ಹೆಣ್ಣಾಗಿ ಹುಟ್ಟಿ ಬದುಕುವುದೇ ದೊಡ್ಡ ಸವಾಲು : ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ

By Kannadaprabha NewsFirst Published Mar 17, 2021, 10:27 AM IST
Highlights

ಹೆಣ್ಣಾಗಿ ಹುಟ್ಟಿ ಬದುಕುವುದೇ ಒಂದು ದೊಡ್ಡ ಸವಾಲು ಎಂದು ಮೈಸೂರು ಜಿಲ್ಲಾಧಿಕಾರೊ ರೋಹಿಣಿ ಸಿಂಧೂರಿ ಅಭಿಪ್ರಾಯ ಪಟ್ಟದ್ದಾರೆ.  

 ಮೈಸೂರು (ಮಾ.17):  ಹೆಣ್ಣಾಗಿ ಹುಟ್ಟಿಬದುಕುವುದೇ ಸವಾಲು ಎನ್ನುವಂತಾಗಿದೆ ಎಂದು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದರು.

ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಮೈಸೂರು ವಿವಿ ಮಹಿಳಾ ಉದ್ಯೋಗಿಗಳ ಸಮುದಾಯ, ಮಹಿಳಾ ಅಧ್ಯಯನ ಕೇಂದ್ರ, ಮಹಿಳಾ ಸಮಸ್ಯೆಗಳನ್ನು ನಿಭಾಯಿಸುವ ವೇದಿಕೆ ಮತ್ತು ಮೈತ್ರಿ ವತಿಯಿಂದ ಮಂಗಳವಾರ ಆಯೋಜಿಸಿದ್ದ 110ನೇ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಸವಾಲು ಸ್ವೀಕರಿಸಬೇಕು ಎಂಬುದು ಸರಿಯಲ್ಲ. ಹೆಣ್ಣು ಭ್ರೂಣ ಹತ್ಯೆಯಂತಹ ಸಂದರ್ಭದಲ್ಲಿ ಹೆಣ್ಣಾಗಿ ಹುಟ್ಟಿಬದುಕುವುದೇ ಸವಾಲು ಎನ್ನುವಂತ್ತಾಗಿದೆ. ಈ ಕುರಿತು ಮಹಿಳೆಯರು ಎಚ್ಚರಿಕೆ ವಹಿಸಬೇಕು. ಮನೆಯಿಂದಲೇ ಮಕ್ಕಳಲ್ಲಿ ಸಮಾನತೆಯ ಪಾಠ ಕಲಿಸಬೇಕು. ಇತಿಹಾಸವನ್ನು ನೋಡಿದರೆ ಹಿಂದೆ ದೈಹಿಕ ಸಾಮಾರ್ಥ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು. ಆದರೆ, ಪ್ರಸ್ತುತ ಬೌದ್ಧಿಕ ಸಾಮಾರ್ಥ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹೀಗಾಗಿ, ಮಹಿಳೆಯರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ನಂಜನಗೂಡು : ಡೀಸಿ ರೋಹಿಣಿ ಸಿಂಧೂರಿ ಮಹತ್ವದ ಆದೇಶ .

ಮಹಿಳೆಯರ ಅಭಿವೃದ್ಧಿಗೆ ಪೋಷಕರ ಸಹಕಾರ ಬಹಳ ಮುಖ್ಯ. ಹಿಂದೆ ಹೆಣ್ಣು ಮಕ್ಕಳಿಗೆ ಚಿಕ್ಕವಯಸ್ಸಿಗೆ ಮದುವೆ ಮಾಡಲಾಗುತ್ತಿತ್ತು. ಅಡುಗೆ ಮನೆ, ಕುಟುಂಬ ನಿರ್ವಹಣೆಯಷ್ಟೇ ಅವರ ಬದುಕು ಎನ್ನುವಂತ್ತಾಗಿತ್ತು. ಆದರೆ, ಕಾಲಾನಂತರದಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಿದ್ದರಿಂದ ಬದಲಾವಣೆ ಸಾಧ್ಯವಾಗಿದೆ. ಮಹಿಳೆಯರು ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ಮಹಿಳೆಯರು ಮನೆ ಸೇರಿದಂತೆ ತಮ್ಮ ಸುತ್ತಮುತ್ತಲಿನಲ್ಲಿರುವವರಿಗೆ ಬೆಂಬಲ, ಪೋತ್ಸಾಹ ನೀಡುವ ಕಾರ್ಯ ಮಾಡಬೇಕು. ಪ್ರಸ್ತುತ ಒತ್ತಡದ ಬದುಕಿನಲ್ಲಿ ವೃತ್ತಿ ಹಾಗೂ ಕುಟುಂಬದ ನಿರ್ವಹಣೆಯ ಜೊತೆಗೆ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಮಹಿಳೆಯರು ಕಾಪಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಯೋಗ, ವ್ಯಾಯಾಮ, ಧ್ಯಾನ ಹಾಗೂ ಆಗಾಗ ಆರೋಗ್ಯ ತಪಾಸಣೆಯ ಮೂಲಕ ಆರೋಗ್ಯದ ಕಡೆ ಗಮನಕೊಡಿ. ಪೌಷ್ಟಿಕ ಆಹಾರ ಸೇವಿಸಬೇಕು. ಆಸಕ್ತಿಯ ಕ್ಷೇತ್ರದಲ್ಲಿ ತೊಡಗಿಕೊಳ್ಳಿ ಎಂದು ಅವರು ತಿಳಿಸಿದರು.

ಮೈವಿವಿ ಕುಲಪತಿ ಪೊ›.ಜಿ.ಹೇಮಂತ್‌ ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಜಯದೇವ ಆಸ್ಪತ್ರೆ ಮಕ್ಕಳ ಹೃದ್ರೋಗ ಮುಖ್ಯಸ್ಥೆ ಡಾ. ವಿಜಯಲಕ್ಷ್ಮಿ ಬಾಳೇಕುಂದ್ರಿ, ಕುಲಸಚಿವ ಪೊ›.ಆರ್‌. ಶಿವಪ್ಪ ಇದ್ದರು.

click me!