ವಿಜಯ ನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯ ರಿಗೆ ಸೇರಿದ ಶಾಸನವೊಂದು ಬೈಂದೂರು ತಾಲೂಕಿನಲ್ಲಿ ಪತ್ತೆಯಾಗಿದೆ. ಈ ಮೂಲಕ ಇತಿಹಾಸಜ್ಞರು ಸೇರಿದಂತೆ ನಾಗರಿಕರ ಗಮನಸೆಳೆದಿದೆ.
ಉಡುಪಿ (ಜೂ.11): ಉಡುಪಿ ಜಿಲ್ಲೆಯ ಅನೇಕ ಜಾಗಗಳು ಐತಿಹಾಸಿಕ ಮಹತ್ವದ ದಾಖಲೆಗಳನ್ನು ಒಳಗೊಂಡಿದೆ. ನೂರಾರು ವರ್ಷ ಹಳೆಯ ಶಾಸನಗಳು, ಪ್ರತೀಕಗಳು ,ನಿರ್ಮಾಣಗಳು ಪತ್ತೆಯಾಗುತ್ತಲೇ ಬಂದಿದೆ. ವಿಜಯ ನಗರ ಸಾಮ್ರಾಜ್ಯದ ಶ್ರೀಕೃಷ್ಣದೇವರಾಯ ರಿಗೆ ಸೇರಿದ ಶಾಸನವೊಂದು ಬೈಂದೂರು ತಾಲೂಕಿನಲ್ಲಿ ಪತ್ತೆಯಾಗಿದೆ. ಈ ಮೂಲಕ ಇತಿಹಾಸಜ್ಞರು ಸೇರಿದಂತೆ ನಾಗರಿಕರ ಗಮನಸೆಳೆದಿದೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಂದನವನ ಗ್ರಾಮದಲ್ಲಿ ಈ ಶಾಸನ ಪತ್ತೆಯಾಗಿದ್ದು, 15ನೆ ಶತಮಾನ ಕ್ಕೆ ಸೇರಿದ ಶಾಸನ ಇದು ಎಂದು ತಿಳಿದುಬಂದಿದೆ. ಶಾಸನವನ್ನು ಉಡುಪಿ ಪ್ರಾಚ್ಯಸಂಚಯ ಸಂಶೋಧನ ಕೇಂದ್ರದ ಅಧ್ಯಯನ ನಿರ್ದೇಶಕ ಪ್ರೊ. ಎಸ್.ಎ.ಕೃಷ್ಣಯ್ಯ ಮತ್ತು ನಿವೃತ್ತ ಶಿಕ್ಷಕ ಕೆ. ಶ್ರೀಧರ ಭಟ್ ಅವರ ನೇತೃತ್ವದಲ್ಲಿ ಸೈಂಟ್ ಅಲೋಶಿಯಸ್ ಕಾಲೇಜಿನ ನಿರ್ದೇಶಕರಾದ ಶ್ರುತೇಶ್ ಆಚಾರ್ಯ ಮೂಡುಬೆಳ್ಳೆ ಅವರು ಅಧ್ಯಯನ ಮಾಡಿದ್ದಾರೆ.
Idgah Maidan ಯಾರ ಸ್ವತ್ತು? ತಾರಕ್ಕೇರಿದ ಮಾಲಿಕತ್ವ ವಿವಾದ
ಶಾಸನವು ಸಂಜೀವ ಪ್ರಭು ಅವರಿಗೆ ಸೇರಿದ ಜಾಗದಲ್ಲಿ ಪತ್ತೆಯಾಗಿದ್ದು ಕಣ ಶಿಲೆಯಲ್ಲಿ ಕೊರೆಯಲ್ಪಟ್ಟಿದೆ. 5 ಅಡಿ ಎತ್ತರ ಮತ್ತು 2.5 ಅಡಿ ಅಗಲವಿರುವ ಈ ಶಾಸನದಲ್ಲಿ ಕನ್ನಡ ಲಿಪಿ ಮತ್ತು ಭಾಷೆಯ 38 ಸಾಲುಗಳಿವೆ.
ಮೇಲ್ಭಾಗದಲ್ಲಿರುವ ವಾಮನ ಮೂರ್ತಿಯ ಇಕ್ಕೆಲಗಳಲ್ಲಿ ಶಂಖ-ಚಕ್ರ, ಸೂರ್ಯ-ಚಂದ್ರರ ಉಬ್ಬು ಕೆತ್ತನೆಯಿದೆ. ‘ಸ್ವಸ್ತಿ ಶ್ರೀ ಗಣಾಧಿಪತಯೆ ನಮ’ ಎಂಬ ಶ್ಲೋಕದ ತಲೆ ಬರಹವಿರುವ ಈ ಶಾಸನವು ಶಕವರುಷ 1442 ವರ್ತಮಾನ ಪ್ರಮಾಧಿ ಸಂವತ್ಸರದ ಶ್ರಾವಣ ಶುದ್ಧ 15 ಬುಧವಾರ ಅಂದರೆ ಕ್ರಿ. ಶ 1519 ಆಗಸ್ಟ್ 21 ಬುಧವಾರಕ್ಕೆ ಸೇರಿದೆ.
ಆರ್ಥಿಕ ದಿವಾಳಿತನ ತಪ್ಪಿಸಲು ತೆರಿಗೆ ದ್ವಿಗುಣಗೊಳಿಸಿದ ಪಾಕಿಸ್ತಾನದ ಹೊಸ ಬಜೆಟ್
ಈ ಕಾಲಮಾನವು ವಿಜಯನಗರ ತುಳುವ ದೊರೆ ಕೃಷ್ಣದೇವರಾಯನಿಗೆ ಸೇರಿದ್ದು, ಈ ಸಂದರ್ಭದಲ್ಲಿ ಬಾರಕೂರ ರಾಜ್ಯವನ್ನು ರತ್ನಪ್ಪ ಒಡೆಯನ ಕುಮಾರನಾದ ವಿಜಯಪ್ಪ ಒಡೆಯನು ಆಳ್ವಿಕೆ ನಡೆಸುತ್ತಿದ್ದ ಎಂಬುದು ಶಾಸನ ತಿಳಿಸುತ್ತದೆ.
ಈ ಕಾಲದಲ್ಲಿ ಸಂಗರಸ ನಾಯಕನ ಮನೆಯ ದೇವ ಪೂಜೆಯ ಕರುಣಾಕರ ಹಾಗೂ ಅಂಗೀರಸ ಗೋತ್ರದ ಯವನಾಶ್ವ ಪ್ರವರದ ಈಶನ ಉಪಾಧ್ಯಾಯರ ಮಗ ಕೇಶವ ಉಪಾಧ್ಯಾಯರು ವಿಜಯಪ್ಪ ಒಡೆಯರಿಗೆ ಆಯುರಾರೋಗ್ಯ ಮತ್ತು ಐಶ್ವರ್ಯ ಅಭಿವೃದ್ಧಿಗಾಗಿ ಸೋಮೊಪರಾಗ ಪುಣ್ಯ ಕಾಲದಲ್ಲಿ ಸಹಿರಣ್ಯೋದಕ ದಾನವನ್ನು ಮಾಡಿರುವ ಹಾಗೂ ಇದಕ್ಕೆ ಘಟ್ಟಿ ವರಹ ಗದ್ಯಾಣ 24ನೂ ಕುಳವ ಕಡಿದು ಬರಸಿಕೊಟ್ಟಂತಹ ದಾನ ಶಾಸನ ಇದಾಗಿದೆ.
ಕಳೆದ ಮೇ.29ರಂದು ಕೂಡ ಉಡುಪಿಯಲ್ಲಿ ಶಾಸನ ಪತ್ತೆಯಾಗಿತ್ತು. ಕೊಕ್ಕರ್ಣೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮಿ ಎಂಬವರು ನೀಡಿರುವ ಮಾಹಿತಿಯ ಆಧಾರದಲ್ಲಿ ನಡೆಸಲಾದ ಕ್ಷೇತ್ರಕಾರ್ಯದಿಂದ ಶಾಸನದ ಪತ್ತೆಯಾಗಿತ್ತು. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿಯಾದ ಬಿ. ಜಗದೀಶ ಶೆಟ್ಟಿಯವರ ನೇತೃತ್ವದಲ್ಲಿ ಶಾಸನದ ಪರಿಶೋಧನೆ ನಡೆಸಲಾಯಿತು.
ಕೊಕ್ಕರ್ಣೆಯ ಚರ್ಗಿಬೆಟ್ಟು ಕುದಿ ಪೆಜಮಂಗೂರು ಗ್ರಾಮದ ಗಡಿಪ್ರದೇಶದಲ್ಲಿ ವಿಜಯನಗರ ಕಾಲದ ಸಂಗಮ ಮನೆತನದ ಇಮ್ಮಡಿ ದೇವರಾಯ ಕಾಲದ ಶಾಸನ ಇದು ಅನ್ನೋದು ಗೊತ್ತಾಗಿತ್ತು. "ಶ್ರೀ ಗಣಾಧಿಪ ತಯೇ ನಮಹ ' ಎಂಬ ಶ್ಲೋಕ ದಿಂದ ಪ್ರಾರಂಭವಾಗುವ ಈ ಶಾಸನವು ಶಕ ವರುಷ 1364 (ಕ್ರಿ.ಶ. 1442) ರ ದುಂದುಭಿ ಸಂವತ್ಸರಕ್ಕೆ ಸೇರಿದೆ. ಈ ಸಂದರ್ಭದಲ್ಲಿ ಬಾರಕೂರು ರಾಜ್ಯವನ್ನು ಇಮ್ಮಡಿ ದೇವರಾಯನ ನಿರೂಪದಿಂದ ಮಹಾಪ್ರಧಾನ ಚಂಡರಸ ಒಡೆಯರು ಆಳ್ವಿಕೆ ನಡೆಸುತ್ತಿದ್ದರು. ಉಳಿದಂತೆ ಶಾಸನದಲ್ಲಿ ಬೊಂಮಣ, ಗೋವಿಂದ ಸೆಟ್ಟಿ ,ಶಂಕರನಾರಾಯಣ , ಕುದು ಎಂಬ ಹೆಸರುಗಳ ಉಲ್ಲೇಖ ಇದೆ.