ಈ ಬಾರಿಯಾದ್ರೂ ಆನೆಗೊಂದಿ ಉತ್ಸವ ನಡೆಯುವುದೇ?

By Kannadaprabha News  |  First Published Dec 21, 2022, 2:08 PM IST

ಕಲೆ, ಸಂಸ್ಕೃತಿ ಬಿಂಬಿಸುವ ಆನೆಗೊಂದಿ ಉತ್ಸವ ಮರೀಚಿಕೆಯಾಗಿದೆ. ಕಳೆದ ಎರಡು ವರ್ಷಗಳಿಂದ ಸ್ಥಗಿತವಾಗಿದೆ. ಇದರಿಂದ ಕಲಾಸಕ್ತರಲ್ಲಿ ನಿರಾಸೆ ಮೂಡಿದ್ದು, ಈ ಬಾರಿಯಾದರೂ ಸರ್ಕಾರ ಆನೆಗೊಂದಿ ಉತ್ಸವ ನಡೆಸುವುದೇ ಎಂದು ಎದುರು ನೋಡುತ್ತಿದ್ದಾರೆ.


ರಾಮಮೂರ್ತಿ ನವಲಿ

ಗಂಗಾವತಿ (ಡಿ.21) ; ಕಲೆ, ಸಂಸ್ಕೃತಿ ಬಿಂಬಿಸುವ ಆನೆಗೊಂದಿ ಉತ್ಸವ ಮರೀಚಿಕೆಯಾಗಿದೆ. ಕಳೆದ ಎರಡು ವರ್ಷಗಳಿಂದ ಸ್ಥಗಿತವಾಗಿದೆ. ಇದರಿಂದ ಕಲಾಸಕ್ತರಲ್ಲಿ ನಿರಾಸೆ ಮೂಡಿದ್ದು, ಈ ಬಾರಿಯಾದರೂ ಸರ್ಕಾರ ಆನೆಗೊಂದಿ ಉತ್ಸವ ನಡೆಸುವುದೇ ಎಂದು ಎದುರು ನೋಡುತ್ತಿದ್ದಾರೆ.

Latest Videos

undefined

ವಿಜಯನಗರದ ಗತವೈಭವ ಸಾರುವ ಗಂಗಾವತಿ ತಾಲೂಕಿನ ಆನೆಗೊಂದಿಗೆ ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಇಂತಹ ಐತಿಹಾಸಿಕ ಹಿನ್ನೆಲೆ ಇರುವ ಆನೆಗೊಂದಿ ಉತ್ಸವವನ್ನು ಪ್ರತಿವರ್ಷ ಆಚರಿಸಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷಗಳಿಂದ ಉತ್ಸವ ನಡೆಯದೆ ಇರುವುದರಿಂದ ಈ ಭಾಗದ ಕಲಾವಿದರಿಗೆ ನಿರಾಸೆಯಾಗಿದೆ.

ಆನೆಗೊಂದಿ ಉತ್ಸವ: 24 ಕೋಟಿ ವೆಚ್ಚದಲ್ಲಿ ಅಂಜನಾದ್ರಿ ಬೆಟ್ಟಕ್ಕೆ ರೋಪ್‌ವೇ

2020ರಲ್ಲಿ ಆನೆಗೊಂದಿ ಉತ್ಸವ ಅದ್ಧೂರಿಯಾಗಿ ನಡೆದಿತ್ತು. ಸ್ಥಳೀಯ ಶಾಸಕ ಪರಣ್ಣ ಮುನವಳ್ಳಿ ಅವರು ಆ ಉತ್ಸವಕ್ಕೆ ಸರ್ಕಾರದಿಂದ ಕೋಟ್ಯಂತರ ರು. ಅನುದಾನ ತಂದು ಗತವೈಭವ ಸಾರುವ ಉತ್ಸವ ಆಚರಿಸಿದ್ದರು. ಈಗ ಉತ್ಸವಕ್ಕೆ ಅನುದಾನದ ಕೊರತೆ ಇದೆ ಎಂದು ಹೇಳುತ್ತಿದ್ದಾರೆ.

ಅನುದಾನದ ಕೊರತೆ:

ಪ್ರತಿವರ್ಷ ಉತ್ಸವಗಳಿಗೆ ಸರ್ಕಾರ ಅನುದಾನ ಮೀಸಲಿರಿಸುತ್ತಿತ್ತು. ಈ ಬಾರಿ ಇಟ್ಟಿಲ್ಲ. ಹೀಗಾಗಿ ಉತ್ಸವಕ್ಕೆ ಯಾವುದೇ ಸಿದ್ಧತೆ ನಡೆದಿಲ್ಲ. 1997ರಲ್ಲಿ ಅಂದಿನ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ ಅವರು ಆನೆಗೊಂದಿ ಉತ್ಸವ ಆರಂಭಿಸಿದರು. ಹಂಪಿ ಉತ್ಸವದ ಸಂದರ್ಭದಲ್ಲಿ ಆನೆಗೊಂದಿ ಉತ್ಸವ ಆಚರಿಸಬೇಕು ಎಂಬ ಕಾರಣಕ್ಕೆ ಹಂಪಿ ಮತ್ತು ಆನೆಗೊಂದಿ ಉತ್ಸವಗಳನ್ನು ಒಂದೇ ದಿನ ಏರ್ಪಡಿಸಲಾಗಿತ್ತು. ಆ ಸಂದರ್ಭದಲ್ಲಿ ಸ್ಥಳೀಯ ಕಲಾವಿದರಿಗೆ ಅವಕಾಶ ನೀಡಲಾಗುತ್ತಿತ್ತು. ಆನಂತರ ಸ್ಥಳೀಯರ ಸಹಕಾರದಿಂದ ಕೆಲ ವರ್ಷ ಉತ್ಸವ ಆಚರಿಸಲಾಯಿತು. ಆಗ ಸರ್ಕಾರ ಬಜೆಟ್‌ನಲ್ಲಿ ಆನೆಗೊಂದಿ ಉತ್ಸವಕ್ಕೆ ಪ್ರತ್ಯೇಕ ಅನುದಾನ ಘೋಷಣೆ ಮಾಡಿತ್ತು.

ಐತಿಹಾಸಿಕ ಸ್ಥಳ:

ಆನೆಗೊಂದಿ ಪ್ರದೇಶ ಐತಿಹಾಸಿಕವಾಗಿದೆ. ಹನುಮ ಜನಿಸಿದ ನಾಡು ಅಂಜನಾದ್ರಿ ಬೆಟ್ಟ, ಪಂಪಾ ಸರೋವರ, ದುರ್ಗಾದೇವಿ, ನವವೃಂದಾವನ ಗಡ್ಡೆ, ಚಿಂತಾಮಣಿ, ವಾಲಿ ಕಿಲ್ಲಾ, ಗವಿರಂಗನಾಥ, ಚಂಚಲಕೋಟೆ ಸೇರಿದಂತೆ ಐತಿಹಾಸಿಕ ಪ್ರದೇಶಗಳು ಇಲ್ಲಿವೆ. ದಿನನಿತ್ಯ ನೂರಾರು ಪ್ರವಾಸಿಗರು ಪ್ರದೇಶಗಳ ವೀಕ್ಷಣೆಗೆ ಆಗಮಿಸುತ್ತಿದ್ದಾರೆ. ಆನೆಗೊಂದಿ ಪಕ್ಕದಲ್ಲಿ ಹಂಪಿ ಇರುವುದರಿಂದ ಹಂಪಿ ಪ್ರದೇಶಕ್ಕೆ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇಂತಹ ಐತಿಹಾಸಿಕ ಪ್ರದೇಶದಲ್ಲಿ ಆನೆಗೊಂದಿ ಉತ್ಸವಕ್ಕೆ ಸರ್ಕಾರ ಅನುದಾನ ನೀಡಿದರೆ ನಿಗದಿತ ಸಮಯಕ್ಕೆ ಉತ್ಸವ ಆಚರಿಸಲು ಅನುಕೂಲವಾಗುತ್ತದೆ ಎಂಬುದು ಕಲಾವಿದರ ಅಭಿಪ್ರಾಯವಾಗಿದೆ.

ಕೊಪ್ಪಳದ ಕೆರೆ ನೋಡಿ ಭಾವೋದ್ವೇಗಕ್ಕೆ ಒಳಗಾದ ನಟ ಯಶ್‌

ಆನೆಗೊಂದಿ ಉತ್ಸವ ಆಚರಿಸಲು ಜಿಲ್ಲಾಧಿಕಾರಿ ಮೂಲಕ ಅನುದಾನ ನೀಡುವಂತೆ ಸರ್ಕಾರಕ್ಕೆ ಕೋರಲಾಗಿದೆ. ಅನುದಾನ ಮಂಜೂರಿಯಾದರೆ ಜನವರಿಯಲ್ಲಿ ಉತ್ಸವ ಆಚರಿಸಬಹುದು. ಈಗಾಗಲೇ ಹಂಪಿ ಉತ್ಸವ ನಡೆಯುತ್ತಿದ್ದು, ಇದೇ ಸಮಯದಲ್ಲಿ ಆನೆಗೊಂದಿ ಉತ್ಸವ ಆಚರಿಸಲು ಅನುಕೂಲವಾಗುತ್ತದೆ.

ಕೊಟ್ರಪ್ಪ ಮರಬನಹಳ್ಳಿ, ಉಪನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ

ಆನೆಗೊಂದಿ ಉತ್ಸವ ಆಚರಿಸಿದರೆ ಈ ಭಾಗದ ಕಲಾವಿದರಿಗೆ ಅವಕಾಶ ಸಿಗುತ್ತದೆ. ಸ್ಥಳೀಯರು ಉತ್ಸವದಲ್ಲಿ ಭಾಗವಹಿಸುವುದರಿಂದ ಅವರ ಪ್ರತಿಭೆ ಮತ್ತು ಪ್ರೋತ್ಸಾಹ ದೊರೆಯಲು ಅನುಕೂಲವಾಗುತ್ತದೆ. ಈ ಹಿಂದೆ ಉತ್ಸವಗಳಲ್ಲಿ ಬಹಳಷ್ಟುಕಲಾವಿದರು ಅವಕಾಶ ವಂಚಿತರಾಗಿದ್ದಾರೆ. ಸರ್ಕಾರ ಗತವೈಭವ ಸಾರುವ ಉತ್ಸವಕ್ಕೆ ಅನುದಾನ ನೀಡಬೇಕು.

ಶ್ರೀನಿವಾಸ ಡಿ. ಕಲಾವಿದರು, ಗಂಗಾವತಿ

click me!