ಸಹಪಾಠಿಗಳೊಂದಿಗೆ ನಡೆದು ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಕಾಡಾನೆ ಸೊಂಡಿಲಿನಿಂದ ಎತ್ತಿ ಎಸೆದಿದೆ. ದೂರಕ್ಕೆ ಹೋಗಿ ಬಿದ್ದ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಮಡಿಕೇರಿ(ಜ.04): ಸಿದ್ದಾಪುರ ಸಮೀಪದ ಇಂಜಿಲಗೆರೆಯ ಕಾಫಿ ತೋಟವೊಂದರಲ್ಲಿ ಕಾಡಾನೆ ದಾಳಿ ನಡೆಸಿದ ಪರಿಣಾಮ ಶಾಲಾ ವಿದ್ಯಾರ್ಥಿ ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ನಡೆದಿದೆ.
ಇಂಜಿಲಗೆರೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 4ನೇ ತರಗತಿಯ ಯುವಶ್ರೀಗೆ ಗಂಭೀರ ಗಾಯಗಳಾಗಿದ್ದು, ಈಕೆಯ ಸಹೋದರಿ 2 ತರಗತಿಯ ನಿತ್ಯಶ್ರೀಗೆ ಸಣ್ಣಪುಟ್ಟಗಾಯಗಳಾಗಿದೆ.
ಕೋಲಾರ: CAA, NRC ಬೆಂಬಲಿಸಿ ಮೆರವಣಿಗೆಯಲ್ಲಿ ಲಾಠಿ ಪ್ರಹಾರ
ವಿದ್ಯಾರ್ಥಿಗಳನ್ನು ಅಮ್ಮತ್ತಿಯ ಆರ್‌ಐಎಚ್‌ಪಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಯುವಶ್ರೀಯ ಕೆನ್ನೆಯ ಭಾಗದ ಮೂಳೆಗೆ ಭಾರಿ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ವಿರಾಜಪೇಟೆಯ ದಂತ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು.
ಘಟನೆ ವಿವರ:
ಇಂಜಿಲಗೆರೆಯ ಖಾಸಗಿ ಕಾಫಿ ತೋಟದಲ್ಲಿ ಕಾರ್ಮಿಕ ಮಣಿ ತೋಟದ ಲೈನ್ ಮನೆಯಲ್ಲಿ ವಾಸವಾಗಿದ್ದಾರೆ. ಅವರ ಮಕ್ಕಳು ಮತ್ತು ಇತರ ಕಾರ್ಮಿಕರ ಮಕ್ಕಳೊಂದಿಗೆ ಶುಕ್ರವಾರ ಬೆಳಗ್ಗೆ ಇಂಜಿಲಗೆರೆಯಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಗೆ ವ್ಯಾಸಂಗಕ್ಕೆ ತೋಟದ ಮಧ್ಯದಲ್ಲಿರುವ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು.
ಆದಿವಾಸಿ ಬಾಲಕಿಗೆ ರಾಷ್ಟ್ರಮಟ್ಟದಲ್ಲಿ ಚಿನ್ನ, ಖೇಲೋ ಇಂಡಿಯಾಗೆ ಆಯ್ಕೆ
ಈ ಸಂದರ್ಭ 8 ಗಂಟೆ ಸುಮಾರಿಗೆ ತೋಟದ ಮಧ್ಯದಿಂದ ಏಕಾಏಕಿ ಆಗಮಿಸಿದ ಒಂಟಿ ಸಲಗ ಯುವಶ್ರೀ ಹಾಗೂ ನಿತ್ಯಶ್ರೀಯನ್ನು ಸೊಂಡಿಲಿನಿಂದ ಎತ್ತಿ ಎಸೆದಿದೆ ಎನ್ನಲಾಗಿದೆ. ಪರಿಣಾಮ ಯುವಶ್ರೀ ತಲೆ ಹಾಗೂ ಕಣ್ಣಿನ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಜೊತೆಗಿದ್ದ ಇಬ್ಬರು ಅಲ್ಲಿಂದ ಓಡಿದ್ದಾರೆ.
ಕಾಡಾನೆ ದಾಳಿಯಿಂದ ಗಂಭೀರ ಗಾಯಗೊಂಡಿರುವ ವಿದ್ಯಾರ್ಥಿನಿಗೆ ಅರಣ್ಯ ಇಲಾಖೆಯು ಸೂಕ್ತ ಪರಿಹಾರ ನೀಡಬೇಕೆಂದು ಪೋಷಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.