
ಚಿತ್ರದುರ್ಗ: ಮೂರು ವರ್ಷದ ಹಿಂದೆ ಪ್ರೀತಿಸಿ ಮದುವೆ (Love Marriage) ಆಗಿದ್ದ ಮಹಿಳೆ ಹಠಾತ್ ನಿಧನ ಹೊಂದಿದ್ದು, ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. 30 ವರ್ಷದ ಆಶಾ ಮೃತ ದುರ್ದೈವಿ.
ಮೃತ ಆಶಾ ಅವರು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಹೊಸ ಯಳನಾಡು ಗ್ರಾಮದ ನಿವಾಸಿ ಆಗಿದ್ದರು. ಕಳೆದ ಕೆಲವು ವರ್ಷಗಳಿಂದ ಹಿರಿಯೂರು ಪಟ್ಟಣದ ಇಮ್ರಾನ್(40) ಎಂಬಾತನನ್ನು ಪ್ರೀತಿಸಿ ಮದುವೆ ಆಗಿದ್ದರು. ಕಳೆದ ಮೂರು ವರ್ಷಗಳ ಹಿಂದೆ ಪ್ರೀತಿಸಿ ಮದುವೆ ಆಗಿದ್ದರು. ಇದೀಗ ಆಶಾ, ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಲವ್ ಜಿಹಾದ್ (love jihad) ಆರೋಪ ಕೇಳಿಬಂದಿದೆ.
ಇನ್ನು ಆಶಾ ನೇಣು ಬಿಗಿದ್ದ ಸ್ಥಿತಿಯಲ್ಲಿ ಪತ್ತೆಯಾದ ಬೆನ್ನಲ್ಲೇ ಆಕೆಯ ಪತಿ ಹಿರಿಯೂರು ಆಸ್ಪತ್ರೆಗೆ ಗಾಬರಿಯಲ್ಲಿ ಕರೆ ತಂದಿದ್ದಾನೆ. ಯಾವಾಗ ಆಕೆ ಪ್ರಾಣ ಬಿಟ್ಟಿದ್ದಾಳೆ ಎಂಬ ವಿಚಾರ ಗೊತ್ತಾಗುತ್ತಿದ್ದಂತೆಯೇ ಆತ ಅಲ್ಲಿಂದ ಪರಾರಿ ಆಗಿ, ನಾಪತ್ತೆ ಆಗಿದ್ದಾನೆ ಎಂದು ವರದಿಯಾಗಿದೆ.
ಆಶಾ ಇಮ್ರಾನ್ ಎಂಬಾತನನ್ನು ಪ್ರೀತಿಸಿ ಮದುವೆ ಆಗಿದ್ದಳು. ಆಶಾಳನ್ನು ಮದುವೆಯಾದ ಬೆನ್ನಲ್ಲೇ ಆಕೆಯ ಪತಿಯ ಮನೆಯಲ್ಲಿ ಕಿರುಕುಳ ಶುರುವಾಗಿತ್ತು. ಪತಿ ಹಣ ತೆಗೆದುಕೊಂಡು ಬರುವಂತೆ ಪೀಡಿಸುತ್ತಿದ್ದರು. ಆಕೆಯ ನೋವುಗಳನ್ನ ನೋಡಲಾಗದೇ ಒಂದು ತಿಂಗಳ ಹಿಂದಷ್ಟೇ ನಾವು ಒಂದು ಲಕ್ಷ ರೂಪಾಯಿ ಹಣವನ್ನು ಸಾಲ ಮಾಡಿ ನೀಡಿದ್ದೇವು ಎಂದು ಮೃತ ಆಶಾಳ ತಂದೆ ನಾಗರಾಜ್ ಆರೋಪಿಸಿದ್ದಾರೆ.
ಇನ್ನು ಮೃತ ಆಶಾಳ ತಂದೆ ನಾಗರಾಜ್ ಹಿರಿಯೂರು ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ನನ್ನ ಮಗಳಿಗೆ ಕಿರುಕುಳ ನೀಡಿ ಸಾಯಿಸಲಾಗಿದೆ. ಇದೊಂದು ಕೊಲೆ. ಮಗಳ ಸಾವಿಗೆ ಕಾರಣ ಆಗಿರುವ ಇಮ್ರಾನ್ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಕ್ರಮ ಆಗಬೇಕು. ಮಗಳ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ಪೊಲೀಸರ ಮುಂದೆ ಕಣ್ಣೀರು ಇಟ್ಟಿದ್ದಾರೆ.
ಇದರ ಮಧ್ಯೆ ಜಿಲ್ಲೆಯ ಹಿಂದೂ ಜಾಗರಣ ವೇದಿಕೆ ಭಜರಂಗದಳ, ವಿಶ್ವಹಿಂದೂ ಪರಿಷದ್ ಲವ್ ಜಿಹಾದ್ ಅನುಮಾನ ವ್ಯಕ್ತಪಡಿಸಿದೆ. ಲವ್ ಜಿಹಾದ್ ಆರೋಪ ವ್ಯಕ್ತಪಡಿಸಿರುವ ಹಿಂದೂಪರ ಕಾರ್ಯಕರ್ತರು.. ಖುದ್ದು ಪೊಲೀಸ್ ಅಧಿಕಾರಿಗಳನ್ನ ಭೇಟಿಯಾಗಿ ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.
ಬೇಸರದ ಇನ್ನೊಂದು ವಿಚಾರ ಏನೆಂದರೆ.. ಮೃತ ಆಶಾಗೆ ಎರಡೂವರೆ ವರ್ಷದ ಮಗು ಇದೆ. ಅಮ್ಮನನ್ನು ಕಳೆದುಕೊಂಡ ಪುಟಾಣಿ ಕಂದಮ್ಮ ಅನಾಥವಾಗಿದ್ದು, ಅಮ್ಮನಿಗಾಗಿ ಹಂಬಲಿಸುತ್ತಿದೆ. ಸದ್ಯ ಹಿರಿಯೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಲವ್ ಜಿಹಾದ್ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ. ಪೊಲೀಸರು ಆದಷ್ಟು ಬೇಗ ತನಿಖೆ ನಡೆಸಿ ನೊಂದ ಕುಟುಂಬಕ್ಕೆ ನ್ಯಾಯ ಕೊಡಿಸಬೇಕಿದೆ.