ಮೋದಿ ಮನಸೆಳೆದ ಉತ್ತರ ಕರ್ನಾಟಕದ ಮುಧೋಳ ಶ್ವಾನ, ಪ್ರಧಾನಿಗೆ ಭದ್ರತೆ ನೀಡುವ ಎಸ್​ಪಿಜಿ ತಂಡಕ್ಕೆ ಸೇರ್ಪಡೆ

By Gowthami K  |  First Published Aug 17, 2022, 6:07 PM IST

ಮುಧೋಳ ಶ್ವಾನ ಇದೀಗ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ಪಡೆಯಾಗಿರೋ ಎಸ್​ಪಿಜಿ ತಂಡಕ್ಕೆ ಸೇರ್ಪಡೆಯಾಗಿದೆ.  ಎರಡು ಮುಧೋಳ ನಾಯಿ ಮರಿಗಳನ್ನ ಕೊಂಡೊಯ್ದು ಇದೀಗ ದೆಹಲಿಯಲ್ಲಿ ತರಬೇತಿ ನೀಡಲಾಗುತ್ತಿದೆ.


ಬಾಗಲಕೋಟೆ (ಆ.17): ತನ್ನ ವಿಶೇಷ ಕಾರ್ಯ ಶಕ್ತಿ, ಗುಣಗಳ ವ್ಯಕ್ತಿತ್ವದಿಂದಲೇ ದೇಶಾದ್ಯಂತ ಹೆಸರು ಮಾಡಿದ್ದ ಮುಧೋಳ ಶ್ವಾನ ಇದೀಗ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಭದ್ರತಾ ಪಡೆಯಾಗಿರೋ ಎಸ್​ಪಿಜಿ ತಂಡಕ್ಕೆ ಸೇರ್ಪಡೆಯಾಗಿದೆ. ಇನ್ನು ಮುಧೋಳ ಡಾಗ್ ಆಯ್ಕೆಯಾಗಿದ್ದೇ ತಡ ದೆಹಲಿಯಿಂದ ಬಂದ ಎಸ್​ಪಿಜಿ ತಂಡದ ಸದಸ್ಯರು ಎರಡು ಮುಧೋಳ ನಾಯಿ ಮರಿಗಳನ್ನ ಕೊಂಡೊಯ್ದು ಇದೀಗ ದೆಹಲಿಯಲ್ಲಿ ತರಬೇತಿ ಕಾರ್ಯಕ್ಕೆ ಮುಂದಾಗಿದ್ದಾರೆ. ಇದ್ರಿಂದ ಮುಧೋಳದ ಜನತೆ ಮತ್ತಷ್ಟು ಸಂತಸಪಡುವಂತಾಗಿದ್ದು, ದೇಶದ ಪ್ರಧಾನಿ ಮನಸೆಳೆದ ಮುಧೋಳ ಡಾಗ್​ ಬಗ್ಗೆ ಇನ್ನಷ್ಟು ಅಭಿಮಾನಪಡುವಂತಾಗಿದೆ. ತೆಳ್ಳನೆಯ ದೇಹ, ಚೂಪಾದ ಮೂಗು, ನಾಗಾಲೋಟದಲ್ಲಿ ಚಕ್ಕನೆ ಓಡಾಡಿ ಗಮನ ಸೆಳೆಯೋ ಮೂಲಕ ಇಂದು ಇಡೀ ದೇಶವೇ ತನ್ನತ್ತ ಹೊರಳುವಂತೆ ಮಾಡಿರೋದು ಮುಧೋಳ ಡಾಗ್​. ದೇಶಾದ್ಯಂತ ಹೆಸರು ಮಾಡಿರೋ ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಮುಧೋಳ ಪಟ್ಟಣದ ಮುಧೋಳ ಶ್ವಾನ ಇದೀಗ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭದ್ರತೆ ನೀಡುವ ಎಸ್​ಪಿಜಿ ತಂಡಕ್ಕೆ ಸೇರ್ಪಡೆಯಾಗಿದೆ. ಇದರಿಂದ ಮುಧೋಳದ ಶ್ವಾನಗಳಿಗೆ ಮತ್ತಷ್ಟು ಪ್ರಾಮುಖ್ಯತೆ ಹೆಚ್ಚಿದ್ದು,  ಈ ಹಿಂದೆ ಮಿಲಿಟರಿ ಸೇರಿದಂತೆ ವಿವಿಧ ರಕ್ಷಣಾ ವಿಭಾಗದಲ್ಲಿ ಸೇರ್ಪಡೆಯಾಗಿದ್ದ ಮುಧೋಳ ಶ್ವಾನ ಇದೀಗ ದೇಶದ ಪ್ರಧಾನಿ ಮೋದಿ ಅವರ ಗಮನ ಸೆಳೆದು ಅವರ ವಿಶೇಷ ರಕ್ಷಣಾ ಪಡೆಗೆ ಸೇರ್ಪಡೆಯಾಗುವ ಮೂಲಕ ದೇಶಾದ್ಯಂತ ಗಮನ ಸೆಳೆದಿದೆ.

ಇನ್ನು ಬಾಗಲಕೋಟೆ ಜಿಲ್ಲೆಯ ಮುಧೋಳದ ಶ್ವಾನ ಸಂಶೋಧನಾ ಮತ್ತು ಮಾಹಿತಿ ಕೇಂದ್ರಕ್ಕೆ ವಿಶೇಷ ಅನುದಾನ ನೀಡುವ ಮೂಲಕ ಸ್ವಕ್ಷೇತ್ರ ಮುಧೋಳದ ಶಾಸಕ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು, ಮುಧೋಳ ಶ್ವಾನದ ಸಂತಾನಾಭಿವೃದ್ಧಿ ಮತ್ತು ಸಾಕಾಣಿಕೆಗೆ ಹೆಚ್ಚಿನ ಆದ್ಯತೆ ನೀಡಿ, ದೇಶವ್ಯಾಪಿ ಮುಧೋಳ ಶ್ವಾನಗಳು ಹೆಸರುಗಳಿಸುವಂತೆ ಮಾಡಲು ಪ್ರಮುಖ ಪಾತ್ರ ವಹಿಸಿದರು.

Tap to resize

Latest Videos

undefined

ಮುಧೋಳಕ್ಕೆ ಆಗಮಿಸಿದ ಪ್ರಧಾನಿ ಭದ್ರತೆಯ ಎಸ್​​ಪಿಜಿ ತಂಡ:
ಮುಧೋಳ ತಳಿಯ ನಾಯಿ ಅಂದರೆ ಸಾಕು ಜನರಲ್ಲಿ ಅದೇನು ಸಂತಸ ಮತ್ತು ಅವುಗಳ ಬಗ್ಗೆ ಹೆಮ್ಮೆ. ತನ್ನ ಕತೃತ್ವ ಶಕ್ತಿಯಿಂದಲೇ ದೇಶದ ಜನರ ಗಮನ ಸೆಳೆದ ಮುಧೋಳ ಶ್ವಾನ ಇದೀಗ ಪ್ರಧಾನಿಯವರ ಮೆಚ್ಚುಗೆಗೂ ಪಾತ್ರವಾಗಿದೆ. ಹೀಗಾಗಿ ಮುಧೋಳ ಶ್ವಾನದ ಗುಣ ಮತ್ತು ಅದರ ಕಾರ್ಯವೈಖರಿಯನ್ನ ಅರಿತಿರೋ ಎಸ್​ಪಿಜಿ ತಂಡದ ವೈದ್ಯ ಡಾ.ಬಿ.ಎನ್​.ಪಂಚಬುದ್ದೆ ಮತ್ತು ತರಬೇತಿದಾರರ ತಂಡ ದೆಹಲಿಯಿಂದ ಬಾಗಲಕೋಟೆ ಜಿಲ್ಲಾಡಳಿತ ಮತ್ತು ಎಸ್​ಪಿ ಕಚೇರಿ ಸಂಪರ್ಕಿಸಿತು. ಇದರ ಬೆನ್ನಲ್ಲೆ ಸಮಯವನ್ನ ನಿಗದಿಪಡಿಸಿ ಬಳಿಕ ಬಾಗಲಕೋಟೆ ಜಿಲ್ಲೆಯ  ಮುಧೋಳಕ್ಕೆ ಆಗಮಿಸಿತು.

ಏಪ್ರಿಲ್ 25ರಂದು ಮುಧೋಳದ ತಿಮ್ಮಾಪೂರ ಬಳಿ ಇರುವ ಮುಧೋಳ ಶ್ವಾನ ಸಂಶೋಧನಾ ಮತ್ತು ಮಾಹಿತಿ ಕೇಂದ್ರಕ್ಕೆ ಭೇಟಿ ನೀಡಿದ ವಿಶೇಷ ಭದ್ರತಾ ಪಡೆಯ ತಂಡ, ಮುಧೋಳ ನಾಯಿ ಮರಿಗಳನ್ನು ಪರಿಶೀಲನೆ ನಡೆಸಿ, ಬಳಿಕ ಎರಡು ಗಂಡು ಜಾತಿಯ ಮುಧೋಳ ನಾಯಿಗಳನ್ನ ಪಡೆದುಕೊಂಡು ತೆರಳಿದ್ದಾರೆ.  ಇದರಿಂದ ದೆಹಲಿಯಲ್ಲಿ ಇದೀಗ ಮುಧೋಳ ನಾಯಿ ಮರಿಗಳಿಗೆ ಎಸ್​ಪಿಜಿ ಭದ್ರತಾ ಪಡೆಯಿಂದ ತರಬೇತಿ ಸಹ ನಡೆಯುತ್ತಿದ್ದು, ನಮ್ಮ ಜಿಲ್ಲೆಯ ಮುಧೋಳ ಶ್ವಾನಗಳು ಇದೀಗ ದೇಶದ ಪ್ರಧಾನಿ ಮೋದಿಯವರ ಮನಸೆಳೆದು ಇಂದು ಎಸ್​ಪಿಜಿ ತಂಡಕ್ಕೆ ಸೇರ್ಪಡೆಯಾಗಿರೋದು ನಮಗೆ ಹೆಮ್ಮೆ ತಂದಿದೆ ಅಂತಾರೆ ಮುಧೋಳದ ಶ್ವಾನ ಸಂಶೋಧನಾ ಮತ್ತು ತರಬೇತಿ ಕೇಂದ್ರದ ಮುಖ್ಯಸ್ಥ ಸುಷಾಂತ ಹಂಡಗೆ.

ಈ ಹಿಂದೆ ಮನ್​​ ಕಿ ಬಾತ್​ನಲ್ಲಿ ಮುಧೋಳ ಶ್ವಾನ ನೆನಪಿಸಿದ್ದ ಮೋದಿ:
ಇನ್ನು ಈ ಹಿಂದೆ ದೇಶದ ಪ್ರಧಾನಿ ನರೇಂದ್ರ ಮೋದಿ ತಮ್ಮ ಮನ್​ ಕಿ ಬಾತ್​ನಲ್ಲಿ ಮುಧೋಳ ನಾಯಿಗಳ ಮಹತ್ವವನ್ನು ಸಾರಿದ್ದರು. ಆತ್ಮ ನಿರ್ಭರ ಭಾರತದ ಕುರಿತು ವಿಷಯಗಳನ್ನ ಪ್ರಸ್ತಾಪ ಮಾಡುವ ವೇಳೆ ಕರ್ನಾಟಕದ ರಾಜ್ಯದ ಬಾಗಲಕೋಟೆ ಜಿಲ್ಲೆಯ ಮುಧೋಳ ಶ್ವಾನಗಳನ್ನ ನೆನಪಿಸಿ, ಅವುಗಳ ವ್ಯಕ್ತಿತ್ವವನ್ನ ಬಣ್ಣಿಸಿ, ಆತ್ಮ ನಿರ್ಭರ ಭಾಗವಾಗಿ ಸ್ವಾವಲಂಬಿ ಭಾರತಕ್ಕಾಗಿ ಮನೆಯಲ್ಲಿ ಸಾಕುವುದಾದರೇ ಮುಧೋಳ ತಳಿಯಂತಹ ನಾಯಿಗಳನ್ನ ಸಾಕಿ, ದೇಶಿಯ ತಳಿಗಳನ್ನ ಪಾಲನೆ, ಪೋಷನೆ ಮಾಡಿ ಎಂದು ಸಂದೇಶ ಸಾರುವ ಮೂಲಕ ದೇಶಾದ್ಯಂತ ಮುಧೋಳ ಶ್ವಾನದ ಬಗ್ಗೆ ಮತ್ತಷ್ಟು ಅಭಿಮಾನವನ್ನು ಹೆಚ್ಚಿಸುವಂತೆ ಮಾಡಿದ್ದರು. 
 
ಭಾರತೀಯ ಸೇನೆ ಬಳಿಕ ಮುಧೋಳ ಈಗ ಪ್ರಧಾನಿ ಭದ್ರತೆಯ ಎಸ್​ಪಿಜಿ ತಂಡಕ್ಕೆ ಸೇರ್ಪಡೆ:

ಈ ಮಧ್ಯೆ ಮುಧೋಳ ನಾಯಿ ಮರಿಗಳು ತಮ್ಮ ವಿಶೇಷ ಕಾರ್ಯ ಶಕ್ತಿ, ಆಕಾರ, ಬಣ್ಣ, ಗುಣಗಳ ವ್ಯಕ್ತಿತ್ವದಿಂದಲೇ ದೇಶಾದ್ಯಂತ ಹೆಸರು ಮಾಡಿ ಭಾರತೀಯ ಸೇನೆ, ಸಿಆರ್​ಪಿಎಪ್​, ಮತ್ತು ವಾಯುಸೇನೆಯಲ್ಲೂ ಸೇರ್ಪಡೆಗೊಂಡು ಗಮನ ಸೆಳೆದಿದ್ದವು. ಎಲ್ಲ ಹವಾಗುಣಕ್ಕೆ ಹೊಂದಿಕೊಳ್ಳಬಹುದಾದ ಮತ್ತು ಅಲ್ಪ ಅಹಾರದಲ್ಲಿ ಜೀವಿಸಿ, ಹೆಚ್ಚೆಚ್ಚು ಕ್ರಿಯಾಶೀಲವಾಗಿ ಓಡಾಡುತ್ತಾ, ತನ್ನನ್ನ ಸಾಕಿದ ವ್ಯಕ್ತಿಗೆ ಸಾವಿನವರೆಗೆ ವಿಧೇಯವಾಗಿರೋ ನಂಬಿಗಸ್ಥ ಪ್ರಾಣಿ ಮುಧೋಳ ಶ್ವಾನವಾಗಿದ್ದು, ಇಂತಹ ಮುಧೋಳ ಶ್ವಾನ  ಇದೀಗ ದೇಶದ ಪ್ರಧಾನಿಗಳ ಮನಗೆದ್ದು, ಪ್ರಧಾನಿಗಳ ವಿಶೇಷ ಭದ್ರತಾ ಪಡೆ (ಎಸ್​ಪಿಜಿ) ತಂಡಕ್ಕೆ ಸೇರ್ಪಡೆಯಾಗಿರೋದಕ್ಕೆ ಇಡೀ ಜಿಲ್ಲೆಯ ಜನರು ಸಂತಸಪಡುವಂತಾಗಿದ್ದು, ಮುಧೋಳ ಡಾಗ್ ಇನ್ನಷ್ಟು ಹೆಚ್ಚೆಚ್ಚು ಸ್ಥಾನಮಾನ ಗಳಿಸುವಂತಾಗಲಿ ಎಂದು ಹಾರೈಸುತ್ತಾರೆ ಮುಧೋಳ ಶ್ವಾನ ಸಾಕಾಣಿಕೆದಾರರಾದ ಚನ್ನಪ್ಪ ಮತ್ತು ಸಂತೋಷ.

ಹಲವು ಪ್ರಕರಣ ಭೇದಿಸಿದ ಅರಣ್ಯ ಇಲಾಖೆ ಮುದ್ದಿನ ರಾಣಾ ಸಾವು, ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ!

ಮುಧೋಳದ ಶ್ವಾನ ಸಂಶೋಧನಾ ಮತ್ತು ಮಾಹಿತಿ ಕೇಂದ್ರಕ್ಕೆ ಬೇಕಿದೆ ಇನ್ನಷ್ಟು ಅನುದಾನ:
ಇಡೀ ದೇಶದಲ್ಲಿ ತನ್ನದೇಯಾದ ಶಕ್ತಿ ಪ್ರದರ್ಶನ ಮಾಡುವ ಮೂಲಕ ಕನ್ನಡನಾಡಿನ ಹಿರಿಮೆಯನ್ನ ದೇಶವ್ಯಾಪಿ ಪಸರಿಸಲು ಕಾರಣವಾದ ನಾಡಿನ ಮುಧೋಳದ ಶ್ವಾನಗಳಿಗಾಗಿಯೇ ತಿಮ್ಮಾಪೂರ ಬಳಿ ಮುಧೋಳ ಶ್ವಾನ ಸಂಶೋಧನಾ ಮತ್ತು ಮಾಹಿತಿ ಕೇಂದ್ರವಿದ್ದು, ಸಧ್ಯ ಈ ಕೇಂದ್ರದಲ್ಲಿ 40ರಷ್ಟು ಮುಧೋಳ ಶ್ವಾನಗಳನ್ನ ಇರಿಸಲಿಕ್ಕೆ ಅನುಕೂಲವಿದೆ, ಆದ್ರೆ ಇಂದು ಮುಧೋಳ ಶ್ವಾನಗಳಿಗೆ ಬೇಡಿಕೆ ಹೆಚ್ಚಿಗೆ ಬರುತ್ತಿರುವುದರಿಂದ ಹೆಚ್ಚುವರಿ ಕಟ್ಟಡಗಳ ಅವಶ್ಯಕತೆ ಇದೆ. ಹೀಗಾಗಿ  ಮುಧೋಳ ಶ್ವಾನಗಳ ಸಾಕಾಣಿಕೆಗೆ ಮತ್ತು ತರಬೇತಿಗಾಗಿ ಇನ್ನೂ ಒಂದೆರಡು ಕಟ್ಟಡಗಳ ಬೇಡಿಕೆ ಇದ್ದು, ಇದನ್ನು ಅನುದಾನದ ಮೂಲಕ ನೀಡಿದ್ದಲ್ಲಿ ಇನ್ನಷ್ಟು ಮುಧೋಳ ಶ್ವಾನಗಳ ಮರಿಗಳ ಸಾಕಾಣಿಕೆ ಜೊತೆಗೆ ಸಾಕಾಣಿಕೆ ರೈತರಿಗೂ ಅತ್ಯಂತ ಅನುಕೂಲವಾಗಲಿದೆ. ಹೀಗಾಗಿ ಸರ್ಕಾರ ಇನ್ನಷ್ಟು ಅನುದಾನ ನೀಡುವಂತಾಗಬೇಕಿದೆ. 

ಮನ್‌ ಕೀ ಬಾತ್‌ನಲ್ಲಿ ಮೋದಿ ಮುಧೋಳ ಪ್ರಸ್ತಾಪ: ಏನೀ ಶ್ವಾನ ಸ್ಪೆಷಾಲಿಟಿ?

ಒಟ್ಟಿನಲ್ಲಿ ದೇಶದ ಪ್ರಧಾನಿ ನರೇಂದ್ರ ಮೋದಿಯವರಿಗೆ ಭದ್ರತೆ ನೀಡುವ ವಿಶೇಷ ಭದ್ರತಾ ಪಡೆ ಎಸ್​ಪಿಜಿಗೆ  ಮುಧೋಳ ಶ್ವಾನಗಳು ಸೇರ್ಪಡೆಯಾಗಿರೋದು ಸಂತಸದ ಸಂಗತಿಯಾಗಿದ್ದು, ಬಾಗಲಕೋಟೆ ಜಿಲ್ಲೆಯ ಜನ್ರಿಗೆ ಹೆಮ್ಮೆ ತಂದಿದ್ದು, ಇವುಗಳ ಮಧ್ಯೆ ಇನ್ನಷ್ಟು ಮುಧೋಳ ಶ್ವಾನದ ಸಂತತಿ ಅಭಿವೃದ್ದಿ ಮತ್ತು ಪಾಲನೆ ಪೋಷಣೆಗೆ ಸರ್ಕಾರದಿಂದ ಇನ್ನಷ್ಟು ಹೆಚ್ಚೆಚ್ಚು ಪ್ರಾಧಾನ್ಯತೆ ಸಿಗುವಂತಾಗಲಿ ಎಂಬುದೇ ನಮ್ಮಯ ಆಶಯ..

click me!