ರೈತರ ಸಮಸ್ಯೆಗಳನ್ನು ಸದನದಲ್ಲಿ ಚರ್ಚಿಸುತ್ತೇನೆ: ಸಿದ್ದರಾಮಯ್ಯ

Published : Nov 15, 2022, 10:16 PM ISTUpdated : Nov 15, 2022, 10:18 PM IST
ರೈತರ ಸಮಸ್ಯೆಗಳನ್ನು ಸದನದಲ್ಲಿ ಚರ್ಚಿಸುತ್ತೇನೆ: ಸಿದ್ದರಾಮಯ್ಯ

ಸಾರಾಂಶ

ಹಾಲಿಗೆ ಪ್ರೋತ್ಸಾಹ ಧನ ಹೆಚ್ಚಿಸದೆ ಸರ್ಕಾರದಿಂದ ಅನ್ಯಾಯ, ರೈತ ಸಂಘದ ಅಹೋರಾತ್ರಿ ಧರಣಿಗೆ ಸಿದ್ದರಾಮಯ್ಯ ಬೆಂಬಲ

ಮಂಡ್ಯ(ನ.15):  ಟನ್‌ ಕಬ್ಬಿಗೆ 4500 ರು.ನೀಡುವುದು, ಹಾಲಿಗೆ ಪ್ರೋತ್ಸಾಹಧನ ಹೆಚ್ಚಿಸುವುದು ಸೇರಿದಂತೆ ರೈತರ ಸಮಸ್ಯೆಗಳ ಕುರಿತಂತೆ ಸದನದಲ್ಲಿ ದನಿ ಎತ್ತುವುದಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಭರವಸೆ ನೀಡಿದರು. ಬೆಂಗಳೂರಿನಿಂದ ಮೈಸೂರಿಗೆ ತೆರಳುವ ವೇಳೆ ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ರೈತಸಂಘದ ಕಾರ್ಯಕರ್ತರು ನಡೆಸುತ್ತಿರುವ ಅಹೋರಾತ್ರಿ ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ಡಿ.12ರಿಂದ ಅಧಿವೇಶನ ಆರಂಭವಾಗಲಿದೆ. ಅಷ್ಟರೊಳಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ರೈತರ ಸಮಸ್ಯೆಗಳಿಗೆ ಪರಿಹಾರ ಸೂಚಿಸುವಂತೆ ಗಮನಸೆಳೆಯುತ್ತೇನೆ. ಅದಕ್ಕೆ ಅವರು ಸ್ಪಂದಿಸದಿದ್ದರೆ ಸದನದಲ್ಲಿ ರೈತರ ಪರವಾಗಿ ಧ್ವನಿ ಎತ್ತಿ ಮಾತನಾಡುತ್ತೇನೆ ಎಂದು ಹೇಳಿದರು.

ರೈತರ ನ್ಯಾಯಯುತ ಬೇಡಿಕೆಗಳಿಗೆ ಸ್ಪಂದಿಸಬೇಕಾದ್ದು ಸರ್ಕಾರದ ಕರ್ತವ್ಯ. ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಸರ್ಕಾರ ಮೈಮರೆತು ಕುಳಿತು ರೈತ ವಿರೋಧಿ ನೀತಿ ಅನುಸರಿಸುತ್ತಿದೆ. ಇದು ಒಳ್ಳೆಯ ಬೆಳವಣಿಗೆಯಲ್ಲ. ಧರಣಿ ನಿರತರ ರೈತರನ್ನು ಮಾತುಕತೆಗೆ ಕರೆದು ಸೌಹಾರ್ದಯುತವಾಗಿ ಸಮಸ್ಯೆಗಳಿಗೆ ಪರಿಹಾರ ಸೂಚಿಸಬೇಕು. ರಸಗೊಬ್ಬರದ ಬೆಲೆ ಹೆಚ್ಚಾಗಿದೆ. ಕಬ್ಬಿನ ಉತ್ಪಾದನಾ ವೆಚ್ಚವೂ ಹೆಚ್ಚಿರುವುದರಿಂದ ಟನ್‌ ಕಬ್ಬಿಗೆ 4,500 ರು. ನೀಡುವ ಅಗತ್ಯವಾಗಿದೆ. ಈ ವಿಷಯವಾಗಿ ಸಕ್ಕರೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಜೊತೆಯೂ ಮಾತನಾಡುತ್ತೇನೆ. ಈ ಭಾಗದಲ್ಲಿ ಕಬ್ಬಿನ ಇಳುವರಿ ಕಡಿಮೆ ಇರುವುದರಿಂದ ಬೆಳೆಗಾರರು ನಷ್ಟದಲ್ಲಿದ್ದಾರೆ. ಬೆಲೆ ಹೆಚ್ಚಾದರೆ ಅವರ ಆರ್ಥಿಕ ಮಟ್ಟವೂ ಹೆಚ್ಚಾಗಲಿದೆ ಎಂದರು.

MANDYA : ಪ್ರಸೂತಿ ಶಸ್ತ್ರಚಿಕಿತ್ಸಾ ವಿಭಾಗಕ್ಕೇ ಆಪರೇಷನ್‌...!

ಹಾಲಿನ ದರದಲ್ಲೂ ಹೆಚ್ಚಳ ಮಾಡುವ ಮೂಲಕ ಹೈನುಗಾರರ ನೆರವಿಗೆ ನಿಲ್ಲಬೇಕಿದೆ. ನಾನು ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಪ್ರತಿ ಲೀಟರ್‌ ಹಾಲಿಗೆ 4 ರು. ಇದ್ದ ಪ್ರೋತ್ಸಾಹಧನವನ್ನು 5 ರು.ಗೆ ಹೆಚ್ಚಿಸಿ ರೈತರ ಹಿತ ಕಾಪಾಡಿದ್ದೇನೆ. ಮೇಲ್ವರ್ಗದ ಬಡವರಿಗೆ ಇರುವ ಶೇ.10 ಮೀಸಲಾತಿಯನ್ನು ಸುಪ್ರೀಂಕೋರ್ಚ್‌ ಎತ್ತಿಹಿಡಿದು ತೀರ್ಪು ನೀಡಿರುವುದು ಸಂವಿಧಾನಕ್ಕೆ ವಿರುದ್ಧವಾಗಿದೆ. ಇದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸಿದ್ದರಾಮಯ್ಯ ಉತ್ತರಿಸಿದರು. ತಕ್ಷಣಕ್ಕೆ ಕಾಂಗ್ರೆಸ್‌ ಪಕ್ಷ ತೀರ್ಪನ್ನು ಸ್ವಾಗತಿಸಿತ್ತು. ಆದರೆ, ಈ ತೀರ್ಪು ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ. ಎಂದು ನುಡಿದರು.

ಆರ್ಥಿಕವಾಗಿ ದುರ್ಬಲರಾದವರು ಕೇವಲ ಮೇಲ್ಜಾತಿಗಳಲ್ಲಿ ಮಾತ್ರ ಇಲ್ಲ. ಈ ಬಗ್ಗೆ ಈಗಾಗಲೇ ತಮಿಳುನಾಡು ಸರ್ಕಾರ ಶೇ.10ರಷ್ಟುಮೀಸಲಾತಿಯನ್ನು ರಾಜ್ಯದಲ್ಲಿ ತಿರಸ್ಕರಿಸಿರುವುದಾಗಿ ಹೇಳಿದೆ. ಈ ಕುರಿತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪುನರ್‌ಪರಿಶೀಲನೆ ನಡೆಸುವುದಾಗಿ ತಿಳಿಸಿದ್ದಾರೆ. ಅದಕ್ಕೆ ನನ್ನ ಸಹಮತವಿದೆ ಎಂದರು. ಮುಂಬರುವ ಚುನಾವಣೆಯಲ್ಲಿ ಕೋಲಾರದಿಂದ ಸ್ಪರ್ಧಿಸುವಿರಾ ಎಂಬ ಪ್ರಶ್ನೆಗೆ, ಹೈಕಮಾಂಡ್‌ ಎಲ್ಲಿಂದ ಸ್ಪರ್ಧಿಸಿ ಎಂದು ಹೇಳುವುದೋ ಅಲ್ಲಿದ ಸ್ಪರ್ಧಿಸುತ್ತೇನೆ ಎಂದು ಹೇಳುತ್ತಲೇ ಮುಂದೆ ಸಾಗಿದರು. ಮಾಜಿ ಸಚಿವರಾದ ಹೆಚ್‌.ಸಿ.ಮಹದೇವಪ್ಪ, ಎಂ.ಎಸ್‌.ಆತ್ಮಾನಂದ, ನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರುದ್ರಪ್ಪ, ರೈತಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್‌.ಸಿ.ಮಧುಚಂದನ್‌ ಸೇರಿದಂತೆ ಇತರರಿದ್ದರು.
 

PREV
Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ