ಕರಡಿಗೋಡು, ಸಿದ್ದಾಪುರ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ತೀವ್ರ ತೊಂದರೆ ಕೊಡುತ್ತಿದ್ದ 22 ವರ್ಷದ ಕಾಡಾನೆ ಸೆರೆ
ವರದಿ: ರವಿ.ಎಸ್.ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು
ಕೊಡಗು(ಡಿ.29): ಪಶ್ಚಿಮಘಟ್ಟ ಪ್ರದೇಶದಲ್ಲಿರುವ ಕೊಡಗು ಜಿಲ್ಲೆಯಲ್ಲಿ ವನ್ಯಜೀವಿಗಳು ಮತ್ತು ಮಾನವನ ನಡುವಿನ ಸಂಘರ್ಷ ಹೊಸದೇನು ಅಲ್ಲ. ಆದರೆ ಒಂಟಿ ಸಲಗವೊಂದು ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿ ಎಲ್ಲರಿಗೆ ಪ್ರಾಣಭೀತಿ ಸೃಷ್ಟಿಸಿತ್ತು. ಹೀಗೆ ಎಲ್ಲರ ಮನೆಗೆ ನುಗ್ಗಿ ದಾಂಧಲೆ ನಡೆಸುತ್ತಿದ್ದ ಪುಂಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದ ರೋಚಕ ಕಾರ್ಯಾಚರಣೆ ಹೇಗಿತ್ತು ನೋಡಿ. ದೊಡ್ಡ ದೊಡ್ಡ ಹಗ್ಗ ಕಟ್ಟಿ ಆನೆಯನ್ನೇ ಎಳೆಯುತ್ತಿರುವ ಆನೆಗಳು, ಆನೆಗೆ ಬೆಲ್ಟ್‍ಗಳನ್ನು ಕಟ್ಟಿ ಮೇಲೆತ್ತಿ ಲಾರಿಗೆ ತುಂಬುತ್ತಿರುವ ಕ್ರೇನ್. ಹೌದು ಇದೇನು ಆನೆಯನ್ನೇಕೆ ಹೇಗೆ ಕಟ್ಟಿ ಎಳೆಯುತ್ತಿದ್ದಾರೆ ಎಂದು ಯೋಚಿಸುತ್ತಿದ್ದೀರಾ.? ಇದನ್ನು ಹೀಗೆ ತೀವ್ರವಾಗಿ ಬಂಧಿಸಿರುವುದಕ್ಕೂ ದೊಡ್ಡ ಕಾರಣವೇ ಇದೆ. ಅದು ಈ ಆನೆಯ ಪುಂಡಾಟ.
undefined
ಹೌದು, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಕರಡಿಗೋಡು, ಸಿದ್ದಾಪುರ, ಮಾಲ್ದಾರೆ ಸೇರಿದಂತೆ ವಿವಿಧ ಗ್ರಾಮಗಳ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸುತ್ತಿತ್ತು ಈ ಒಂಟಿ ಸಲಗ. ರಾತ್ರಿಯಾಯಿತ್ತೆಂದರೆ ಕಳ್ಳರು ಯಾರಿಗೂ ಗೊತ್ತಾಗದಂತೆ ಮನೆಗಳಿಗೆ ನುಗ್ಗಿದರೆ, ಈ ಆನೆ ಊರಿಗೆಲ್ಲಾ ಗೊತ್ತಾಗುವಂತೆ ಮನೆಯ ಬಾಗಿಲು, ಕಿಟಕಿಗಳನ್ನು ಮುರಿದು ಒಳನುಗ್ಗಿ ಅಕ್ಕಿ, ಬೆಳೆ, ಬೆಲ್ಲ, ಉಪ್ಪು ಹೀಗೆ ಸಿಕ್ಕಿದ ಧಾನ್ಯಗಳನ್ನು ತಿಂದು ತೇಗಿ ಬಿಡುತಿತ್ತು. ಈ ವೇಳೆ ಯಾರಾದ್ರು ಸಿಕ್ಕರೆ ಅವರ ಪ್ರಾಣವನ್ನು ತೆಗೆದು ಬಿಡುತಿತ್ತು. ಅದು ಹೀಗೆ ಮನೆಗಳಿಗೆ ನುಗ್ಗಿದ ಘಟನೆಗಳು ಒಂದೆರೆಡಲ್ಲ. ಜೊತೆಗೆ ಗ್ರಾಮದ ರಸ್ತೆಗಳಲ್ಲಿ ಓಡಾಡುತ್ತಿದ್ದ ಈ ಮದಗಜ ಎದುರಿಗೆ ಸಿಕ್ಕವರ ಮೇಲೂ ಅಟ್ಯಾಕ್ ಮಾಡಿಬಿಡುತಿತ್ತು. ಹೀಗಾಗಿ ಈ ಆನೆಯ ಚಲನವಲನವನ್ನು ಗಮಸಿದ್ದ ಅರಣ್ಯ ಇಲಾಖೆ ಅಧಿಕಾರಿಗಳು ಇದೇ ಆನೆ ಎಂಬುದನ್ನು ಗುರುತ್ತಿಸಿ 22 ವರ್ಷದ ಒಂಟಿ ಸಲಗವನ್ನು ಸೆರೆಹಿಡಿಯಲಾಗಿದೆ ಎಂದು ಸೋಮವಾರಪೇಟೆ ಎಸಿಎಫ್ ನೆಹರು ಅವರು ತಿಳಿಸಿದ್ದಾರೆ. ಇದೇ ಆನೆ ಮನೆಗಳಿಗೆ ನುಗ್ಗುತ್ತಿದೆ ಎನ್ನುವುದು ಗೊತ್ತಾಗಿದ್ದೇ ತಡ ಸಾಕಾನೆ ಅಭಿಮನ್ಯು ಆನೆ ಸೇರಿದಂತೆ ಐದು ಆನೆಗಳೊಂದಿಗೆ 60 ಕ್ಕೂ ಹೆಚ್ಚು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಎರಡು ದಿನಗಳಿಂದ ಆನೆ ಹುಡುಕುವುದಕ್ಕೆ ಶುರು ಮಾಡಿದ್ರು.
ಹೊಸವರ್ಷದಂದು ಪಾಶ್ಚಾತ್ಯ ನೃತ್ಯ ಆಚರಣೆಗೆ ಭಜರಂಗದಳ ವಿರೋಧ
ಈ ವೇಳೆ ಹುಡುಕಾಟ ನಡೆಸುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆಯೇ ಅಟ್ಯಾಕ್ ಮಾಡಲು ಈ ಪುಂಡಾನೆ ಮುಂದಾಗಿತ್ತು. ಹೇಗೋ ಬಚಾವ್ ಆದ ಸಿಬ್ಬಂದಿ ಬುಧವಾರ ಕೂಡ ಆನೆ ಹುಡುಕುತ್ತಾ ಹೊರಟಿದ್ರು, ಆದರೆ ಬುಧವಾರ ಆ ಒಂಟಿ ಸಲಗ ಹಲವು ಆನೆಗಳ ಹಿಂಡಿನೊಂದಿಗೆ ಪ್ರತ್ಯಕ್ಷವಾಗಿತ್ತು. ಇದೇ ಆನೆ ಎಂದು ಕನ್ಫರ್ಮ್ ಮಾಡಿಕೊಂಡ ಅರಣ್ಯ ಇಲಾಖೆ ಸಿಬ್ಬಂದಿ ಅರವಳಿಕೆ ಕೊಟ್ಟು ಕೆಡ್ಡಾಕ್ಕೆ ಕೆಡವಿದ್ರು. ಅರವಳಿಕೆ ಪವರ್ ಕಡಿಮೆಯಾಗಿದ್ದೇ ತಡ ಮತ್ತೆ ಗಲಾಟೆ ಮಾಡುವುದಕ್ಕೆ ಶುರು ಮಾಡಿತ್ತು. ಆದರೆ ಸಾಕಾನೆಗಳ ಸಹಾಯ ಪಡೆದ ಅರಣ್ಯ ಇಲಾಖೆ ಸಿಬ್ಬಂದಿ ಪುಂಡಾಟಿಕೆ ಮೆರೆಯುತ್ತಿದ್ದ ಒಂಟಿ ಸಲಗವನ್ನು ಹಗ್ಗದಿಂದ ಕಟ್ಟಿ ಲಾರಿಗೆ ತುಂಬಿಸಿದ್ರು. ತೀವ್ರ ಗಲಾಟೆ ಮಾಡುತ್ತಾ ಜನರಿಗೆ ತೊಂದರೆ ಕೊಡುತ್ತಿದ್ದ ಎರಡು ಆನೆಗಳನ್ನು ಹಿಡಿಯುವುದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿತ್ತು. ಅವುಗಳ ಪೈಕಿ ಸದ್ಯ ಒಂದನ್ನು ಮಾತ್ರವೇ ಸೆರೆ ಹಿಡಿಯಲಾಗಿದ್ದು, ಅಮ್ಮತ್ತಿ ಭಾಗದಲ್ಲಿ ಜನರಿಗೆ ತೀವ್ರ ಕಿರಿಕ್ ಮಾಡುತ್ತಿರುವ ಮತ್ತೊಂದು ಆನೆಯನ್ನು ಇನ್ನೆರಡು ದಿನಗಳಲ್ಲಿ ಹಿಡಿಯುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸದ್ಯ ಹಿಡಿದಿರುವ ಆನೆಯನ್ನು ದುಬಾರೆ ಸಾಕಾನೆ ಶಿಬಿರಕ್ಕೆ ಸಾಗಿಸಲಾಗಿದ್ದು, ಅಲ್ಲಿ ಕ್ರಾಲ್ ಗೆ ಹಾಕಿ ಪಳಗಿಸುವುದಾಗಿ ಅರಣ್ಯ ಇಲಾಖೆ ವೆದ್ಯ ರಮೇಶ್ ತಿಳಿಸಿದ್ದಾರೆ.
ಒಟ್ಟಿನಲ್ಲಿ ಕರಡಿಗೋಡು, ಸಿದ್ದಾಪುರ ಸೇರಿದಂತೆ ಸುತ್ತಮುತ್ತ ಗ್ರಾಮಗಳಲ್ಲಿ ತೀವ್ರ ತೊಂದರೆ ಕೊಡುತ್ತಿದ್ದ 22 ವರ್ಷದ ಪುಂಡ ಗಂಡಾನೆಯನ್ನು ಸೆರೆ ಹಿಡಿದಿರುವುದಕ್ಕೆ ಈ ಭಾಗದ ಕಾರ್ಮಿಕರು, ರೈತರು ಮತ್ತು ಜನಸಾಮಾನ್ಯರು ನಿಟ್ಟುಸಿರು ಬಿಟ್ಟಿದ್ದಾರೆ.