ಕಾವೇರಿ ವನ್ಯಧಾಮದಲ್ಲಿ ತೋಳ ಬಂತು ತೋಳ..!

By Kannadaprabha NewsFirst Published May 10, 2020, 1:06 PM IST
Highlights

ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿಯೇ ಅತಿ ಹೆಚ್ಚು ಆನೆ ಮತ್ತು ಹುಲಿ ಹೊಂದಿರುವ ಖ್ಯಾತಿ ಹೊಂದಿರುವ ಕಾವೇರಿ ವನ್ಯಜೀವಿಧಾಮದಲ್ಲಿ ಮೊಟ್ಟಮೊದಲ ಬಾರಿಗೆ ತೋಳವೊಂದು ಕಾಣಿಸಿಕೊಂಡಿದೆ. ಇದು ಚಾಮರಾಜನಗರ ಜಿಲ್ಲೆಯಲ್ಲಿ ಕಾಣಿಸಿಕೊಂಡ ಮೊದಲ ತೋಳ ಎಂದು ದಾಖಲಾಗಿದೆ.

ಚಾಮರಾಜನಗರ(ಮೇ 10): ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿಯೇ ಅತಿ ಹೆಚ್ಚು ಆನೆ ಮತ್ತು ಹುಲಿ ಹೊಂದಿರುವ ಖ್ಯಾತಿ ಹೊಂದಿರುವ ಕಾವೇರಿ ವನ್ಯಜೀವಿಧಾಮದಲ್ಲಿ ಮೊಟ್ಟಮೊದಲ ಬಾರಿಗೆ ತೋಳವೊಂದು ಕಾಣಿಸಿಕೊಂಡಿದೆ. ಇದು ಚಾಮರಾಜನಗರ ಜಿಲ್ಲೆಯಲ್ಲಿ ಕಾಣಿಸಿಕೊಂಡ ಮೊದಲ ತೋಳ ಎಂದು ದಾಖಲಾಗಿದೆ.

ಕಾವೇರಿ ವನ್ಯಜೀವಿಧಾಮದ ಕೊತ್ತನೂರು ವಲಯದಲ್ಲಿ ಚಿರತೆಗಳ ಕುರಿತು ಅಧ್ಯಯನಕ್ಕಾಗಿ ನೇಚರ್‌ ಕನ್ಸರ್ವೇಷನ್‌ ಫೌಂಡೇಶನ್‌ನ ವನ್ಯಜೀವಿ ವಿಜ್ಞಾನಿ ಸಂಜಯ್‌ ಗುಬ್ಬಿ ಮತ್ತು ಅವರ ತಂಡದವರು ಇಟ್ಟಿದ್ದ ಕ್ಯಾಮರಾ ಟ್ರ್ಯಾಪ್‌ನಲ್ಲಿ ಏಪ್ರಿಲ್‌ 7 ರಂದು ಮುಂಜಾನೆ ಈ ಅಪರೂಪದ ಪ್ರಾಣಿ ಸೆರೆಯಾಗಿದೆ.

ಸೋಂಕು ಭಾರಿ ಹೆಚ್ಚಳ!: ರಾಜ್ಯಕ್ಕೆ ಕಂಟಕವಾಯ್ತಾ ಲಾಕ್‌ಡೌನ್ ಸಡಿಲಿಕೆ?

ಒಣ ಪ್ರದೇಶಗಳಲ್ಲಿ ಹೆಚ್ಚಾಗಿ ಕಂಡು ಬರುವ ತೋಳಗಳು, ಕರ್ನಾಟಕದಲ್ಲಿ ಹಾವೇರಿ, ಕೊಪ್ಪಳ, ತುಮಕೂರು, ರಾಯಚೂರು, ಬಳ್ಳಾರಿ ಮತ್ತಿತರ ಜಿಲ್ಲೆಗಳಲ್ಲಿ ಕಂಡು ಬರುತ್ತವೆ. ಇವು ಹೆಚ್ಚಾಗಿ ಒಣ ಹುಲ್ಲುಗಾವಲು, ಕುರುಚಲು ಕಾಡುಗಳಲ್ಲಿ ಮತ್ತು ಬಹಳ ಅಪರೂಪವಾಗಿ ಎಲೆ ಉದುರುವ ಕಾಡುಗಳಲ್ಲಿ ಕಂಡು ಬರುತ್ತವೆ. ಇವುಗಳ ವ್ಯಾಪ್ತಿ ಹಲವಾರು ರಾಜ್ಯಗಳಲ್ಲಿದ್ದರೂ ಆವಾಸಸ್ಥಾನದ ನಾಶ ಮತ್ತು ಪ್ರತಿಕಾರದ ವಧೆಗೆ ಬಲಿಯಾಗುತ್ತಿವೆ.

ಭಾರತದಲ್ಲಿ ಇವುಗಳ ಸಂಖ್ಯೆ ಹುಲಿಗಳಿಗಿಂತಲೂ ಕಡಿಮೆಯಿರಬಹುದು. ಇವುಗಳು ವನ್ಯಜೀವಿ ಸಂರಕ್ಷಣಾ ಕಾಯ್ದೆ 1972 ರ ಶೆಡ್ಯೂಲ್‌-1 ರಲ್ಲಿ ಸಂರಕ್ಷಿತವಾಗಿವೆ. ಚಾಮರಾಜನಗರ ಜಿಲ್ಲೆ ವ್ಯಾಪ್ತಿಯ ಕಾವೇರಿ ಮತ್ತು ಮಲೆ ಮಹದೇಶ್ವರ ವನ್ಯಜೀವಿಧಾಮಗಳು, ಬಿಳಿಗಿರಿರಂಗನಬೆಟ್ಟಮತ್ತು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಹಿಂದೆ ಕೈಗೊಂಡ ಯಾವುದೇ ಅಧ್ಯಯನಗಳಲ್ಲೂ ತೋಳಗಳು ದಾಖಲಾಗಿರಲಿಲ್ಲ. ಈ ದಾಖಲೆಯೊಡನೆ, ದಕ್ಷಿಣ ಭಾರತದಲ್ಲಿ ನಾಯಿ ಜಾತಿಗೆ ಸೇರಿರುವ ಎಲ್ಲಾ ನಾಲ್ಕು ಪ್ರಭೇದಗಳ (ಸೀಳು ನಾಯಿ, ತೋಳ, ಗುಳ್ಳೆ ನರಿ, ಮತ್ತು ಕಪ್ಪಲು ನರಿ) ವನ್ಯಜೀವಿಗಳು ಈಗ ಚಾಮರಾಜನಗರ ಜಿಲ್ಲೆಯಲ್ಲಿ ದಾಖಲಾದಂತಾಗಿದೆ.

ಕೊರೋನಾ ಚಿಕಿತ್ಸೆಗೆ ಪ್ರತಿ ವ್ಯಕ್ತಿಗೆ 3.5 ಲಕ್ಷ ರೂ. ವೆಚ್ಚ!

ಸಂಜಯ್‌ ಗುಬ್ಬಿಯವರು ಚಿರತೆಗಳ ಕುರಿತು ನಡೆಸುತ್ತಿರುವ ಅಧ್ಯಯನದಿಂದ ಇನ್ನಿತರ ಹಲವಾರು ವನ್ಯಜೀವಿಗಳ ಬಗ್ಗೆ ಮಹತ್ವವಾದ ಮಾಹಿತಿಗಳು ದೊರಕುತ್ತಿವೆ. ಈ ಹಿಂದೆ, 2014ರಲ್ಲಿ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ತರಕರಡಿಯನ್ನು ಕಾವೇರಿ ವನ್ಯಜೀವಿಧಾಮದಲ್ಲಿ ದಾಖಲಿಸಿದ್ದಾರೆ, 2015ರಲ್ಲಿ ಹುಲ್ಲೆಕರಗಳ ಇರುವಿಕೆಯನ್ನು ತುಮಕೂರು ಜಿಲ್ಲೆಯಲ್ಲಿ ದಾಖಲಿಸಲಾಯಿತು ಮತ್ತು ಆ ಪ್ರದೇಶವನ್ನು ಸರ್ಕಾರವು ಬುಕ್ಕಾಪಟ್ಟಣ ಚಿಂಕಾರಾ ವನ್ಯಜೀವಿಧಾಮವೆಂದು ಘೋಷಿಸಿತು. ಈ ದಾಖಲೆ, ದಕ್ಷಿಣ ಭಾರತದಲ್ಲಿ ಹುಲ್ಲೆಕರಗಳು ಸಿಗುವ ಮಿತಿಯನ್ನು ವಿಸ್ತರಿಸಿತು. ಕರ್ನಾಟಕದಲ್ಲಿ ವಿರಾಜಪೇಟೆ ತಾಲೂಕಿನಲ್ಲಿ ಬಿಟ್ಟರೆ ಇನ್ನೆಲ್ಲೂ ದಾಖಲಾಗದಿದ್ದ ಕಂದು ಮುಂಗಸಿಯನ್ನು 2018ರಲ್ಲಿ ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ದಾಖಲಿಸಿ, ಇದರ ಈಶಾನ್ಯ ಮಿತಿ ವಿಸ್ತರಿಸಿದ್ದನ್ನೂ ಈ ಅಧ್ಯಯನದ ಮೂಲಕ ದಾಖಲಿಸಲಾಗಿದೆ.

ಅಧ್ಯಯನ ತಂಡದಲ್ಲಿ ಸಂದೇಶ್‌ ಅಪುತ್ರ್ಪ ನಾಯ್‌್ಕ, ಗಿರೀಶ್‌ ಎಂ. ಎನ್‌, ಜ್ಞಾನೇಂದ್ರ, ಪೂರ್ಣೇಶ ಎಚ್‌.ಸಿ ಮತ್ತಿತರರು ಇದ್ದಾರೆ. ತೋಳಗಳು ಹೆಚ್ಚಾಗಿ ಒಣ ಹುಲ್ಲುಗಾವಲು, ಕುರುಚಲು ಕಾಡುಗಳಲ್ಲಿ ಮತ್ತು ಅಪರೂಪವಾಗಿ ಎಲೆ ಉದುರುವ ಕಾಡುಗಳಲ್ಲಿ ಕಂಡು ಬರುತ್ತವೆ. ಇದೀಗ ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಧಾಮದಲ್ಲೂ ಪತ್ತೆಯಾಗಿರುವುದು ಉತ್ತಮ ಬೆಳವಣಿಗೆ ಎಂದು ವನ್ಯಜೀವಿ ವಿಜ್ಞಾನಿ ಸಂಜಯ್‌ ಗುಬ್ಬಿ ತಿಳಿಸಿದ್ದಾರೆ.

click me!