ಮಾತು ಕೇಳದ ಅಧಿಕಾರಿಗಳನ್ನು ಫೈರ್ ಮಾಡ್ತೇನೆ - ಸಚಿವ ರಾಯರೆಡ್ಡಿ ಬೆದರಿಕೆ

Published : Sep 08, 2026, 08:21 PM IST
basavaraj rayareddy

ಸಾರಾಂಶ

ಮಾತು ಕೇಳದ ಅಧಿಕಾರಿಗಳನ್ನು ಫೈರ್ ಮಾಡುವುದಾಗಿ ಬೆದರಿಕೆ ಹಾಕಿದ ಸಚಿವ ಬಸವರಾಜ ರಾಯರೆಡ್ಡಿ, ತಹಶೀಲ್ದಾರ್ ತಮ್ಮ ಪಿಆರ್‌ಒ ಆಗಿ ಕೆಲಸ ಮಾಡಲಿ ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ತಮ್ಮ ಅನುಪಸ್ಥಿತಿಯಲ್ಲಿ ಡಿಜಿಟಲ್ ಸಿಗ್ನೇಚರ್ ಬಳಸಿ ಪತ್ರ ವಿಲೇವಾರಿ ಮಾಡುವಂತೆ ಪಿಎಗೆ ಸೂಚಿಸಿರುವ ಸಚಿವರು, ಅಧಿಕಾರಿಗಳ ವಿರುದ್ಧ ಅತಿರೇಕದ ಮಾತುಗಳನ್ನಾಡಿದ್ದಾರೆ.

ಕೊಪ್ಪಳ: ಇಸ್ಲಾಂ ಧರ್ಮದ ಕುರಿತಾದ ಹೇಳಿಕೆಯಿಂದ ಇತ್ತೀಚೆಗಷ್ಟೇ ವಿವಾದಕ್ಕೆ ಸಿಲುಕಿದ್ದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಈಗ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕುವ ಮೂಲಕ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಮಾತು ಕೇಳದ ಅಧಿಕಾರಿಗಳನ್ನು ಫೈರ್ ಮಾಡ್ತೇನೆ ಎಂದು ಎಚ್ಚರಿಕೆ ನೀಡುವ ಜೊತೆಗೆ, ತಹಶೀಲ್ದಾರ್ ಅವರನ್ನೇ ತಮ್ಮ ಪಿಆರ್‌ಒ (PRO) ಆಗಿ ಕೆಲಸ ಮಾಡುವಂತೆ ಸೂಚಿಸಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ.

ವೇದಿಕೆಯಲ್ಲೇ ತಹಶೀಲ್ದಾರ್‌ಗೆ ಸೂಚನೆ

ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದಲ್ಲಿ ನಡೆದ ಪದವಿಪೂರ್ವ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಸಚಿವರು ಅತಿರೇಕದ ಮಾತುಗಳನ್ನಾಡಿದ್ದಾರೆ. ವೇದಿಕೆಯಲ್ಲಿದ್ದ ಯಲಬುರ್ಗಾ ತಹಶೀಲ್ದಾರ್ ಪ್ರಕಾಶ್ ನಾಶಿ ಅವರ ಹೆಸರು ಹಿಡಿದು ಮಾತನಾಡಿದ ಸಚಿವರು, ನಾನು ಸಚಿವ ಸ್ಥಾನದ ಕಾರ್ಯಭಾರದಲ್ಲಿ ಸಂಪೂರ್ಣ ಬ್ಯುಸಿಯಾಗಿರುತ್ತೇನೆ. ಹೀಗಾಗಿ ನೀವೇ ಇನ್ನು ಮುಂದೆ ನನ್ನ ಪಿಆರ್‌ಒ ಆಗಿ ಕೆಲಸ ಮಾಡಬೇಕು ಎಂದು ಸಾರ್ವಜನಿಕವಾಗಿ ಸೂಚನೆ ನೀಡಿದರು.

ಅಧಿಕಾರಿಗಳ ಮೇಲಿನ ಸಚಿವರ ಸವಾರಿ ಇಲ್ಲಿಗೆ ನಿಲ್ಲಲಿಲ್ಲ. ತಮ್ಮ ಆಪ್ತ ಕಾರ್ಯದರ್ಶಿಗೆ (PA) ಸೂಚನೆ ನೀಡಿದ ಸಚಿವರು, ನನ್ನ ಡಿಜಿಟಲ್ ಸಿಗ್ನೇಚರ್ ಬಳಸಿ ನೀವೇ ಪತ್ರಗಳನ್ನು ವಿಲೇವಾರಿ ಮಾಡಿ ಎಂದು ಹೇಳಿದ್ದಾರೆ. ಸಚಿವರ ಸಹಿಯನ್ನು ಅವರ ಅನುಪಸ್ಥಿತಿಯಲ್ಲಿ ಪಿಎ ಬಳಸುವಂತೆ ಹೇಳಿರುವುದು ಕಾನೂನಾತ್ಮಕವಾಗಿಯೂ ಚರ್ಚೆಗೆ ದಾರಿ ಮಾಡಿಕೊಟ್ಟಿದೆ.

ಲೆಫ್ಟ್ ರೈಟ್ ತಗೊಂಡು ಫೈರ್ ಮಾಡ್ತೇನೆ!

ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿ ಎಷ್ಟು ದೊಡ್ಡದಿದೆ ಎಂದು ವಿವರಿಸಿದ ರಾಯರೆಡ್ಡಿ, ನಮ್ಮ ಇಲಾಖೆಯಲ್ಲಿ 1.52 ಕೋಟಿ ವಿದ್ಯಾರ್ಥಿಗಳು ಹಾಗೂ 96 ವಿಶ್ವವಿದ್ಯಾಲಯಗಳು ಬರುತ್ತವೆ. ಇಷ್ಟೊಂದು ದೊಡ್ಡ ಜವಾಬ್ದಾರಿ ಇರುವಾಗ ಅಧಿಕಾರಿಗಳು ನಮಗೆ ಸಹಕಾರ ನೀಡಬೇಕು. ಯಾವ ಅಧಿಕಾರಿ ಮಾತು ಕೇಳುವುದಿಲ್ಲವೋ ಹೇಳಿ, ಅಂತಹವರನ್ನು ಲೆಫ್ಟ್ ರೈಟ್ ತಗೊಂಡು ಫೈರ್ ಮಾಡ್ತೇನೆ ಎಂದು ಅಧಿಕಾರಿಗಳಿಗೆ ಬಹಿರಂಗವಾಗಿ ಬೆದರಿಕೆ ಹಾಕಿದ್ದಾರೆ.

ಇದೇ ವೇಳೆ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಯೋಜನೆಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ, ಎಂದಿನಂತೆ ಮುಂದುವರಿಯಲಿವೆ ಎಂದು ಭರವಸೆ ನೀಡಿದರು. ಅಧಿಕಾರಿಗಳನ್ನು ಸಾರ್ವಜನಿಕವಾಗಿ ಏಕವಚನದಲ್ಲಿ ಅಥವಾ ಬೆದರಿಕೆ ಹಾಕುವ ಧಾಟಿಯಲ್ಲಿ ಮಾತನಾಡಿದ ಸಚಿವರ ನಡೆಗೆ ಸಾರ್ವಜನಿಕ ವಲಯದಲ್ಲಿ ಆಕ್ಷೇಪ ವ್ಯಕ್ತವಾಗುತ್ತಿದೆ.

PREV
Read more Articles on
click me!

Recommended Stories

ದರ್ಶನ್ ಪರ ವಕೀಲರಿಂದ ಮಹತ್ವದ ಹೇಳಿಕೆ; ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಗುವ ನಿರೀಕ್ಷೆ
ಅತ್ತ ವ್ಯಕ್ತಿ ಸತ್ತು 5 ವರ್ಷವಾಗಿತ್ತು, ಇತ್ತ ಆತನ ಹೆಸರಲ್ಲೇ ಕೇಸ್, ಕರ್ನಾಟಕ ಹೈಕೋರ್ಟ್‌ನಲ್ಲೊಂದು ವಿಚಿತ್ರ ಕೇಸ್