'ಪರಮೇಶ್ವರ ನಾಯ್ಕ ಪುತ್ರನ ಮದುವೆಯಲ್ಲಿ ನಿಯಮ ಉಲ್ಲಂಘನೆ ಸಮರ್ಥಿಸಿಕೊಂಡ ಈಶ್ವರಪ್ಪ'

Kannadaprabha News   | Asianet News
Published : Jun 17, 2020, 09:59 AM IST
'ಪರಮೇಶ್ವರ ನಾಯ್ಕ ಪುತ್ರನ ಮದುವೆಯಲ್ಲಿ ನಿಯಮ ಉಲ್ಲಂಘನೆ ಸಮರ್ಥಿಸಿಕೊಂಡ ಈಶ್ವರಪ್ಪ'

ಸಾರಾಂಶ

ಜನಪ್ರತಿನಿಧಿಗಳ ಮಕ್ಕಳ ಮದುವೆಯಲ್ಲಿ ಜನ ನುಗ್ಗುವುದು ಸಾಮಾನ್ಯ: ಸಚಿವ ಈಶ್ವರಪ್ಪ| ಜಿಂದಾಲ್‌ನಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಂಡು ಏನು ಮಾಡಬೇಕೋ ಅದನ್ನು ಖಂಡಿತ ಮಾಡುತ್ತೇವೆ| ಜಿಂದಾಲ್‌ ಬಗ್ಗೆ ನಮಗ್ಯಾವ ಮೃದು ಧೋರಣೆ ಇಲ್ಲ|

ಬಳ್ಳಾರಿ(ಜೂ.15): ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿಸಿ ಪುತ್ರನ ಮದುವೆ ನಡೆಸಿದ ಹಡಗಲಿ ಶಾಸಕ ಹಾಗೂ ಮಾಜಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರ ನಡೆಯನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿರುವ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು, ಚುನಾಯಿತ ಜನಪ್ರತಿನಿಧಿಗಳ ಮಕ್ಕಳ ಮದುವೆ ಎಂದಾಗ ಜನ ನುಗ್ಗುವುದು ಸ್ವಾಭಾವಿಕ ಎಂದಿದ್ದಾರೆ.

ತಾಲೂಕಿನ ಮಿಂಚೇರಿ ಬಳಿ ವೇದಾವತಿ ನದಿ (ಹಗರಿ)ಯಲ್ಲಿ ನಡೆಯುತ್ತಿರುವ ಅಂತರ್ಜಲ ಹೆಚ್ಚಿಸುವ ಪುನಶ್ಚೇತನ ಕಾಮಗಾರಿಯನ್ನು ಮಂಗಳವಾರ ವೀಕ್ಷಿಸಿದ ಬಳಿಕ ಸುದ್ದಿಗಾರರ ಜತೆ ಸಚಿವರು ಮಾತನಾಡಿದರು. ಶಾಸಕ ಪರಮೇಶ್ವರ ನಾಯ್ಕ ಪುತ್ರನ ಮದುವೆಯ ಹಿಂದಿನ ರಾತ್ರಿ ನಾನು ಸಹ ಹೋಗಿದ್ದೆ. ಆಗ ಜನಜಂಗುಳಿ ಇರಲಿಲ್ಲ. ಸಾಕಷ್ಟು ಅವರು ಸಹ ಗಮನ ಹರಿಸಿದ್ದಾರೆ. ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದ್ದಾರೆ. ಇಂದು ಪತ್ರಿಕೆ ಓದಿದ ಬಳಿಕ ಭಾರೀ ಜನ ಸೇರಿದ್ದಾರೆ ಎಂದು ಗೊತ್ತಾಯಿತು. ಇಷ್ಟೊಂದು ಜನ ಹೇಗೆ ಬಂದ್ರೋ ಗೊತ್ತಿಲ್ಲ. ಜನಪ್ರತಿನಿಧಿಗಳ ಮಕ್ಕಳ ಮದುವೆಗೆ ಕರೆದವರು, ಕರೆಯದವರು ಸಹ ಬಂದು ಬಿಡೋದ್ರಿಂದ ಹೀಗಾಗುತ್ತೆ ಎಂದರಲ್ಲದೆ, ನಿಯಮ ಉಲ್ಲಂಘನೆ ಕ್ರಮವನ್ನು ಗೃಹ ಸಚಿವರು ನೋಡಿಕೊಳ್ಳುತ್ತಾರೆ ಎಂದು ಹೇಳಿದರು.

ಅದ್ಧೂರಿ ಮದುವೆ: ಕಾಂಗ್ರೆಸ್ ಶಾಸಕ, 'ಮದು'ಮಗನ ವಿರುದ್ಧ ಕೇಸ್ ಬುಕ್

ಉಲ್ಲಂಘನೆ ಅನ್ಕೊಂಡ್ರೆ ಅನ್ಕೊಳ್ಳಿ...

‘ನಾನು ಕಲಬುರಗಿ, ರಾಯಚೂರು ಕಡೆ ಹೋದಾಗ ಮಂತ್ರಾಲಯಕ್ಕೆ ಹೋಗಿ ಬರುವ ಪದ್ಧತಿ ಈ ಮೊದಲಿನಿಂದಲೂ ಇದೆ. ನಾವು ಮೂವರು ಮಾತ್ರ ಮಂತ್ರಾಲಯಕ್ಕೆ ಹೋಗಿದ್ದೆವು. ಜಾಸ್ತಿ ಜನ ಹೋಗಿರಲಿಲ್ಲ. ಇಷ್ಟಾಗಿಯೂ ಅನೇಕರು ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡಲೆಂದೇ ಕೆಲವರು ಇರ್ತಾರೆ. ಸಾಮಾಜಿಕ ಅಂತರ ಕಾಯ್ದುಕೊಂಡೇ ಹೋಗಿ ಬಂದಿದ್ದೇನೆ. ಕೆಲವರು ಉಲ್ಲಂಘನೆ ಅನ್ಕೊಂಡ್ರೆ ಅನ್ಕೊಳ್ಳಿಬಿಡಿ’ ಎಂದು ಪ್ರತಿಕ್ರಿಯಿಸಿದರು.
ಕೊರೋನಾ ವೈರಸ್‌ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಟಾಸ್ಕ್‌ ಫೋರ್ಸ್‌ ಸಮಿತಿ ಮಾಡಿದ್ದೇವೆ. ಗ್ರಾಪಂ ಪ್ರಮುಖರು, ಅಧಿಕಾರಿಗಳು ಹಾಗೂ ವಿವಿಧ ಅಧಿಕಾರಿಗಳು ಟಾಸ್ಕ್‌ಪೋರ್ಸ್‌ ಸಮಿತಿಯಲ್ಲಿ ಇರುತ್ತಾರೆ. ರಾಜ್ಯದ 6021 ಗ್ರಾಪಂಗಳಲ್ಲಿ ಮುನ್ನಚ್ಚರಿಕೆ ತೆಗೆದುಕೊಂಡಿರುವುದರಿಂದ ರಾಜ್ಯದಲ್ಲಿ ಕೊರೋನಾ ವೈರಸ್‌ ಹರಡಿಲ್ಲ. ಗ್ರಾಮೀಣ ಭಾಗದಲ್ಲಿ ಜಾಗೃತಿ ಮಾಡುವಲ್ಲಿ ನಾವು ಯಶಸ್ವಿಯಾಗಿದ್ದೇವೆ ಎಂದು ಸಚಿವ ಈಶ್ವರಪ್ಪ ತಿಳಿಸಿದರು.

ಜಿಂದಾಲ್‌ನಲ್ಲಿ ಕೊರೋನಾ ವೈರಸ್‌ ಪ್ರಕರಣಗಳು ಏರಿಕೆಯಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ, ಜಿಂದಾಲ್‌ನಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಂಡು ಏನು ಮಾಡಬೇಕೋ ಅದನ್ನು ಖಂಡಿತ ಮಾಡುತ್ತೇವೆ. ಜಿಂದಾಲ್‌ ಬಗ್ಗೆ ನಮಗ್ಯಾವ ಮೃದು ಧೋರಣೆ ಇಲ್ಲ ಎಂದು ಹೇಳಿದರು. ಸಂಸದ ವೈ. ದೇವೇಂದ್ರಪ್ಪ, ಗ್ರಾಮೀಣ ಶಾಸಕ ಬಿ. ನಾಗೇಂದ್ರ, ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಜಿಪಂ ಸಿಇಒ ಕೆ. ನಿತೀಶ್‌ ಮತ್ತಿತರರಿದ್ದರು.
 

PREV
click me!

Recommended Stories

ತುಮಕೂರಿನಲ್ಲಿ ಉದ್ಯಮಿಗೆ ಲಂಚಕ್ಕೆ ಬೇಡಿಕೆ; ಇಬ್ಬರು ಭ್ರಷ್ಟ ಅಧಿಕಾರಿಗಳು ಲೋಕಾಯುಕ್ತ ಬಲೆಗೆ!
ಮಂಡ್ಯಕ್ಕೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ರಾಜಕೀಯ ಹೊಸ ದಾಳ ಉರುಳಿಸಿದ ದಳಪತಿ!