ಮಡಿಕೇರಿಯಲ್ಲಿ ಕಾಡಾನೆ ದಾಳಿಗೆ ಕಾರ್ಮಿಕ ಸಾವು

By Kannadaprabha NewsFirst Published Jun 17, 2020, 10:00 AM IST
Highlights

ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ಇಲ್ಲಿಗೆ ಸಮೀಪದ ಕಕ್ಕಬ್ಬೆ- ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯವಕಪಾಡಿ ಗ್ರಾಮದಲ್ಲಿ ನಡೆದಿದೆ. ಯವಕಪಾಡಿ ಗ್ರಾಮದ ಕುಡಿಯರ ಚಿಣ್ಣಪ್ಪ (70) ಮೃತರು.

ನಾಪೋಕ್ಲು(ಜೂ.17): ಕಾಡಾನೆ ದಾಳಿಗೆ ವ್ಯಕ್ತಿಯೊಬ್ಬರು ಬಲಿಯಾದ ಘಟನೆ ಇಲ್ಲಿಗೆ ಸಮೀಪದ ಕಕ್ಕಬ್ಬೆ- ಕುಂಜಿಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಯವಕಪಾಡಿ ಗ್ರಾಮದಲ್ಲಿ ನಡೆದಿದೆ. ಯವಕಪಾಡಿ ಗ್ರಾಮದ ಕುಡಿಯರ ಚಿಣ್ಣಪ್ಪ (70) ಮೃತರು.

ಸೋಮವಾರ ರಾತ್ರಿ ಈ ಘಟನೆ ನಡೆದಿದ್ದು, ಮಂಗಳವಾರ ಬೆಳಗ್ಗೆ ಮನೆಯ ಸಮೀಪದಲ್ಲಿ ಚಿಣ್ಣಪ್ಪ ಅವರ ಮೃತದೇಹ ಪತ್ತೆಯಾಗಿದೆ. ಕಾಡಾನೆಯ ತಿವಿತದಿಂದ ದೇಹದ ಹೊಟ್ಟೆಯ ಭಾಗ ಸೀಳಿ ಹೊಗಿದ್ದು ಕರುಳು ಹೊರಗೆ ಬಂದಿದ್ದು ನೋಡಲು ಭೀಕರವಾಗಿತ್ತು. ಕುಡಿಯರ ಚಿಣ್ಣಪ್ಪನವರು ನಾಲಡಿ ಗ್ರಾಮದ ಪೂಮಾಲೆ ಎಸ್ಟೇಟ್‌ನಲ್ಲಿ ಕಾರ್ಮಿಕನಾಗಿ ದುಡಿಯುತ್ತಿದ್ದು, ಮಂಗಳವಾರವೂ ಕೆಲಸಕ್ಕ ಹೋಗಿದ್ದು, ಸಂಜೆ ಎಸ್ಟೇಟ್‌ನಿಂದ ಮನೆಗೆ ಬರುತ್ತಿದ್ದಾಗ ಆನೆ ದಾಳಿಗೆ ತುತ್ತಾಗಿದ್ದಾರೆ. ಈ ಬಗ್ಗೆ ನಾಪೋಕ್ಲು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಮೃತರಿಗೆ ಪತ್ನಿ ಮತ್ತು ಇಬ್ಬರು ಹೆಣ್ಣು, ಒಬ್ಬ ಗಂಡು ಮಗ ಇದ್ದಾರೆ. ಮಡಿಕೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಯಿತು.

ಮುಂಗಾರಿನಲ್ಲಿ ಕೊಡಗಿನಲ್ಲಿ 35 ಲಕ್ಷ ಮೀನು ಮರಿ ಬಿತ್ತನೆಗೆ ಸಿದ್ಧತೆ

ಈ ವಿಭಾಗದಲ್ಲಿ ಕಳೆದ 5- 6 ವರ್ಷಗಳಿಂದ ನಿರಂತರ ಕಾಡಾನೆಗಳು ದಾಳಿ ನಡೆಸಿ ಈ ವಿಭಾಗದ ಜನರಿಗೆ ಅಪಾರ ನಷ್ಟವನ್ನು ಉಂಟು ಮಾಡಿದೆ. ಘಟನಾ ಸ್ಥಳಕ್ಕೆ ತಾ.ಪಂ ಉಪಾಧ್ಯಕ್ಷ ಬೊಳಿಯಾಡೀರ ಸಂತು ಸುಬ್ರಮಣಿ, ಕಕ್ಕಬ್ಬೆ- ಕುಂಜಿಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಉಸ್ಮನ್‌, ಗ್ರಾಮ ಪಂಚಾಯಿತಿ ಸದಸ್ಯ ಬೋಜಕ್ಕಿ ಅವರು ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಭಾಗಮಂಡಲ ವಲಯ ಅರಣ್ಯಾಧಿಕಾರಿ ದೇವರಾಜ್‌, ಸಿಬ್ಬಂದಿಗಳು, ನಾಪೋಕ್ಲು ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ತೆರಿಗೆ ಭಾರಿ ಏರಿಕೆ: ಕಾಂಗ್ರೆಸ್‌ನಿಂದ ಹೋರಾಟದ ಎಚ್ಚರಿಕೆ

ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಹಾಗೂ ಅರಣ್ಯ ಹಕ್ಕು ಸಮಿತಿಯ ಅಧ್ಯಕ್ಷ ಕುಡಿಯರ ಮುತ್ತಪ್ಪ ಮಾತನಾಡಿ, ಯವಕಪಾಡಿ ಗ್ರಾಮದಲ್ಲಿ ಕಾಡಾನೆಗಳ ಹಾವಳಿ ಅಧಿಕವಾಗಿದ್ದು ರೈತರು ಸಂಕಷ್ಟಅನುಭವಿಸುತ್ತಿದ್ದಾರೆ. ಸರ್ಕಾರ ಹಾಗೂ ಅರಣ್ಯ ಇಲಾಖೆ ಎಚ್ಚೆತ್ತುಕೊಂಡು ಈ ಭಾಗದ ಆನೆಗಳನ್ನು ಕಾಡಿಗಟ್ಟಲು ಕ್ರಮ ಕೈಗೊಳ್ಳಬೇಕು. ರೈತರ ಬೆಳೆ ಸಂಪೂರ್ಣ ನಷ್ಟವಾಗಿದ್ದು ನಷ್ಟಪರಿಹಾರ ನೀಡಬೇಕು. ಮೃತರ ಕುಟುಂಬಕ್ಕೆ ಸ್ಥಳದಲ್ಲಿಯೇ ಒಂದು ಲಕ್ಷ ರು. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಡಿಎಫ್‌ಒ ಪ್ರಭಾಕರ್‌ ಅರಣ್ಯ ಇಲಾಖೆ ವತಿಯಿಂದ ಒಂದು ಲಕ್ಷ ರು. ಪರಿಹಾರದ ಚೆಕ್‌ನ್ನು ಚಿಣ್ಣಪ್ಪ ಅವರ ಮಗ ದಿಲೀಪ್‌ಗೆ ಹಸ್ತಾಂತರಿಸಿದರು.

click me!