ಮನೆ ಮೇಲೆ ಬಿದ್ದಿರುವ ಬೃಹತ್ ಮರ ಘಟನೆಯ ಭೀಕರತೆ ಬಿಚ್ಚಿಡುವಂತಿದೆ ಬಾರೀ ಗಾಳಿ ಅನಾಹುತ ತಂದೊಡ್ಡಿದೆ.
ಇದರೊಂದಿಗೆ ಮಳೆಗೆ ಕಾಫಿನಾಡಲ್ಲಿ ಈವರೆಗೂ ಐದು ಬಲಿಯಾದಂತಾಗಿದೆ, ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

CHIKKAMAGALURU RAIN: ವಾಡಿಕೆಗಿಂತ ಶೇ.50ರಷ್ಟು ಹೆಚ್ಚು ಮಳೆ; ಅಪಾರ ಹಾನಿ

ದುರದೃಷ್ಟ ಅವರ ಬೆನ್ನು ಹಿಂದೆ

ನಿನ್ನೆ ರಾತ್ರಿಯೂ ಮಲೆನಾಡಿನಲ್ಲಿ ಧಾರಾಕಾರ ಮಳೆ ಮತ್ತು ಗಾಳಿ ಬೀಸುತ್ತಿತ್ತು. ಮನೆಯು ಶಿಥಿಲಗೊಂಡಿದ್ದು ಮರ ಬಿದ್ದರೆ ಅಪಾಯ ಆಗಬಹುದು ಎಂದು ಸರಿತಾ ತನ್ನ ಇಬ್ಬರು ಮಕ್ಕಳ ಜೊತೆ ಚಂದ್ರಮ್ಮ ಅವರ ಮನೆಯಲ್ಲಿ ಆಶ್ರಯ ಪಡೆದಿದ್ದರು. ಆದರೆ ದುರದೃಷ್ಟ ಅವರ ಬೆನ್ನು ಬಿಡದೆ ಚಂದ್ರಮ್ಮ ಅವರ ಮನೆಯ ಮೇಲೆ ರಾತ್ರಿ 10 ಗಂಟೆಗೆ ಬೃಹತ್ ಗಾತ್ರದ ಮರ ಬಿದ್ದಿದೆ. ತೀವ್ರವಾಗಿ ಗಾಯಗೊಂಡ ಸರಿತಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಚಂದ್ರಮ್ಮ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಅವರು ಕೂಡ ಮೃತಪಟ್ಟಿದ್ದಾರೆ. ತಮ್ಮ ಮನೆ ಮಳೆಗೆ ಶಿಥಿಲಗೊಂಡಿದ್ದರಿಂದ ಪಕ್ಕದ ಮನೆಯ ಸಂಬಂಧಿಕರ ಮನೆಗೆ ಮಲಗಲು ಬಂದಿದ್ದ ಸರಿತಾ ಹಾಗೂ ಚಂದ್ರಮ್ಮ ದುರಂತ ಸಾವು ಕಂಡಿದ್ದಾರೆ.

ಅದೃಷ್ಟವಶಾತ್ ಸರಿತಾ ಅವರ ಇಬ್ಬರು ಮಕ್ಕಳು ಪಕ್ಕದಲ್ಲೇ ಮಲಗಿದ್ದರೂ ಈ ಘಟನೆಯಲ್ಲಿ ಗಾಯಗೊಂಡಿಲ್ಲ.ಚಂದ್ರಮ್ಮ ಅವರ ಮನೆ ಬಹುತೇಕ ಜಖಂ ಆಗಿದೆ. ಇಡೀ ಗ್ರಾಮವೇ ಈ ಘಟನೆಯಿಂದ ಬೆಚ್ಚಿ ಬಿದ್ದಿದೆ. ಮೂಡಿಗೆರೆ ಆಸ್ಪತ್ರೆಯಲ್ಲಿ ಇಬ್ಬರ ಶವಪರೀಕ್ಷೆ ನಡೆಸಿ ಮೃತರ ಸಂಬಂಧಿಕರಿಗೆ ಮೃತಹದೇಹಗಳನ್ನು ಹಸ್ತಾಂತರ ಮಾಡಲಾಗಿದ್ದು ಗ್ರಾಮದಲ್ಲಿ ನೀರವ ಮೌನ ಆವರಿಸಿದ್ದು ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ.
 

click me!