
ಹುಬ್ಬಳ್ಳಿ(ಜ.16): ಗೊಂದಲದಿಂದ ಶವ ಅದಲು ಬದಲಾಗಿ, ಕೊನೆಗೆ ಮುಂಗೈ ಮೇಲಿದ್ದ ನಾಯಿ ಮರಿ ಟ್ಯಾಟೂ ಶವ ಗುರುತಿಗೆ ನೆರವಾದ ಘಟನೆ ನಡೆಯಿತು.
ಅಪಘಾತದಲ್ಲಿ ಮೃತಪಟ್ಟಿದ್ದ ತಾಯಿ ಹೇಮಲತಾ ಮೃತದೇಹ ಕಿಮ್ಸ್‌ನಲ್ಲಿತ್ತು. ಮಗಳು ಅಸ್ಮಿತಾ ಮಾನಸಿ ಮೃತದೇಹ ಧಾರವಾಡದ ಸಿವಿಲ್ ಆಸ್ಪತ್ರೆಯಲ್ಲಿತ್ತು. ಬಟ್ಟೆ ಗೊಂದಲದಿಂದಾಗಿ ಪರಂಜ್ಯೋತಿ ಎಂಬುವವರ ಶವವನ್ನು ಅವರ ಸಂಬಂಧಿಕರು ತೆಗೆದುಕೊಂಡು ಹೋಗುವ ಬದಲು ಮರಣೋತ್ತರ ಪರೀಕ್ಷೆ ಮಾಡಿಸಿಕೊಂಡು ಅಸ್ಮಿತಾ ಮಾನಸಿ ಕಳೆಬರವನ್ನು ಕೊಂಡು ದಾವಣಗೆರೆಗೆ ಪ್ರಯಾಣಿಸಿದ್ದರು. ಇತ್ತ ತಾಯಿ ಹೇಮಲತಾ ಮೃತದೇಹ ಪತ್ತೆಹಚ್ಚಿದ ಅವರ ಸಂಬಂಧಿಕರು ಮಗಳು ಅಸ್ಮಿತಾ ಮಾನಸಿ ಮೃತದೇಹಕ್ಕಾಗಿ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೋಗಿ ಪುನಃ ಹುಬ್ಬಳ್ಳಿಗೆ ಅಲೆದರು.
ಧಾರವಾಡ ಅಪಘಾತದ ಘೋರ ಚಿತ್ರಗಳು..ಬಾಲ್ಯದ ಗೆಳತಿಯರೆಲ್ಲ ದುರಂತಕ್ಕೆ ಬಲಿ
ಅಂತಿಮವಾಗಿ ಅಸ್ಮಿತಾ ಮಾನಸಿ ದೇಹವನ್ನು ಪರಂಜ್ಯೋತಿ ಸಂಬಂಧಿಕರು ಕೊಂಡೊಯ್ದಿದ್ದನ್ನು ಧಾರವಾಡ ಗ್ರಾಮೀಣ ಪೊಲೀಸರ ನೆರವಿನಿಂದ ಪತ್ತೆ ಮಾಡಲಾಯಿತು. ಇಷ್ಟರಲ್ಲಿ ಬಂಕಾಪುರ ಕ್ರಾಸ್‌ವರೆಗೆ ಅಸ್ಮಿತಾ ಮಾನಸಿ ಮೃತದೇಹವನ್ನು ಕೊಂಡೊಯ್ಯಲಾಗಿತ್ತು. ತಕ್ಷಣ ಗ್ರಾಮೀಣ ಇನ್‌ಸ್ಪೆಕ್ಟರ್ ಮಹೇಂದ್ರ ನಾಯಕ ಅಲ್ಲಿಗೆ ತೆರಳಿ ಸಂಬಂಧಿಕರು ತಿಳಿಸಿದ್ದಂತೆ ಮೃತದೇಹದ ಬಲ ಮುಂಗೈನಲ್ಲಿದ್ದ ನಾಯಿಮರಿಯ ಟ್ಯಾಟೊ ಆಧಾರದ ಮೇರೆಗೆ ಮೃತದೇಹ ದೃಢಪಡಿಸಿಕೊಂಡರು. ಹೀಗೆ ಶವ ಗುರುತಿಗೆ ನಾಯಿಮರಿ ಟ್ಯಾಟೂ ಸಾಕ್ಷಿ ನುಡಿಯಿತು! ಬಳಿಕ ಸಂಬಂಧಿಕರಿಗೆ ನೀಡಲಾಯಿತು. ಕಿಮ್ಸ್‌ನ ಶವಾಗಾರದಲ್ಲಿದ್ದ ಶವವನ್ನು ಪರಂಜ್ಯೋತಿ ಎಂದು ಗುರುತಿಸಿ ಅವರ ಸಂಬಂಧಿಕರು ಪಡೆದರು.