Koppal; ಸೌಟು ಹಿಡಿಯಲು ಸೈ, ಸ್ಟೇರಿಂಗ್ ಹಿಡಿಯಲು ಸೈ

By Gowthami KFirst Published Aug 17, 2022, 7:54 PM IST
Highlights

ಅತ್ಯಂತ ಹಿಂದುಳಿದ ಜಿಲ್ಲೆ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ  ಕೊಪ್ಪಳದಲ್ಲಿ ಮಹಿಳೆಯರನ್ನು ಸ್ವಾವಲಂಬಿಗಳಾಗಿ ಮಾಡುವ ಕೆಲಸ ಸದ್ದಿಲ್ಲದೆ ಸಾಗುತ್ತಿದೆ. ಮಹಿಳೆಯರನ್ನ ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢರನ್ನಾಗಿ ಮಾಡುವ ಕೆಲಸ ನಡೆಯುತ್ತಿದೆ.

ವರದಿ: ದೊಡ್ಡೇಶ್ ಯಲಿಗಾರ್ ಏಶಿಯಾನೆಟ್ ಸುವರ್ಣ ನ್ಯೂಸ್

ಕೊಪ್ಪಳ (ಆ.17): ತೊಟ್ಟಿಲು ತೂಗುವ ಕೈ ಜಗತ್ತನ್ನೇ ಆಳಬಲ್ಲದು ಎನ್ನುವ ಮಾತಿದೆ.‌ ಅದರಂತೆ ಇಂದು ಮಹಿಳೆ ಸೌಟು ಹಿಡಿಯಲು ರೆಡಿ ಜೊತೆಗೆ, ಸ್ಟೇರಿಂಗ್ ಹಿಡಿಯಲು ಸಹ ರೆಡಿಯಾಗಿದ್ದಾಳೆ. ಕೊಪ್ಪಳ ಜಿಲ್ಲೆ ಅಂದರೆ ಸಾಕು ಬಹುತೇಕರು ಮೂಗು ಮುರಿಯುವರೇ ಹೆಚ್ಚು. ಅತ್ಯಂತ ಹಿಂದುಳಿದ ಜಿಲ್ಲೆ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ಜಿಲ್ಲೆಯಲ್ಲಿ ಮಹಿಳೆಯರನ್ನು ಸ್ವಾವಲಂಬಿಗಳಾಗಿ ಮಾಡುವ ಕೆಲಸ ಸದ್ದಿಲ್ಲದೆ ಸಾಗುತ್ತಿದೆ. ಮಹಿಳೆಯರನ್ನ ಆರ್ಥಿಕವಾಗಿ, ಸಾಮಾಜಿಕವಾಗಿ ಸದೃಢರನ್ನಾಗಿ ಮಾಡುವ ಕೆಲಸವನ್ನ ನಾವು ಈಗ ಕೊಪ್ಪಳದಲ್ಲಿ ಕಾಣಬಹುದಾಗಿದೆ. ಇನ್ನು ಜಿಲ್ಲಾ ಪಂಚಾಯತಿ ಅಂದರೆ ಬಹುತೇಕರು ಅದು ಸದಸ್ಯರಿಗೆ ಮಾತ್ರ ಸಂಬಂಧಿಸಿದೆ. ಹೊರತು ಸಾಮಾನ್ಯ ಜನರಿಗೆ ಸಂಬಂಧಿಸಿದ ಇಲಾಖೆ ಅಲ್ಲ ಎನ್ನುವ ಭಾವನೆಯಲ್ಲಿ ಜನರು ಇರುತ್ತಾರೆ. ಆದರೆ ಕೊಪ್ಪಳ‌ ಜಿಲ್ಲಾ ಪಂಚಾಯತಿ ಮಾತ್ರ ಇದಕ್ಕೆ ಹೊರತಾಗಿದೆ. ಮಹಿಳೆಯರ ಆರ್ಥಿಕ ಭದ್ರತೆ, ಸ್ವಾವಲಂಬಿ ಬದುಕು, ಸಬಲೀಕರಣಕ್ಕಾಗಿ ವಾಹನ ಚಾಲನೆ ತರಬೇತಿ ನೀಡುವ ಮೂಲಕ ಕೊಪ್ಪಳ ಜಿ.ಪಂ. ಮತ್ತೊಂದು ಮಹತ್ವದ ಹೆಜ್ಜೆಯತ್ತ ಸಾಗಿದೆ. 

34 ಸ್ವಹಾಯ ಸಂಘಗಳ ಮಹಿಳೆಯರಿಗೆ ಚಾಲನಾ ತರಬೇತಿ:
ಜಿಲ್ಲೆಯ 34 ಜಿಪಿಎಲ್‌ಎಫ್‌ನ ಸ್ವ-ಸಹಾಯ ಸಂಘಗಳ ಮಹಿಳೆಯರಿಗೆ ವಾಹನ ಚಾಲನೆಯ ತರಬೇತಿ ನೀಡಿ, ಆಯಾ ಗ್ರಾಮ ಪಂಚಾಯಿತಿಗಳಲ್ಲಿ ಕಸ ಸಂಗ್ರಹಣೆಯ ಸ್ವಚ್ಛ ವಾಹಿನಿಗಳಿಗೆ, ತರಬೇತಿ ಪಡೆದ ಮಹಿಳಾ ವಾಹನ ಚಾಲಕಿಯರನ್ನು ತೊಡಗಿಸಿಕೊಳ್ಳುವಂತೆ ಅವಕಾಶ ಕಲ್ಪಿಸಲಾಗಿದೆ. ತರಬೇತಿಗೆ ಆಯ್ಕೆಯಾದ ಮಹಿಳೆಯರು ಎದೆಗುಂದದೇ ಯಾವುದರಲ್ಲಿಯೂ ಕಮ್ಮಿಯಿಲ್ಲ ಎಂಬಂತೆ ಚಾಲನಾ ತರಬೇತಿಯನ್ನು ಸಮರ್ಪಕವಾಗಿ ಪಡೆದು ವಾಹನ ಓಡಿಸುವ ಮೂಲಕ ಗಮನ ಸೆಳೆದಿದ್ದಾರೆ.

ಎಲ್ಲೆಲ್ಲಿ- ಯಾರಾರು ಚಾಲನೆ ಮಾಡುತ್ತಾರೆ:
ಇನ್ನು ಜಿಲ್ಲೆಯಲ್ಲಿ ಕೊಪ್ಪಳ ತಾಲೂಕಿನ ಇಂದರಗಿ ಕವಿತಾ, ಕುಷ್ಟಗಿ ತಾಲೂಕಿನ ಚಳಗೇರಾ ಗ್ರಾಮದ ಪೂರ್ಣಿಮಾ, ಮುದೇನೂರು ಗ್ರಾಮದ ಸುಧಾ, ಕುಕನೂರು ತಾಲೂಕಿನ ಕುದರಿಮೋತಿ ಗ್ರಾಮದ ಶಿಲ್ಪಾ, ಕನಕಗಿರಿ ತಾಲೂಕಿನ ಕರಡೋಣಾ, ನವಲಿ, ಮುಸಲಾಪೂರ ಗ್ರಾಮದ ಸಣ್ಣದುರ್ಗಮ್ಮ, ಯಮನಮ್ಮ, ಸವಿತಾ ಅವರು ಈಗಾಗಲೇ ತರಬೇತಿ ಪಡೆದಿದ್ದು, ದಿನನಿತ್ಯ ಗ್ರಾಮ ಪಂಚಾಯತಿ ಯ ಕಸ ವಿಲೇವಾರಿ  ವಾಹನ ಚಲಾವಣೆ ಮಾಡುತ್ತಿದ್ದಾರೆ.

ಜಿ.ಪಂ ಸಿಇಓ ಫೌಜಿಯಾ ತರನ್ನುಮ್  ಆಸಕ್ತಿ:
ಇನ್ನು ಸ್ವತಃ ಮಹಿಳೆ ಆಗಿರುವ ಕೊಪ್ಪಳ ಜಿಲ್ಲಾ ಪಂಚಾಯುತ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ಫೌಜಿಯಾ ತರನ್ನುಮ್ ಅವರ ವಯ್ಯಕ್ತಿಕ ಆಸಕ್ತಿ ಹಾಗೂ ಕಾಳಜಿಯಿಂದಾಗಿ ಇಂದು ಕೊಪ್ಪಳ ಜಿಲ್ಲೆಯಲ್ಲಿ ಮಹಿಳೆಯರು ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢರಾಗುತ್ತಿದ್ದಾರೆ. ಅದರ ಭಾಗವಾಗಿಯೇ ಇದೀಗ ಕೊಪ್ಪಳ ಜಿಲ್ಲೆಯಲ್ಲಿ ಮಹಿಳೆಯರು ವಾಹನ ಚಾಲನಾ ತರಬೇತಿ ಪಡೆದು ಇದೀಗ ಪುರುಷರಷ್ಟೇ ಸಾಮಾನ ವೇತನವನ್ನು ಪಡೆಯುತ್ತಿರುವುದು. ಇದಕ್ಕೆಲ್ಲ ಕಾರಣ ಜಿ.ಪಂ‌ ಸಿಇಓ ಫೌಜಿಯಾ ತರನ್ನುಮ್ ಅವರೇ ಕಾರಣ ಎನ್ನುವುದು ವಾಹನ ಚಾಲನೆ ಮಾಡುವ ಮಹಿಳೆಯರ ಮಾತು.

'ಮನೆಗಿಂತ ಕಚೇರಿನಲ್ಲಿ ಹೆಚ್ಚು ಸಮಯ ಕಳಿತಾಳೆ ನನ್ನ ಹೆಂಡ್ತಿ'

ಒಟ್ಟಿನಲ್ಲಿ ಮಾಡುವ ಕೆಲಸ ಯಾವುದಾದರೇನು, ಶ್ರದ್ಧೆಯಿಂದ ಮಾಡಿದರೆ ಯಶಸ್ಸು ಶತಸಿದ್ಧ ಎನ್ನುವ ಮಾತನಂತೆ, ಪುರುಷರು ಮಾಡುವ ಡ್ರೈವಿಂಗ್ ಕೆಲಸವನ್ನು ಕೊಪ್ಪಳದಲ್ಲಿ‌ ಮಹಿಳಯರು ಮಾಡುವ ಮೂಲಕ ಸೈ ಎನಿಸಿಕೊಂಡಿದ್ದಾರೆ.‌ ಇವರ ಹಾಗೂ ಜಿ.ಪಂ ಸಿಇಓ ಫೌಜಿಯಾ ತರನ್ನುಮ್ ಅವರ ಕಾರ್ಯಲ್ಕೆ ಹ್ಯಾಟ್ಸ್ ಆಫ್ ಹೇಳಲೇಬೇಕು.

click me!