ಕ್ರಿಕೆಟ್‌ ಬೆಟ್ಟಿಂಗ್‌: ಸಾಲ ಬಾಧೆ ತಾಳಲಾರದೆ ಊರು ತೊರೆದ ವ್ಯಕ್ತಿ, ಪತ್ನಿ, ಮಕ್ಕಳು ಅನಾಥ..!

By Kannadaprabha NewsFirst Published Nov 15, 2022, 10:45 PM IST
Highlights

ಅನಾಥವಾದ ಇಡೀ ಕುಟುಂಬ ಈಗ ತಾಲೂಕಿನ ಹೆಮ್ಮನಹಳ್ಳಿಯ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಯಾವುದೇ ಮೂಲ ಸೌಕರ್ಯವಿಲ್ಲದೆ ಚಳಿ ಹಾಗೂ ಮಳೆಯ ನಡುವೆ ಜೀವನ ನಡೆಸುತ್ತಿದೆ.

ಮದ್ದೂರು(ನ.15):  ಕ್ರಿಕೆಟ್‌ ಬೆಟ್ಟಿಂಗ್‌ ದಾಸನಾಗಿದ್ದ ಪತಿಯೋರ್ವ ಗರ್ಭಿಣಿ ಪತ್ನಿ, ಇಬ್ಬರು ಮಕ್ಕಳು ಹಾಗೂ ಮಾವನನ್ನು ಅನಾಥರನ್ನಾಗಿಸಿ ಊರು ತೊರೆದಿರುವ ಘಟನೆ ಜರುಗಿದೆ. ಅನಾಥವಾದ ಇಡೀ ಕುಟುಂಬ ಈಗ ತಾಲೂಕಿನ ಹೆಮ್ಮನಹಳ್ಳಿಯ ಗ್ರಾಮ ಪಂಚಾಯಿತಿ ಕಚೇರಿ ಆವರಣದಲ್ಲಿ ಯಾವುದೇ ಮೂಲ ಸೌಕರ್ಯವಿಲ್ಲದೆ ಚಳಿ ಹಾಗೂ ಮಳೆಯ ನಡುವೆ ಜೀವನ ನಡೆಸುತ್ತಿದೆ.

ತುಮಕೂರು ಜಿಲ್ಲೆ, ಕುಣಿಗಲ್‌ ಪಟ್ಟಣದ ಆರ್‌ಎಂಸಿ ಯಾರ್ಡ್‌ ಪಕ್ಕದಲ್ಲಿ ವಾಸ ಮಾಡುತ್ತಿದ್ದ ಶ್ರೀಕಾಂತ್‌ಕುಮಾರ್‌ ಆರು ವರ್ಷಗಳ ಹಿಂದೆ ಅನ್ನಪೂರ್ಣ ಎಂಬಾಕೆಯನ್ನು ಮದುವೆಯಾಗಿದ್ದನು. ಈ ದಂಪತಿ ತಮ್ಮ ಮಕ್ಕಳು ಐದು ವರ್ಷದ ತನ್ಮಯ್‌ಗೌಡ, ಮೂರು ವರ್ಷದ ಅಭಯ್‌ಗೌಡ ಹಾಗೂ ವೃದ್ಧ ಮಾವ ಸುರೇಶ್‌ ಅವರೊಂದಿಗೆ ವಾಸವಾಗಿದ್ದರು. ಈ ಮಧ್ಯೆ ಶ್ರೀಕಾಂತ್‌ಕುಮಾರ್‌ ಐಪಿಎಲ್‌ ಕ್ರಿಕೆಟ್‌ ಬೆಟ್ಟಿಂಗ್‌ ದಂಧೆಗೆ ಬಿದ್ದು ಹಣ ಕಳೆದುಕೊಂಡು ಮೈತುಂಬಾ ಸಾಲ ಮಾಡಿಕೊಂಡಿದ್ದ. ಸಾಲಗಾರರ ಕಾಟ ತಡೆಯಲಾರದೆ ತನ್ನ ಮೂರು ತಿಂಗಳ ಗರ್ಭಿಣಿ ಪತ್ನಿಯನ್ನು ಬಿಟ್ಟು ರಾತ್ರೋ ರಾತ್ರಿ ಮನೆ ತೊರೆದು ಪರಾರಿಯಾಗಿದ್ದ.

ಹೆದ್ದಾರಿ ಕಾಮಗಾರಿಗೆ ಮತ್ತೆ 12 ಕೋಟಿ ಬಿಡುಗಡೆ: ಶಾಸಕ ತಮ್ಮಣ್ಣ

ಹೊಟ್ಟೆಪಾಡಿಗಾಗಿ ಕುಣಿಗಲ್‌ನಿಂದ ಮದ್ದೂರು ತಾಲೂಕು ಹೆಮ್ಮನಹಳ್ಳಿಗೆ ವಲಸೆ ಬಂದ ಅನ್ನಪೂರ್ಣ ಪಂಚಾಯಿತಿ ಕಚೇರಿ ಆವರಣದಲ್ಲಿ ವಾಸ ಮಾಡಿಕೊಂಡು ಹಳ್ಳಿಗಳ ಮೇಲೆ ಬಟ್ಟೆವ್ಯಾಪಾರ, ಕೂಲಿ ನಾಲಿ ಮಾಡಿಕೊಂಡು ಜೀವನ ಮಾಡುತ್ತಿದ್ದರು. ಈಕೆಯ ಕುಟುಂಬಕ್ಕೆ ಗ್ರಾಮಸ್ಥರು ಊಟ ತಿಂಡಿ ನೀಡಿ ಸಲಹುತ್ತಿದ್ದರು. ಈ ಮಧ್ಯೆ ಅನ್ನಪೂರ್ಣಗೆ ಕಳೆದ 20 ದಿನಗಳ ಹಿಂದೆ ಮದ್ದೂರು ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು.

ಆಸ್ಪತ್ರೆಯಿಂದ ಬಿಡುಗಡೆಗೊಂಡ ಅನ್ನಪೂರ್ಣ ಮತ್ತೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಆಶ್ರಯ ಪಡೆದಿದ್ದಳು. ಮಾಧ್ಯಮಗಳಿಂದ ಅನ್ನಪೂರ್ಣಳ ಕರುಣಾಜನಕ ಸ್ಥಿತಿಯ ಮಾಹಿತಿ ಅರಿತ ತಾಲೂಕು ಆರೋಗ್ಯಾಧಿಕಾರಿ ಡಾ. ರವೀಂದ್ರ ಬಿ.ಗೌಡ, ಕದಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ. ಭಾರ್ಗವಿ, ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರದೀಪ್‌ ಹಾಗೂ ಗ್ರಾಘಿ.ಪಂ. ಪಿಡಿಓ ಲೀಲಾವತಿ ಅವರುಗಳು ಅನ್ನಪೂರ್ಣ ಮತ್ತು ಆಕೆಯ 11 ದಿನಗಳ ಮಗು ಸೇರಿದಂತೆ ಕುಟುಂಬವನ್ನು ಮಂಡ್ಯ ನಗರದ ಅಕ್ಷಯ್‌ ನರೇಶ್‌ ಸ್ವಾಧಾರ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ. ಅನ್ನಪೂರ್ಣ ತಂದೆ ಸುರೇಶ್‌ ಅವರನ್ನು ಅನಾಥಾಶ್ರಮದಲ್ಲಿರಿಸಿ ಆರೈಕೆ ಮಾಡಲಾಗುತ್ತಿದೆ.
 

click me!