ಶಿವಮೊಗ್ಗದಲ್ಲಿ 150ರ ಗಡಿದಾಟಿದ ಕೊರೋನಾ ಸೋಂಕಿತರ ಸಂಖ್ಯೆ..!

By Kannadaprabha NewsFirst Published Jun 30, 2020, 9:12 AM IST
Highlights

ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಸೋಮವಾರ(ಜೂ.29) ಹೊಸದಾಗಿ ಮತ್ತೆ 5 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಜಿಲ್ಲೆಯಲ್ಲಿ ದಾಖಲಾದ ಕೊರೋನಾ ಪೀಡಿತರ ಸಂಖ್ಯೆ 150ರ ಗಡಿ ದಾಟಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ಶಿವಮೊಗ್ಗ(ಜೂ.30): ಜಿಲ್ಲೆಯಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ದಿನೇ ದಿನೆ ಹೆಚ್ಚಾಗುತ್ತಿದ್ದು, ಸೋಮವಾರ ಐವರಲ್ಲಿ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇದೀಗ ಸೋಂಕಿತರ ಸಂಖ್ಯೆ 151ಕ್ಕೆ ಏರಿಕೆಯಾಗಿದೆ.

ಸೋಮವಾರ ಪತ್ತೆಯಾದ ಐವರು ಸೋಂಕಿತರು ಶಿವಮೊಗ್ಗ ನಗರ ವಾಸಿಗಳಾಗಿದ್ದಾರೆ. ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಗಾಡಿಕೊಪ್ಪ, ಭರ್ಮಪ್ಪ ನಗರ, ರಾಜೇಂದ್ರ ನಗರ, ಕೆ.ಆರ್‌.ಪುರಂ, ಜಿಎಸ್‌ಕೆಎಂ ರಸ್ತೆಯ ಪಿಡಬ್ಲ್ಯೂಡಿ ಕ್ವಾಟ್ರಸ್‌ ರಸ್ತೆಗಳನ್ನು ಸೋಮವಾರ ಸೀಲ್‌ಡೌನ್‌ ಮಾಡಲಾಗಿದೆ.

ಶಿವಮೊಗ್ಗದಲ್ಲಿ ಕೊರೋನಾ ಆತಂಕ ಹೆಚ್ಚಾಗಿದೆ. ರಾಜೇಂದ್ರ ನಗರದ 1 ನೇ ತಿರುವಿನ ವೃದ್ಧ ದಂಪತಿಗೆ ಕೊರೋನಾ ಸೋಂಕು ತಗುಲಿದ್ದು, ಜಿಎಸ್‌ಕೆಎಂ ರಸ್ತೆಯ ಪಿಡಬ್ಲ್ಯೂಡಿ ಕ್ವಾಟ್ರ್ರಸ್‌ ನಿವಾಸಿಯೊಬ್ಬರಿಗೆ ಕೊರೋನಾ ಪಾಸಿಟಿವ್‌ ಬಂದಿದೆ. ಅಲ್ಲದೆ ಗಾಡಿಕೊಪ್ಪ ಹಾಗೂ ಭರ್ಮಪ್ಪ ನಗರದ ನಿವಾಸಿ ಒಬ್ಬರಿಗೆ ಸೋಂಕು ತಗುಲಿದೆ. ಸೋಂಕಿತರಲ್ಲಿ 34 ವರ್ಷದ ಯುವಕ (ಪಿ-13224), 49 ವರ್ಷದ ಪುರುಷ (ಪಿ-13225), 29 ವರ್ಷದ ಯುವತಿ (ಪಿ-13226), 71 ವರ್ಷದ (ಪಿ-13227), ಹಾಗೂ 64 ವರ್ಷದ (ಪಿ-13228), ವೃದ್ಧ ದಂಪತಿಗಳಲ್ಲಿ ಸೋಂಕು ಪತ್ತೆಯಾಗಿದೆ.

4 ನೇ ದಿನದ ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಸೂತ್ರ

ಇದೀಗ ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 150ರ ಗಡಿ ದಾಟಿದೆ. ಭಾನುವಾರದವರೆಗೆ ಒಟ್ಟು 146 ಮಂದಿಗೆ ಕೊರೋನಾ ಪಾಸಿಟಿವ್‌ ಬಂದಿದ್ದು, ಸೋಮವಾರ ಹೊಸದಾಗಿ 5 ಕೇಸು ಸೇರ್ಪಡೆಯಾಗಿವೆ.

ಇದುವರೆಗೆ ಜಿಲ್ಲೆಯಲ್ಲಿ 14,643 ಸ್ಯಾಂಪಲ್‌ ಸಂಗ್ರಹಿಸಿದ್ದು, 13670 ನೆಗೆಟಿವ್‌ ವರದಿ ಬಂದಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 151ಕ್ಕೆ ಏರಿಕೆಯಾಗಿದ್ದು, ಸೋಮವಾರ 5 ಮಂದಿ ಸೇರಿ ಇಲ್ಲಿಯವರೆಗೆ ಒಟ್ಟು 109 ಮಂದಿ ಗುಣಮುಖ ಹೊಂದಿದ್ದಾರೆ. 40 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

"

click me!