ತರಗತಿಗಳು ಸಂಪೂರ್ಣ ಕಾರ್ಯಾರಂಭ

By Kannadaprabha News  |  First Published Jan 16, 2021, 8:52 AM IST

ದೇಶದಲ್ಲಿ ಮಹಾಮಾರಿ ಕೊರೋನಾ ಅಪ್ಪಳಿಸಿದ್ದ ಬಳಿಕ ಮುಚ್ಚಲ್ಪಟ್ಟಿದ್ದ ಶಾಲಾ ಕಾಲೇಜುಗಳು ಮತ್ತೆ ತೆರೆದಿವೆ.  ವಿದ್ಯಾರ್ಥಿಗಳ ಹಾಜಾರಾತಿ ಸಂಖ್ಯೆಯೂ ಕೂಡ ಹೆಚ್ಚಾಗಿದೆ. 


ದೊಡ್ಡಬಳ್ಳಾಪುರ(ಜ.16): ಜಿಲ್ಲಾದ್ಯಂತ ಕೋವಿಡ್‌-19 ಲಾಕ್‌ಡೌನ್‌ ಬಳಿಕ ಬರೋಬ್ಬರಿ 10 ತಿಂಗಳ ನಂತರ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್‌, ಐಟಿಐ, ಡಿಪ್ಲೊಮಾ ಕೋರ್ಸುಗಳ ಎಲ್ಲ ತರಗತಿಗಳು ಶುಕ್ರವಾರ ಪುನಾರಂಭಗೊಂಡಿದ್ದು, ಬಹುತೇಕ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಉತ್ತಮ ಹಾಜರಾತಿಯೊಂದಿಗೆ ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೊರೋನಾ ಸೋಂಕಿನ ಆತಂಕದ ನಡುವೆಯೇ ಬಹುದಿನಗಳ ಬಳಿಕ ಆರಂಭವಾದ ಕಾಲೇಜು ತರಗತಿಗಳಿಗೆ ಮೊದಲ ದಿನ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೊಡ್ಡಬಳ್ಳಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಸೇರಿದಂತೆ 15ಕ್ಕೂ ಹೆಚ್ಚು ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳು, ಸರ್ಕಾರಿ ಮಹಿಳಾ ಕಾಲೇಜು, ಐಟಿಐ, ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಹಾಜರಾತಿ ಶೇ. 60ಕ್ಕಿಂತಲೂ ಹೆಚ್ಚಿತ್ತು. ದೇವನಹಳ್ಳಿ, ಹೊಸಕೋಟೆ, ನೆಲಮಂಗಲ ತಾಲೂಕುಗಳ ಕಾಲೇಜುಗಳಲ್ಲೂ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

Tap to resize

Latest Videos

ಮುಂದುವರೆದ ಕೋವಿಡ್‌ ಆತಂಕ:  ಶಾಲಾ-ಕಾಲೇಜುಗಳಲ್ಲಿ ಸ್ಯಾನಿಟೈಸೇಷನ್‌, ಸ್ವಚ್ಛತೆ ಸೇರಿದಂತೆ ಕೋವಿಡ್‌ ಮುನ್ನೆಚ್ಚರಿಕೆ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸುವ ಸುಳಿವು ಮೊದಲ ದಿನ ಎಲ್ಲೆಡೆ ಕಂಡು ಬಂತು. ಆದರೆ ಗುಂಪು ಗುಂಪಾಗಿ ಬರುವ ವಿದ್ಯಾರ್ಥಿಗಳು ನಿಯಮಾವಳಿಗಳ ಪಾಲನೆಗೆ ಅಷ್ಟಾಗಿ ಪ್ರಾಮುಖ್ಯತೆ ನೀಡಿರಲಿಲ್ಲ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಒಂದೆಡೆ ಸೇರುವುದು, ತರಗತಿಗಳಿಗೆ ಹಾಜರಾಗುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಬೋಧಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳಲ್ಲಿ ಸೋಂಕು ಆತಂಕ ಹೆಚ್ಚಿದೆ.

ಕಾಲೇಜುಗಳಲ್ಲೇ ಕೋವಿಡ್‌ ಟೆಸ್ಟ್‌:  ವಿದ್ಯಾರ್ಥಿಗಳಿಗೆ ಕೆಲವು ಕಾಲೇಜುಗಳಲ್ಲಿ ಕೋವಿಡ್‌ ಪರೀಕ್ಷೆ ನಡೆಸಲಾಯಿತು. ವಿದ್ಯಾರ್ಥಿಗಳು ಕಾಲೇಜಿಗೆ ಬರುವ ವೇಳೆ ಕಡ್ಡಾಯವಾಗಿ ಪೋಷಕರ ಅನುಮತಿ ಪತ್ರ ತರಬೇಕು ಎಂಬ ನಿಯಮಾವಳಿ ಇದ್ದರೂ ಹಲವು ವಿದ್ಯಾರ್ಥಿಗಳು ಅನುಮತಿ ಪತ್ರ ತಂದಿರಲಿಲ್ಲ. ಆದಾಗ್ಯೂ ಸೋಂಕು ಲಕ್ಷಣಗಳಿಲ್ಲದ ವಿದ್ಯಾರ್ಥಿಗಳಿಗೆ ಷರತ್ತಿನ ಮೇಲೆ ತರಗತಿಗೆ ಹಾಜರಾಗಲು ಅನುಮತಿ ನೀಡಿ, ಪೋಷಕರ ಅನುಮತಿ ಪತ್ರ ತರುವಂತೆ ನಿರ್ದೇಶನ ನೀಡಲಾಯಿತು.

ಬಹುದಿನಗಳ ಬಳಿಕ ಕಾಲೇಜಿಗೆ ಆಗಮಿಸಿದ ವಿದ್ಯಾರ್ಥಿಗಳಿಗೆ ಇಲ್ಲಿನ ಹಲವು ಕಾಲೇಜುಗಳಲ್ಲಿ ಉಪನ್ಯಾಸಕರು, ಸಿಬ್ಬಂದಿ ಗುಲಾಬಿ ಹೂ ನೀಡಿ ಸ್ವಾಗತಿಸಿದರು. ವಿದ್ಯಾರ್ಥಿಗಳು-ಬೋಧಕರು ಸುದೀರ್ಘ ವಿರಾಮದ ಬಳಿಕ ಒಂದೆಡೆ ಸೇರಿದ್ದ ಹಿನ್ನೆಲೆ ಭಾವನಾತ್ಮಕ ಸಂದರ್ಭಗಳಿಗೂ ತರಗತಿಗಳು ಸಾಕ್ಷಿಯಾದವು.

10 ತಿಂಗಳ ಮನೆ ವಾಸ ಸಾಕಾಗಿತ್ತು. ಯಾವಾಗ ಕಾಲೇಜು ಆರಂಭವಾಗುತ್ತದೆಯೋ ಎಂಬ ನಿರೀಕ್ಷೆಯಲ್ಲಿದ್ದೆವು. ಇದೀಗ ನಮ್ಮ ನಿರೀಕ್ಷೆ ಈಡೇರಿದೆ. ಕೊರೋನಾ ಸಂದರ್ಭ ಎಲ್ಲರಿಗೂ ದೊಡ್ಡ ಪಾಠ ಕಲಿಸಿದೆ. ಮುನ್ನೆಚ್ಚರಿಕೆ ಕ್ರಮಗಳನು ಕಡ್ಡಾಯ ಪಾಲಿಸುವುದು ನಮ್ಮ ಹೊಣೆಗಾರಿಕೆ. ಕನಿಷ್ಠ 2 ತಿಂಗಳ ನಂತರ ಪರೀಕ್ಷೆಗಳನ್ನು ನಡೆಸಿದರೆ ಉತ್ತಮ.

- ಎಂ.ಮೇಘನಾ, ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿನಿ.

 ಆನ್‌ಲೈನ್‌ ತರಗತಿಗಳಲ್ಲಿ ಸರಿಯಾದ ಪಾಠ ಪ್ರವಚನಗಳು ಅರ್ಥ ಮಾಡಿಕೊಳ್ಳಲಾಗದೆ ಸಂಕಷ್ಟಎದುರಿಸುತ್ತಿದ್ದೆವು. ಆದರೆ ಈಗ ಆತಂಕ ದೂರವಾಗುತ್ತಿದೆ. ಆಫ್‌ಲೈನ್‌ ತರಗತಿಗಳು ಹೆಚ್ಚು ಪರಿಣಾಮಕಾರಿ. ಹೀಗಾಗಿ ಸೋಂಕು ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ತರಗತಿಗಳಿಗೆ ಹಾಜರಾಗುತ್ತೇವೆ. ಪಠ್ಯಕ್ರಮದಲ್ಲಿ ಕಡಿತ ಮಾಡಿರುವ ಮಾಹಿತಿ ಇದೆ. ಈ ಬಗ್ಗೆ ಸ್ಪಷ್ಟನೆ ಇಲ್ಲ.

ಜಿ.ಲೋಹಿತ್‌, ಪ್ರಥಮ ಪಿಯು ವಿದ್ಯಾರ್ಥಿ.

click me!