ಮಲೆನಾಡಿನಲ್ಲಿ ಹಲವೆಡೆ ಕಾಡಾನೆ ದಾಳಿ ನಡೆಯುತ್ತಲೇ ಇರುತ್ತದೆ. ನಾಡಿಗೆ ಬಂದು ಬೆಳೆ ನಾಶ ಮಾಡೋದು ಸಾಮಾನ್ಯ ಆಗಿಬಿಟ್ಟಿದೆ. ಇತ್ತೀಚಿನ ಬೆಳವಣಿಗೆಯಲ್ಲಿ ಚಿಕ್ಕಮಗಳೂರಿನ ಮೂಡಿಗೆರೆ ಸಮೀಪ ಆನೆಗಳು ಗ್ರಾಮಸ್ಥರ ಮನೆಯೊಳಗೂ ಲಗ್ಗೆ ಇಟ್ಟಿದ್ದು, ಗ್ರಾಮಸ್ಥರು ಆತಂಕದಲ್ಲಿ ಬದುಕುವಂತಾಗಿದೆ.
ಚಿಕ್ಕಮಗಳೂರು(ಜು.21): ಮೂಡಿಗೆರೆ ಗುತ್ತಿಹಳ್ಳಿ ಮತ್ತು ಮೂಲರಹಳ್ಳಿ ಭಾಗದಲ್ಲಿ 4 ಕಾಡಾನೆಗಳು ಕೆಲವು ದಿನಗಳಿಂದ ಊರಿನಲ್ಲೇ ಬೀಡುಬಿಟ್ಟಿವೆ. ಎರಡು ದಿನಗಳಿಂದ ಮನೆಗಳ ಬಳಿ ಬಂದು ಮನೆಯೊಳಗೂ ದಾಳಿ ಮಾಡುತ್ತಿವೆ.
ಇದರಿಂದ ಗ್ರಾಮಸ್ಥರು ಜೀವಭಯದೊಂದಿಗೆ ಬದುಕುತ್ತಿದ್ದಾರೆ. ನಾಗರಿಕರಿಗೆ ರಕ್ಷಣೆ ನೀಡಿ ಕಾಡಾನೆಗಳನ್ನು ಕೂಡಲೇ ಬೇರೆಡೆ ಸ್ಥಳಾಂತರಿಸಬೇಕು ಎಂದು ಶಾಸಕ ಎಂ.ಪಿ. ಕುಮಾರಸ್ವಾಮಿ ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಕೆಲವು ವರ್ಷಗಳಿಂದ ಅತಿವೃಷ್ಟಿಪೀಡಿತ ಈ ಭಾಗಗಳಲ್ಲಿ ಕಾಡಾನೆ ಹಾವಳಿ ಮಿತಿಮೀರಿವೆ. ಜೀವನೋಪಾಯ ಬೆಳೆಗಳಿಂದ ಜನರು ವಂಚಿತರಾಗಿದ್ದಾರೆ. ಸಂಜೆ 6 ಗಂಟೆಯ ನಂತರ ಮನೆಯಿಂದ ಹೊರಬರಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕಳೆದ ವರ್ಷ ಕೃಷಿ ಕಾರ್ಯದಲ್ಲಿ ತೊಡಗಿದ್ದ ಇದೇ ಗ್ರಾಮದ ಯುವಕ ಸುನೀಲ್ ಎಂಬುವನನ್ನು ಆನೆ ಹತ್ಯೆ ಮಾಡಿತ್ತು.
ಆನೆ ಸ್ಥಳಾಂತರಿಸಿ ಅಂದ್ರೆ ಕೇಸ್ ಫೈಲ್ ಮಾಡಿದದ್ರು:
undefined
ಈ ಹಿಂದೆ ಆನೆಯನ್ನು ಬೇರೆಡೆ ಸ್ಥಳಾಂತರಿಸುವಂತೆ ಆಗ್ರಹಿಸಿ ಅರಣ್ಯ ಇಲಾಖೆ ಮುಂದೆ ಗ್ರಾಮಸ್ಥರು ಧರಣಿಯನ್ನೂ ನಡೆಸಿದ್ದರು. ಆನೆ ಸ್ಥಳಾಂತರಿಸಬೇಕಾದ ಅರಣ್ಯ ಇಲಾಖೆ ಧರಣಿ ನಡೆಸಲು ಬಂದಿದ್ದ ರೈತರ ಮೇಲೇ ಕೇಸು ದಾಖಲಿಸಿದೆ. ಕೇಸನ್ನು ಹಿಂಪಡೆಯುವುದಾಗಿ ಸುಳ್ಳು ಹೇಳಿ ಕಾಲಹರಣ ಮಾಡುತ್ತಿದೆ. ಈ ಮೂಲಕ ರೈತರು ಪ್ರತಿಭಟನೆ ನಡೆಸದಂತೆ ಒತ್ತಡ ಹೇರಿದ್ದಾರೆ. ಅಲ್ಲದೇ, ಗ್ರಾಮಸ್ಥರಿಗೆ ಕಾಡು ಪ್ರಾಣಿಗಳಿಂದ ರಕ್ಷಣೆ ನೀಡುವಲ್ಲಿ ಇಲಾಖೆ ವಿಫಲವಾಗಿದೆ. ಕಳೆದ ಮೂರ್ನಾಲ್ಕು ದಿನಗಳಿಂದ ಕಾಡಾನೆಗಳು ಗ್ರಾಮದ ಒಳಗೇ ಬೀಡುಬಿಟ್ಟು ಮನೆಗಳಿಗೆ ನುಗ್ಗುತ್ತಿದ್ದು, ಊರಿಗೆ ದಿಗ್ಬಂಧನ ಹಾಕಿದ್ದು ಕೂಡಲೇ ಆನೆಗಳಿಂದ ಗ್ರಾಮಸ್ಥರಿಗೆ ಮುಕ್ತಿ ನೀಡಬೇಕೆಂದಿದ್ದಾರೆ.
ಆನೆ ದಾಳಿಗೆ ಫಾರೆಸ್ಟ್ ವಾಚರ್ ಬಲಿ!
ಮನೆಗೆ ನುಗ್ಗಿದ ಕಾಡಾನೆಗಳು:
ಗುತ್ತಿಹಳ್ಳಿ ಗ್ರಾಮದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳು ಗುರುವಾರ ಮತ್ತು ಶುಕ್ರವಾರ ರಾಮೇಗೌಡ, ಚಂದ್ರೇಗೌಡ ಮತ್ತು ಮಂಜುನಾಥಗೌಡರ ಮನೆಗಳಿಗೆ ನುಗ್ಗಿವೆ. ಮನೆಯ ಛಾವಣಿಗೆ ಹಾನಿ ಎಸಗಿದ್ದು, ಸುತ್ತಲಿನ ನಾಯಿಗೂಡು, ನೀರಿನ ತೊಟ್ಟಿಮತ್ತಿತರ ಗೃಹೋಪಯೋಗಿ ವಸ್ತುಗಳನ್ನು ನಾಶಪಡಿಸಿವೆ. ರಾತ್ರಿ ಸಮಯದಲ್ಲಿ ದೀಪ ಬೆಳಗಿಸಿದ ಕೂಡಲೇ ದಾಳಿ ಇಡುತ್ತಿವೆ. ಕಳೆದ ರಾತ್ರಿ ಚಂದ್ರೇಗೌಡ ಅವರ ಆರ್‌ಸಿಸಿ ಮನೆಯನ್ನು ಧ್ವಂಸಗೊಳಿಸಲು ಪ್ರಯತ್ನಿಸುತ್ತಿದ್ದ ಆನೆಗಳಿಂದಾಗಿ ಜೀವ ಭಯದಿಂದ ಊರನ್ನೇ ತೊರೆಯಬೇಕಾದ ಪರಿಸ್ಥಿತಿ ಬಂದಿದೆ.
ಕಾಡಾನೆ ಸ್ಥಳಾಂತರಿಸಿ, ಪರಿಹಾರಕ್ಕೆ ಆಗ್ರಹ
ಕಾಫಿ, ಅಡಕೆ, ಕಾಳುಮೆಣಸು, ಭತ್ತದ ಗದ್ದೆಗಳನ್ನು ಈಗಾಗಲೇ ಸಂಪೂರ್ಣ ನಾಶಪಡಿಸಿವೆ. ಮಳೆ ಮತ್ತು ಕಾಡುಪ್ರಾಣಿಗಳಿಂದ ಸಂಪೂರ್ಣ ಬೆಳೆ ಕಳೆದುಕೊಂಡಿರುವ ನಮ್ಮಗಳ ಬದುಕು ಬೀದಿಗೆ ಬರುವಂತಾಗಿದೆ. ಸರ್ಕಾರ ಸೂಕ್ತ ಪರಿಹಾರ ಘೋಷಿಸಬೇಕು. ಕಾಡಾನೆಗಳನ್ನು ಸ್ಥಳಾಂತರಿಸಿ ನಿವಾಸಿಗಳಿಗೆ ಜೀವಭಯದಿಂದ ಮುಕ್ತಿ ನೀಡಬೇಕೆಂದು ಗ್ರಾಮಸ್ಥರಾದ ಗಿರೀಶ್ ಹಳ್ಳಿಬೈಲು, ವಿನಯ್, ಶಿವಕುಮಾರ್, ಸದಾಶಿವ ವಿಜಯ್ ಮತ್ತಿರರು ಆಗ್ರಹಿಸಿದ್ದಾರೆ.