ಕಡಲ್ಕೊರೆತ ತಡೆಗೆ ‘ಸೀ ವೇವ್‌ ಬ್ರೇಕರ್‌’ ತಂತ್ರಜ್ಞಾನ: ಸಿಎಂ ಬೊಮ್ಮಾಯಿ

By Kannadaprabha News  |  First Published Jul 13, 2022, 12:56 PM IST

*   ಉಳ್ಳಾಲದ ಬಟ್ಟಪ್ಪಾಡಿಯಲ್ಲಿ ತಂತ್ರಜ್ಞಾನ ಅಳವಡಿಕೆಗೆ ಅನುಮತಿ
*   ಭೂಕಂಪ ಹಾನಿ ತಡೆಗೂ ಶಾಶ್ವತ ಯೋಜನೆ ಭರವಸೆ
*   ಪರಿಹಾರ ಕಾರ್ಯಗಳಿಗೆ ಹಣ ಕೊರತೆ ಇಲ್ಲ
 


ಮಂಗಳೂರು(ಜು.13):  ಕರಾವಳಿ ಭಾಗದಲ್ಲಿ ಕಡಲ್ಕೊರೆತ ತಡೆಗೆ ‘ಸೀ ವೇವ್‌ ಬ್ರೇಕರ್‌’ ಎನ್ನುವ ನೂತನ ತಂತ್ರಜ್ಞಾನದ ಮೂಲಕ ಶಾಶ್ವತ ಪರಿಹಾರ ಒದಗಿಸಲಾಗುವುದು. ಕಡಲ್ಕೊರೆತ ಹೆಚ್ಚಿರುವ ಉಳ್ಳಾಲ ಭಾಗದಲ್ಲಿ ಈ ತಂತ್ರಜ್ಞಾನ ಅಳವಡಿಸಲು ಅನುಮತಿ ನೀಡಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಪ್ರಕೃತಿ ವಿಕೋಪ ಪರಿಶೀಲನೆಗೆ ಮಂಗಳವಾರ ದ.ಕ. ಜಿಲ್ಲೆಗೆ ಆಗಮಿಸಿದ ಅವರು ಉಳ್ಳಾಲದ ಬಟ್ಟಪಾಡಿಯಲ್ಲಿ ಕಡಲ್ಕೊರೆತದ ಸ್ಥಿತಿಗತಿಗಳನ್ನು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಉಳ್ಳಾಲದಲ್ಲಿ ಕಳೆದ ವರ್ಷ 200 ಮೀ. ಉದ್ದಕ್ಕೆ ಕಡಲ್ಕೊರೆತವಾಗಿದ್ದರೆ, ಈ ಬಾರಿ 600 ಮೀ. ಆಗಿದೆ. ಇಲ್ಲಿ ಕಡಲಿಗೆ ಕಲ್ಲು ಹಾಕೋದು, ತೆಗೆಯೋದು ಇತ್ಯಾದಿ ಕಾಮಗಾರಿಗಳೆಲ್ಲ ಆಗಿವೆ. ಇದೀಗ ಶಾಶ್ವತವಾಗಿ ಕಡಲ್ಕೊರೆತ ತಡೆಗೆ ಹೊಸ ತಂತ್ರಜ್ಞಾನದ ಮೂಲಕ ಪರಿಹಾರ ಕಂಡುಹಿಡಿಯಲು ಏಜೆನ್ಸಿಯೊಂದು ತಿಂಗಳ ಹಿಂದೆ ಸಂಪರ್ಕಿಸಿದ್ದು, ಉಳ್ಳಾಲದಲ್ಲಿ ಮೊದಲು ಅನುಷ್ಠಾನಗೊಳಿಸಲಾಗುವುದು. ಇದಕ್ಕೂ ಮೊದಲು ರಸ್ತೆ ಕಡಿತವಾದ ಪ್ರದೇಶದಲ್ಲಿ ತಾತ್ಕಾಲಿಕವಾಗಿ ಜನರ ಓಡಾಟಕ್ಕೆ ತೊಂದರೆಯಾಗದಂತೆ ಅಗತ್ಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

Tap to resize

Latest Videos

ಮಂಗ್ಳೂರಲ್ಲಿ ಕಡಲಬ್ಬರ: ಬೈಕಂಪಾಡಿ ಮೀನಕಳಿಯದಲ್ಲಿ ರಸ್ತೆಯೇ ಸಮುದ್ರ ಪಾಲು..!

ಜನರ ಸ್ಥಳಾಂತರ: 

ಕಡಲ್ಕೊರೆತ ತಡೆಗೆ ದೀರ್ಘಕಾಲದ ಯೋಜನೆಗಳನ್ನು ಅನುಷ್ಠಾನಗೊಳಿಸಲು ಹಿರಿಯ ಅಧಿಕಾರಿಗಳ ಜತೆ ಸಮಾಲೋಚನೆ ಮಾಡಿ ಮುಂದಿನ ಕ್ರಮಗಳನ್ನು ಕೈಗೊಳ್ಳುವುದಾಗಿ ಭರವಸೆ ನೀಡಿದ ಸಿಎಂ, ಈಗಾಗಲೇ ಕಡಲ ಬದಿಯಲ್ಲಿ ಅಪಾಯಕಾರಿ ಪ್ರದೇಶಗಳಲ್ಲಿರುವ ಮನೆ ಮಂದಿಯನ್ನು ಸ್ಥಳಾಂತರಗೊಳಿಸಿ ಅವರಿಗೆ ಸೂಕ್ತ ಆಹಾರ, ವಸತಿ ಇತ್ಯಾದಿ ಸೌಕರ್ಯ ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಆದೇಶಿಸಿರುವುದಾಗಿ ಹೇಳಿದರು.

ಭೂಕಂಪ ಅಧ್ಯಯನ: 

ಸುಳ್ಯ ಭಾಗದಲ್ಲಿ ಭೂಕಂಪದ ತೀವ್ರತೆ ಕಡಿಮೆ ಇದ್ದರೂ ಅದರ ಪರಿಣಾಮ ಜಾಸ್ತಿಯಾಗಿರುವುದನ್ನು ಪರಿಶೀಲಿಸಿದ್ದೇನೆ. ಅಲ್ಲಿನ ಜನರು ಕೂಡ ತೀವ್ರ ಭಯಭೀತರಾಗಿದ್ದಾರೆ. ಭೂ ಕಂಪನದ ಬಗ್ಗೆ ಸಮಗ್ರ ಅಧ್ಯಯನ ನಡೆಸಲು ಮೂರ್ನಾಲ್ಕು ಸಂಸ್ಥೆಗಳಿಗೆ ಹೇಳಿದ್ದೇನೆ. ಮೈಸೂರು, ಮತ್ತು ಬೆಂಗಳೂರು ವಿವಿಯವರೂ ಅಧ್ಯಯನ ಮಾಡುತ್ತಿದ್ದಾರೆ. ಅಧ್ಯಯನದ ವರದಿ ಪ್ರಕಾರ ಭೂಕಂಪನದ ಹಾನಿ ತಡೆಗಟ್ಟಲು ಶಾಶ್ವತ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಬಸವರಾಜ ಬೊಮ್ಮಾಯಿ ಭರವಸೆ ನೀಡಿದರು.

ತುಂಗಭದ್ರಾ ಡ್ಯಾಂಗೆ ಹೆಚ್ಚಿದ ಒಳ ಹರಿವು: ಬರೀ 11 ದಿನದಲ್ಲಿ 50 ಟಿಎಂಸಿ ನೀರು ಸಂಗ್ರಹ

ಘಾಟಿ ಪ್ರದೇಶದ ಸಂಚಾರ ವ್ಯವಸ್ಥೆಯನ್ನು ಈಗಾಗಲೇ ಲೋಕೋಪಯೋಗಿ ಇಲಾಖೆ ಸಚಿವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇಲ್ಲಿ ಭೂಕುಸಿತ ತಡೆಗೆ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಜತೆ ಈಗಾಗಲೇ ಚರ್ಚಿಸಿದ್ದು, ಮಳೆಗಾಲ ಮುಗಿದ ತಕ್ಷಣ ಘಾಟಿ ಪ್ರದೇಶದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದರು.

ಕಂದಾಯ ಸಚಿವ ಆರ್‌. ಅಶೋಕ್‌, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್‌. ಅಂಗಾರ, ಶಾಸಕ ಯು.ಟಿ.ಖಾದರ್‌, ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ನಗರ ಪೊಲೀಸ್‌ ಆಯುಕ್ತ ಶಶಿಕುಮಾರ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕುಮಾರ್‌ ಸೇರಿದಂತೆ ಸಂಬಂಧಪಟ್ಟಇಲಾಖೆ ಅಧಿಕಾರಿಗಳು ಮತ್ತು ಸಾರ್ವಜನಿಕರು ಇದ್ದರು.

ಪರಿಹಾರ ಕಾರ್ಯಗಳಿಗೆ ಹಣ ಕೊರತೆ ಇಲ್ಲ

ಪ್ರಕೃತಿ ವಿಕೋಪ ಪರಿಹಾರ ಕಾರ್ಯಗಳಿಗೆ ಹಣದ ಕೊರತೆ ಇಲ್ಲ. ಎನ್‌ಡಿಆರ್‌ಎಫ್‌ನಲ್ಲಿ 739 ಕೋಟಿ ರು. ಇದ್ದರೆ, ಜಿಲ್ಲಾಧಿಕಾರಿ ಖಾತೆಯಲ್ಲೂ ಸಾಕಷ್ಟುಹಣ ಇದೆ. ಇದರ ಹೊರತಾಗಿಯೂ ಜಿಲ್ಲಾಧಿಕಾರಿಗಳು ನೀಡುವ ಬೇಡಿಕೆಯಂತೆ ಹಣ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದರು.
 

click me!