ಮೈಸೂರಿನಲ್ಲಿ ಒಡೆಯರ್, ಚಾ.ನಗರದಲ್ಲಿ ಪ್ರಸಾದ್, ಮಂಡ್ಯದಲ್ಲಿ ಶಿವನಂಜಪ್ಪ ಹೆಚ್ಚು ಬಾರಿ ಗೆದ್ದವರು

By Kannadaprabha News  |  First Published Apr 26, 2024, 10:08 AM IST

ಮೈಸೂರಿನಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಚಾಮರಾಜನಗರದಲ್ಲಿ ವಿ. ಶ್ರೀನಿವಾಸಪ್ರಸಾದ್, ಮಂಡ್ಯದಲ್ಲಿ ಎಂ.ಕೆ. ಶಿವನಂಜಪ್ಪ ಅತಿ ಹೆಚ್ಚು ಬಾರಿ ಗೆದ್ದ ಸಂಸದರು ಎನಿಸಿಕೊಂಡಿದ್ದಾರೆ.


 ಅಂಶಿ ಪ್ರಸನ್ನಕುಮಾರ್

 ಮೈಸೂರು :  ಮೈಸೂರಿನಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಚಾಮರಾಜನಗರದಲ್ಲಿ ವಿ. ಶ್ರೀನಿವಾಸಪ್ರಸಾದ್, ಮಂಡ್ಯದಲ್ಲಿ ಎಂ.ಕೆ. ಶಿವನಂಜಪ್ಪ ಅತಿ ಹೆಚ್ಚು ಬಾರಿ ಗೆದ್ದ ಸಂಸದರು ಎನಿಸಿಕೊಂಡಿದ್ದಾರೆ.

Tap to resize

Latest Videos

ಶ್ರೀನಿವಾಸಪ್ರಸಾದ್ ಆರು ಬಾರಿ, ಹಾಗೂ ಶಿವನಂಜಪ್ಪ ತಲಾ ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಅದೇ ರೀತಿ ಎಸ್.ಎಂ. ಸಿದ್ದಯ್ಯ ಅವರು ಮೈಸೂರು ದ್ವಿಸದಸ್ಯ ಕ್ಷೇತ್ರವಾಗಿದ್ದಾಗ ಒಮ್ಮೆ, ಚಾಮರಾಜನಗರ ಮೀಸಲು ಕ್ಷೇತ್ರದಿಂದ ಮೂರು ಬಾರಿ ಒಟ್ಟು ನಾಲ್ಕು ಬಾರಿ ಆಯ್ಕೆಯಾಗಿದ್ದಾರೆ. ಆದರೆ 1952 ರಲ್ಲಿ ಮೈಸೂರು, 1980 ರಲ್ಲಿ ಚಾಮರಾಜನಗರದಲ್ಲಿ ಸೋತರು.

ವಿ. ಶ್ರೀನಿವಾಸಪ್ರಸಾದ್, ಎಂ.ಕೆ. ಶಿವನಂಜಪ್ಪ, ಎಸ್.ಎಂ. ಸಿದ್ದಯ್ಯ- ಹ್ಯಾಟ್ರಿಕ್ ಜೊತೆಗೆ ಸತತ ನಾಲ್ಕು ಗೆಲವು ದಾಖಲಿಸಿದವರು. ಆದರೆ ಒಡೆಯರ್ ಒಮ್ಮೆ ಸತತ ಎರಡು ಬಾರಿ, ನಂತರ ಒಂದೊಂದು ಬಾರಿ ಒಟ್ಟು ನಾಲ್ಕು ಬಾರಿ ಗೆದ್ದವರು.

ಮೈಸೂರಿನಲ್ಲಿ ಎಚ್.ಡಿ. ತುಳಸಿದಾಸಪ್ಪ, ಚಾಮರಾಜನಗರದಲ್ಲಿ ಎಸ್.ಎಂ. ಸಿದ್ದಯ್ಯ ಹ್ಯಾಟ್ರಿಕ್ ಗೆಲವು ದಾಖಲಿಸಿದವರು. ಆದರೆ ತುಳಸಿದಾಸಪ್ಪ ಅವರು 1980ರ ಚುನಾವಣೆಯಲ್ಲಿ ಸೋತರು.

ಮಂಡ್ಯದಲ್ಲಿ ಒಂದು ಉಪ ಚುನಾವಣೆ ಸೇರಿದಂತೆ ಎಸ್.ಎಂ. ಕೃಷ್ಣ ಅವರು ಮೂರು ಬಾರಿ ಆಯ್ಕೆಯಾಗಿದ್ದಾರೆ.

ಹ್ಯಾಟ್ರಿಕ್ ಸಾಧಕರು, ತಪ್ಪಿಸಿಕೊಂಡವರ ಕಥೆ...!

ಚಾಮರಾಜನಗರ ಕ್ಷೇತ್ರದಲ್ಲಿ ಎಸ್.ಎಂ. ಸಿದ್ದಯ್ಯ 1962,1967, 1971- ಹೀಗೆ ಹ್ಯಾಟ್ರಿಕ್ ಗೆಲವು ದಾಖಲಿಸಿದ್ದರು. ಇದಲ್ಲದೇ ಅವರು ಮೈಸೂರು ದ್ವಿಸದಸ್ಯ ಕ್ಷೇತ್ರದಿಂದ 1957 ರಲ್ಲಿ ಗೆದ್ದಿದ್ದರು. ಒಟ್ಟಾರೆ ಅವರು ನಾಲ್ಕು ಬಾರಿ ಆಯ್ಕೆಯಾಗಿದ್ದರು.

ವಿ. ಶ್ರೀನಿವಾಸಪ್ರಸಾದ್ ಅವರು 1980, 1984, 1989, 1991 ರಲ್ಲಿ ಆಯ್ಕೆಯಾಗಿ ಹ್ಯಾಟ್ರಿಕ್ ಹಾಗೂ ಸತತ ನಾಲ್ಕು ಗೆಲವು ದಾಖಲಿಸಿದ್ದರು. ನಂತರ ಅವರು 1996, 1998 ರಲ್ಲಿ ಸೋತರು. 1999 ರಲ್ಲಿ ಐದನೇ, 2019 ರಲ್ಲಿ ಆರನೇ ಗೆಲವು ದಾಖಲಿದರು.

ಎ. ಸಿದ್ದರಾಜು ಅವರು 1996. 1998 ರಲ್ಲಿ ಗೆದ್ದು. 1999 ರಲ್ಲಿ ಸೋಲುವ ಮೂಲಕ ಹ್ಯಾಟ್ರಿಕ್ ತಪ್ಪಿಸಿಕೊಂಡರು. ನಂತರ ಅವರು 2004 ರಲ್ಲೂ ಸೋತರು. ಸಿದ್ದರಾಜು ಅವರು ಎರಡು ಬಾರಿ ಗೆದ್ದು, ಎರಡು ಬಾರಿ ಸೋತಿದ್ದಾರೆ.

2009 ಹಾಗೂ 2014 ರಲ್ಲಿ ಚಾಮರಾಜನಗರದಿಂದ ಗೆದ್ದು ಸತತ ಎರಡು ಬಾರಿ ಸಂಸದರಾಗಿದ್ದ ಆರ್. ಧ್ರುವನಾರಾಯಣ ಅವರು 2019 ರಲ್ಲಿ ಶ್ರೀನಿವಾಸಪ್ರಸಾದ್ ಅವರ ಎದುರು ಇಡೀ ದೇಶದಲ್ಲಿಯೇ ಅತ್ಯಂತ ಕಡಿಮೆ ಅಂತರ ಅಂದರೆ 1,817 ಮತಗಳಿಂದ ಸೋತು, ಹ್ಯಾಟ್ರಿಕ್ ಗೆಲವು ತಪ್ಪಿಸಿಕೊಂಡರು.

ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಎಂ. ಶಂಕರಯ್ಯ (1957, 1962). ವಿ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (1984, 1989) ಹಾಗೂ ಪ್ರತಾಪ್ ಸಿಂಹ (2014, 2019) ಸತತ ಎರಡು ಗೆಲವು ದಾಖಲಿಸಿದವರು. ಎಚ್.ಡಿ. ತುಳಸಿದಾಸ್ (1967, 1971, 1977) ಸತತ ಎರಡು ಅಲ್ಲದೇ ಮತ್ತೊಂದು ಬಾರಿಯೂ ಗೆದ್ದು ಹ್ಯಾಟ್ರಿಕ್ ಬಾರಿಸಿದವರು.

ನಂತರ ಒಡೆಯರ್ 1996, 1999 ರಲ್ಲಿ ಗೆದ್ದು, ಮೈಸೂರಿನಲ್ಲಿ ಅತಿ ಹೆಚ್ಚು ಅಂದರೆ ನಾಲ್ಕು ಬಾರಿ ಗೆದ್ದ ದಾಖಲೆ ನಿರ್ಮಿಸಿದ್ದಾರೆ.

ಪ್ರತಾಪ್ ಸಿಂಹ ಈ ಬಾರಿ ಟಿಕೆಟ್ ತಪ್ಪಿಸಿಕೊಂಡು, ಹ್ಯಾಟ್ರಿಕ್ ಗೆಲವು ದಾಖಲಿಸುವ ಅವಕಾಶ ಕಳೆದುಕೊಂಡಿದ್ದಾರೆ.ಎಂ. ಶಂಕರಯ್ಯ ಅವರು ಮೂರನೇ ಬಾರಿಗೆ ನನಗೆ ಟಿಕೆಟ್ ಬೇಡ, ಬೇರೆಯವರಿಗೆ ಅವಕಾಶ ಮಾಡಿಕೊಡಿ ಎಂದು ವಿಧಾನ ಪರಿಷತ್ ಸದಸ್ಯರಾಗಿದ್ದರು.

ಮಂಡ್ಯದಲ್ಲಿ ಜಿ. ಮಾದೇಗೌಡರು 1989, 1991 ರಲ್ಲಿ ಸತತ ಎರಡು ಬಾರಿ ಆಯ್ಕೆಯಾಗಿ 1996 ರಲ್ಲಿ ಕೆ.ಆರ್. ಪೇಟೆ ಕೃಷ್ಣ ಅವರ ಎದುರು ಸೋತು ಹ್ಯಾಟ್ರಿಕ್ ತಪ್ಪಿಸಿಕೊಂಡರು.

ಎರಡು ಬಾರಿ, ಒಂದು ಬಾರಿ ಗೆದ್ದವರು

ಸಿ.ಎಚ್. ವಿಜಯಶಂಕರ್ ಅವರು ಮೈಸೂರು ಕ್ಷೇತ್ರದಿಂದ 1998, 2004 ರಲ್ಲಿ ಆಯ್ಕೆಯಾಗಿ, 1999,2009, 2019 ರಲ್ಲಿ ಸೋತಿದ್ದಾರೆ. ಅವರು 2014 ರಲ್ಲಿ ಹಾಸನ ಲೋಕಸಭಾ ಕ್ಷೇತ್ರದಿಂದಲೂ ಸ್ಪರ್ಧಿಸಿ, ಸೋತಿದ್ದರು.

ಮಂಡ್ಯದಲ್ಲಿ ಒಂದು ಉಪ ಚುನಾವಣೆ ಸೇರಿದಂತೆ ಕೆ. ಚಿಕ್ಕಲಿಂಗಯ್ಯ ಎರಡು ಬಾರಿ

ಆಯ್ಕೆಯಾಗಿದ್ದಾರೆ.

ಮೈಸೂರಿನಿಂದ ಎಂ.ಎಸ್. ಗುರುಪಾದಸ್ವಾಮಿ (ಮೂರು ಸೋಲು), ಎನ್. ರಾಚಯ್ಯ, ಎಂ. ರಾಜಶೇಖರಮೂರ್ತಿ, ಚಂದ್ರಪ್ರಭಾ ಅರಸು, ಎಚ್. ವಿಶ್ವನಾಥ್ [ಒಂದು ಸೋಲು], ಚಾಮರಾಜನಗರಿಂದ ಬಿ. ರಾಚಯ್ಯ [ಒಂದು ಸೋಲು], ಕಾಗಲವಾಡಿ ಶಿವಣ್ಣ, ಮಂಡ್ಯದಿಂದ ಕೆ.ವಿ. ಶಂಕರಗೌಡ, ಕೆ.ಆರ್. ಪೇಟೆ ಕೃಷ್ಣ, ಎನ್. ಚಲುವರಾಯಸ್ವಾಮಿ, ರಮ್ಯಾ, ಸಿ.ಎಸ್. ಪುಟ್ಟರಾಜು, ಎಲ್.ಆರ್. ಶಿವರಾಮೇಗೌಡ, ಸುಮಲತಾ ಅಂಬರೀಶ್- ತಲಾ ಒಂದು ಬಾರಿ ಗೆದ್ದವರು.

ಅಪ್ಪ- ಮಕ್ಕಳ ಸೋಲು- ಗೆಲವು...

11ಎ- ಎಚ್.ಸಿ. ದಾಸಪ್ಪ, ಎಚ್.ಡಿ. ತುಳಸಿದಾಸಪ್ಪ

11ಬಿ- ಬಿ. ರಾಚಯ್ಯ, ಎ.ಆರ್. ಕೃಷ್ಣಮೂರ್ತಿ

11ಸಿ- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್

11ಡಿ- ಡಾ.ಎಚ್.ಸಿ. ಮಹದೇವಪ್ಪ, ಸುನಿಲ್ ಬೋಸ್

11ಇ- ಎಚ್.ಡಿ. ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ

---

ಮೈಸೂರಿನಲ್ಲಿ ಕಾಂಗ್ರೆಸ್ ನ ಘಟಾನುಘಟಿ ನಾಯಕ ಎಚ್.ಸಿ. ದಾಸಪ್ಪ 1952 ರಲ್ಲಿ ಸೋತರು. ಆದರೆ ಅವರ ಪುತ್ರ ಎಚ್.ಡಿ. ತುಳಸಿದಾಸ್ ಅವರು 1967, 1971 ಹಾಗೂ 1977- ಹೀಗೆ ಸತತ ಮೂರು ಬಾರಿ ಹ್ಯಾಟ್ರಿಕ್ ಜಯ ದಾಖಲಿಸಿದ್ದರು. ದಾಸಪ್ಪ ಅವರು ನಂತರ ಬೆಂಗಳೂರಿನಿಂದ ಎರಡು ಬಾರಿ ಗೆದ್ದು, ಕೇಂದ್ರದಲ್ಲಿ ರೈಲ್ವೆ ಮಂತ್ರಿಯಾಗಿದ್ದರು.

ಚಾಮರಾಜನಗರದಲ್ಲಿ ಬಿ. ರಾಚಯ್ಯ ಅವರು 1977 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಗೆದ್ದರೆ 1980 ರಲ್ಲಿ ಸೋತರು. ಆದರೆ ಅವರ ಪುತ್ರ ಎ.ಆರ್. ಕೃಷ್ಣಮೂರ್ತಿ 2009 ಹಾಗೂ 2014 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸೋತರು.

ಈ ಬಾರಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರ ದತ್ತು ಪುತ್ರ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮೈಸೂರಿನಿಂದ ಬಿಜೆಪಿ ಅಭ್ಯರ್ಥಿ. ಡಾ.ಎಚ್.ಸಿ. ಮಹದೇವಪ್ಪ ಅವರ ಪುತ್ರ ಸುನಿಲ್ ಬೋಸ್ ಚಾಮರಾಜನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ.

ಒಡೆಯರ್ 1984, 1989, 1996. 1999 ರಲ್ಲಿ ಮೈಸೂರಿನಿಂದ ಕಾಂಗ್ರೆಸ್ ಟಿಕೆಟ್ ಮೇಲೆ ಗೆದ್ದಿದ್ದರು. 1991 ರಲ್ಲಿ ಬಿಜೆಪಿ, 2004 ರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸೋತಿದ್ದರು. ಡಾ.ಮಹದೇವಪ್ಪ 1991 ರಲ್ಲಿ ಚಾಮರಾಜನಗರದಿಂದ ಜನತಾದಳ ಅಭ್ಯರ್ಥಿಯಾಗಿ ಸೋತಿದ್ದರು.

ಮಂಡ್ಯದಲ್ಲಿ 2019ರ ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಜೆಡಿಎಸ್ ಅಭ್ಯರ್ಥಿಯಾಗಿ ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಎದುರು ಸೋತಿದ್ದರು. ಈ ಬಾರಿ ನಿಖಿಲ್ ಅವರ ತಂದೆ, ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಮಂಡ್ಯದಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ.

ಈ ಬಾರಿ ಮೈಸೂರಿನಿಂದ ಯದುವೀರ್, ಚಾಮರಾಜನಗರದಿಂದ ಸುನಿಲ್ ಬೋಸ್, ಮಂಡ್ಯದಿಂದ ಎಚ್.ಡಿ. ಕುಮಾರಸ್ವಾಮಿ ಸ್ಪರ್ಧಿಸಿರುವುದರಿಂದ ಫಲಿತಾಂಶ ಕುತೂಹಲ ಕೆರಳಿಸಿದೆ.-

click me!