ಚಿಕ್ಕಮಗಳೂರಿನ ತರೀಕೆರೆ ತಾಲೂಕಿನ ಹಲವೆಡೆ ಕಾಡಾನೆ ಹಾವಳಿ ಮಿತಿ ಮೀರಿದೆ. ಸಂಜೆಯಾಗ್ತಿದ್ದಂತೆ ಕಾಡಿನಿಂದ ನಾಡಿನತ್ತ ಬರುವ ಕಾಡಾನೆ ಹಿಂಡು ಕಷ್ಟಪಟ್ಟು ಬೆಳೆದ ಬೆಳೆಯನ್ನೆಲ್ಲ ಒಂದೇ ಬಾರಿಗೆ ನಾಶ ಮಾಡುತ್ತಿದೆ. ಬೆಳೆ ಕಳೆದುಕೊಂಡು ರೈತರು ಕಂಗಾಲಾಗಿದ್ದು ಮಾತ್ರವಲ್ಲದೆ, ಗ್ರಾಮಸ್ಥರೂ ಆತಂಕದಲ್ಲಿ ಬದುಕುವಂತಾಗಿದೆ.
ಚಿಕ್ಕಮಗಳೂರು(ಆ.04): ತರೀಕೆರೆ ಸಮೀಪದ ಲಿಂಗದಹಳ್ಳಿ ಹೋಬಳಿಯ, ಜೈಪುರ, ನಂದಿಬಟ್ಟಲು, ಹುಣಸೆಬೈಲು, ತಣಿಗೆಬೈಲು ಇತ್ಯಾದಿ ಗ್ರಾಮಗಳ ವ್ಯಾಪ್ತಿಯ ಅನೇಕ ರೈತರ ತೋಟದ ಬೆಳೆಗಳಾದ ಅಡಕೆ ತೆಂಗು ಬಾಳೆ ಸೇರಿದಂತೆ ಆಲೂಗೆಡ್ಡೆ, ತಿಂಗಳ ಹುರುಳಿ, ಜೋಳ ಮುಂತಾದ ಬೆಳೆಗಳನ್ನು ಬೆಳೆಯುತ್ತಿದ್ದಾರೆ. ಆದರೆ ಈ ಬೆಳೆಗಳನ್ನು ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ತುಂಬಾ ಪರದಾಡುತ್ತಿದ್ದಾರೆ.
ಸಂಜೆಯಾಗ್ತಿದ್ದಂತೆ ನಾಡಿಗೆ ಕಾಡಾನೆ ಎಂಟ್ರಿ:
ಕಳೆದ ಕೆಲ ದಿನಗಳಿಂದ ಭದ್ರಾ ಅಭಯಾರಣ್ಯದ ಕಾಡಿನಿಂದ 2ರಿಂದ 3 ಆನೆಗಳ ಗುಂಪು ಸಂಜೆಯಾಗುತ್ತಿದ್ದಂತೆ ಗ್ರಾಮಗಳೆಡೆಗೆ ಧಾವಿಸಿ ಬರುತ್ತಿದ್ದು, ಗ್ರಾಮಗಳ ಸುತ್ತಮುತ್ತಲ ರೈತರ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳನ್ನು ತಿಂದು ತುಳಿದು ಹಾಳುಗೆಡುವುತ್ತಿವೆ. ಇದರಿಂದ ಕಷ್ಟಪಟ್ಟು ಬೆಳೆದರೂ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತೆ ಬೆಳಗಳು ನಷ್ಟವಾಗುತ್ತಿವೆ ಎಂದು ನಂದಿಬಟ್ಟಲು ಗ್ರಾಮದ ತೋಟದ ಬೆಳೆಗಾರ ನರಸಿಂಹ ತಿಳಿಸಿದ್ದಾರೆ.
ಬೆಳೆ ಸಂಪೂರ್ಣ ನಾಶ:
ನಂದಿಬಟ್ಟಲು ಸರ್ವೆ ನಂ.111 ರಲ್ಲಿ ಇರುವ 3 ಎಕರೆ ಜಮೀನಿನಲ್ಲಿ ರೈತ ನರಸಿಂಹ ಅವರು ಬಾಳೆ, ಅಡಕೆ, ತೆಂಗು, ಶುಂಠಿ ಮುಂತಾದ ಬೆಳೆಗಳನ್ನು ಬೆಳೆದಿದ್ದಾರೆ. ಬೆಳೆಗಳೆಲ್ಲವು ಕಟಾವಿನ ಹಂತದಲ್ಲಿವೆ. ಕಟಾವಿಗೆ ಬಂದಿರುವ ಬಾಳೆಗೊನೆಗಳು ಸೇರಿದಂತೆ ಕಾಯಿ ಬಿಡುತ್ತಿದ್ದ 15ಕ್ಕೂ ಹೆಚ್ಚು ತೆಂಗಿನಮರಗಳನ್ನು ಆನೆಗಳು ಬುಡ ಸಮೇತವಾಗಿ ಮುರಿದು ಮರದ ತಿರುಳನ್ನು ತಿಂದು ತುಳಿದುಹಾಕಿವೆ. ಇದರಿಂದ ಕಂಗಾಲಾಗಿರುವ ರೈತರು ಅಪಾರ ಪ್ರಮಾಣದ ನಷ್ಟಉಂಟಾಗಿದೆ ಎಂದು ತಿಳಿಸಿದ್ದಾರೆ.
ರಾತ್ರಿ ಪೂರ ಗದ್ದೆಯಲ್ಲಿ ಆನೆಯ ಹಾವಳಿ:
ಜೊತೆಗೆ ತಿಗಡ ಸರ್ವೆ ನಂ.90 ರಲ್ಲಿರುವ ಜೈಪುರ ಗ್ರಾಮದ ಪಾಪಾನಾಯ್ಕ ಎಂಬ ರೈತರು ತಮ್ಮ ಹೆಸರಿನಲ್ಲಿರುವ 2 ಎಕರೆ ಜಮೀನಿನಲ್ಲಿ ಬೆಳೆಸಿ ಕಟಾವಿಗೆ ಸಿದ್ಧವಾಗಿದ್ದ ಬಾಳೆಗೊನೆಗಳ ಸಹಿತ ಸಂಪೂರ್ಣ ಬಾಳೆಗಿಡಗಳನ್ನು ತಿಂದು ತುಳಿದು ಹಾಕಿರುವ ಆನೆಗಳು ರಾತ್ರಿ ಪೂರ ಇಲ್ಲೇ ಬೀಡುಬಿಟ್ಟು, ಬೆಳಗಿನ ಜಾವ 6 ಗಂಟೆ ಸುಮಾರಿಗೆ ಈ ಜಮೀನಿನಿಂದ ಕಾಡಿಗೆಹೋಗಿವೆ ಎಂದು ರೈತರು ಹೇಳಿದ್ದಾರೆ.
ರೈತ ನರಸಿಂಹ ಮಾತನಾಡಿ, ಕಳೆದ ಅನೇಕ ದಿನಗಳಿಂದ ಪ್ರತಿ ರಾತ್ರಿ ಗ್ರಾಮಗಳೆಡೆಗೆ ಬರುತ್ತಿರುವ ಆನೆಗಳ ಗುಂಪು ಈ ಭಾಗದ ಸಣ್ಣ ಪುಟ್ಟರೈತರು, ವಿವಿಧ ಬ್ಯಾಂಕು ಮತ್ತು ಸಹಕಾರ ಸಂಘಗಳಿಂದ ಸಾಲ ಪಡೆದು ಬೆಳೆದಿರುವ ತೋಟದ ಬೆಳೆಗಳನ್ನು ತಿಂದು ತುಳಿದು ಹಾಕುತ್ತಿರುವುದರಿಂದ ಲಕ್ಷಾಂತರ ರು. ನಷ್ಟಉಂಟಾಗಿದೆ. ಮುಂದಿನ ಒಂದೆರಡು ತಿಂಗಳುಗಳಲ್ಲಿ ಬಾಳೆಗೊನೆಗಳನ್ನು ಕಟಾವು ಮಾಡಿ ಮಾರಿ ಸಾಲ ತೀರಿಸಬೇಕೆಂಬ ಅಂದಾಜಿನಲ್ಲಿದ್ದ ರೈತರಿಗೆ ಆತಂಕ ಉಂಟುಮಾಡಿವೆ ಎಂದು ಅಳಲು ತೋಡಿಕೊಂಡಿದ್ದಾರೆ.
ಹಾಸನ: ಕಾಡಾನೆ ದಾಳಿಗೆ ಬೆಳೆ ನಾಶ, ಗ್ರಾಮಸ್ಥರಿಂದ ಧರಣಿ ಎಚ್ಚರಿಕೆ
ಜೈಪುರ ಗ್ರಾಮದ ಬಾಳೆ ಬೆಳೆಗಾರ ಪಾಪಾನಾಯ್ಕ ಮಾತನಾಡಿ, ಈ ಭಾಗದಲ್ಲಿ ಕಳೆದ ನಾಲ್ಕೆ ೖದು ವರ್ಷಗಳಿಂದ ಮಳೆ ಇಲ್ಲದೆ ಇರುವ ಕಾರಣ ಸಾಲ ಮಾಡಿ ಕೊಳವೆಬಾವಿ ಕೊರೆಸಿ, ಜಮೀನುಗಳಿಗೆ ನೀರು ಸರಬರಾಜು ಮಾಡಿಕೊಂಡು ಕೃಷಿಯನ್ನು ಕೈಗೊಳ್ಳಲಾಗಿತ್ತು. ಆದರೆ ಈಗ ಬೆಳೆದಿರುವ ಬೆಳೆಗಳನ್ನು ಕಾಡಾನೆಗಳು ತಿಂದು ಹಾಕುತ್ತಿವೆ. ಈ ಬಗ್ಗೆ ಅರಣ್ಯಾಧಿಕಾರಿಗಳ ಗಮನ ಸೆಳೆದಿದ್ದರೂ ಅವರು ರೈತರ ಸಮಸ್ಯೆಗಳಿಗೆ ಸೂಕ್ತವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ