
ಬೆಂಗಳೂರು (ಅ.12): ಬೆಂಗಳೂರು ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಭಾನುವಾರ ರಾತ್ರಿ ಕೆಲಕಾಲ ಆತಂಕದ ಕ್ಷಣಗಳು ಎದುರಾಗಿದ್ದವು. ನೇರಳೆ ಮಾರ್ಗದಲ್ಲಿ (Purple Line) ಹಳಿಗೆ ಅನಧಿಕೃತವಾಗಿ ವ್ಯಕ್ತಿಯೊಬ್ಬ ಪ್ರವೇಶಿಸಿದ ಹಿನ್ನೆಲೆಯಲ್ಲಿ, ಮೆಟ್ರೋ ರೈಲು ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಯಿತು.
ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ನೇರಳೆ ಮಾರ್ಗದ ದೀಪಾಂಜಲಿನಗರ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವಿನ ಹಳಿಗೆ ಅಪರಿಚಿತ ವ್ಯಕ್ತಿಯೊಬ್ಬರು ಅಕ್ರಮವಾಗಿ ಪ್ರವೇಶಿಸಿದ್ದಾರೆ.
ಹಳಿ ಬಳಿ ಅಪರಿಚಿತ ವ್ಯಕ್ತಿ ಕಾಣಿಸಿಕೊಳ್ಳುತ್ತಿದ್ದಂತೆ ತಕ್ಷಣ ಎಚ್ಚೆತ್ತ ಮೆಟ್ರೋ ಸಿಬ್ಬಂದಿ ಮತ್ತು ಭದ್ರತಾ ಸಿಬ್ಬಂದಿ ಕೂಡಲೇ ಎಮರ್ಜೆನ್ಸಿ ಅಲರ್ಟ್ ಘೋಷಿಸಿದರು. ಸಂಭಾವ್ಯ ಅಪಾಯವನ್ನು ತಪ್ಪಿಸಲು ಕೂಡಲೇ ರೈಲು ಮಾರ್ಗದ ವಿದ್ಯುತ್ ಸಂಪರ್ಕವನ್ನು (Power Supply) ಕಡಿತಗೊಳಿಸಲಾಯಿತು.
ಇದರಿಂದಾಗಿ ರಾತ್ರಿ 8:15 ರಿಂದ 8:30 ರವರೆಗೆ ವಿಜಯನಗರ ಮತ್ತು ಚಲ್ಲಘಟ್ಟ ನಡುವಿನ ಮೆಟ್ರೋ ರೈಲು ಸಂಚಾರವನ್ನು ಅಲ್ಪಕಾಲ ತಡೆಹಿಡಿಯಲಾಗಿತ್ತು.
ಕೂಡಲೇ ಎಚ್ಚೆತ್ತುಕೊಂಡ ಸಿಬ್ಬಂದಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಕೆಲ ನಿಮಿಷಗಳ ಕಾಲ ಸ್ಥಗಿತಗೊಂಡಿದ್ದ ಮೆಟ್ರೋ ಸಂಚಾರವು, ರಾತ್ರಿ 8:30 ಗಂಟೆಯಿಂದ ನೇರಳೆ ಮಾರ್ಗಾದ್ಯಂತ ಸಂಪೂರ್ಣವಾಗಿ ಸಹಜ ಸ್ಥಿತಿಗೆ ಮರಳಿದೆ. ಎಂದಿನಂತೆ ರೈಲುಗಳು ಸಂಚರಿಸುತ್ತಿವೆ ಎಂದು ಬಿಎಂಆರ್‌ಸಿಎಲ್ ತಿಳಿಸಿದೆ. ಮೆಟ್ರೋ ಸಂಚಾರದಲ್ಲಾದ ಈ ಅಲ್ಪಾವಧಿಯ ವ್ಯತ್ಯಯದಿಂದ ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ಮೆಟ್ರೋ ಆಡಳಿತ ಮಂಡಳಿ ವಿಷಾದ ವ್ಯಕ್ತಪಡಿಸಿದೆ.