ಪತಿ ಅಗಲಿಕೆ ನೋವಲ್ಲೇ ಜೀವಬಿಟ್ಟ ಪತ್ನಿ, ಸಾವಿನಲ್ಲೂ ಒಂದಾದ ವೃದ್ಧ ದಂಪತಿ

By Suvarna NewsFirst Published Jul 13, 2022, 5:55 PM IST
Highlights

ನಿನ್ನ ಬಿಟ್ಟು ನಾ ಹ್ಯಾಂಗ ಇರಲಿ. ನೀನು ಮುಂದೆ ನಡೆ, ನಾನು ಹಿಂದೆ ಬರ್ತೇನೆ. ಸಾವಿನಲ್ಲೂ ಜೊತೆಗೇ ಹೋಗೋಣ ಅಂತು ಇಲ್ಲೊಂದು ಜೋಡಿ.

ಹಾವೇರಿ, (ಜುಲೈ.13):  ಸಾವಿನಲ್ಲಿಯೂ ಒಂದಾಗುವ ಬಹಳಷ್ಟು ಘಟನೆ ನಡೆಯುತ್ತಲೇ ಇರುತ್ತದೆ. ವಿವಾಹವಾಗಿ ಜೊತೆಯಾಗಿ ಬಾಳಿ, ಮಕ್ಕಳು, ಮೊಮ್ಮಕ್ಕಳನ್ನು ಕಂಡು, ಸಿಹಿ ಕಹಿ, ನೋವು ಕಷ್ಟ ಸವಾಲುಗಳನ್ನು ಒಟ್ಟಿಗೇ ಎದುರಿಸಿ ಒಟ್ಟಿಗೇ ಸ್ವಗಸ್ಥರಾಗುವುದೆಂದರೆ ಸುಮ್ಮನೆಯಾ ? ಎಲ್ಲೋ ಒಂದಷ್ಟು ಜೋಡಿಗಳಷ್ಟೇ ಈ ಪುಣ್ಯ ಮಾಡಿರುತ್ತಾರೆ. ಅದರಂತೆ ಹಾವೇರಿ ಜಿಲ್ಲೆ ಸವಣೂರು ತಾಲೂಕು ಇಚ್ಚಂಗಿ ಗ್ರಾಮದಲ್ಲಿ ವೃದ್ಧ ದಂಪತಿ ಸಾವಿನಲ್ಲೂ ಒಂದಾಗಿದ್ದಾರೆ.

ಹೌದು...ಹೋಗುವಾಗ ಒಬ್ರೇ ಹೋಗೋದು ಅನ್ನೋ ಲೋಕರೂಢಿಯ ಮಾತಿದೆ. ಆದರೆ ಈ ಮಾತು ಸುಳ್ಳಾಗಿಸಿದೆ  ಇಲ್ಲೊಂದು ಜೋಡಿ. ಈ ಜೋಡಿ ಸಾವಿನ ದಾರಿಯಲ್ಲೂ ಜೊತೆಯಾಗೇ ಹೊರಟಿದ್ದಾರೆ. ಇದು ಜನುಮದ ಜೋಡಿಯ ಅಮರ ಪ್ರೇಮದ ಕಥೆ. ವಯೋಸಹಜ ಅನಾರೋಗ್ಯದಿಂದ ಬಸಪ್ಪ ಕಂಬಳಿ ಎಂಬ ಸುಮಾರು 90 ವರ್ಷದ ವೃದ್ದ ನಿನ್ನೆ(ಮಂಗಳವಾರ) ಸಂಜೆ ಮೃತ ಪಟ್ಟಿದ್ದರು.

ಪತಿ ಅಗಲಿದ ಕಾರಣ ತೀವ್ರವಾಗಿ ನೊಂದ ದ್ಯಾಮವ್ವ ಕಂಬಳಿ ( 85) ಕೂಡಾ ಇಂದು ಬೆಳಿಗ್ಗೆ ಜೀವ ಬಿಟ್ಟಿದ್ದಾರೆ.ಹಾವೇರಿ ಜಿಲ್ಲೆ ಸವಣೂರು ತಾಲೂಕು ಇಚ್ಚಂಗಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಾವಿನಲ್ಲೂ ಪತಿಯನ್ನೇ ಹಿಂಬಾಲಿಸಿದ ದ್ಯಾಮವ್ವಜ್ಜಿ  ಸಾವಿಗೆ ಇಡೀ ಗ್ರಾಮವೇ ಕಂಬನಿ‌ ಮಿಡಿದಿದೆ.

ಸಾವಿನಲ್ಲೂ ಒಂದಾದ ವೃದ್ಧ ದಂಪತಿ, ಜೋಡಿಯಾಗಿ ಕೂಡಿಸಿ ಅಂತ್ಯ ಕ್ರಿಯೆ

ಪತಿಯ ಅಗಲುವಿಕೆಯಿಂದ ನೊಂದು  ದ್ಯಾಮವ್ವ  ಇಂದು ಬೆಳಿಗ್ಗೆ ಮೃತ ಪಟ್ಟಿದ್ದಾರೆ.ನನ್ನ ಗಂಡ ಸತ್ತ ಮೇಲೆ ನಾನ್ಯಾಕೆ ಇರಲಿ ಎಂದು ದ್ಯಾಮವ್ವಜ್ಜಿ ಕುಟುಂಬಸ್ಥರ ಬಳಿ ದುಃಖ ಪಟ್ಟಿದ್ದರಂತೆ. ಕೊನೆಗೆ ನೋವಿನಲ್ಲೇ ದ್ಯಾಮವ್ವಜ್ಜಿ  ಕೊನೆಯುಸಿರೆಳೆದಿದ್ದಾರೆ. ಇಂದು ಬೆಳಿಗ್ಗೆ ಆಸ್ಪತ್ರೆಗೆ ಸಾಗಿಸೋ ಮಾರ್ಗದಲ್ಲೇ ದ್ಯಾಮವ್ವಜ್ಜಿ ಜೀವ ಬಿಟ್ಟಿದೆ.

ವೃದ್ದ ದಂಪತಿಗಳ ಸಾವಿನಲ್ಲೂ   ಒಂದಾಗಿದ್ದು ನೋಡಿ ಮರುಗಿದ ಗ್ರಾಮಸ್ಥರು, ಕಣ್ಣೀರು ಹಾಕಿದ್ದಾರೆ.ಮೃತ ವೃದ್ದ ದಂಪತಿಯನ್ನು ಜೋಡಿಯಾಗಿ‌ ಕೂರಿಸಿದ ಕುಟುಂಬಸ್ಥರು, ಅಂತಿಮ ವಿಧಿ ವಿಧಾನ ಮಾಡಿದರು.ವೃದ್ದ ದಂಪತಿ ಸಾವಿಗೆ ಇಡೀ ಊರಿಗೂರೇ ಕಣ್ಣೀರು ಹಾಕಿತು.70 ವರ್ಷ ಸಾರ್ಥಕ ಜೀವನ ನಡೆಸಿದ್ದ ಅಜ್ಜ- ಅಜ್ಜಿ  ಮಕ್ಕಳು , 12 ಮೊಮ್ಮಕ್ಕಳು, ಅಪಾರ ಬಂಧು ಬಳಗ ಅಗಲಿದ್ದಾರೆ

 ಇಡೀ ಗ್ರಾಮದಲ್ಲಿ ಮೆರವಣಿಗೆ ಮಾಡಿ ಅಂತಿಮ ಸಂಸ್ಕಾರ ಮಾಡಲಾಯ್ತು. ಬಸಪ್ಪ ಕಂಬಳಿ ಹಾಗೂ  ದ್ಯಾಮವ್ವಜ್ಜಿ ಪ್ರೀತಿ, ತ್ಯಾಗ, ಕೊನೆಗೆ ಸಾವಿನಲ್ಲೂ ಒಂದಾಗಿದ್ದಕ್ಕೆ ಇಡೀ ಗ್ರಾಮದ ಜನ ಅಚ್ಚರಿಯಿಂದ ಸಾವೆಂದರೆ ಇಂಥ ಸಾವು ಬರಬೇಕು ಅಂತ ಮಾತಾಡಿಕೊಳ್ತಿರೋದು ಕಂಡು ಬಂತು..

click me!